Thursday, April 9, 2009

ನಿಂಗಿಯ ಪುರಾಣ....!

ಈ ಪುಟ್ಟ ಕಥೆ ಕೇವಲ ನನ್ನ ಕಲ್ಪನೆಯದ್ದು ! ಯಾವುದಾದರು ಹೋಲಿಕೆ ಇದ್ದರೆ ಅದು ಕೇವಲ ಆಕಸ್ಮಿಕ ಅಷ್ಟೆ!



ನಗರದಲ್ಲಿ ಒಂದು ಪುಟ್ಟ ಸುಂದರ ಕುಟುಂಬ . ಕುಟುಂಬದ ಸದಸ್ಯರು ನಾಲ್ಕು ಮಂದಿ, ಅವರುಗಳು ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು! ಸ್ವಂತ ಮನೆ, ಅವಶ್ಯಕತೆ ಇದ್ದ ಎಲ್ಲಾ ವಸ್ತುಗಳು, ಮನೆಯ ಸುತ್ತ ಒಂದು ಪುಟ್ಟ ತೋಟ ಎಲ್ಲವೂ ಇದ್ದಂತ ಅನುಕೂಲವಾದ ಸಂಸಾರ ಅವರದು. ಅವರ ಮನೆಯಲ್ಲಿ ಕೆಲಸ ಮಾಡುವ ಆಕೆಯೇ ನಿಂಗಿ! ಈಕೆಯ ಗಂಡ ರಂಗ. ಇವರಿಬ್ಬರ ಪುಟ್ಟ ಮಗಳು ಭಿತ್ರಿ ಅಲ್ಲ ಛತ್ರಿ ಅದು ಅಲ್ಲ, ಯಾರಿಗ್ಗೊತ್ರಿ? ಸುಮ್ಮನೆ ತಮಾಷೆ ಮಾಡಿದೆ ಅವಳ ಹೆಸರು ಚಿತ್ರ.

ಬಹಳ ನಂಬಿಕಸ್ಥ ಕುಟುಂಬ ಈ ನಿಂಗಿಯದು! ಕೆಲಸಕ್ಕೆ ಮೋಸ ಮಾಡಿದರೂ ಮಾತಿಗೆ ಮತ್ತು ಹೊಟ್ಟೆಗೆ ಎಂದೂ ಮೋಸ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಹೇಳದೆ ಕೇಳದೆ ಯಾವುದೇ ವಸ್ತುವನ್ನು ಮುಟ್ಟುವುದಾಗಲೀ, ಮಾಯಾ ಮಾಡುವುದಾಗಲಿ ಮಾಡುತ್ತಿರಲಿಲ್ಲ ಮೊದಲೇ ಹೇಳಿದಂತೆ ನಂಬಿಕಸ್ಥಳು. ಅವರಾಗೆ ಏನಾದರು ಕೊಟ್ಟರೆ ತೆಗೆದುಕೊಳ್ಳುತ್ತಿದ್ದಳು ಇಲ್ಲದಿದ್ದರೆ ಏನು ಬೇಕಿದ್ದರೂ ಸಂಕೋಚ ವಿಲ್ಲದೆ ಕೇಳುತ್ತಿದ್ದಳು. ಹೇಳುವ ಎಲ್ಲ ಕೆಲಸವನ್ನು ಚಾಚು ತಪ್ಪದೆ ಚೆನ್ನಾಗಿಯೇ ಮಾಡುತ್ತಿದ್ದಳು, ಆದರೆ ಬಟ್ಟೆ ಒಗೆಯುವ ಕೆಲಸ ಬಂದಾಗ ಮಾತ್ರ ಇವಳಿಗೆ ಎಲ್ಲಿಲ್ಲದ ಮಾಯಾವಿ ನೋವುಗಳು ಬಂದುಬಿಡುತ್ತಿದ್ದವು! ಬಟ್ಟೆ ಒಗೆಯುವ ಮೆಶಿನ್ ಇದ್ದರೂ ಸಂಧರ್ಭಕ್ಕೆ ತಕ್ಕಂತೆ ಕೆಲವೊಮ್ಮೆ ಮೆಶಿನ್ ನಲ್ಲಿ ಅಥವಾ ತುಂಬಾ ಕೊಳೆ ಇರುವ ಬಟ್ಟೆ ಗಳಾದರೆ ನಿಂಗಿಯ ಕೈಯಿಂದ ಒಗೆಸುತ್ತಿದ್ದರು.



ಎಲ್ಲಾ ಕೆಲಸಗಳನ್ನು ಚೆನ್ನಾಗೇ ಮಾಡುವ ನಿಂಗಿ ಬಟ್ಟೆ ಮಾತ್ರ ಯಾಕೆ ಚೆನ್ನಾಗಿ ಒಗೆಯುವುದಿಲ್ಲ, ಎನ್ನುವ ವಿಷಯ ಮನೆಯ ಒಡತಿಗೆ ರಹಸ್ಯವಾಗೆ ಉಳಿದಿತ್ತು. ಎಷ್ಟೋ ಸಲ ಅವಳನ್ನೇ ಕೇಳಿದ್ದರು ಕೂಡ! ಅಲ್ವೇ ನಿಂಗಿ.... ಹೇಳೋ ಎಲ್ಲ ಕೆಲಸಾನೂ ಚಾಚು ತಪ್ಪದೆ ಚನ್ನಾಗೆ ಮಾಡೋ ನೀನು, ಬಟ್ಟೆಗಳು ಒಗೆಯೋ ಕೆಲಸ ಮಾತ್ರ ಯಾಕೆ ನ್ಯಾಯವಾಗಿ ಮಾಡೊಲ್ಲ ಎಂದು ಕೇಳುತ್ತಿದ್ದ ಮನೆಯಾಕೆಯ ಪ್ರಶ್ನೆಗೆ ನಿಂಗಿಯ ಉತ್ತರ ತಲೆ ಕೆರೆದುಕೊಳ್ಳುತ್ತಾ ಹಲ್ಲು ಗಿಂಜುವುದು ಅಷ್ಟೆ! ಆದರೆ ಒಂದು ದಿನ ಈ ರಹಸ್ಯವೂ ಬಯಲಾಯಿತು ಅನ್ನಿ. ಅದು ಹೇಗೆಂದರೆ, ಮುಂದೆ ಓದಿ ....



ಅದೊಂದು ದಿನ ಅವಳು ದಿನದ ಕೆಲಸ ಮುಗಿಸಿ, ಎಲೆ ಅಡಿಕೆ ಮೆಲ್ಲುತ್ತಾ ಸಂಜೆ ಮನೆಗೆ ಹೊರಟಿದ್ದಳು. ಅವಳನ್ನು ಆ ಮನೆಯ ಯಜಮಾನ ಕರೆದು, ಏ ನಿಂಗಿ ಈ ಭಾನುವಾರ ನಿನ್ನ ಗಂಡನನ್ನು ಜೊತೆಗೆ ಕರೆದುಕೊಂಡು ಬಾ ತೋಟದಲ್ಲಿ ಸ್ವಲ್ಪ ಕೆಲಸ ಮಾಡೋದಿದೆ ಎಂದು ಹೇಳಿದ್ದಕ್ಕೆ ಸರಿ ಎನ್ನುವಂತೆ ತಲೆಯಾಡಿಸಿ ಮನೆಗೆ ಹೋದಳು .

ಆ ದಿನ ಭಾನುವಾರ ಯಜಮಾನರು ಹೇಳಿದ ಹಾಗೆ ಗಂಡನನ್ನು ಜೊತೆಯಲ್ಲಿಯೇ ಕರೆದುಕೊಂಡು ಬಂದಳು. ಹೊರಗೆ ದಿನಪತ್ರಿಕೆ ಓದುತ್ತ ಕುಳಿತಿದ್ದ ಯಜಮಾನನ ಮುಂದೆ ನಿಂತು, ಸೊಂಟದಲ್ಲಿ ಕಟ್ಟಿದ್ದ ಟವೆಲ್ ಬಿಚ್ಚಿ ಎರಡೂ ಕೈಗಳ ಮಧ್ಯೆ ಮುದುರಿಕೊಂಡು ನಮಸ್ಕಾರ ಬುದ್ದೀ... ಅಂತ ಕೈ ಜೋಡಿಸಿ ನಿಂತ ರಂಗ. ನಿಂಗಿನೂ ಹಲ್ಲು ಕಿರಿದು ಒಳಗೆ ಹೋದಳು. ಇತ್ತ ಮನೆಯೊಡೆಯ ರಂಗನಿಗೆ ಏನೇನು ಕೆಲಸ ಮಾಡಬೇಕು ಎಂದು ತಿಳಿಸುತ್ತಾ, ಮೊದಲು ಉದುರಿದ ಎಲೆ ಮತ್ತು ಕಸ, ಕಡ್ಡಿಗಳನ್ನು ಗುಡಿಸಿ ಸ್ವಚ್ಛ ಮಾಡು ಮಿಕ್ಕಿದ್ದು ಆಮೇಲೆ ಎಂದು ಹೇಳಿದ್ದಕ್ಕೆ ಸರಿ ಎನ್ನುವಂತೆ ತಲೆ ಆಡಿಸಿ ಆ ಕಡೆ ಹೊರಟ. ಇತ್ತ ಈ ಯಜಮಾನ ತೆರೆದಿದ್ದ ದಿನಪತ್ರಿಕೆ ಕಣ್ಣ ಮುಂದಿದ್ದರು ಅದನ್ನು ಮತ್ತೆ ಓದುವ ಗೋಜಿಗೆ ಹೋಗದೆ, ಅವನು ಹೋದ ಕಡೆಯೇ ಗಮನಿಸುತ್ತಿದ್ದರು.

ಮಂಡಿಯ ವರೆಗೂ ಇದ್ದ ಬಿಳಿ ಕಚ್ಚೆ ಪಂಚೆ ಮೇಲೆ ನಸುಗೆಂಪು ಬಣ್ಣದ ಅಂಗಿ (ಶರ್ಟ್ ) ತೊಟ್ಟಿದ್ದ ರಂಗ. ವಸ್ತ್ರವನ್ನು (ಟವೆಲ್) ತಲೆಗೆ ಸುತ್ತಿಕೊಂಡು ಅಂಗಿ ಬಿಚ್ಚಿ ಒಂದು ಪಕ್ಕಕ್ಕಿಟ್ಟು ಕೆಲಸಕ್ಕೆ ಅಣಿಯಾಗುತ್ತಿದ್ದ. ಅಷ್ಟರಲ್ಲಿ ಮನೆಯೊಡತಿ ಒಂದು ಟ್ರೇನಲ್ಲಿ ಕಾಫೀ ಮತ್ತು ಎರಡು ಕಪ್ಪುಗಳನ್ನು ಜೋಡಿಸಿಕೊಂಡು ಬಂದು ಪತಿಯ ಬಳಿ ಕೂರುತ್ತಾ ಕಪ್ಪಿಗೆ ಕಾಫಿ ತುಂಬಿಸುತ್ತಿದ್ದರು. ನಂತರ ಪತಿಯ ಕೈಗೆ ಒಂದು ಕಪ್ಪನ್ನಿರಿಸಿ, ತಾವೂ ಕಾಫಿ ಕುಡಿಯುತ್ತಾ ಅವರೂ ರಂಗನ ಕಡೆ ದೃಷ್ಟಿ ಹಾಯಿಸಿದರು. ನೋಡಿದರೆ ಆಶ್ಚರ್ಯ, ರಂಗನ ಕಪ್ಪು ಬಣ್ಣದ ಮೈ ಮೇಲೆ ಹೊಸದರಂತೆ ಕಾಣುವ ಶುಭ್ರ ಬಿಳುಪಿನ ಕಚ್ಚೆ ಪಂಚೆ ಮತ್ತು ಬನಿಯನ್! ಈ ಬಟ್ಟೆಗಳನ್ನು ನಾವೇ ತಾನೆ ಇವರಿಗೆ ಕೊಟ್ಟಿದ್ದು ಎಂದು ತಿಳಿದುಕೊಳ್ಳಲು ಆಕೆಗೆ ಹೆಚ್ಚಿನ ಸಮಯ ಹಿಡಿಸಲಿಲ್ಲಾ. ಯಾಕೆಂದರೆ ಆ ಬನಿಯನ್ ಮಗ ತೊಡುತ್ತಿದ್ದ ಮಾಮುಲಿಗಿಂತ ಸ್ವಲ್ಪ ವಿಶಿಷ್ಟವಾದ ಶೈಲಿಯದು. ಕಾಫಿ ಕುಡಿದ ನಂತರ, ಕಪ್ಪುಗಳನ್ನು ತೊಳೆಯಲು ತೆಗೆದುಕೊಂಡು ಹೋಗುವಂತೆ ಹೇಳಿ ನಿಂಗಿಯನ್ನು ಕರೆದರು.



ಐದು ನಿಮಿಷ ಬಿಟ್ಟು, ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಬಂದ ನಿಂಗಿಯನ್ನು ಆಕೆ ಕೇಳಿದರು. ಏನೇ ನಿಂಗಿ ನಿಮ್ಮ ಮನೇಲಿ ಕೆಲಸಕ್ಕೆ ಅಂತ ಯಾರನ್ನಾದರು ನೇಮಿಸಿ ಕೊಂಡಿದ್ದಿಯೇನೆ? ಅದಕ್ಕೆ ನಿಂಗಿ ಇಲ್ಲ್ರವ್ವಾ , ನಾವೇನೆ ಒಂದು ಮನೇಲಿ ಕೆಲಸ ಮಾಡಿ ದುಡಿಯೋರು ಅಂತದ್ರಾಗೆ ನಮ್ಮನೆಯಾಗ್ ಯಾವ ಕೆಲ್ಸದೊರ್ ನೀವೇ ಹೇಳಿ . ಹಾಗಾದ್ರೆ ನಿನ್ನ ಗಂಡಾನೆ ಬಟ್ಟೆ ಒಗಿತಾನ, ಯಾಕೆಂದ್ರೆ ಬೆಳಗ್ಗೆಯಿಂದ ಸಂಜೆ ತನಕ ನೀನು ಇಲ್ಲೇ ಇರ್ತೀಯಲ್ಲ . ಐ ಬುಡಿ ಅಮ್ಮಾವ್ರೇ ಆ ಮೂದೇವಿಗೆ ಆ ಕೆಲಸ ಎಲ್ ಮಾಡೋಕ್ಕೆ ಬರುತ್ತೆ , ಇಲ್ಲಿಂದ ಹೋದ್ಮ್ಯಾಲೆ ನಾನ್ ಅಲ್ಲಿನೂ ದುಡಿಬ್ಯಾಕು, ಏನೋ ಒಸಿ ಸಹಾಯ ಮಾಡ್ತಾನೆ ಅಷ್ಟೇಯ.

ಹೇಗಾದರೂ ಮಾಡಿ ಈವತ್ತು ಅವಳ ಬಾಯಿ ಬಿಡಿಸ ಬೇಕು ಅಂದುಕೊಂಡು ಅವಳನ್ನು ಈಕೆ ಇನ್ನಷ್ಟು ಪ್ರಶ್ನಿಸಿದರು.

ಹಾಗಾದ್ರೆ ನಿನ್ ಗಂಡನ ಹುಟ್ಟಿದ ಹಬ್ಬಾನ ಅಥವಾ ನೀವ್ ಮದ್ವೆ ಆದ ದಿನಾನ ಈವತ್ತು , ಯಾಕೆಂದ್ರೆ ರಂಗ ಮಿಂಚ್ತಾ ಇದಾನೆ ಈವತ್ತು ಏನ್ ವಿಷ್ಯಾ ? ಅಂತವೆಲ್ಲ ನಮ್ಮಂತೋರಿಗೆ ಎಲ್ಲ ಏನ್ ವಿಶೇಷ ಇಲ್ಲ ಅಮ್ಮೊರೆ , ಅವ್ನು ಆಕೊಂಡ್ ಇರೋ ಬಟ್ಟೆ ನೀವ್ ಕೊಟ್ಟಿದ್ದೆ ಅಲ್ಲುವ್ರ . ಇದ್ನೋಡಿ ನಾನ್ ಉತ್ಕೊಂಡ್ ಇರೋ ಈ ಅರಿಸಿನ ಬಣ್ಣದ ಸೀರೆನು ನೀವೇ ಕೊಟ್ಟಿದ್ದು ! ನಾವ್ ಇಲ್ ಬಿಟ್ರೆ ಬೇರೆ ಎಲ್ ಕೆಲಸ ಮಾಡ್ತಿವಿ ಏಳಿ , ಏನೇ ಕೊಟ್ರು ನೀವೇ ಅಲ್ವ ಕೊಡ್ಬೇಕು.

ಅದು ಸರಿ ಆದರೆ ನಮ್ಮ ಮನೇಲಿ ನೀನೆ ಬಟ್ಟೆ ಒಗೆಯೋದು, ಅದರಲ್ಲಿ ಸರಿಯಾಗಿ ಕೊಳೆ ನೆ ಹೋಗ್ಸೋದಿಲ್ಲಾ ಆದ್ರೆ ನಿಮ್ಮನೇಲಿ ನೀನೆ ಒಗೆಯೋ ಬಟ್ಟೆ ಅಷ್ಟು ಶುಭ್ರವಾಗಿದೆ ಹೇಗೆ? ಅಂತ ಕೇಳಿದ್ದಕ್ಕೆ ನಿಂಗಿ ಅದೇ ರೀತಿ ಹಲ್ಲು ಕಿರಿಯುತ್ತಾ ..... ನಿಮ್ಮನ್ತೊರ್ ಹೊಟ್ಟೆಗೆ, ಬಟ್ಟೆಗೆ ಕೊಟ್ರೆನೆ ಅಲ್ವ ಅಮ್ಮೊರೆ ನಮ್ಮನ್ತೋರ ಜೀವನ ಸಾಗೋದು !?

ಇವಳ ಮಾತಿನ ಒಳ ಅರ್ಥ ತಿಳಿದ ಮನೆಯೊಡತಿಗೂ, ಇವರಿಬ್ಬರ ಮಾತನ್ನು ಕೇಳುತ್ತಿದ್ದ ಯಜಮಾನನಿಗು ಬೆಸ್ತೋ , ಬೇಸ್ತು !

4 comments:

Prabhuraj Moogi said...

ನಿಂಗಿ ನಂಬಿಕಸ್ಥನ ಕೊನೆಗೂ ಗೊತ್ತಾಯಿತಲ್ಲ.. ಅದಕ್ಕೇ ಆಳು ಮಾಡಿದ್ದು ಹಾಳು ಅಂತ ಹಿರಿಯರು ಹೇಳಿದ್ದು...

SSK said...

ನಿಜ ಪ್ರಭು ಅವರೇ, ಈ ಕೆಲಸದವರನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರು ಅವರು ಒಂದಲ್ಲಾ ಒಂದು ರೀತಿಯಲ್ಲಿ ಅವರ ವರಸೆ/ಬುದ್ದಿ ತೋರಿಸುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಈ ಕೆಲಸದವರಿಂದ ಒಂದಲ್ಲಾ ಒಂದು ಗೋಳು ಇದ್ದೆ ಇರುತ್ತದೆ. ಅದಕ್ಕೆ ಎಂದಿಗೂ ಇವರುಗಳ ಮೇಲೆ ಸಾಧ್ಯವಾದಷ್ಟು ಅವಲಂಬಿಸಬಾರದು ಅಂತ ನನ್ನ ಅನಿಸಿಕೆ.
ನಾವು ಮತ್ತು ನಮ್ಮ ಅತ್ತಿಗೆ ಅವರೂ ಸಹ ಯಾವ ಕೆಲಸದವರನ್ನು ನೇಮಿಸಿಕೊಂಡಿಲ್ಲ. ನಾವುಗಳು ನಮ್ಮ ಕೈಲಾಗುವವರೆಗೂ ಸ್ವಾವಲಂಬಿಗಳು!
ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.

ಶಿವಪ್ರಕಾಶ್ said...

SSK ಅವರೇ.
ನಮ್ಮ ಮನೆಯ ಕೆಲಸವನ್ನು ಆದಸ್ಟು ನಾವೇ ಮಾಡಿಕೊಂಡರೆ ಒಳಿತು. ನೆಮ್ಮದಿ ಕೂಡ.
ನನ್ನದೊಂದು ಚಿಕ್ಕ ಸಲಹೆ, ತಪ್ಪಾಗಿ ತಿಳಿಯಬೇಡಿ, ನೀವು ಕೊನೆಯ ಸಾಲುಗಳನ್ನು ಸ್ವಲ್ಪ ಬಿಡಿಸಿ ಬರೆದಿದ್ದರೆ ಚನ್ನಗಿರ್ತಿತ್ತು ಎನ್ನುವುದು ನನ್ನ ಭಾವನೆ.

ಧನ್ಯವಾದಗಳು...

SSK said...

ಶಿವಪ್ರಕಾಶ್ ಅವರೇ, ಮೊದಲಿಗೆ ನೀವು ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಮತ್ತು ನಿಮ್ಮ ಸಲಹೆಗೆ ಸ್ವಾಗತಾರ್ಹ ನಮನ. ನಿಮ್ಮ ಸಲಹೆ ಸೂಚನೆಗಳನ್ನು ನಾನು ಸದಾ ಆಹ್ವಾನಿಸುತ್ತೇನೆ ಮತ್ತು ಇದರ ಸಹಾಯದಿಂದ ಇನ್ನಷ್ಟು ಕಲಿಯುತ್ತೇನೆ. ಇದೆ ರೀತಿ ಪ್ರೋತ್ಶಾಹಿಸುತ್ತಿರಿ, ಮತ್ತೊಮ್ಮೆ ಧನ್ಯವಾದಗಳು!