Saturday, February 21, 2009

ಕಥೆ : ಸಹನಾಮಯಿ....... ಭಾಗ 1

ಈ ಕಥೆಯಲ್ಲಿ ಬರುವ ವ್ಯಕ್ತಿ, ವಿಷಯಗಳು ಕೇವಲ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ.

ಸುಶೀಲಮ್ಮ , ಶ್ರೀಕಂಠಯ್ಯ ದಂಪತಿಗಳು ಬೆಂಗಳೂರಿನ ಒಂದು ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರಿಬ್ಬರದು ತುಂಬಾ ಸರಳವಾದ ಜೀವನ, ಅನಾವಶ್ಯಕವಾಗಿ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಈ ದಂಪತಿಗೆ ಮಕ್ಕಳಿರಲಿಲ್ಲ! ಸುಶೀಲಮ್ಮನವರ ಮಡಿಲು ತುಂಬಲು ಏನೆಲ್ಲ ಪೂಜೆ, ಪ್ರಯತ್ನ ಪಟ್ಟರು ಯಾಕೋ ಯಾವುದು ಕೈಗೂಡಲಿಲ್ಲ, ಆ ದೇವರು ಯಾಕೋ ಇವರ ಮೇಲೆ ಕರುಣೆ ತೋರಲಿಲ್ಲಾ. ಈ ಬಗ್ಗೆ ಪತಿರಾಯರು ಎಷ್ಟೆಲ್ಲಾ ಸಮಾಧಾನ ಮಾಡಿದರು, ಸಂತೈಸಿದರೂ ಆಕೆಗೆ ಯಾವುದೊ ಒಂದು ಮೂಲೆಯಲ್ಲಿ ಕೊರಗಂತು ಇದ್ದೆ ಇತ್ತು . ಇದೆ ವಿಷಯ ಯಾವಾಗಾದರೊಮ್ಮೆ ಯೋಚಿಸುವಾಗ ಪತಿರಾಯರು ಹೇಳುತ್ತಿದ್ದ ಸಾಂತ್ವನದ ಮಾತುಗಳನ್ನು ನೆನೆಪಿಸಿಕೊಂಡು ಸ್ವಲ್ಪ ಹೊತ್ತಿನ ನಂತರ ಅವರೇ ಸಮಾಧಾನವಾಗುತ್ತಿದ್ದರು. ಹೀಗೆ ಜೀವನ ಸಾಗುತ್ತಿತ್ತು.

ಆ ದಿನ ಮಧ್ಯಾನ್ಹದ ಊಟ ಮತ್ತು ಎಲ್ಲ ಕೆಲಸ ಮುಗಿಸಿ ವಿಶ್ರಮಿಸಿಕೊಳ್ಳಲು ಹಾಲ್ ನಲ್ಲಿ ಸೋಫಾದಲ್ಲಿ ಬಂದು ಕುಳಿತರು. ಮಧ್ಯಾನ್ನ ನಿದ್ರಿಸುವ ಅಭ್ಯಾಸ ಇಲ್ಲವಾದುದರಿಂದ, ಸ್ವಲ್ಪ ಹೊತ್ತು ಟಿವಿ ನೋಡೋಣ ಎಂದು ಟಿವಿ ಹಾಕಿ ಹಾಗೆ ಸುಮ್ಮನೆ ಅಲ್ಲೇ ಮಲಗಿದರು. ಪತಿ ಕೆಲಸಕ್ಕೆ ಹೋಗಿದ್ದುದರಿಂದ, ಮನೆಯಲ್ಲಿ ಒಬ್ಬರಿಗೆ ಬೇಸರವೆನಿಸಿ, ಟಿವಿ ಕೂಡ ನೋಡಲು ಇಷ್ಟವಾಗದೆ, ಟಿವಿ ಆರಿಸಿ ರೇಡಿಯೋ ಆನ್ ಮಾಡಿದರು. ಹಳೆಯ ಚಿತ್ರಗಳ ಮಧುರ ಗೀತೆಗಳು ಪ್ರಸಾರವಾಗುತ್ತಿತ್ತು. ಹಳೆಯ ಹಾಡುಗಳನ್ನು ಕೇಳುತ್ತಾ, ಕೇಳುತ್ತಾ ಸ್ವಲ್ಪ ಅವರ ಬೇಸರ ದೂರವಾದಂತೆ ಅನಿಸಿತು. ಮನಸ್ಸು ಹಗುರವಾಯಿತು. ಅದರಲ್ಲಿ ಅವರಿಗೆ ತುಂಬಾ ಇಷ್ಟವಾದ ಹಾಡು ಬರುತ್ತಿರುವಾಗ, ಅದರೊಂದಿಗೆ ಅವರು ಹಾಡನ್ನು ಗುನುಗುನಿಸುತ್ತಾ ಎದ್ದು ಕುಳಿತರು.

ಒಲವೆ ಜೀವನ ಸಾಕ್ಷಾತ್ಕಾರ ..... ಒಲವೆ ಮರೆಯದ ಮಮಕಾರ...... ಈ ಹಾಡನ್ನು ಕೇಳುತ್ತಾ, ಹಾಡು ಮುಗಿಯುವ ವೇಳೆಗೆ ಹಾಗೆ ಯೋಚನೆಗೆ ಇಳಿದರು. ಆ ಚಿತ್ರದ ಕಥೆ ನೆನೆದುಕೊಳುತ್ತಾ, ಹೌದು ಆಗಿನ ಕಾಲದ ಕಥೆ, ದೊಡ್ಡವರು ಈ ಜೋಡಿಗೆ (ರಾಜಕುಮಾರ್, ಜಮುನ) ಎಷ್ಟೇ ಅನ್ಯಾಯ ಮಾಡಿದರೂ ಹೇಗೆ ಅವರು ಸಂಯಮ ಕಳೆದುಕೊಳ್ಳದೆ ಹಿರಿಯರಿಗೆ ಗೌರವ ಕೊಟ್ಟು ಮದುವೆಯಾಗದೆ ಅಮರ ಪ್ರೇಮಿಗಳಾಗಿ ಉಳಿದರು. ಅಷ್ಟು ಸಹನೆ ಮತ್ತು ಸಂಯಮ ಅವರಲ್ಲಿತ್ತು. ಆದರೆ ಈಗಿನ ಕಾಲದವರಿಗೆ.........

ಹಾಗೆ ಯೋಚಿಸುತ್ತಾ ಹಿಂದಿನ ದಿನಗಳ ನೆನಪಿಗೆ ಜಾರಿದರು. ಹೌದು ಅದು ಸ್ವಪ್ನ ಮತ್ತು ಸಾಗರ್ ವಿಷಯ.
ಸ್ವಪ್ನ ಇವರ ಮನೆಯ ಮೇಲಿನ ನಿವೇಶನದಲ್ಲಿ ಬಾಡಿಗೆಗಿದ್ದ ಹುಡುಗಿ. ತಂದೆ, ತಾಯಿಯ ಉಪೇಕ್ಷೆ, ಉದಾಸಿನಕ್ಕೆ ಬಲಿಯಾಗಿ, ರೋಸಿಹೋಗಿ ಕೆಲಸದ ನೆಪದಿಂದ ಅವರಿಂದ ದೂರವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಳು.
ಅನುಕೂಲವಾದ ಕೆಲಸ, ಒಳ್ಳೆಯ ಸಂಬಳ, ಮನೆಯಲ್ಲಿ ಒಬ್ಬಳೇ ಇದ್ದರು ತನಗೆ ಬೇಕಾದ, ಅವಶ್ಯಕತೆ ಇರುವ ಎಲ್ಲಾ ವಸ್ತುಗಳನ್ನು ಕೊಂಡುಕೊಂಡಿದ್ದಳು. ಮನೆಯ ಬಾಡಿಗೆ ಮತ್ತು ಇತರ ಕೆಲವು ವಸ್ತುಗಳು ತಾನು ಕೆಲಸ ಮಾಡುವ ಕಂಪನಿ ಯಿಂದ ದೊರಕುತ್ತಿದ್ದರಿಂದ ರೂಮಿನ ಬದಲು ಮನೆಯನ್ನೇ ಬಾಡಿಗೆಗೆ ಪಡೆದಿದ್ದಳು.

ಮುದ್ದಾದ, ಚೆಲುವಿನ ಹುಡುಗಿ ಸ್ವಪ್ನ. ಆದರು ಅವಳಿಗೆ ಸ್ವಲ್ಪವು ಗರ್ವವಿರಲಿಲ್ಲ. ಒಮ್ಮೆ ಅವಳನ್ನು ನೋಡಿದವರು ಮತ್ತೆ ಮತ್ತೆ ನೋಡ ಬೇಕೆನಿಸುವಂತ ಅಂದ. ಮತ್ತು ಇವಳು ಸ್ನೇಹಜೀವಿಯಾಗಿದ್ದಳು ಕೂಡ ಆದರೆ ತಂದೆ ತಾಯಿಯ ವಿಷಯ ಬಂತೆಂದರೆ ಸಾಕು ಹಾಗೆ ಉರಿದು ಬೀಳುತ್ತಿದ್ದಳು. ಇಷ್ಟು ಒಳ್ಳೆಯ ಹುಡುಗಿಯನ್ನು ಅವಳ ಪೋಷಕರು ಉಪೆಕ್ಷಿಸುತಿದ್ದದ್ದಾದರು ಯಾಕೆ ಎಂದು ಇವಳ ಬಗ್ಗೆ ಗೊತ್ತಿದ್ದವರು ಯೋಚಿಸದೆ ಇರುತ್ತಿರಲಿಲ್ಲ. ಇಷ್ಟಕ್ಕೂ ಅವರು ಇವಳ ಮಲ ತಂದೆ, ತಾಯಿಯೇನಲ್ಲ.

ಸುಶೀಲಮ್ಮ ನವರನ್ನು ಕಂಡರೆ ಇವಳಿಗೆ ತುಂಬಾ ಅಕ್ಕರೆ, ಪ್ರೀತಿ. ಅವರಿಗೂ ಅಷ್ಟೆ, ಇವಳ ಮೇಲೆ ತುಂಬ ಪ್ರೀತಿ ಮತ್ತು ಮಮಕಾರ.
ಶ್ರೀಕಂಠಯ್ಯನವರಿಗೂ ಇವಳನ್ನು ಕಂಡರೆ ಏನೋ ಅಕ್ಕರೆ. ಈ ದಂಪತಿಗಳು ತೋರಿಸುವ ಪ್ರೀತಿ , ಮಮತೆಗೆ ಅವಳ ಮನಸ್ಸು ಇವರಾದರು ನನಗೆ ತಂದೆ, ತಾಯಿಯಾಗಿದ್ದರೆ ಎಷು ಚೆನ್ನಾಗಿರುತ್ತಿತ್ತು ಎಂದು ಯೋಚಿಸದೆ ಇರಲಿಲ್ಲ.
ಇಷ್ಟೆಲ್ಲಾ ಒಳ್ಳೆ ಗುಣಗಳಿರುವ ಹುಡುಗಿಗೆ ಅಭಿಮಾನಿಗಳು, ಪ್ರೇಮಿ ಇರಲೇಬೇಕು ಅಲ್ಲವೇ? ಹೌದು ಅವನೇ ಸಾಗರ್.





ಮುಂದುವರೆಯುವುದು.........

Friday, February 6, 2009

ಹೀಗೊಂದು ಜೋಕಿನ ಪ್ರಸಂಗ.....

ನಾನು ಬರೆಯುವ ಈ ಜೋಕನ್ನು ಓದಿ, ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಕಳಿಸಿ.

ನಮ್ಮ ನೆಂಟರೊಬ್ಬರ ಮಗಳ ಮದುವೆಯಲ್ಲಿ ನಡೆದ ಪ್ರಸಂಗ. ಆ ಮದುವೆ ಲವ್ ಕಮ್ ಅರೆನ್ಜೆಡ್ ಆದ್ದರಿಂದ ಇಬ್ಬರ ಜಾತಿ ಬೇರೆ ಬೇರೆ. ಮದುವೆ ಕಾರ್ಯಗಳೆಲ್ಲ ಮುಗಿದ ಮಾರನೆ ದಿನ ಸಾಮಾನ್ಯವಾಗಿ ಬೀಗರ ಊಟದ ಕಾರ್ಯಕ್ರಮ ಇರುತ್ತದೆ. ಇದೆ ಸಂಧರ್ಭದಲ್ಲಿ ನಮ್ಮ ಕಡೆಯ ನೆಂಟರೆಲ್ಲ ಹುಡುಗನ (ವರನ) ಮನೆಗೆ ಹೋಗಿದ್ದೆವು. ಅಲ್ಲಿ ಸಣ್ಣ ಪುಟ್ಟ ಶಾಸ್ತ್ರ ಎಲ್ಲ ಮುಗಿದ ನಂತರ, ಮಧ್ಯಾನ್ಹದ ಊಟಕ್ಕೆ ಇನ್ನು ಸಮಯವಿದ್ದುದರಿಂದ ನಾವೆಲ್ಲ (ಹೆಂಗಸರು ಮಾತ್ರ) ಒಂದು ರೂಮಿನೊಳಗೆ ಸೇರಿಕೊಂಡೆವು. ನಾವು ವಧುವಿನ ಕಡೆಯವರೇ ಎಲ್ಲ ಆ ಕೊಠಡಿಯಲಿದ್ದದ್ದು! ಆಗ ಅಲ್ಲಿಗೆ ವರನ ಚಿಕ್ಕಮ್ಮ ಬಂದರು.
ಅವರಕೈಯಲ್ಲಿ ಒಂದಷ್ಟು ಫೋಟೋಗಳಿದ್ದವು. ಅವನ್ನು ನಮಗೆ ನೋಡಲು ಕೊಡುತ್ತಾ, ಹಾಗೆ ಅದರ ಬಗ್ಗೆ ವಿವರಿಸಲು ನಮ್ಮೆಲ್ಲರ ಮಧ್ಯೆ ಕುಳಿತುಕೊಂಡರು. ನಮ್ಮಲ್ಲಿ ಒಬ್ಬರ ಕೈಗೆ ಫೋಟೋಗಳನ್ನು ಕೊಟ್ಟು ಅವರು ಅಲ್ಲೇ ಕುಳಿತುಕೊಂಡರು. ಹಾಗೆ ಫೋಟೋಗಳನ್ನು ನೋಡಲು ಮೊದಲು ತೆಗೆದುಕೊಂಡವರು ನಮ್ಮ ಆಂಟಿ! ಅವರು ಒಂದೊಂದಾಗಿ ನೋಡುತ್ತಾ ಹಾಗೆ ಪಕ್ಕದಲ್ಲಿರುವವರಿಗೆ ಪಾಸ್ ಮಾಡುತ್ತಿದ್ದರು. ಆ ಫೋಟೋಗಳಲ್ಲಿ ಅವರು (ವರನ ಚಿಕ್ಕಮ್ಮ) ಮಾಡಿದ್ದ ಕರಕುಶಲ ವಸ್ತು, ಕಲೆ, (ಅಡಿಕೆ ಮತ್ತು ಪಿಸ್ತಾ ಚಿಪ್ಪಿನಲ್ಲಿ ಮಾಡಿದ ಗಣೇಶನ ಮೂರ್ತಿ, ಕೊಬ್ಬರಿ ಗಿಟ್ಹುಕಿನಲ್ಲಿ ಬಿಡಿಸಿದ್ದ ಚಿತ್ತಾರ ಮುಂತಾದವು) ಇದ್ದವು!! ನಮ್ಮ ಆಂಟಿ ಪಕ್ಕದಲ್ಲಿ ನಾನೇ ಕುಳಿತಿದ್ದರಿಂದ ಅವರು ನೋಡಿದ ಫೋಟೋಗಳನ್ನು ನನಗೆ ಮೊದಲು ಕೊಡುತ್ತಿದ್ದರು! ಹೀಗೆ ನಾನು ನೋಡಿದ ಫೋಟೋಗಳು ನನ್ನ ಪಕ್ಕದಲ್ಲಿರುವವರಿಗೆ, ಅವರು ಮತ್ತೊಬ್ಬರಿಗೆ, ಈ ರೀತಿ ಎಲ್ಲರು ಒಂದು ಸುತ್ತು ನೋಡುತ್ತಾ ಕೊನೆಗೆ ಅದು ಮೊದಲು ನೋಡಿದವರ (ನಮ್ಮ ಆಂಟಿ) ಕೈಗೆ ಬರುತ್ತಿತ್ತು!!! ಈ ಮಧ್ಯೆ ನಾನು ಒಂದು ಫೋಟೋವನ್ನು ಮಾತ್ರ ಗುಂಪಿನಲ್ಲಿ ಇಟ್ಟುಕೊಂಡು ಅದನ್ನು ಪಾಸ್ ಮಾಡದೆ ಮತ್ತೆ ಮತ್ತೆ ನೋಡುತ್ತಿದ್ದೆ!! ಆ ಸಂಧರ್ಭದಲ್ಲಿ ನಮ್ಮ ಇನ್ನೊಬ್ಬ ಆಂಟಿ (ಮೊದಲ ಆಂಟಿ ಯ ತಂಗಿ ಇವರು) ಅಲ್ಲಿಗೆ ಬಂದರು. (ಈ ಮೊದಲು ಈ ಚಿಕ್ಕ ಆಂಟಿ ಅಲ್ಲಿರಲಿಲ್ಲ) ಒಳಗೆ ಬಂದವರೇ, ಏನು ಮಾಡುತ್ತಿದ್ದಿರಾ ನೀವೆಲ್ಲಾ? ಎಂದು ಕೇಳಿದರು. ಆ ಗುಂಪಿನಲ್ಲಿ ಯಾರಾದರು, ಏನಾದರು ಹೇಳುವ ಮೊದಲೇ ನಮ್ಮ ಆಂಟಿ ಅವರ ತಂಗಿಗೆ, ನೋಡು (ಫೋಟೋಗಳನ್ನು ತೋರಿಸುತ್ತಾ) ಇದು ಇವರು (ವರನ ಚಿಕ್ಕಮ್ಮನ ತೋರಿಸುತ್ತಾ) ಮಾಡಿದ (ತಯಾರಿಸಿದ) ಚಿತ್ರದ ಫೋಟೋಗಳು, ಇದೆಲ್ಲಾ ಇವರ ಕ್ರಿಯೇಟಿವಿಟಿ ಎಂದು ಹೇಳುತ್ತಿರುವಾಗ, ನಾನು ಯಾರಿಗೂ ಕೊಡದೆ ಹಾಗೆ ಇಟ್ಟುಕೊಂಡಿದ್ದ ಫೋಟೋವನ್ನು ಆಂಟಿ ಯ ಕೈಗೆ ವಾಪಸ್ ಕೊಡುತ್ತಾ ಇದು ಅಲ್ಲಾ ! ಎಂದು ಹೇಳಿದೆ. ಆಗ ತಕ್ಷಣ ಅವರು (ಅಂದರೆ ಮೊದಲ ಆಂಟಿನೆ) ಇದು ಕೂಡ ಒಂದು ರೀತಿ ಅವರ ಕ್ರಿಯೇಟಿವಿಟಿ ನೆ ಎಂದು ಹೇಳುತ್ತಿರುವಾಗ ಅಲ್ಲಿದ್ದ ಎಲ್ಲರು ಆ ಫೋಟೋವನ್ನು ಒಮ್ಮೆಲೇ ನೋಡಿ ನಗಲು ಶುರು ಮಾಡಿದರು. ಆಗ ನಾವೆಲ್ಲ ಎಷ್ಟು ನಕ್ಕೆವೆಂದರೆ ರೂಮಿನಿಂದಾಚೆ ಹಾಲ್ ನಲ್ಲಿ ನೆರೆದಿದ್ದ ಬೇರೆ ನೆಂಟರೆಲ್ಲ ಎದ್ದು ಬಂದು ನಮ್ಮ ಕಡೆ ಪ್ರಶ್ನಾರ್ಥಕವಾಗಿ (ಅಂದರೆ ಏನು ನಡೆಯಿತೆಂದು) ನೋಡುತ್ತಿದ್ದರು!! ಅವರಲ್ಲಿ ಒಂದಿಬ್ಬರು ಕೇಳಿದರು ಸಹ! ನಾವು ಹೇಳಲು ಮುಜುಗರವಾಗಿ, ಏನು ಇಲ್ಲ ಎಂದು ಹೇಳಿ ಸುಮ್ಮನಾಗಿಸಿದೆವು. ಅವರೆಲ್ಲರೂ ಸಹ ಮದುವೆ ಮನೆ, ಏನೋ ನಗುತ್ತಿದ್ದಾರೆ ಎಂದುಕೊಂಡು ಸುಮ್ಮನಾದರು.....! ನಮ್ಮೆಲ್ಲರ ನಗುವಿನ ಶಬ್ದ ಮಾತ್ರ ತುಂಬಾ ಹೊತ್ತು ಎಲ್ಲರಿಗು ಕೇಳುತ್ತಿತ್ತು........??!!!

ಈ ನಗುವಿಗೆ ಕಾರಣ ಹುಡುಕಿ/ಊಹಿಸಿ!


ಈಗ ನೀವು ಈ ಲೇಖನವನ್ನು ಓದಿದವರು ನನಗೆ ತಿಳಿಸಿ ಆ ಫೋಟೋದಲ್ಲಿ ಏನು ಇತ್ತೆಂದು?.....!!!!!
ತಿಳಿಸುತ್ತೀರಾ ತಾನೆ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.