ಅದೊಂದು ದಿನ ಬೆಳಗ್ಗೆ, ಮನೆಯ ಅಕ್ಕ ಪಕ್ಕದ ಕೆಲವು ಜನರು ಹೋಯ್, ಹೋಯ್ ಎಂದು ಕೂಗುತ್ತಾ ಕೋಲಿನಿಂದ ಗೇಟಿನ ಮೇಲೆ ಕಾಂಪೌಂಡ್ ಮೇಲೆಲ್ಲಾ ಹೊಡೆಯುತ್ತಿದ್ದರು. ಏನದು ಸದ್ದು ಎಂದು ನಾನು ಹೊರಗೆ ಹೋಗಿ ನೋಡಿದರೆ, ಕೋತಿಗಳ ಹಿಂಡೊಂದು (ಗುಂಪು) ಬಂದಿದ್ದವು! ನಾನು ಹೋಗಿ ನೋಡುವಷ್ಟರಲ್ಲಿ, ಹಾಲಿಗೆಂದು ಗೇಟಿಗೆ ಸಿಗಿಸಿ ಇಟ್ಟಿದ್ದ ಬ್ಯಾಗ್ ಅನ್ನು ಕಿತ್ತಾಡಿ ಅದರಲ್ಲಿದ್ದ ಹಾಲಿನ ಪ್ಯಾಕೆಟ್ ಅನ್ನೂ ಸಹ ಕಿತ್ತು ಕೆಳಗೆಲ್ಲಾ ಚೆಲ್ಲಾಡಿ ಮಿಕ್ಕ ಹಾಲನ್ನು ಕುಡಿಯುತ್ತಾ ಕಾಂಪೌಂಡ್ ಮೇಲೆ ಧಡಿ ಕೋತಿಯೊಂದು ಕೂತಿತ್ತು. ನಾನು ಹೊರಗೆ ಬಂದದ್ದು ನೋಡಿ ಎದುರು ಮನೆ ಅಜ್ಜಿ ಒಬ್ಬರು, ಮಹಡಿಯ ಮೇಲಿಂದ, ಅಯ್ಯೋ ಅನ್ಯಾಯಮ ಪಾಲೆಲ್ಲ ಪೋಚ್ಚಿ, ಎಪ್ಪಡಿ ಪನ್ನಿಟ್ಇರುಕ್ಕುದು ಪಾರುಮ್ಮ (ಅನ್ಯಾಯವಾಗಿ ಹಾಲೆಲ್ಲ ಹೋಯಿತು, ಹೇಗೆ ಮಾಡಿದೆ ನೋಡಮ್ಮ) ಎಂದು ಹೇಳಿದರು.
ನಿಜ ಆ ಕೋತಿಯು ಗೇಟಿನ ಒಳ ಭಾಗ, ಹೊರಭಾಗ ಮತ್ತು ರಂಗೋಲಿ ಬಿಡುವ ಜಾಗದಲ್ಲೆಲ್ಲ ಹಾಲನ್ನು ಚೆಲ್ಲಾಡಿತ್ತು. ಅದನ್ನೆಲ್ಲಾ ನೋಡಿದ ನನಗೆ ಯಾಕೋ ಕೋಪ ಬರಲಿಲ್ಲ. ನಾನು ಮನಸ್ಸಿನಲ್ಲೇ, ಹೋಗಲಿ ಬಿಡು ನಮಗೆ ಒಂದು ದಿನ ಹಾಲಿಲ್ಲದಿದ್ದರೆ ಏನಂತೆ, ಒಂದು ಮೂಕ ಪ್ರಾಣಿ ತನ್ನ ಹೊಟ್ಟೆ ತುಂಬಿಸಿ ಕೊಂಡಿತಲ್ಲಾ ಅಂದುಕೊಂಡು ಒಳಗೆ ಬಂದು ಒಂದು ಬಾಳೆಹಣ್ಣನ್ನು ಸಹ ಅದಕ್ಕೆ ತಂದು ಕೊಟ್ಟೆ. ನನಗೆ ಅದರ ಕೈಗೆ ಕೊಡಲು ಭಯ ಎಲ್ಲಿ ಪರಚಿ ಬಿಡುತ್ತೋ ಎಂದು. ಅದಕ್ಕೆ ಬಾಗಿಲ ಹತ್ತಿರ ನಿಂತುಕೊಂಡು ಮೆತ್ತಗೆ ಎಸೆದೆ. ಅದು ಹಣ್ಣನ್ನು ಕ್ಯಾಚ್ ಹಿಡಿದು, ಕತ್ತು ಮುಂದೆ ಮಾಡಿ ನನ್ನನ್ನೇ ನೋಡುತ್ತಾ ಗುರ್ರ್ ಎಂದು ಗುಟುರು ಹಾಕಿತು. ಆಗ ನಾನು ನನ್ನಲ್ಲೇ ಅಂದುಕೊಂಡೆ, ಹಣ್ಣು ತೋರಿಸಿ ಅದಕ್ಕೆ ಕೊಡದೆ ಇದ್ದಿದ್ದರೆ ಅದು ಗುರಾಯಿಸುವುದು ಸರಿ, ಹಣ್ಣು ಕೊಟ್ಟ ಮೇಲೂ ಯಾಕೆ ಗುರ್ರ್ ಎನ್ನುತ್ತಿದೆ ಅಂತ! ಆದರೆ ಅದು ಮಾಡಿದ ರೀತಿ ನೋಡಿ, ನನಗೆ ಪ್ರಾಣಿಗಳ ಭಾಷೆ ತಿಳಿಯದಿದ್ದರೂ, ಅದು ಧನ್ಯವಾದ ಹೇಳಿತು ಎಂದು ಗೊತ್ತಾಯಿತು. ಓಕೆ ಅಂತ ಹೇಳಿ ಅದಕ್ಕೊಂದು ಸ್ಮೈಲ್ ಕೊಟ್ಟು, ಬಾಗಿಲು ಮುಚ್ಚಿ ಒಳಗೆ ಬಂದೆ.
ಕೆಲಸದಿಂದ ಹಿಂದಿರುಗಿ ಬಂದ ನನ್ನವರಿಗೆ ಎಲ್ಲವನ್ನೂ ಹೇಳಿ, ಏನೋ, ಒಂದು ದಿನ ಹೀಗೆ ಮಾಡಿತು ಆದರೆ ಹಾಲಿಡುವುದಕ್ಕೆ ಬೇರೆ ವ್ಯವಸ್ಥೆ ಮಾಡದಿದ್ದರೆ ನಮಗೆ ಹಾಲೇ ಸಿಗುವುದಿಲ್ಲ ಎಂದು ಹೇಳಿದೆ. ಅದಕ್ಕವರು ಆಯಿತು ಬಿಡು, ಸ್ವಲ್ಪ ದಿನ ಬ್ಯಾಗ್, ಬುಟ್ಟಿ ಯಾವುದೂ ಇಡುವುದು ಬೇಡ, ಪೋಸ್ಟ್ ಡಬ್ಬದ ಒಳಗೆ ಹಾಲು ಇಡುವಂತೆ ಹಾಲಿನವನಿಗೆ ಹೇಳುತ್ತೇನೆ ಎಂದರು.
ಇದೆಲ್ಲ ಕೋತಿ ಕಥೆ ನಡೆದದ್ದು ಕಳೆದ ತಿಂಗಳು. ಇತ್ತೀಚಿಗೆ ಏನಾಯಿತು ಗೊತ್ತಾ.....?ಕೆಲವು ದಿನಗಳ ಮಟ್ಟಿಗೆ ನಾವು ಯಾವುದೋ ವ್ರತ ಕೈಗೊಂಡಿದ್ದರಿಂದ, ವ್ರತ ಮುಗಿಯುವ ವರೆಗೂ ಆವತ್ತಿನ ಅಡುಗೆ ಆ ದಿನವೇ ಮುಗಿಸಬೇಕು, ಅಕಸ್ಮಾತ್ ಮಿಕ್ಕಿದರೂ ತಂಗಳು ತಿನ್ನಬಾರದು ಎಂದು ಹಿರಿಯರು ಹೇಳಿದ್ದರು. ಅದರಂತೆಯೇ ನಾನು ಸಾಧ್ಯವಾದಷ್ಟೂ ಅಳತೆಯಾಗಿಯೇ ಅಡುಗೆ ಮಾಡುತ್ತಿದ್ದೆ. ಏಕೆಂದರೆ ದುಬಾರಿಯ ಈ ಕಾಲದಲ್ಲಿ ಪದಾರ್ಥಗಳನ್ನು ವೇಸ್ಟ್ ಮಾಡುವ ಹಾಗಿಲ್ಲವಲ್ಲ.
ಆದರೆ ಆ ದಿನ (sept 02) ನನ್ನ ಗೆಳತಿಯ ಸಾವಿನ ಸುದ್ದಿ ತಿಳಿದ ನನಗೆ, ಆ ದುಃಖದಲ್ಲಿ ಊಟ ಸೇರಿರರಿಲ್ಲ. ಮಾರನೆ ದಿನ ಅದನ್ನು ನಾವು ಉಪಯೋಗಿಸುವ ಹಾಗು ಇರಲಿಲ್ಲ ಮತ್ತು ಅದನ್ನು ಹಾಗೆ ಕಸದಲ್ಲಿ ಚಲ್ಲುವ ಮನಸ್ಸು ಬರಲಿಲ್ಲ. ಹಾಗಾಗಿ ನಾನು ಹೊರಗೆ ಗುಡಿಸಿ ರಂಗೋಲಿ ಹಾಕುತ್ತಿದ್ದಾಗ, ಮುಂದಿನ ರಸ್ತೆಯಲ್ಲಿ ಫುಟ್ಪಾತ್ ಮೇಲೆ ಪ್ಲಾಸ್ಟಿಕ್ ಸಾಮಾನುಗಳನ್ನು ಮಾರುವ ಒಬ್ಬಾಕೆ, (ಅವಳು ನಮ್ಮ ಅಕ್ಕಪಕ್ಕದ ಮನೆಗಳಲ್ಲೂ ಕೆಲಸ ಮಾಡಲು ಬರುತ್ತಾಳೆ, ಅಲ್ಲದೆ ನಾನು ತರಕಾರಿ, ಮತ್ತು ದಿನಸಿ ಸಾಮಾನುಗಳನ್ನು ತರಲು ಆಗಾಗ ಅಂಗಡಿಗೆ ಹೋದಾಗ ನನ್ನನ್ನು ಕಂಡಾಗ ಸ್ಮೈಲ್ ಕೊಡುತ್ತಿದ್ದಳು, ಒಮ್ಮೊಮ್ಮೆ ಮಾತಾಡಿಸುತ್ತಲೂ ಇದ್ದಳು. ಅವಳಿಗೆ ಮೂರು ಜನ ಮಕ್ಕಳು.) ಅವಳನ್ನು ಕಂಡಾಗ, ಪೊಂಗಲ್ ಇದೆ ಕೊಡಲಾ, ತಗೋತೀಯಾ....? ಎಂದು ಕೇಳಿದೆ. ಅದಕ್ಕವಳು ತಂಗಳ ಅಕ್ಕ ಎಂದು ಕೇಳಿದಳು. ಹ್ಞೂ.... ಹೌದು ಚೆನ್ನಾಗೇ ಇದೆ, ರಾತ್ರಿನೂ ಬಿಸಿ ಮಾಡಿದ್ದೀನಿ ಬೇಕಿದ್ದರೆ ಈಗಲೂ ಬಿಸಿ ಮಾಡಿ ಕೊಡುತ್ತೀನಿ ಎಂದು ಹೇಳಿದೆ. ಆಗ ಅವಳೊಂದಿಗೆ ಬಂದಿದ್ದ ಒಬ್ಬ ಮಗನಿಗೆ, ಆಂಟಿ ಅನ್ನ ಕೊಡ್ತಾರಂತೆ ಇಸ್ಕೊಂಡು ಬಾರೋ ಅಂತ ಹೇಳಿ ಅವನನ್ನು ಬಿಟ್ಟು ಹೋದಳು. ಹೇಳಿದ ಪ್ರಕಾರ ನಾನು ಬಿಸಿ ಮಾಡಿ ಕೆಲವು ನಿಮಿಷಗಳಲ್ಲಿಯೇ ಆ ಹುಡುಗನ ಕೈಗೆ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪೊಂಗಲ್ ಅನ್ನು ತುಂಬಿಸಿ ಕೊಟ್ಟೆ.
ಅದಾದ ನಂತರ ಆ ದಿನವೆಲ್ಲ ನಾನು ಹೊರಗೆಲ್ಲೂ ಹೋಗಲೇ ಇಲ್ಲ. ಆ ದಿನ ಮಾಡಿದ್ದ ಬಿಸಿಬೇಳೆ ಬಾತ್ ಕೂಡ ಸ್ವಲ್ಪ ಮಿಕ್ಕಿ ಹೋಯಿತು. (ಏನು ಮಾಡುವುದು ಅಡುಗೆ ಎಂದರೆ ಹಾಗೆ ಅಲ್ಲವೇ ಎಷ್ಟು ಅಳತೆಯಾಗಿ ಮಾಡಲು ಪ್ರಯತ್ನಿಸಿದರೂ ಸ್ವಲ್ಪವಾದರೂ ಹೆಚ್ಚು ಅಥವಾ ಕಡಿಮೆ ಆಗೇ ಆಗುತ್ತದೆ.) ಅದನ್ನೂ ಅದೇ ರೀತಿ ಆ ಮಕ್ಕಳಿಗೆ ಕೊಡೋಣ ಎಂದುಕೊಂಡೆ, ಆದರೆ ಆದಿನ ಅವಳಾಗಲಿ, ಮಕ್ಕಳಾಗಲಿ ಕಾಣಿಸಲಿಲ್ಲ. ಸರಿ ಅಲ್ಲೇ ಮುಂದಿನ ರಸ್ತೆಯಲ್ಲೇ ಇರುತ್ತಾಳಲ್ಲ, ಅಂಗಡಿಗೆ ಹೋದಾಗ ನಾನೇ ತೆಗೆದುಕೊಂಡು ಹೋಗಿ ಕೊಡೋಣ ಎಂದುಕೊಂಡು ಸುಮ್ಮನಾದೆ. ಹಾಗೆ ಸ್ವಲ್ಪ ಹೊತ್ತಿನ ನಂತರ ಅಂಗಡಿಗೂ ಹೋದೆ ಆದರೆ ಅನ್ನವನ್ನು ತೆಗೆದುಕೊಂಡು ಹೋಗಲು ಮರೆತೇ.
ಅರೆರೆ.... ತರಕಾರಿ ಕೊಂಡು ವಾಪಸ್ ಮನೆಗೆ ಬರುವಾಗ ನಾನಲ್ಲಿ ಕಂಡ ದೃಷ್ಯವೇನು?ಅಲ್ಲಿ ಖಾಲಿ ಇದ್ದ ಜಾಗದ ಫೆನ್ಸಿಂಗ್ ಹತ್ತಿರ, ನಾನು ನೆನ್ನೆ ಕೊಟ್ಟಿದ್ದ ಆ ಪೊಂಗಲ್ ಡಬ್ಬಿ ಅಲ್ಲಿ ಬಿದ್ದಿತ್ತು ಅಷ್ಟೇ ಅಲ್ಲ ಅದರಲ್ಲಿದ್ದ ಪೊಂಗಲ್ ಎಲ್ಲವೂ ಅಲ್ಲಿನ ಮಣ್ಣಲ್ಲಿ ಬೆರೆತು ಹೋಗಿತ್ತು! ಅದನ್ನು ಕಂಡು ಬೇಸರದಿಂದ ಮನೆಗೆ ಬಂದು, ಒಂದು ಕ್ಷಣ ಯೋಚಿಸಿದೆ. ನಾವು ಸುಮ್ಮನೆ ತಪ್ಪು ತಿಳಿದುಕೊಳ್ಳ ಬಾರದು. ಆ ಡಬ್ಬಿ ಅಕಸ್ಮಾತ್ ಅವನ ಕೈಯಿಂದ ಜಾರಿ ಬಿದ್ದಿರಬಹುದೇ ಎಂದು. ಆದರೆ ಆ ರೀತಿ ಆಗಿರಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿಂದ ಐದಾರು ಹೆಜ್ಜೆ ಮುಂದೆ ಹೋದರೆ ಅಲ್ಲಿ ಮರದ ಪಕ್ಕದಲ್ಲಿ ಕಸ ಹಾಕುವ ಜಾಗವಿದೆ ಅಲ್ಲೇ ಬಿದ್ದಿತ್ತಲ್ಲಾ ಆ ಡಬ್ಬಿ.
ಅವಳು ತನಗೆ ಬೇಡ ಎಂದು ಹೇಳಿದ್ದರೂ, ಅದೇ ರಸ್ತೆಯಲ್ಲಿ ಕಟ್ಟಡದ ಕೆಲಸ ಮಾಡುವವರ ಮಕ್ಕಳಿದ್ದರು ಅವರಿಗಾದರೂ ಕೊಡುತ್ತಿದ್ದೇನಲ್ಲಾ, ಅಕ್ಕಿ, ಬೇಳೆ ಬೆಲೆಗಳು ದುಬಾರಿಯಾಗಿರುವ ಈ ಕಾಲದಲ್ಲಿ ಹೀಗೆ ಮಾಡಿದಳಲ್ಲ ಎಂದು ಬೇಜಾರಾಯಿತು. ಆಗಲೇ ನನಗೆ ಹಿಂದಿನ ಕೋತಿಯ ಪ್ರಸಂಗ ನೆನಪಾಯಿತು ಮತ್ತು ಅಣ್ಣಾವ್ರ ಹಾಡೊಂದು ನೆನಪಿಗೆ ಬಂದಿತು......ಪ್ರಾಣಿಗಳೇ ಗುಣದಲಿ ಮೇಲು........., ಮಾನವನದಕಿಂತ ಕೀಳು......!
ಅಂದಿನಿಂದಾ ಇಂದಿನವರೆಗೂ ಅವಳಾಗಲಿ ಅವಳ ಮಕ್ಕಳಾಗಲಿ ನನಗೆ ಕಣ್ಣಿಗೆ ಕಾಣಿಸಲೇ ಇಲ್ಲ.....!!
24 comments:
ಎಷ್ಟೋ ದಿನಗಳ ಹಿಂದಿನ ಮಾತು. ನಮ್ಮ ಮನೆಯಲ್ಲಿ ಏನಾದ್ರೂ ಮಿಕ್ಕಿದ್ರೆ ಬೀದಿ ಕಸ ಗುಡಿಸುವವಳಿಗೆ ಕೊಡ್ತಿದ್ರು.ಅವಳೂ ಸಂತೋಷದಿಂದ ಸ್ವೀಕರಿಸುತ್ತಿದ್ದಳು.ಒಂದು ಸಲ ಯಾವುದೋ ಹಬ್ಬದ ಸಂದರ್ಭದಲ್ಲಿ ಅವಳು ಬರಲಿಲ್ಲ.ಆಗ ನಮ್ಮ ತಾಯಿ "ಆನ್ಯಾಯವಾಗಿ ಮಿಕ್ಕಿದ ಅನ್ನಾನೆಲ್ಲಾ ನಾಯಿಗಳಿಗೆ ಹಾಕಿದೆ.ನೀನು ಬರಲೇ ಇಲ್ಲ."ಎಂದರು. ಅವಳು "ಅನ್ಯಾಯ ಹೇಗಾಯ್ತಮ್ಮಾ ಅದು ಒಂದು ಜೀವಾನೇ ಅಲ್ವಾ" ಅಂದಳು.ಅವಳಿಗೆ ಎಂಥಾ ದೊಡ್ಡ ಮನಸು ಅಂಥಾ ನಮ್ಮ ತಂದೆ ಯಾವಾಗ್ಲೂ ಹೇಳ್ತಾನೇ ಇದ್ರು.
ಉತ್ತಮ ಬರಹ.
ಉಷಾ ಅವರೇ,
ನಿಮ್ಮ ಪ್ರೋತ್ಸಾಹ ಸದಾ ಹೀಗೆ ಮುಂದುವರೆಯಲಿ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಭೇಟಿ ನೀಡುತ್ತಿರಿ...!
nimma lekhana tumba chennagide..praaNigLe mElu... ee tarahada kathegaLu ellarigu ondu buddi maatu dhanyavadagaLu nimage...
ಹಿಂದಿನ ದಿನ ಅನ್ನ ಮಿಕ್ಕಿದರೆ ಮರುದಿನ ಡಬ್ಬಿಯಲ್ಲಿ ಅದರದೇ ಮೊಸರನ್ನ ನನಗೆ. ಆಫೀಸಿರದ ದಿನ ಇದರಿಂದ ಮುಕ್ತಿ ;)
ವೇಸ್ಟ್ ಮಾಡಬಾರದು ಎಂಬ ಪ್ರಯತ್ನ ಸದಾ ಇರಲಿ. ಅದಕ್ಕೂ ಮೀರಿ ಎಸಿಯಬೇಕಾದರೆ ಬೇಸರ ಬೇಡ. ನಾಯಿಗಳು, ಇರುವೆಗಳು ಎಲ್ಲವೂ ತಿನ್ನುತ್ತವೆ. ಕೇಳ್ಲಿಲ್ವೇ "ಧಾನೆ ಧಾನೆ ಪೆ ಲಿಖಾ ಹೆ ..."
ಮೇಡಮ್,
ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕ್ಕಿಂತ ಕೀಳು...
ಈ ಮಾತು ಸತ್ಯ...ನನಗೂ ಅನೇಕ ಅನುಭವಗಳಾಗಿದೆ...ಆದ್ರೂ ನಮಗೆ ಈ ಮನುಷ್ಯರನ್ನು ಕಂಡರೆ ಪ್ರೀತಿ ಜಾಸ್ತಿಯಾಗುತ್ತೆ ಏಕೆ.? ಬಹುಶಃ ನಾವು ಅವರನ್ನು ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಓಲೈಸುತ್ತಿರುತ್ತೇವೇನೋ ಅನ್ನಿಸುತ್ತೆ....ಅಲ್ವಾ...
ಹೋಗ್ಲಿ ಬಿಡಿ. ತಪ್ಪು ಅವರದು ಮಾತ್ರವಲ್ಲ, ನಮ್ಮದು ಕೂಡ ತಪ್ಪೇ.
ಮನಸು ಅವರೇ,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ!!
ರಾಜೀವ ಅವರೇ,
ನಿಮ್ಮ ಮಾತು ಸರಿಯಾಗಿದೆ, ಹಾಗಂದುಕೊಂಡೆ ನೆಮ್ಮದಿ ತಂದುಕೊಳ್ಳಬೇಕು ಅಷ್ಟೇ!
ನಿಮ್ಮ ಭೇಟಿಗೆ ಮತ್ತು ಅಭಿಪ್ರಾಯಕ್ಕೆ ಧನ್ಯವಾದಗಳು.
ಶಿವೂ ಅವರೇ,
ಭೂಮಿಯಲ್ಲಿನ ಜೀವರಾಶಿಗಳಲ್ಲಿ ಮಾತು ಬರುವ ಜೀವಿ ಎಂದರೆ ಮನುಷ್ಯನೆ ಅಲ್ಲವೇ, ಅದಕ್ಕೆ ಈ ರೀತಿಯಾದ ಆಪ್ತತೆಯೇನೋ! ನಿಮ್ಮ ಅಭಿಪ್ರಾಯ ಒಂದು ರೀತಿ ಖುಷಿ ತಂದುಕೊಟ್ಟಿದೆ ನನಗೆ, ಧನ್ಯವಾದಗಳು!
ಶಿವಪ್ರಕಾಶ್ ಅವರೇ,
ನಿಮ್ಮ ಮಾತು ನಿಜ, ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುತ್ತಾರಲ್ಲ ಹಾಗೆ!
ನಿಮ್ಮ ಅನಿಸಿಕೆ, ಅಭಿಪ್ರಾಯಕ್ಕೆ ಧನ್ಯವಾದಗಳು.
ಎಸ್ಸೆಸ್ಕೇ..ಹೌದು ನೋಡಿ ಮಂಗ ಗುರ್ರ್ ಅಂದಿದ್ದು..ಗುರ್ರಾಯಿಸಲು ಅಲ್ಲ್..ಗುರ್ ಎಂದು ತೇಗುವಂತೆ ಮಾಡಿದಿರಿ...ಗುರ್..! (thank u) ಅಂತ.... ಅರೆರೆ..ಇವರಿಗೆ ಹೆಗೆ ಗೊತ್ತಾಯಿತು ಮಂಗನ ಭಾಷೆ..ಅಂದ್ರಾ...??!! ಹೇಳಿ ಕೇಳಿ ನಮ್ಮ ಪೂರ್ವಜರಲ್ಲವೇ..ಅಷ್ಟು ಬೇಗ ಅವರನ್ನು ಮರೆಯೊದು ಅಂದ್ರೇನು..?? ನಿಜ..ಕೆಲವೊಮ್ಮೆ..ಆಗುತ್ತೆ..ನನಗೆ ನೆನಪಿದೆ..ನಾವು ಮದ್ರಾಸಿನಲ್ಲಿದ್ದಾಗ ..ರಜೆಗೆ ಬೆಂಗಳೂರಿಗೆ ಹೊರಡುವ ವೇಳೆ ಕಾರಣಾಂತರಗಳಿಂದ ೪-೫ ಘಂಟೆ ಮುಂದೂಡಲ್ಪಟ್ಟಿತು, ಸರಿ ಅಡುಗೆ ಮಾಡೋದು ಬೇಡ ಅಂತ ಹತ್ತಿರದ ಅಡ್ಯಾರ್ ಲಂಚ್ ಹೋಂ ನಿಂದ ವೆಜಿಟಬಲ್ ಪಲಾವ್ ಕಳಿಸೋದಕ್ಕೆ ಪೋನ್ ಮಾಡಿ ನಾನು ಒಂದು ತುರ್ತು ಕೆಲಸಕ್ಕೆ ಹೊರಗೆ ಹೋಗಿ ಬಂದಾಗ..ಪಾರ್ಸಲ್ ಒಂದು extra ಕೊಟ್ಟು ಹೋಗಿದ್ದ (ಹಣ ತಗೊಂಡಿದ್ದ ಅನ್ನಿ..!!). ಸರಿ ನಮಗೆ ತಿನ್ನಲಾಗಲಿಲ್ಲ (ಪ್ರಯಾಣದ ಸಮಯ ಮಾಮೂಲಿಗಿಂತ ಲ್ಕಮ್ಮೀನೇ ತಿನ್ನೋಕೆ ಆಗೋದು ಅಲ್ವೇ..??). ಹೊರಗೆ ಬಂದು ಅಲ್ಲೊಬ್ಬ ಚಪ್ಪಲಿ ಹೊಲೆಯುವನಿದ್ದ..ಪಲಾವ್ ಇದೆ ತಗೋತೀಯೇನಪ್ಪಾ..? ಎಂದಿದಕ್ಕೆ ಅವನ ಹೆಂಡತಿ.. ಯೇಂ..ಉಂಗಳಕ್ಕು ಸಾಪಿಡ್ಡುಮುಡಿಯಿಲ್ಲೆಯಾ..?? ಅದನಾಲ್ ನಮಕ್ ಕುಡ್ಕರಿಂಗಲಾ..?? ಪೋಯ್ಯಾ ಪೋಯ್ಯಾ..(ಏನು, ನಿಮಗೆ ತಿನ್ನೊಕೆ ಆಗಲಿಲ್ಲ ಅಂತ ನಮಗೆ ಕೊಡ್ತಿದೀರಾ..ಹೋಗಯ್ಯಾ ಹೋಗಯ್ಯಾ) ಅಂದುಬಿಡೋದೇ....ನಾನು ಸರಿ ನಾಯಿಗೆ ಹಾಕೋಣ ಎಂದುಕೊಳ್ಳುತ್ತಿರುವಾಗಲೇ..ಅಲ್ಲೇ ಇದ್ದ ಅಜ್ಜ - ಎನಕ್ಕ್ ಕುಡುಂಗೋ ಸರ್ (ನನಗೆ ಕೊಡಿ ಸರ್) ಅಂತ ತಗೊಂಡು ಆತುರಾತುರವಾಗಿ ಪ್ಯಾಕೆಟ್ ಬಿಚ್ಚಿ ತಿನ್ನತೊಡಗಿದ..ಪಾಪ ಎಷ್ಟು ಹಸಿದಿದ್ದನೋ..ತಿನ್ನುತ್ತಾ ಧನ್ಯತಾಭಾವದಿಂದ ನನ್ನತ್ತ ನೋಡಿದ ಅಜ್ಜನ್ನ ಕಂಡು ನನ್ನ ಕಣ್ಣಲ್ಲಿ ನವಿರಾಗಿ ಹನಿಯಾಡಿತು.... (ಹೊಟ್ಟೆ ತುಂಬಿದರೆ ಮೃಷ್ಠಾನ್ನವೂ ಬೇಡವೆನಿಸುತ್ತೆ...ಅದೇ..ಹಸಿದಿರೆ...).
ಒಳ್ಳೆ ಪೋಸ್ಟ್..ನಿತ್ಯದ ವಿಷಯ ಆದರೆ ಪ್ರಸ್ತಾವನೆ..ಸೂಪರ್...ಹಾಗಾದರೆ ನಾನು ಹೇಳಿದ್ದು ಮಾಡ್ತೊದೀರಾ ಅಂತಾಯ್ತು..Backlog ಭರಭರ....ಹಹಹಹ
ಎಸ್ ,ಎಸ್,ಕೇ ಮೇಡಂ ,
ಒಳ್ಳೆಯ ಬರಹ .. ಸರಿಯೂ ತಪ್ಪು ಒ೦ದು ಹೇಳಲು ಆಗುವುದಿಲ್ಲ . ಎಲ್ಲ ಜೀವಿಗಳು ಎ೦ದು ಅ೦ದುಕೊ೦ಡರೆ ಆಯಿತು. .ನಾವು ಮಾನವರು ಎ೦ದು ಜಾಸ್ತಿ ಬೆಲೆ ಕೊಡುವ ಕಾರಣ ಹೀಗೆ ಎ೦ದು ಕಾಣುತ್ತದೆ .
ಜಲನಯನ ಅವರೇ,
ನಿಮ್ಮ ಈ ಮಿನಿ ಕಥೆಯಲ್ಲಿ, ನಮ್ಮ ಪೂರ್ವಜರನ್ನು ನೆನಪಿಸಿದ್ದೀರ ಮತ್ತು ನಗಿಸಿದ್ದೀರ. ಧನ್ಯವಾದಗಳು ನಿಮಗೆ!
ನಿಮಗೆ ಮತ್ತು ಮನೆಯವರಿಗೆಲ್ಲ " ರಂಜಾನ್" ಹಬ್ಬದ ಹಾರ್ದಿಕ ಶುಭಾಶಯಗಳು!!
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್!!!
ರೂಪ ಅವರೇ,
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!
ಅಂದಹಾಗೆ ಎಲ್ಲಿ ನಿಮ್ಮ ಬ್ಲಾಗ್ ಕನೆಕ್ಟ್ ಮಾಡಿಕೊಳಲಾಗುತ್ತಿಲ್ಲವಲ್ಲಾ......?
ನೀವಿನ್ನೂ ಬರೆಯಲು ಶುರು ಮಾಡಲಿಲ್ಲವೇ?
SSK Madam,
My blog is not there:-) :-).
Just i am the reader of blogs:-)
ರೂಪ ಅವರೇ,
ಇನ್ನೇಕೆ ತಡ, ಬರೆಯಲು ಶುರು ಮಾಡಿ ಪ್ಲೀಸ್!
ನಮಗೆಲ್ಲಾ ನಿರಾಶೆ ಮಾಡದೆ, ಬರೆಯುತ್ತೀರಿ ತಾನೇ......?!
ಎಸ್ಸೆಸ್ಕೇ ಯವರಿಗೆ ತುಂಬುಹೃದಯದ ಧನ್ಯವಾದಗಳು ಮತ್ತು ಈ ಹಬ್ಬ ಸರ್ವಧರ್ಮ ಸಮನ್ವಯಕ್ಕೆ ದಾರಿ ಮಾಡಲಿ ಎಂದೇ ಹಾರೈಸೋಣ...ಬುಡದ ಕಾಂಡ ಒಂದೇ..ಮೇಲೆ ಹರಡಿದ ಟೊಂಗೆಗಳು ಕಿತ್ತಾಡಿದರೆ ನೋವು ಮರಕ್ಕೇ...ಅಲ್ಲವೇ..ಎಲ್ಲರೂ ದೇಶವನ್ನು ಮುನ್ನಡೆಸುವತ್ತ ಮನಹರಿಸಿದರೆ ನೆತ್ತರು ಹರಿವುದು ನಿಲ್ಲುತ್ತೆ..ಹಸಿರುಸಿರಾಡುವ ಹೊಲ ಗದ್ದೆಗೆ ನೀರು ಹರಿಯುತ್ತೆ, ದೇಶ ಬೆಳಗಬೇಕಾದ ಜ್ನಾನ ಹರಿಯುತ್ತೆ..ದೇಶ ಬೆಳಗುತ್ತೆ...ಸಾರೆ..ಜಹಾಂ ಸೆ ಅಚ್ಛಾ ಹಿಂದೂಸ್ತಾಂ ಹಮಾರಾ...ನನಸಾಗುತ್ತೆ...
"ಪ್ರಾಣಿಗಳೇ ಗುಣದಲಿ ಮೇಲು, ಮಾನವನಕ್ಕಿಂತ ಕೀಳು.."
ನಿಮ್ಮ ಮಾತು ನಿಜ...
ಹೊಟ್ಟೆ ಹಸಿದಾಗಲೆ ಊಟದ ಬೆಲೆ ಗೊತ್ತಗೊದು....
ಸವಿಗನಸು ಅವರೇ,
ಮೊದಲಿಗೆ ನಿಮಗೆ, ನನ್ನ ಬ್ಲಾಗಿಗೆ ಸ್ವಾಗತ ಕೋರುತ್ತೇನೆ!
ಲೇಖನ ಮೆಚ್ಚಿ, ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು, ಹೀಗೆ ಭೇಟಿ ನೀಡುತ್ತಿರಿ.....!!
ಜಲನಯನ ಅವರೇ,
ನಿಮ್ಮ ಆಸೆ ನಮ್ಮೆಲ್ಲರ ಆಸೆ, ನಾವು ಎಲ್ಲಿದ್ದರೂ, ಹೇಗಿದ್ದರೂ ನಾವೆಲ್ಲಾ ಒಂದೇ....., ನಾವು ಭಾರತೀಯರು! ಜೈ ಹಿಂದ್!!!
ಬಹಳ ದಿನಗಳಾಗಿತ್ತು ನೀವು ಬರೆದಿರಲಿಲ್ಲ, ಬೀಜೀ ಇದ್ದೀರೇನೊ ಅಂತ ಸುಮ್ಮನಾಗಿದ್ದೆ ಬಂದು ನೋಡಿದರೆ ಆಗಲೇ ಲೇಖನ ಬಂದಿವೆ :) ಹ್ಮ್ ಮನುಷ್ಯ ಎಲ್ಲ ವಿಧಗಳಲ್ಲೂ ಪ್ರಾಣಿಯೇ, ಆದರೆ ನಂಬಿಕೆಯಲ್ಲಿ ಸ್ವಲ್ಪ ನಾಯಿ ಬುಧ್ಧಿ ಬದಲಿಗೆ ಬೆಕ್ಕಿನ ಬುಧ್ಧಿ ಬಂದಿದೆಯೇನೊ.
ಉದ್ದೇಶ ಪೂರ್ವಕವಾಗಿಯೇ ಎಸೆದಿರಬಹುದು, ನಮ್ಮೂರಲ್ಲಿ ಈಗೆಲ್ಲ ಹೀಗೆ ಕೊಡುವುದೇ ಇಲ್ಲ, ಕೊಟ್ಟರೆ ನಿಮಗಾದಂತ ಸ್ಥಿತಿಯೇ ಆಗುತ್ತದೆಂದು, ಮನೆಯಲ್ಲಿ ಹಸುಗಳಿಗೆ ಹಾಕಿ ಬಿಡುತ್ತಾರೆ, ಅದಕ್ಕೆ ಕೃತಜ್ಞತೆ ಅನ್ನೊವಂತೆ ಹಾಲು ಆದರೂ ಕೊಡುತ್ತದೆ ಅದು.
ಎರಡು ಪ್ರಸಂಗಗಳನ್ನು ಸೇರಿಸಿ ಕಥೆ ಹೆಣೆದದ್ದು ಚೆನ್ನಾಗಿತ್ತು, ಬರೀತಾ ಇರಿ.
ಪ್ರಭು ಅವರೇ,
ನಿಮ್ಮ ಮಾತು ಸತ್ಯ, ಪ್ರಾಣಿಗಳಿಗೆ ಉಪಕಾರ ಮಾಡಿದರೆ ಅದು ಅದರದೇ ರೀತಿಯಲ್ಲಿ ಕೃತಜ್ಞತೆ ತೋರುತ್ತದೆ!
ಲೇಖನ ಮೆಚ್ಚಿ ನಿಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು!
ಎಸೆಸ್ಕೆಯವರೆ...
ನೀವು ಬರೆದದ್ದು ನನಗೆ ಗೊತ್ತೇ ಆಗಲಿಲ್ಲ..
ಬಹಳ ತಡವಾಗಿ ಬಂದಿದ್ದಕ್ಕೆ ಬೇಸರಿಸ ಬೇಡಿ...
ತುಂಬ ಮನೋಜ್ಞವಾಗಿದೆ...
ನೀವು ಕೊಟ್ಟಿದ್ದನ್ನು ವೇಸ್ಟ್ ಮಾಡಬಾರದಾಗಿತ್ತು...
ನೀವು ಹೇಳಿದಂತೆ "ಪ್ರಾಣಿಗಳೇ ಗುಣದಲಿ ಮೇಲು"
ನಮ್ಮಮ್ಮ ಊರಲ್ಲಿ ಈ ರೀತಿ ಹೆಚ್ಚಾದುದನ್ನು ಒಂದು ಬೀದಿ ನಾಯಿಗೆ ಹಾಕುತ್ತಾರೆ..
ಅವುಗಳು ನಮ್ಮ ಫಸಲನ್ನು ತುಂಬಾ ಎಚ್ಚರಿಕೆಯಿಂದ ಕಾಯುತ್ತವೆ..
ಅವು ಪ್ರ್ಇತಿ ತೋರಿಸುವ ರೀತಿಗೆ ನಾವೆಲ್ಲ ಬೆರಗಾಗಿದ್ದೇವೆ...
ಚಂದದ ಬರಹಕ್ಕೆ ಅಭಿನಂದನೆಗಳು..
ಪ್ರಕಾಶ್ ಹೆಗ್ಡೆ ಅವರೇ,
ತಡವಾಗಿಯಾದರೂ ಸರಿ, ಒಟ್ಟಿನಲ್ಲಿ ಬಂದಿರಲ್ಲ ಅದೇ ನನಗೆ ಸಂತೋಷ!
ಹೊಗಳಿಕೆಯೋ , ತೆಗಳಿಕೆಯೋ..... ಏನಾದರೂ ಸರಿ ಲೇಖನ ಓದಿ ನನ್ನನ್ನು ಪ್ರೋತ್ಸಾಹಿಸಿದರೆ ಅದಕ್ಕಿಂತ ಬೇರೆ ಹೆಚ್ಚಿನ ಸಂತೋಷ ಏನಿದೆ ಹೇಳಿ ?
ಬಂದು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು! ಹೀಗೆ ಬರುತ್ತಾ ಇರಿ.
Post a Comment