Tuesday, September 22, 2009

ಗೆಳತಿಗಾಗಿ......!

ಸ್ನೇಹಿತರೇ, ನನ್ನ ಅಗಲಿದ ಗೆಳತಿಯ ನೆನಪಿನಲ್ಲಿ, ಮತ್ತು ಮೊದಲ ಪ್ರಯತ್ನವಾಗಿ ಈ ಒಂದು ಪುಟ್ಟ ಕವಿತೆಯನ್ನು (ಅಂತ ನಾನು ಹೇಳ್ತಾ ಇದ್ದೀನಿ ಆದರೆ ಇದು ಕವಿತೆನಾ ಅಥವಾ ಆಲ್ವಾ ಅಂತ ನೀವು ತಿಳಿದವರು ಹೇಳಿ) ಬರೆಯುತ್ತಿದ್ದೇನೆ.......!



ನೀನೆಲ್ಲಿರುವೆ ನನ್ನ ಗೆಳತಿಯೇ?
ಕೂತಲ್ಲಿ ನಿಂತಲ್ಲಿ ಕನಸಲ್ಲಿ ನನಸಲ್ಲಿ
ಎಲ್ಲೆಲ್ಲೂ ನಿನ್ನ ನೆನಪೇ ನನ್ನ ಕಾಡುತಿಹುದಲ್ಲ
ಕಾಣದಂತೆ ನೀ ಏಕೆ ಹೀಗೆ ಮರೆಯಾದೆ ಸಖಿಯೇ!

ನನಗೆ ನೀನಿದ್ದೆ, ನಿನಗೆ ನಾನಿದ್ದೆ
ನಮ್ಮ ಕಷ್ಟ ಸುಖಗಳ ಹಂಚಿಕೊಳುವಲ್ಲಿ
ನಿನ್ನೆಲ್ಲಾ ಇಷ್ಟಾನಿಷ್ಟಗಳನ್ನು ಹೇಳಿದ್ದೆ ನನ್ನಲ್ಲಿ
ನಿನ್ನ ಮಾತು ಮೌನಗಳಿಗೆ ನಾ ಕಿವಿಯಾಗಿದ್ದೆ

ಮದುವೆಯಾಗಿ ವರ್ಷಗಳೈದು ಕಳೆದರೂ
ತುಂಬಿಲ್ಲ ಎನ್ನ ಮಡಿಲು ಎಂದು ಕೊರಗಿದ್ದೆ ನೀನು
ಅದೆಷ್ಟು ಸಾಂತ್ವನದ ನುಡಿಗಳನು ಹೇಳಿದ್ದೆ ನಾನು
ಅದಕಾಗಿ ಪೂಜೆ, ಪ್ರಾರ್ಥನೆಗಳನ್ನು ಮಾಡಿದ್ದೆವು ನಾವು

ಅದಾವ ಭಗವಂತನ ಕರುಣೆಯೋ ಕಾಣೆ
ಮೊರೆ ಆಲಿಸಿದ ದೇವರು ನಿನ್ನಾಸೆಯ ಪೂರೈಸಿದ್ದ
ಗರ್ಭ ಧರಿಸಿದೆ, ತಾಯಿಯಾದೆ
ಮುದ್ದಾದ ಮಗುವೊಂದಕ್ಕೆ ಜನ್ಮ ನೀಡಿದೆ!

ನೋಡ ನೋಡುತ್ತಾ, ಕಾಲ ಕಳೆದಂತೆ
ಕ್ಷಣ ಕೂಡ ಮಗನನ್ನು ಅಗಲಿರದಂತೆ
ಜೀವಕ್ಕೆ ಉಸಿರಂತೆ, ನಯನಕ್ಕೆ ನೋಟದಂತೆ
ಅವನ ಆಟ ಊಟ ಪಾಟಗಳಲಿ ನೀ ಮುಳುಗಿ ಹೋದೆ

ಆದರೇ..... ನಿನ್ನದೇ ಮುದ್ದು ಕಂದಮ್ಮನಿಗೆ
ವರ್ಷಗಳು ಐದು ಕಳೆಯುವಾ ವೇಳೆಗೆ
ತಿರುಗಿ ಬಾರದ ಲೋಕಕ್ಕೆ ನೀ ಹೊರಟುಹೋದೆ
ಯಾರಿಗೂ ಕಾಣದಂತೆ ಕಣ್ಮರೆಯಾದೆ ನಿನಗಿದು ನ್ಯಾಯವೇ?

ಲೋಕ ಜ್ಞಾನ ಅರಿಯದ ಮಗುವನ್ನು
ಅನಾಥನನ್ನಾಗಿ ಮಾಡಿದೆ ನೀನು
ಇದಕೆ ಏಕೆ ಕೊರಗಿದ್ದೆ ಅಂದು ನೀನು
ಮಗುವಾಗಲಿಲ್ಲವಲ್ಲ ಎಂದು

ನನ್ನೆಲ್ಲ ಪ್ರಶ್ನೆಗಳಿಗೆ ನಿನ್ನ ಮಗನ ಭವಿಷ್ಯಕ್ಕೆ
ನೀನೆಲ್ಲಿದ್ದರೂ ಬಂದು ಉತ್ತರ ತಿಳಿಸು
ಇಲ್ಲದಿದ್ದರೆ...... ನಾವಿಬ್ಬರೂ ನಿನ್ನನ್ನು,
ಕ್ಷಮಿಸಲಾರೆವು ಎಂದೆಂದಿಗೂ.........!!!


ನಿನ್ನದೇ ನೆನಪಲ್ಲಿ ದುಃಖಿಯಾಗಿರುವ ನಿನ್ನ ಗೆಳತಿ........!!!!!









21 comments:

Unknown said...

ಎಸ್ ,ಎಸ್,ಕೇ ಮೇಡಂ ,
ನಿಮ್ಮ ಅಗಲಿದ ಗೆಳತಿಗೆ ನಮ್ಮದು ಒ೦ದು ಅಶ್ರು ತರ್ಪಣ .:-(

ಮನಸು said...
This comment has been removed by the author.
ಮನಸು said...

ಎಸ್, ಎಸ್, ಕೆ ಅವರೆ
ನಿಮ್ಮ ಸ್ನೇಹಿತೆ ಬಗ್ಗೆ ಬರೆದ ಕವನ ಚೆನ್ನಾಗಿದೆ ಆದರೆ ಇದು ಬಹಳ ದುಃಖ ಕೊಡುತ್ತೆ... ಆ ಮಗುವನ್ನು ಬಿಟ್ಟು ಹೋಗಬಾರದಿತ್ತು ನಿಜಕ್ಕು ಇದು ಅನ್ಯಾಯ ಎನಿಸುತ್ತೆ.. ಆ ಮಗುವನ್ನು ಸಲಹುವವರಾರು ಎಂದು ಮಿಡಿಯುತ್ತೆ ಮನ...
ನಿಮಗೊ ಅಂತ ಸ್ನೇಹಿತೆಯನ್ನು ಕಳೇದುಕೊಂಡ ನೋವು ಹೆಚ್ಚಿದೆ, ಅದು ನಮಗೆ ನಿಮ್ಮ ಕವನ ಮುಖೇನ ತಿಳಿಯುತ್ತೆ.

ಶಿವಪ್ರಕಾಶ್ said...

It hurts....
I dont know what to say...
ಆ ಚಿಕ್ಕ ಮುಗುವನ್ನು ನೆನಸಿಕೊಂಡರೆ ದುಃಖವಾಗುತ್ತದೆ...

Dileep Hegde said...

ಕವನ ಮನ ತಟ್ಟಿತು..
ಆದರೆ ಆ ಮಗುವಿನ ಬಗ್ಗೆ ಯೋಚಿಸಿದರೆ ಬೇಸರವೂ ಆಗ್ತಿದೆ.. :(

ಉಷಾ said...

ನಿಮ್ಮ ಕವನ ಓದಿ ನೆನಪಾದದ್ದು,ಮಗು ಹೆತ್ತು ಆ ಮಗುವನ್ನು ಕಣ್ಣಿಂದ ಸಹಾ ನೋಡದೆ ಮರೆಯಾದ ನನ್ನ ಅಕ್ಕ ಮತ್ತು ಈ ಜನಪದ ಗೀತೆ--
ಜವರಾಯ ಬಂದರೆ ಬರಿಗೈಲಿ ಬರಲಿಲ್ಲ
ಕುಡುಗೋಲು ಕೊಡಲಿ ಹೆಗಲೇರಿ
ಒಳ್ಳೊಳ್ಳೆ ಮರವ ಕಡಿಬಂದ ಜವರಾಯ
ಫಲ ಬಿಟ್ಟ ಮರವ ಕಡಿ ಬಂದ

Prabhuraj Moogi said...

ಅಗಲಿದ ಗೆಳತಿಗೆ ಇದಕ್ಕಿನ್ನ ಹೆಚ್ಚು ಶೃದ್ಧಾಂಜಲಿ ಇನ್ನೇನಿದೆ, ಸಾವು ಯಾರನ್ನು ಬಿಟ್ಟಿಲ್ಲ ಹೇಳಿ, ಎಲ್ಲರ್ ಕೊನೆ ನಿಲ್ದಾಣ ಅದೇ... ಅಸೆ ಪಟ್ಟು ಮಗನನ್ನು ಹೆತ್ತು ಅನಾಥ ಮಾಡಿದ್ದಕ್ಕಿಂತ, ಆಸೆಗೆ ನೀರೆರದು ಮಗು ಕೊಟ್ಟು, ಬದುಕು ಕಿತ್ತುಕೊಂಡ ವಿಧಿಯನ್ನೇನನ್ನಬೇಕು...

ರಾಜೀವ said...

ನಿಮ್ಮ ಕೂಗು ನಿಮ್ಮ ಗೆಳತಿಗೆ ಸೇರುವುದರಲ್ಲಿ ಸಂದೇಹವೇ ಇಲ್ಲ. ಪರಮಾತ್ಮ ಯಾವುದಾದರೊಂದು ರೂಪದಲ್ಲಿ ಬಂದು ಉತ್ತರ ತಿಳಿಸಿಯೇ ತಿಳಿಸುತ್ತಾನೆ.

ಜಲನಯನ said...

ನಮ್ಮ ಕಣ್ಣು ತುಂಬುತ್ತೆ ನಮ್ಮವರ ಅಗಲಿಕೆಯಿಂದ, ಮನ ತುಂಬುತ್ತೆ ಬಂಧುಗಳ ಅಗಲಿಕೆಯಿಮ್ದ, ನಮ್ಮ ಮನ-ಕಣ್ಣು ತುಂಬಿಬರುವುದು ನಮ್ಮ ತೀರ ಹತ್ತಿರದವರನ್ನು ಶಾಶ್ವತವಾಗಿ ಕಳೆದುಕೊಂಡಾಗ ಅಲ್ಲ ಅವರ ನೆನಪು ಕಾಡಿದ ಪ್ರತಿಕ್ಷಣ. ಇದೇ ನಿಮಗೂ ಅನುಭಕ್ಕೆ ಬರಿತ್ತಿದೆಯಲ್ಲಾ ಎಸ್ಸೆಸ್ಕೆಯವರೇ? ಅದರಲ್ಲೂ ಅವರ ಬಹುದಿನದ ಬಯಕೆಯ ಮಗುವನ್ನು ಪಡೆದು, ಅದರ ಬಾಲ್ಯವನ್ನು ಮನಃಪೂರ್ಣವಾಗಿ ಅನುಭವಿಸುವುದಕ್ಕೆ ಮುಂಚೆಯೇ ವಿಧಿಯ ಕ್ರೂರ ಆಟದ ದಾಳವಾದದ್ದು ನಿಜಕ್ಕೂ ವಿಶಾದನೀಯ. ನಿಮ್ಮ ಗೆಳತಿಯ ನೆನಪಲ್ಲಿ ಬರೆದ ಈ ಕವನ ನಿಜಕ್ಕೂ ಉತ್ತಮವಾಗಿ ಮೂಡಿಬಂದಿದೆ. ಇದು ಮೊದಲ ಪ್ರಯತ್ನ ಎನಿಸುವುದೇ ಇಲ್ಲ...ಭಾವನೆಗಳು ಹೇಗೆ ಹರಿದಿವೆ ಎನ್ನುವುದಕ್ಕೆ ಈ ನಿಮ್ಮ ಸಾಲುಗಲೇ ಸಾಕ್ಷಿ....
ನನಗೆ ನೀನಿದ್ದೆ, ನಿನಗೆ ನಾನಿದ್ದೆ
ನಮ್ಮ ಕಷ್ಟ ಸುಖಗಳ ಹಂಚಿಕೊಳುವಲ್ಲಿ
ನಿನ್ನೆಲ್ಲಾ ಇಷ್ಟಾನಿಷ್ಟಗಳನ್ನು ಹೇಳಿದ್ದೆ ನನ್ನಲ್ಲಿ
ನಿನ್ನ ಮಾತು ಮೌನಗಳಿಗೆ ನಾ ಕಿವಿಯಾಗಿದ್ದೆ

ನಿಮ್ಮ ಮುಂದಿನ ಕವನ ಕೃಷಿಗೆ ನಿಮ್ಮ ಸ್ನೇಹಿತೆಯ ನೆನಪಿನ ಈ ಕವನ ಶುಭಾರಂಭವಾಗಲಿ.

SSK said...

ರೂಪ ಅವರೇ,
ನಿಮ್ಮ ಕಾಣಿಕೆಗೆ ಮತ್ತು ಹಿತ ನುಡಿಗೆ ತುಂಬಾ ಧನ್ಯವಾದಗಳು.

SSK said...

ಮನಸು ಅವರೇ,
ನಿಮ್ಮ ಮಾತು ಅಕ್ಷರ ಸಹ ನಿಜ, ನನ್ನ ಮನಸ್ಸಿನ ತಳಮಳವನ್ನು ನೀವು ಚೆನ್ನಾಗಿ ಗುರುತಿಸಿದ್ದೀರಾ!
ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ ಧನ್ಯವಾದಗಳು.

SSK said...

ಶಿವಪ್ರಕಾಶ್ ಅವರೇ,
ಮನದಲ್ಲಿ ದುಃಖ ಅಡಗಿರುವಾಗ ಮಾತುಗಳಿಗಿಂತ ಹೆಚ್ಚಾಗಿ ಕಣ್ಣೀರೆ ಉತ್ತರವಾಗುತ್ತದೆ.
ನಿಮ್ಮ ಅಭಿಪ್ರಾಯಕ್ಕೆ ಮತ್ತು ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು!

SSK said...

ದಿಲೀಪ್ ಅವರೇ,
ಹೌದು, ಮಗುವಿನ ಆಟ ಪಾಠಗಳನ್ನು ಸನಿಹದಿಂದ ಕಂಡ ನನಗೆ, ಮಗುವಿನ ಮುಖ ಕಣ್ಮುಂದೆ ಬಂದಾಗ ಕಣ್ಣೀರು ಧಾರೆಯಾಗಿ ಹರಿಯುತ್ತದೆ. ನಿಮ್ಮ ಅಭಿಪ್ರಾಯಕ್ಕೆ, ಪ್ರತಿಕ್ರಿಯೆಗೆ ಧನ್ಯವಾದಗಳು!

SSK said...

ಉಷಾ ಅವರೇ,
ಈ ವಿಧಿಯ ಕ್ರೂರತೆಗೆ ಏನು ಹೇಳಬೇಕು......? ನಿಮ್ಮ ಅಕ್ಕನ ಬಗ್ಗೆ ಕೇಳಿ ಮನಸು ಘಾಸಿಯಾಯಿತು, ದುಃಖ ಕಟ್ಟೆಯೊಡೆಯಿತು. ನಮ್ಮನು ಅಗಲಿದ ನಮ್ಮ ಆತ್ಮೀಯರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಆಶಿಸೋಣ.
ನಿಮ್ಮ ದುಃಖ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ, ಧನ್ಯವಾದಗಳು !

SSK said...

ಪ್ರಭು ಅವರೇ,
ನಿಮ್ಮ ಸಾಂತ್ವನದ ಹಿತ ನುಡಿಗಳಿಗೆ ನಾನು ಚಿರಋಣಿ! ಕಷ್ಟ ಸುಖಗಳನ್ನು ಆತ್ಮೀಯರಲ್ಲಿ ಹೇಳಿಕೊಂಡರೆ ಮನಸ್ಸು ಹಗುರಾಗುತ್ತದೆ. ಹುಟ್ಟಿದ ಜೀವಿಗೆ ಸಾವು ತಪ್ಪಿದ್ದಲ್ಲ ನಿಜ ಆದರೆ ಅಕಾಲ ಮರಣ ಹೊಂದಿದರೆ ಆ ದುಃಖವನ್ನು ಮರೆಯುವುದು ಸ್ವಲ್ಪ ಹೆಚ್ಚೇ ಕಷ್ಟ ಅಲ್ಲವೇ......? ನಿಮ್ಮ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು!!

SSK said...

ರಾಜೀವ ಅವರೇ,
ನಿಮ್ಮ ಮಾತು ನಿಜ ಆದರೆ ಭಗವಂತ ಬೇರೆ ಯಾವುದೇ ರೂಪದಲ್ಲಿ ಉತ್ತರ ತಿಳಿಸಿದರೂ ಅದರಲ್ಲಿ ಮೊದಲಿನಷ್ಟು ಸಹಜತೆ ಇರುವುದಿಲ್ಲ ಅಲ್ಲವೇ.....?
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮ್ಮ ಹಿತನುಡಿಗಳಿಗೆ ನಾನು ಚಿರಋಣಿ!

SSK said...

ಜಲನಯನ ಅವರೇ,
ನೀವಂತೂ ನನ್ನ ಮನಸ್ಸಿನ ಭಾವನೆಗಳಿಗೆ ಕನ್ನಡಿ ಹಿಡಿದಿದ್ದೀರಾ!
ಅಂತೆಯೇ ಜೀವನದಲ್ಲಿ ಅನುಭವಗಳು ಕಲಿಸುವ ಪಾಠ ಎಲ್ಲಕ್ಕಿಂತ ಮಿಗಿಲು!
ಅದೇ ಗುಂಗಿನಲ್ಲಿ ಬರೆದ ಕವಿತೆ ನಿಮಗೆ ಮೆಚ್ಚುಗೆಯಾದದ್ದು ಕೇಳಿ ಸಂತೋಷವಾಯಿತು!
ನಿಮ್ಮೆಲ್ಲರ ಅತ್ಯಮೂಲ್ಯ ಪ್ರತಿಕ್ರಿಯೆಗಳಿಗೆ ನಾನು ಸದಾ ಋಣಿ, ನಿಮಗೆ ತುಂಬು ಮನಸ್ಸಿನ ಧನ್ಯವಾದಗಳು!

ಸಾಗರದಾಚೆಯ ಇಂಚರ said...

ನನಗೆ ಕೆಳಗಿನ ಸಾಲುಗಳು ತುಂಬಾ ಇಷ್ಟವಾದವು
ಒಳ್ಳೆಯ ಕವನ

ಲೋಕ ಜ್ಞಾನ ಅರಿಯದ ಮಗುವನ್ನು
ಅನಾಥನನ್ನಾಗಿ ಮಾಡಿದೆ ನೀನು
ಇದಕೆ ಏಕೆ ಕೊರಗಿದ್ದೆ ಅಂದು ನೀನು
ಮಗುವಾಗಲಿಲ್ಲವಲ್ಲ ಎಂದು

SSK said...

ಸಾಗರದಾಚೆಯ ಇಂಚರ ಅವರೇ,
ಮೊದಲಿಗೆ ನಿಮಗೆ, ನನ್ನ ಬ್ಲಾಗಿಗೆ ಸ್ವಾಗತವನ್ನು ಕೋರುತ್ತೇನೆ!
ಬ್ಲಾಗಿಗೆ ಬಂದು ಲೇಖನ/ಕವನ ಓದಿ ಮೆಚ್ಚಿಕೊಂಡಿದ್ದೀರಾ, ನನಗೆ ತುಂಬಾ ಸಂತೋಷವಾಯಿತು!!
ಧನ್ಯವಾದಗಳು ನಿಮಗೆ. ಹೀಗೆ ಭೇಟಿ ನೀಡುತ್ತಿರಿ...!

ದಿನಕರ ಮೊಗೇರ said...

ಏನು ಬರೆಯಲಿ, ಕಣ್ಣಲ್ಲಿ ನೀರು ಬಂತು ಅನ್ನಲಾ? ಕವನ ಇಷ್ಟ ಆಯ್ತು ಅನ್ನಲಾ? ಏನನ್ನಲಿ? ಕ್ರೂರ ವಿದಿಯನ್ನ ಬೈಯಲಾ? ಗೊತ್ತಾಗ್ತಿಲ್ಲ ಮೇಡಂ..... ನಮ್ಮ ಮದುವೆಯಾಗಿ ಮೂರು ವರ್ಷ.... ನಮಗೂ ಮಕ್ಕಳಾಗಿಲ್ಲ, ದೇವರಿಗೆ ದಯೆ ಯಾವಾಗ ಬರತ್ತೋ....

SSK said...

ದಿನಕರ್ ಅವರೇ,
ಕ್ಷಮಿಸಿ ಕೆಲಸದ ವ್ಯಸ್ತತೆಯಿಂದ ಬ್ಲಾಗಿಗೆ ಭೇಟಿ ನೀಡಲಾಗಿರಲಿಲ್ಲ ಅದಕ್ಕಾಗಿ ನಿಮ್ಮ ಪ್ರತಿಕ್ರಿಯೆಯನ್ನು ತಡವಾಗಿ ಓದಿದೆ.
ಮೊದಲಿಗೆ ನಿಮಗೆ, ನನ್ನ ಬ್ಲಾಗಿಗೆ ಸ್ವಾಗತ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಯೋಚಿಸಬೇಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ, ದೇವರಲ್ಲಿ ನಂಬಿಕೆ ಇಡಿ, ಭರವಸೆ ಕಳೆದುಕೊಳ್ಳಬೇಡಿ.
ಹೀಗೆ ಭೇಟಿ ನೀಡುತ್ತಿರಿ.