ಗೆಳೆಯರೇ, ನನಗಾದ ಅನುಭವ ಮತ್ತು ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ವಿಚಾರದಲ್ಲಿ ತಪ್ಪೇನಾದರೂ ಇದ್ದರೆ ಮನ್ನಿಸಿ!
ಕಳೆದ ಗುರುವಾರ ನಾನು ಬೆಳಗ್ಗೆಯಿಂದ ಮನೆ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದೆ. ಇದರ ಮಧ್ಯೆ ತಿಂಡಿ, ಅಡುಗೆ ಎಲ್ಲ ಮುಗಿಸುವಷ್ಟು ಹೊತ್ತಿಗೆ ಮಧ್ಯಾನ್ನವಾಗಿತ್ತು ಮತ್ತು ಕಸ ಗುಡಿಸಿ, ಒರೆಸುವ/ಸಾರಿಸುವ ಕೆಲಸ ಬಾಕಿ ಇತ್ತು. ಸರಿ ಊಟವಾದ ಮೇಲೆ ಮಾಡಿ ಮುಗಿಸಿಬಿಡೋಣ ಎಂದು ಊಟದ ಶಾಸ್ತ್ರ ಮುಗಿಸಿದೆ. ಆದರೆ ಊಟವಾದ ನಂತರ ತಕ್ಷಣ ಕೆಲಸ ಶುರು ಮಾಡಲು ಮನಸು ಬರಲಿಲ್ಲ ಬದಲಿಗೆ ಸ್ವಲ್ಪ ಹೊತ್ತು ಮಲಗಿ ಸುಧಾರಿಸಿಕೊಳ್ಳುವಂತೆ ಮನಸು ಪೀಡಿಸುತ್ತಿತ್ತು. ಮಹ್ಯಾನ್ಹದಲ್ಲಿ ಮಲಗುವ ಅಭ್ಯಾಸ ಇಲ್ಲದಿರುವುದರಿಂದ ಸಾಮಾನ್ಯವಾಗಿ ಮಲಗುವುದಿಲ್ಲ. ಹಾಗೆ ಮಲಗಿದರು ನಿದ್ರೆ ಮಾತ್ರ ಮಾಡುವುದಿಲ್ಲ! ಆದರೆ ಸುಸ್ತಾಗಿದ್ದರಿಂದಲೋ ಏನೋ ಕಣ್ಣು ಜೋಂಪು ಹತ್ತುತ್ತಿತ್ತು. ಸಂಜೆ ಬೇರೆ ಎಲ್ಲೋ ಅವಶ್ಯವಾಗಿ ಹೋಗಬೇಕಾಗಿದ್ದುದರಿಂದ, ಈಗ ಸ್ವಲ್ಪ ಹೊತ್ತು ಮಲಗದಿದ್ದರೆ ಆಮೇಲೆ ಕೆಲಸ ಕೆಡುತ್ತದೆ, ಹೋದ ಕಡೆ ಕಣ್ಣು ಎಳೆಯುತ್ತಿರುತ್ತವೆ ಎಂದು ಜಾಸ್ತಿ ಕೊಸರಾಡದೆ ಮಲಗಿಬಿಟ್ಟೆ! ೨ ಘಂಟೆಗಳ ಕಾಲ ಎಚ್ಚರವೇ ಇಲ್ಲ ಅಂತಾ ನಿದ್ರೆ. ಕಣ್ಣು ಬಿಟ್ಟಾಗ ಗಡಿಯಾರ ೫.೦೦ ಘಂಟೆ ತೋರಿಸುತ್ತಿತ್ತು. ಗಡಬಡಿಸಿ ಎದ್ದು ಮತ್ತೆ ಮಿಕ್ಕ ಕೆಲಸ ಮಾಡಿ ಮುಗಿಸೋಣ ಎಂದರೆ ಒಂದು ರೀತಿ ಪಾಪ ಪ್ರಜ್ಞೆಯಿಂದ, ಇಷ್ಟು ಹೊತ್ತು ಮಲಗಿದ್ದು ತಪ್ಪು ಎನ್ನುವಂತೆ ನನ್ನನ್ನು ಕಾಡಿಸಿ ಸ್ವಲ್ಪ ಹೊತ್ತು ಸುಮ್ಮನೆ ಕೂರುವಂತೆ ಮಾಡಿತು ನನ್ನ (ಕಳ್ಳ) ಮನಸ್ಸು! ನಿಧಾನವಾಗಿ ಕೆಲಸ ಮುಗಿಸಿ, ತಯಾರಾಗಿ ಹೊರಟೆ.
ರಾತ್ರಿ ಬರುವಷ್ಟರಲ್ಲಿ ೧೦.೦೦ ಘಂಟೆಯಾಗಿತ್ತು, ಮತ್ತು ಅಲ್ಲಿ ಚಾಟ್ ತಿಂದಿದ್ದರಿಂದ ಮನೆಯಲ್ಲಿ ಊಟ ಮಾಡಲು ಅರ್ಧಂಬರ್ಧ ಮನಸು ತಿನ್ನಲೋ, ಬೇಡವೋ ಎಂದು. ಈಗ ತಿನ್ನದೇ ಇದ್ದರೆ ಬೆಳಗ್ಗೆ ತಿಂಡಿ ತಿನ್ನುವವರೆಗೂ ಹಾಗೆ ಇರಲು ಆಗುವುದಿಲ್ಲ, ಎಷ್ಟು ಸೇರುತ್ತೋ ಅಷ್ಟು ತಿಂದು ಮಲಗೋಣ ಎಂದುಕೊಂಡೆ.
ಈ ಮೇಲಿನ ಕಥೆ ಎಲ್ಲಾ ಬರಿ ಪೀಠಿಕೆ ಅಷ್ಟೇ! ಆದರೆ ಅಸಲಿ ಕಥೆ ಮುಂದೆ ಓದಿ!!
ತಟ್ಟೆಯಲ್ಲಿ ಅನ್ನ, ಸಾರು ಬಡಿಸಿಕೊಂಡು ಬಂದು ಸೋಫಾದಲ್ಲಿ ಕುಳಿತು ತಿನ್ನಲು ಶುರು ಮಾಡಿದೆ. ಇನ್ನ ಒಂದು ತುತ್ತು ಬಾಯಿಗೆ ಇಡಲಿಲ್ಲ, ಅಷ್ಟರಲ್ಲೇ ಒಂದೆರಡು ಅನ್ನದ ಅಗಳು ನೆಲಕ್ಕೆ ಚೆಲ್ಲಿತು. ಸಾಮಾನ್ಯವಾಗಿ ನಾನು ತುಂಬಾ ತಾಳ್ಮೆಯಿಂದ ಇರುತ್ತೇನೆ! ಆದರೆ ಸ್ವಲ್ಪ ಹೊತ್ತಿನ ಮುಂಚೆಯೇ ಸಾರಿಸಿ ಸ್ವಚ್ಛ ಮಾಡಿದ್ದರಿಂದ ಅನ್ನ ಚೆಲ್ಲಿದ್ದಕ್ಕೆ ಕೋಪ ಬಂದು ಬೈದುಕೊಂಡೆ. ಛೆ ಸ್ವಲ್ಪ ಹೊತ್ತು ಕೂಡ ಶುದ್ದವಾಗಿರೋಲ್ಲ ಏನಾದರೊಂದು ಚೆಲ್ಲುತ್ತಲೇ ಇರುತ್ತೆ ಎಂದುಕೊಂಡು ತಿನ್ನಲು ಮುಂದುವರೆಸಿದೆ. ಎರಡು ತುತ್ತು ತಿಂದಿದ್ದೆ ಅಷ್ಟೇ, ನಾನು ಬೈದುಕೊಂಡಿದ್ದಕ್ಕೆ ತಕ್ಷಣ ನನ್ನ ಮನಸ್ಸು ನನ್ನನ್ನು ತಿರಸ್ಕರಿಸುತ್ತಾ, ಯಾವುದೋ ಅಶರೀರ ವಾಣಿಯೊಂದು ನುಡಿದಂತೆ ನನ್ನ ೬ ನೇ ಸ್ಮೃತಿ ಜಾಗೃತಗೊಳಿಸಿತು. ಅದೇನೆಂದರೆ ಆದದ್ದಿಷ್ಟೇ, ಭೂಮಿ ತಾಯಿಯು ನನ್ನನ್ನು ಕುರಿತು, ನಾನೇ ಕೊಡುವ ಆಹಾರದಲ್ಲಿ ಏನೋ ಒಂದು ಸ್ವಲ್ಪ ಪ್ರೀತಿಯಿಂದ ನಿನ್ನಿಂದ ತೆಗೆದುಕೊಂಡೆ ಅಷ್ಟಕ್ಕೆ ಹೀಗೆ ಬೈದುಕೊಳ್ಳುವುದಾ? ಎಂದು ನನ್ನನ್ನು ಮೂದಲಿಸುವಂತೆ ಭಾಸವಾಯಿತು!!!
ಅಷ್ಟೇ, ನನ್ನ ತಪ್ಪಿನ ಅರಿವು ನನಗಾಗಿತ್ತು. ಆಗ ನಾನಂದುಕೊಂಡೆ, ಹೌದಲ್ಲವಾ! ಮತ್ತು ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನೆಲದ ಮೇಲೆ ಕುಳಿತು ಚೊಕ್ಕವಾಗಿ ಬಾಳೆಎಲೆ ಅಥವಾ ತಟ್ಟೆಯಲ್ಲಿ ಉಣ್ಣುತ್ತಿದ್ದರು. ಊಟ ಶುರು ಮಾಡುವ ಮುಂಚೆ ಮೊದಲ ತುತ್ತನ್ನು ತಮ್ಮ ಇಷ್ಟ ದೇವರಿಗೆ ಅಥವಾ ಪಿತೃ ದೇವತೆಗಳಿಗೆ ಅಥವಾ ಭೂಮಿ ತಾಯಿಗೆ ಸಮರ್ಪಿಸಿ ನಂತರ ತಿನ್ನುತ್ತಿದ್ದರು. (ಆಗ ಮೇಜು ಖುರ್ಚಿಗಳು ಅಷ್ಟಾಗಿ ಇರುತ್ತಿರಲಿಲ್ಲ). ಈ ಪದ್ದತಿಯೆಲ್ಲ ಈಗ ಎಲ್ಲಿದೆ? ಎಲ್ಲೋ, ಹೇಗೋ, ಏನೋ ತಿಂದು ತಮ್ಮ ತಮ್ಮ ಕೆಲಸದಲ್ಲಿ ವ್ಯಸ್ತರಾಗಿಬಿಡುತ್ತಾರೆ. ಈಗಿನ ಪೀಳಿಗ್ಹೆಯವರಿಗೆ ಅಷ್ಟು ಸಂಸ್ಕಾರ, ವ್ಯವಧಾನ ಎಲ್ಲಿದೆ? ನಾವು ಮಧ್ಯ ಪೀಳಿಘೆಯವರು ಮೊದಲ ತುತ್ತು ತಿನ್ನುವ ಮೊದಲು ದೇವರನ್ನು ನೆನೆದು/ ಮುಗಿದು ತಿಂದರೂ ಅದು ಕೇವಲ ಲೋಕಾ ರೂಢಿಯಾಗಿದೆ ಅಷ್ಟೇ!
10 comments:
ಬಹಳ ಚೆನ್ನಾಗಿದೆ, ಬಿದ್ದ ಅಗುಳು ಅನ್ನದಮೇಲೂ ಒಂದು ಒಳ್ಳೆಯ ಪೋಸ್ಟ ಕೊಟ್ಟಿದ್ದೀರಿ.. ಇನ್ನೊಂದು ಗೊತ್ತಾ ಹಿಂದಿನ ಕಾಲದಲ್ಲಿ ಈ ಹಿರಿಯರು, ತಟ್ಟೆಯ ಪಕ್ಕ ನೀರಿನ ಬಟ್ಟಲಿನಲ್ಲಿ ಸೂಜಿ ಇಟ್ಟಿರುತ್ತಿದ್ದರಂತೆ, ಅನ್ನದ ಅಗುಳೊಂದು ಬಿದ್ದರೆ ಅದನ್ನ ಸೂಜಿಯಲ್ಲಿ ಎತ್ತಿ ನೀರಲ್ಲಿ ಮುಳುಗಿಸಿ ತೊಳೆದು ಮತ್ತೆ ತಿನ್ನುತ್ತಿದ್ದರಂತೆ, ಎಂಥ ಒಳ್ಳೆಯ ಆಚರಣೆಗಳು ಅಲ್ವಾ...
houdu..
nam ajja., ajji eegalu aa thara madthare...
ಪ್ರಭು ಅವರೇ, ನೀವು ಹೇಳಿದ ಸೂಜಿ ಕಥೆ/ವಿಷಯ ಹೊಸದಾಗಿದೆ! ಈ ಮುಂಚೆ ನಾನೆಲ್ಲೂ ಕೇಳಿರಲಿಲ್ಲ, ಹಳೆಯ ಕಾಲದ ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.
ಶಿವಪ್ರಕಾಶ್ ಅವರೇ, ಹಿರಿಯರ ಆಚರಣೆಯಲ್ಲಿ ಎಷ್ಟೊಂದು ವಿಚಾರಗಳಿವೆ ಅಲ್ಲವೇ.....?! ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.
ಮೇಡಂ,
ನೀವು ಬರೆದದ್ದು ಓದಿ ನನಗೂ ಇದರ ಬಗ್ಗೆ ಯೋಚಿಸುವಂತಾಗಿದೆ. ನಮ್ಮ ಹಿರಿಯರು ಮಾಡಿದ್ದ ಆಚರಣೆಗಳಿಗೆ ಉದ್ದೇಶವಿತ್ತು. ಈಗ ನಾವು ತುಂಬಾ ಕಳೆದುಕೊಂಡಿದ್ದೇವೆ.
ಮಲ್ಲಿಕಾರ್ಜುನ ಸಾರ್, ನೀವು ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು! ನೀವು ಬಂದದ್ದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಹೀಗೇ ಬರುತ್ತಿರಿ....... ಮತ್ತೊಮ್ಮೆ ಧನ್ಯವಾದಗಳು.
ಲೇಖನ ಚೆನ್ನಾಗಿದೆ. ನಮ್ಮ ಪೂರ್ವಜರು ಅನ್ನಕ್ಕೆ ಮತ್ತೆ ಭೂಮಿಗೆ ಬಹಳ ಮಹತ್ವ ನೀಡಿದ್ದಾರೆ. "ಅನ್ನಂ ನ ನಿಂದ್ಯಾತ್, ತದ್ ವ್ರತಮ್" ಎಂದು ತೈತ್ತಿರೀಯ ಉಪನಿಶತ್ತಿನಲ್ಲಿ ಹೇಳಿರುವಂತೆ ಅನ್ನದ ನಿಂದನೆ ಮಾಡುವುದು ಸರಿಯಲ್ಲ. ಅನಿಸಿದ್ದನ್ನು ಸ್ವಚ್ಚಂದವಾಗಿ ಬರೆಯುವ ನಿಮ್ಮ ಈ ಗುಣ ನನಗೆ ಬಹಳ ಮೆಚ್ಚುಗೆಯಾಗಿದೆ. ಹಿಂದೆಯೂ ನಿಮ್ಮ ತಾಣಕ್ಕೆ ಭೇಟಿ ನೀಡಿ ಲೇಖನಗಳನ್ನು ಓದಿದ್ದೆ ಆದರೆ ಕಾಮೆಂಟ್ ಬರೆದಿರಲಿಲ್ಲ. ಹೀಗೆ ಬರೆಯುತ್ತಿರಿ, ನಾವು ಓದುತ್ತಿರುತ್ತೇವೆ! ಸಿಗೋಣ - Girish Jamadagni
ಗಿರೀಶ್ ಅವರೇ, ನೀವು ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕೆ ತುಂಬು ಹೃದಯದ ಧನ್ಯವಾದಗಳು. ಲೇಖನವನ್ನು ಮೆಚ್ಚಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು!
SSK
ತುಂಬ ಚೆನ್ನಾಗಿ ಇದೆ ಲೇಖನ.....ಹೌದು ಅಲ್ವ... ಭೂಮಿನೆ ಅನ್ನ ಕೊಡುತ್ತೆ ಆದರೆ ಬಿದ್ದ ಅನ್ನವನ್ನು ನಾವು ಹೀಗೆಲ್ಲ ಅಂದುಕೊಳುತ್ತೇವೆ... ಆದರೆ ಇದರ ಬಗ್ಗೆ ಯೋಚಿಸುತ್ತಿರಬೇಕಾದರೆ ನನಗೆ ಅನ್ನಿಸಿದ್ದು..ಇಷ್ಟು ಅನ್ನದ ಒಂದೊಂದು ಅಗುಳು ಪವಿತ್ರ ಇದನ್ನು ನೆಲದ ಮೇಲೆ ಬೀಳಿಸಿ ತುಳಿಬಾರದು.. ಅದಕ್ಕೆ ಅನ್ನ ನ ನೆಲಕ್ಕೆ ಹಾಕಬಾರದು ಅಂತ ಒಂದು ಮಾತು ಇದೆ... ಅಲ್ವ....
Guru
ಗುರು ಅವರೇ,
ಮೊದಲಿಗೆ ನಿಮಗೆ ನನ್ನ ಬ್ಲಾಗಿಗೆ ಸ್ವಾಗತ! ನೀವು ಭೇಟಿ ನೀಡಿದ್ದು ಖುಷಿಯಾಯಿತು.
ನಿಮ್ಮ ಅನಿಸಿಕೆ ನಿಜ ಅನ್ನವನ್ನು ಚೆಲ್ಲಬಾರದು, ಹಾಗು ಅಕಸ್ಮಾತಾಗಿ ಚೆಲ್ಲಿದರೆ ಅದನ್ನು ತುಳಿಯಬಾರದು.
"ಅನ್ನಂ ಪರಭ್ರಮ್ಹ ಸ್ವರೂಪಂ" ಅಂತ ತಿಳಿದವರು ಹೇಳುತ್ತಾರೆ! ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು!
ನಿಮ್ಮ ಕಮೆಂಟಿಗೆ ಉತ್ತರಿಸಲು ತಡವಾಯಿತು, ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ.
ಮತ್ತೆ ಮತ್ತೆ ಭೇಟಿ ನೀಡುತ್ತಿರಿ.
Post a Comment