Wednesday, June 3, 2009

ಶಿರಡಿ ಪ್ರವಾಸದ ಅನುಭವಗಳು....!

ಈ ಲೇಖನವನ್ನು ಎರಡು ವಾರಗಳ ಹಿಂದೆಯೇ ಪೋಸ್ಟ್ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಬ್ಲಾಗಿಗೆ ಹಾಕಲಾಗಲಿಲ್ಲ. ಈ ಎರಡು ವಾರಗಳು ನಿಮ್ಮೆಲ್ಲರನ್ನು (ಸ್ವತಹ ನನ್ನ ಬ್ಲಾಗೂ ಸೇರಿ) ಮಿಸ್ ಮಾಡಿಕೊಂಡಿದ್ದೆ! ಈಗ ಮತ್ತೆ ಮುಂದುವರೆಸುತ್ತಿದ್ದೇನೆ!!


ಶಿರಡಿಗೆ ಹೋಗಲು ಬಸ್ನಲ್ಲಿ ಸುಮಾರು 18 ರಿಂದ 20 ಗಂಟೆಗಳ ಪ್ರಯಾಣ! ನಾವು ಹೊರಟಿದ್ದು 28 ನೇ ತಾರೀಖು ಗುರುವಾರ, ಬಸ್ ಮಧ್ಯಾನ್ನ 1.00 ಗಂಟೆಗೆ ಇತ್ತು ಮೆಜೆಸ್ಟಿಕ್ ನಿಂದ. ಮಾರನೆ ದಿನ ಬೆಳಗಿನ ಜಾವ ಪುಣೆಯಲ್ಲಿ ಟೈರ್ ಪಂಚರ್ ಆಗಿ ಒಂದು ಗಂಟೆ ಅಲ್ಲೇ ತಡವಾಯಿತು. ಸರಿ ಬೆಳಗ್ಗೆ ಒಂಭತ್ತು ಗಂಟೆಗೆ ಶಿರಡಿ ತಲುಪಿದೆವು! ಹೋಟೆಲ್ ಸಾಯಿ ಬಾ ದಲ್ಲಿ ಕೊಠಡಿಯನ್ನು ಮೊದಲೇ ಕಾದಿರಿಸಿದ್ದೆವು. ಆದರೂ ಅಲ್ಲಿಗೆ ತಲುಪಿದಾಗ ನಾವು ರೂಮ್ ಸಿಗಲು ಮತ್ತೆ ಒಂದು ಗಂಟೆ ಕಾದದ್ದಾಯಿತು! ಈ ಕಾಯುವ ಸಮಯದಲ್ಲೇ, ಅಲ್ಲಿನ ಒಬ್ಬ ಟ್ರಾವೆಲ್ ಏಜೆಂಟ್ ಅಕ್ಕಪಕ್ಕದಲ್ಲಿರುವ ಸ್ಥಳಗಳ ಬಗ್ಗೆ ವಿವರಿಸಿ, ನೋಡಿಬರುವಂತೆ ನಮ್ಮ ಮನವೊಲಿಸಿದ!! ಸರಿ ನಾವೂ ಸಹ ಇಷ್ಟು ದೂರ ಬಂದಿರುವಾಗ ಈ ಸ್ಥಳಗಳನ್ನು ನೋಡದೆ ಹೋದರೆ ಏನು ಪ್ರಯೋಜನ ಎಂದು ಯೋಚಿಸಿ ಒಪ್ಪಿಗೆ ನೀಡಿದ್ದಾಯಿತು. ಅಷ್ಟರಲ್ಲಿ ರೂಮ್ ಸಿಕ್ಕಿತು, ಸ್ನಾನ, ಖಾನ ಎಲ್ಲ ಮುಗಿಸಿ ಹನ್ನೊಂದು ಗಂಟೆಗೆ ಬುಕ್ ಮಾಡಿಕೊಂಡಿದ್ದ ಕಾರ್ ನಲ್ಲಿ ಹೊರಟೆವು. ಅವನು ಹೇಳಿದ್ದು ಒಟ್ಟು ನಾಲ್ಕು ಸ್ಥಳಗಳು, ಅವೆಂದರೆ ಶನಿ ಸಿಂಗ್ನಾಪುರ್, ಎಲ್ಲೋರಾ ಗುಹೆಗಳು, ಜ್ಯೋತಿರ್ಲಿಂಗ ದರ್ಶನ ಮತ್ತು ಮಾರುತಿ (ಆಂಜನೇಯ) ಮಂದಿರ. ಇವೆಲ್ಲಾ ನೋಡಿಕೊಂಡು ಬರುವಷ್ಟರಲ್ಲಿ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಅಲ್ಲಿಗೂ ಆ ಟ್ಯಾಕ್ಸಿ ಯವನು ಮಾರುತಿ ಮಂದಿರಕ್ಕೆ ಹೋಗಲು ಸಮಯ ಸಾಕಾಗುವುದಿಲ್ಲ ಎಂದು ಹೇಳಿದಾಗ ಅದನ್ನು ಕೈಬಿಡಬೇಕಾಯಿತು. ಸರಿ ಹೆಸರಾಂತ ಇತಿಹಾಸಿಕ ಎಲ್ಲೋರಾ ಗುಹೆಗಳನ್ನು ನೋಡುತ್ತೇವಲ್ಲ ಎಂದು ಸಂತೋಷದಿಂದಿದ್ದರೆ, ಅಲ್ಲಿ ಎಲ್ಲೋ ಒಂದು ಕಡೆ ನಿಲ್ಲಿಸಿ ಇನ್ನೂ ಒಳಗಿನ ಗುಹೆಗಳನ್ನು ನೋಡಬೇಕಿದ್ದರೆ ಇಲ್ಲಿಂದ ಆಟೋ ಮಾತಾಡಿಕೊಂಡು ಹೋಗಿಬನ್ನಿ. ಅಲ್ಲಿಗೆ ಹೋಗಿಬರಲು ನೂರು ರೂಪಾಯಿ ಕೇಳುತ್ತಾರೆ, ಇಲ್ಲವಾದರೆ ನನಗೆ ನೂರೈವತ್ತು ರೂಪಾಯಿ ಕೊಟ್ಟರೆ ನಾನೇ ಕರೆದುಕೊಂಡು ಹೋಗುತ್ತೇನೆ ಮತ್ತು ಬೇಗ ಹೇಳಬೇಕು ಯಾಕೆಂದರೆ ಆರು ಗಂಟೆಗೆಲ್ಲ ಬಾಗಿಲು ಮುಚ್ಚಿಬಿಡುತ್ತಾರೆ ಎಂದು ಹೇಳಿದ. ಆಗ ಸಮಯ ನೋಡಿದರೆ 5.15 ಆಗಿತ್ತು, ಅಲ್ಲಿಗೆ ಹೋಗಿಬರಲು ಸಮಯ ಸಾಕಾಗುವುದಿಲ್ಲ ಅದು ಅಲ್ಲದೆ ಇಷ್ಟು ದುಡ್ಡು ಎಂದು ಮೊದಲೇ ಮಾತಾಡಿಕೊಂಡು ಬಂದಿದ್ದರೂ ಇಲ್ಲಿ ಮತ್ತೆ ಹಣ ಕೇಳುತ್ತಿದ್ದಾನಲ್ಲ ಎಂದು ಅದನ್ನೂ ಕೈಬಿಟ್ಟು ಅವನು ನಿಲ್ಲಿಸಿದ್ದಲ್ಲಿಯೇ ಇರುವ ಗುಹೆಗಳನ್ನು ನೋಡಿಕೊಂಡು ಬಂದದ್ದಾಯಿತು. ಇದಲ್ಲದೆ ಅಲ್ಲಲ್ಲಿ ಸಿಗುವ ಚೆಕ್ ಪೋಸ್ಟ್ ಗಳಿಗೂ ಮತ್ತು ಪಾರ್ಕಿಂಗ್ ಸ್ಥಳಗಳಿಗೂ ನಾವೇ ಹಣ ಕೊಡಬೇಕಾಯಿತು. (ಇದನ್ನು ಏಜೆಂಟ್ ನಮಗೆ ಮೊದಲೇ ಹೇಳಿದ್ದ ಆದ್ದರಿಂದ ಕೊಡಲೆಬೇಕಾಯಿತು).

ಶುಕ್ರವಾರ ಅಲ್ಲಿನ ಪ್ರವಾಸವೆಲ್ಲ ಮುಗಿಸಿ ಬಂದ ಮೇಲೆ ರಾತ್ರಿ ಸಾಯಿ ಬಾಬಾರ ದರ್ಶನ ಮಾಡಿದೆವು. ಅಲ್ಲಿ ಒಂದು ದಿನಕ್ಕೆ ನಾಲ್ಕು ಸಲ ಮಾತ್ರ ಆರತಿ ಅಂತ ಮಾಡುತ್ತಾರೆ! ಅದು ಬೆಳಗಿನ ಜಾವ 6-00. ಗಂಟೆ, ಮಹ್ಯಾನ್ನ 12-00 ಗಂಟೆಗೆ, ಸಂಜೆ 6-00 ಕ್ಕೆ ಮತ್ತು ರಾತ್ರಿ 10-30 ಕೊನೆಯ ಪೂಜೆ. ಮತ್ತೆ ಬೆಳಗಿನ ಜಾವ ನಾಲ್ಕು ಗಂಟೆಗೆ ಮಂದಿರದ ಬಾಗಿಲು ತೆಗೆಯುತ್ತಾರೆ! ಇದಲ್ಲದೆ ಬಾಬಾರ ದರ್ಶನಕ್ಕೆ ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೂ ಯಾವಾಗ ಬೇಕಾದರೂ ಹೋಗಿ ಬರಬಹುದು ಆದರೆ ಮೇಲೆ ಹೇಳಿದ ಸಮಯದಲ್ಲಿ ಅಂದರೆ ಆರತಿ ಮಾಡುವಾಗ ಒಳಗಿನವರನ್ನು ಹೊರಗೆ ಬಿಡುವುದಿಲ್ಲ ಮತ್ತು ಗರ್ಭ ಗುಡಿಯ ಹೊರಗೆ ಸಾಲಿನಲ್ಲಿ ನಿಂತಿರುವವರನ್ನು ಆ ಸಮಯದಲ್ಲಿ ಒಳಗೆ ಬಿಡುವುದಿಲ್ಲ. ಒಳಗೆ ಯಾರಿರುತ್ತಾರೋ ಅವರಿಗೆ ಆ ಆರತಿ ಬೆಳಗುವುದನ್ನು ನೋಡುವ ಅದೃಷ್ಟ!


ಶನಿವಾರ ಬೆಳಗ್ಗೆ ಮತ್ತೊಮ್ಮೆ ಸಾಯಿ ಬಾಬಾರ ದರ್ಶನ ಮಾಡಿಕೊಂಡು, ಅಲ್ಲೇ ಹತ್ತಿರದಲ್ಲೆ ಇದ್ದ ಖಂಡೋಬ ಮಂದಿರಕ್ಕೆ ಭೇಟಿ ನೀಡಿ (ಆ ಊರಿಗೆ ಬಂದಾಗ ಬಾಬಾರವರು ಮೊದಲು ಇಲ್ಲಿಯೇ ತಂಗಿದ್ದರಂತೆ) ನಂತರ ಅಲ್ಲೆಲ್ಲ ಸುತ್ತಾಡಿ ಮತ್ತೆ ರೂಮಿಗೆ ಬಂದು ಸ್ವಲ್ಪ ಹೊತ್ತು ವಿಶ್ರಮಿಸಿ, ಮಧ್ಯನ್ನ ಒಂದು ಗಂಟೆಯ ಹಾಗೆ ಬಾಬಾರವರ ಪ್ರಸಾದ ಮಂದಿರದಲ್ಲಿ ಊಟ ಮಾಡಿಕೊಂಡು ಬಂದೆವು. ಮತ್ತೆ ನಾಲ್ಕು ಗಂಟೆಗೆ ಬಸ್ ಇದ್ದುದರಿಂದ ಊಟ ಮುಗಿಸಿ ಬಂದ ಮೇಲೆ ಪ್ಯಾಕಿಂಗ್ ಕೆಲಸ ಮುಗಿಸಿ ಮೂರು ಗಂಟೆಗೆ ರೂಮ್ ಖಾಲಿ ಮಾಡಿ ಬಿಲ್ ಭರ್ತಿ ಮಾಡಿ, ಬಸ್ ಬರುವಲ್ಲಿಗೆ ಆಟೋದಲ್ಲಿ (ನಾವು ಎಲ್ಲಿ ಇಳಿದಿದ್ದೆವೋ ಅಲ್ಲಿಗೆ) ಬಂದು ತಲುಪಿದೆವು. ಆ ಸ್ಥಳ ಬೇರೆ ಒಂದು ಹೋಟೆಲ್ ಆಗಿತ್ತು!

ಬಸ್ಸಲ್ಲಿ ಲಗ್ಗೇಜ್ ಅನ್ನು ಕ್ಯಾಬಿನ್ ನಲ್ಲಿ ಇಟ್ಟು, ಬಸ್ಸೊಳಗೆ ಹೋಗಿ ಕುಳಿತಿದ್ದೆವು. ಬಸ್ ಹೊರಡುವುದಕ್ಕೆ ಇನ್ನು ಹತ್ತು ನಿಮಿಷಗಳಿದ್ದವು. ನಾನು ಅಷ್ಟರಲ್ಲಿ ಹೋಟೆಲ್ ನ ಒಳಗೆ ಇದ್ದ ಟಾಯ್ಲೆಟ್ ಗೆ ಹೋಗಿ, ಬಂದು ಹೊರಗೆ ನೋಡುತ್ತೀನಿ ಬಸ್ ಹೊರಟುಹೋಗುತ್ತಿದೆ!! ನನಗೆ ಗಾಬರಿಯಾಯಿತು, ಕೈ ಗಡಿಯಾರ ನೋಡಿಕೊಂಡೆ ಇನ್ನೂ ಸಮಯವಿತ್ತು. ಹಾಗೆಲ್ಲ ಸಮಯಕ್ಕೆ ಮುಂಚೆನೇ ಹೋಗೋ ಹಾಗೆ ಇಲ್ವಲ್ಲ ಅಂದುಕೊಂಡು ಆ ಗಾಬರಿಯಲ್ಲೇ, ಅಲ್ಲೇ ಇದ್ದ ರಿಸೆಪ್ಶನ್ ನಲ್ಲಿದ್ದವರನ್ನು ವಿಚಾರಿಸಿದೆ, ಅವರು ಹೇಳಿದರು ಬಸ್ ಮತ್ತೆ ಬರುತ್ತೆ ಏನೂ ಗಾಬರಿ ಆಗಬೇಡಿ ಎಂದು. ಆಗ ಸ್ವಲ್ಪ ಸಮಾಧಾನವಾಯಿತು. ನಾನು ನನ್ನ ಹ್ಯಾಂಡ್ ಬ್ಯಾಗ್ ಅನ್ನು ನನ್ನ ಪತಿಯ ಕೈಯಲ್ಲಿ ಕೊಟ್ಟು ಹೋಗಿದ್ದೆ ಆದ್ದರಿಂದಲೇ ಇಷ್ಟು ಗಾಬರಿಯಾದದ್ದು. ಅದು ನನ್ನ ಬಳಿಯೇ ಇದ್ದಿದ್ದರೆ, ಹೋದರೆ ಹೋಗಲಿ ಬೇರೆ ಯಾವ ಬಸ್ನಲ್ಲಾದರೂ ಹೋಗಬಹುದಲ್ಲ ಎನ್ನುವ ಧೈರ್ಯವಿರುತ್ತಿತ್ತು! ಆದರೂ ನನ್ನವರು ಅವರಿಗೆ ಹೇಳಿ ಬಸ್ ಹೊರಡುವುದನ್ನು ತಡೆಯಬಹುದಿತ್ತಲ್ಲಾ ಎಂದು ಅವರನ್ನು ಮನದಲ್ಲೇ ಬೈದುಕೊಳ್ಳುತ್ತಿದ್ದೆ. ಯಾಕೆಂದರೆ ಅವರು ಕೆಲವೊಮ್ಮೆ ಸೀಟ್ ನಲ್ಲಿ ಕುಳಿತ ತಕ್ಷಣ ನಿದ್ದೆ ಮಾಡಿಬಿಡುತ್ತಾರೆ! ಹಾಗಂದುಕೊಂಡೆ ಅಲ್ಲಿರುವ ಮೆಟ್ಟಿಲುಗಳನ್ನು ಇಳಿದು ಕೆಳಗೆ ಬಂದು ನೋಡಿದರೆ, ಪಾಪ ಅವರು ನನ್ನ ಬ್ಯಾಗ್ ಇಟ್ಟುಕೊಂಡು ಅಲ್ಲೇ ನಿಂತಿದ್ದರು!! ಬಸ್ ಮತ್ತೆ ಬರುವ ವಿಷಯ ತಿಳಿದ ಅವರು ನಾನೆಲ್ಲಿ ಗಾಬರಿಯಾಗುತ್ತೇನೋ ಎಂದು ನನಗಾಗಿ ಅವರು ಕೆಳಗೆ ಇಳಿದಿದ್ದರು!!!

ನಾಲ್ಕು ಗಂಟೆಗೆ ಹೊರಡಬೇಕಿದ್ದ ಬಸ್ಸು, ನಾವಿರುವಲ್ಲಿಗೆ ಮತ್ತೆ ಬಂದದ್ದು ನಾಲ್ಕು ಕಾಲಿಗೆ. ಬೇರೆ ಜಾಗಗಳಿಗೆ ಹೋಗಿ ಅಲ್ಲಿನ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಂದಿತ್ತು ಬಸ್. ಇನ್ನೂ ಸೀಟ್ ಗಳು ಖಾಲಿ ಇದ್ದುದರಿಂದ ಬಸ್ನವರಿಗೆ ಆಗಲೂ ಹೊರಡಲು ಮನಸ್ಸಿರಲಿಲ್ಲ, ಇನ್ನೂ ಯಾರಾದರೂ ಪ್ರಯಾಣಿಕರು ಬರುವರೇನೋ ಎಂದು ಕಾಯುತ್ತಿದ್ದರು. ಆಮೇಲೆ ಅಂತೂ ನಾಲ್ಕುವರೆಗೆ ಬಸ್ ಹೊರಟಿತು! ಬಸ್ ಏನೋ ಚಲಿಸುತ್ತಾನೇ ಇದೆ ಆದರೆ ಯಾಕೋ ನಿಧಾನ ಅನ್ನಿಸಿತು, ಒಳ್ಳೆ ಶಟಲ್ ಗಾಡಿ ತರ ಹೋಗುತ್ತಿತ್ತು. ಅರೆ ಇದೇನಿದು ಐರಾವತ ಬಸ್ (ಸಾಮಾನ್ಯವಾಗಿ ತುಂಬಾ ಫಾಸ್ಟ್ ಆಗೇ ಹೋಗುತ್ತೆ, ಆದರೆ ಇಲ್ಲಿ, )ಹೆಸರಿಗೆ ತಕ್ಕ ಹಾಗೆ ಆನೆಯ ತರಾನೆ ಹೋಗ್ತಾ ಇದೆ ಅಂತ ನಾ ಹೇಳಿದ್ದಕ್ಕೆ, ಇನ್ನೂ ಸಿಟಿ ದಾಟಿಲ್ಲಾ ಅನ್ಸುತ್ತೆ ಅಂತ ನನ್ನವರು ಹೇಳಿದರು. ಸಂಜೆ ಆರು ಗಂಟೆಗೆ ಒಂದು ಬ್ರೇಕ್, ಕಾಫಿ, ಟೀ ಕುಡಿಯಲೆಂದು. ಇದೆಲ್ಲ ಆದ ಮೇಲೆ ಮತ್ತೆ ಹೊರಟಿತು. ಆಗ ಅದರಲ್ಲಿ ಒಂದು ಸಿನಿಮಾ ಹಾಕಿದರು, ರಾಮ ಶಾಮ ಭಾಮ. ಕಾಮಿಡಿ ಸಿನಿಮಾ ಅಲ್ವೇ ಎಲ್ಲರೂ ನಕ್ಕಿದ್ದೆ ನಕ್ಕಿದ್ದು ಸಿನಿಮಾ ಮುಗಿಯುವವರೆಗೂ ಬರಿ ನಗುವೇ ತುಂಬಿತ್ತು ಆ ಬಸ್ನಲ್ಲಿ. ಕನ್ನಡ ಅರ್ಥವಾಗದಿದ್ದ ಕೆಲವು ಮಂದಿ ನಾವೆಲ್ಲಾ ನಗುತ್ತಿದ್ದಾಗ ಪೆಚ್ಚಾಗಿ, ಏನೂ ಅರ್ಥವಾಗದೆ ನಗುತ್ತಿದ್ದವರನ್ನೇ ಗುರಾಯಿಸಿ ನೋಡುತ್ತಿದ್ದರು ಪಾಪ.


ಅಪಾಯದಿಂದ ಪಾರಾಗಿ........?!?!

ಆ ಸಿನಿಮಾ ಮುಗಿದ ನಂತರ, ಮತ್ತೊಂದು ಕನ್ನಡ ಸಿನಿಮಾ ಮಿಲನ ಹಾಕಿದರು. ಆ ಸಿನಿಮಾವನ್ನು ಸಹ ನೋಡಿ ಚೆನ್ನಾಗಿ ಎಂಜಾಯ್ ಮಾಡಿದೆವು. ನಂತರ ರಾತ್ರಿ ಹತ್ತು ಗಂಟೆಗೆ ಊಟಕ್ಕೆ ನಿಲ್ಲಿಸಿದ್ದರು. ಮುಕ್ಕಾಲು ಗಂಟೆಯ ನಂತರ ಮತ್ತೆ ಬಸ್ ಹೊರಟಿತು. ಕೊನೆಯಲ್ಲಿ ಇನ್ನೂ ಕೆಲವು ನಿಮಿಷಗಳ ಸಿನಿಮಾ ಇತ್ತು, ಅದನ್ನು ಊಟದ ನಂತರ ನೋಡಿದೆವು. ಅದಾದ ಮೇಲೆ ಮತ್ತೊಂದು ಸಿನಿಮಾ ಹಾಕಿರೆಂದು ಕೆಲವರು, ಬೇಡ ಮಲಗಬೇಕೆಂದು ಇನ್ನು ಕೆಲವರು. ಆದರೆ ಕಂಡಕ್ಟರ್, ಸಾಕಿನ್ನು ಇಷ್ಟೊತ್ತಿನ ಮೇಲೆ ಹಾಕುವುದಿಲ್ಲ ಎಂದು ಹೇಳಿ ಟಿವಿ ಬಂದ್ ಮಾಡಿದರು. ಸಮಯ ಕಳೆದಂತೆ ನಿಧಾನವಾಗಿ ಎಲ್ಲರೂ ನಿದ್ದೆಗೆ ಜಾರಿದ್ದರು. ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದಂತೆ ಬಸ್ ಹೊರಳಾಡಲು ಶುರು ಮಾಡಿತು. ಅಯ್ಯೋ ಇದೇನಿದು ಎಂದು ನೋಡಿದರೆ ಡ್ರೈವರ್ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುತ್ತಿದ್ದಾಗ ಕಂಟ್ರೋಲ್ ಸಿಗದೇ ಬ್ರೇಕ್ ಹಾಕಿದಾಗ ಬಸ್ ಜರ್ಕ್ ಹೊಡೆಯಿತು. ಈ ರೀತಿ ಆದ ಮೇಲೆ ಕೆಲವರಿಗೆ ಎಚ್ಚರವಾಗಿತ್ತು, ಇನ್ನು ಕೆಲವರು ಏನಾಯಿತೆಂದು ತಿಳಿಯದೆ ಹಾಗೆ ಮಲಗಿದ್ದರು. ಸಂಭಾಳಿಸಿಕೊಂಡು ಹಾಗೆ ಮುಂದುವರೆಯಿತು ಪ್ರಯಾಣ. ಮತ್ತೆ ಕೆಲವು ಗಂಟೆಗಳು ಕಳೆಯವಷ್ಟರಲ್ಲಿ ರೆಡಿಯೇಟಾರ್ ಬಿಸಿಯಾಗಿದೆ ಎಂದು ಸ್ವಲ್ಪ ಹೊತ್ತು ನಿಲ್ಲಿಸಿದ್ದರು. ಅಷ್ಟೊತ್ತಿಗಾಗಲೇ ಅವರುಗಳಿಗೆ (ಡ್ರೈವರ್, ಕಂಡಕ್ಟರ್) ಬೇರೆ ಏನೋ ತೊಂದರೆ ಆಗಿದೆಯೆಂದು ಗೊತ್ತಾಗಿರಬೇಕು! ಅವರು ಡಿಪೋ ಮತ್ತು ಆಫೀಸ್ ಗಳಿಗೆ ಫೋನ್ ಮಾಡಿ ತೊಂದರೆ ವಿವರಿಸುತ್ತಿದ್ದರು ಆದರೆ ಏನಾಯಿತೋ ಗೊತ್ತಿಲ್ಲ ಮತ್ತೆ ನಿಧಾನವಾಗಿ ಅದರಲ್ಲೇ ಮುಂದುವರೆದರು.

ಬೆಳಕು ಹರಿದಿತ್ತು, ಬಸ್ ಚಲಿಸುತ್ತಲೇ ಇತ್ತು ನಿಧಾನವಾಗಿ! ಮತ್ತೆ ಒಂದೆರಡು ಸಲ ಆಗಾಗ ಬಸ್ ಅದೇ ರೀತಿ ಆಡುತ್ತಿತ್ತು ಆದರೆ ಮೊದಲಿನಷ್ಟಿರಲಿಲ್ಲ. ಅದ್ಯಾವುದೋ ಊರಿನ ಬಸ್ ಸ್ಟ್ಯಾಂಡ್ ನಲ್ಲಿ ಬೆಳಗ್ಗೆ ಏಳು ಗಂಟೆಗೆ ನಿಲ್ಲಿಸಿದ್ದರು. ಅಲ್ಲಿಂದಲೂ ಡ್ರೈವರ್ ಯಾರಿಗೋ ಫೋನ್ ಮಾಡಿ ಬದಲಿ ಬಸ್ ಅಥವಾ ಇದೆ ಬಸ್ಸನ್ನು ಪರಿಶೀಲಿಸಲು ಯಾರನ್ನಾದರೂ ಕಳಿಸುವಂತೆ ಕೇಳುತ್ತಿದ್ದರು. ಆದರೆ ಯಾಕೋ ಏನೋ ಯಾವುದೂ ಆಗಲಿಲ್ಲ. ತೊಂದರೆ ಚಿಕ್ಕದೇನಾಗಿರಲಿಲ್ಲ, ಸ್ವಲ್ಪ ಜಾಸ್ತಿಯೇ ಇತ್ತು ಅದೇನೆಂದರೆ ಬಸ್ಸಿಗೆ ನೇರವಾಗಿ ಚಲಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಜಾಸ್ತಿ ಏನಾದರೂ ಚಕ್ರಗಳನ್ನು ಎಡಕ್ಕೆ ಬಲಕ್ಕೆ ತಿರುಗುವಂತೆ ಸ್ಟೇರಿಂಗ್ ತಿರುಗಿಸುತ್ತಿದ್ದರೆ, ಮುಂದಿನ ಎಡಭಾಗದ ಚಕ್ರ ತಿರುಗದೆ ತಡೆದುಕೊಳುತ್ತಿತ್ತು!


ಚಿತ್ರದುರ್ಗಕ್ಕೆ ಇನ್ನೂ ಸುಮಾರು ಐವತ್ತು ಕಿಲೋಮೀಟರು ಇತ್ತು. ಆಗ ಅಲ್ಲಿ ಕಾದಿತ್ತು ನೋಡಿ ಅಪಾಯ! ಮುಂದೆ ಎರಡು ಗೂಡ್ಸ್ ಲಾರಿಗಳು ಹೋಗುತ್ತಿದ್ದವು. ಅದನ್ನು ಹಿಂದೆ ಹಾಕುವ (overtake) ಸಲುವಾಗಿ ಬಲಕ್ಕೆ ಬಂದು ಮುಂದೆ ಹೋಗಬೇಕೆನ್ನುವಷ್ಟರಲ್ಲಿ ಎದುರುಗಡೆಯಿಂದ ಮಾರುತಿ ವ್ಯಾನ್ ಒಂದು ಸ್ಪೀಡಾಗಿ ಬರುತ್ತಿತ್ತು! ಅದಕ್ಕೆ ಜಾಗ ಕೊಡುವ ಸಲುವಾಗಿ ಮತ್ತೆ ಎಡಕ್ಕೆ ಸ್ಟೇರಿಂಗ್ ತಿರುಗಿಸಿದಾಗ, ಅದು ತಿರುಗದೆ ಚಕ್ಕನೆ ನಿಂತುಬಿಟ್ಟಿತು. ಒಂದರೆಕ್ಷನದಲ್ಲೇ ಅದು ತಿರುಗಿಲ್ಲವಲ್ಲ ಎಂದು ಸ್ವಲ್ಪ ಬಲಕ್ಕೆ ತಿರುಗಿಸಿದಾಗ ಮತ್ತೆ ಕಂಟ್ರೋಲ್ ಸಿಗದೇ ಪೂರ್ತಿ ಬಲಕ್ಕೆ ಹೋಗಿಬಿಟ್ಟಿತು. ಇನ್ನೇನು ನಮ್ಮ ಬಸ್ ಮತ್ತು ಆ ಮಾರುತಿ ವ್ಯಾನ್ ಮುಖಾಮುಖಿ ಅಪ್ಪಳಿಸಬೇಕು, ಅಷ್ಟರಲ್ಲಿ ಆ ಗಾಬರಿಯಲ್ಲೂ ಡ್ರೈವರ್ ತಕ್ಷಣ ಎಡಕ್ಕೆ ತಿರುಗಿಸಿದಾಗ ಸಧ್ಯ ಆಗ ಎಡಕ್ಕೆ ಬಂತು! ಆದರೆ ಗಾಬರಿಯಿಂದ ಡ್ರೈವರ್ ಮತ್ತೆ ಬಲಕ್ಕೆ ತಿರುಗಿಸಿದಾಗ ಎದುರು ದಿಕ್ಕಿನಿಂದ ಇನ್ನೊದು ಲಾರಿ ಬರುತ್ತಿತ್ತು, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ಹೇಗೋ ತಪ್ಪಿಸಿದ್ದ (ಎಲ್ಲ ಆ ದೇವರ ದಯೆ, ಇಲ್ಲದಿದ್ದರೆ ಯಾರ್ಯಾರಿಗೆ ಏನೇನು ಆಗಿಬಿಡುತ್ತಿತ್ತೋ ಗೊತ್ತಿಲ್ಲ) ಆ ಕಡೆ ವ್ಯಾನ್ ಡ್ರೈವ್ ಮಾಡುತ್ತಿದ್ದವರು ಅಂತಹ ಆತಂಕದ ಪರಿಸ್ಥಿತಿಯಲ್ಲೂ ವ್ಯಾನ್ ಅನ್ನು ಇನ್ನೂ ಎಡಕ್ಕೆ ಚಲಾಯಿಸಿದರು. ಹೆಚ್ಚು ಕಡಿಮೆ ಅದು ಗದ್ದೆಯೊಳಗೆ ನುಗ್ಗಿಬಿಡುವುದರಲ್ಲಿತ್ತು! ಸಧ್ಯ ಹೇಗೋ ಅವರು ನಿಭಾಯಿಸಿ ಆಗುತ್ತಿದ್ದ ಅಪಘಾತವನ್ನು ತಪ್ಪಿಸಿದ್ದರು. ಇತ್ತ ನಮ್ಮ ಬಸ್ ರೋಡ್ ಪೂರ್ತಿ ಹಾವಿನಂತೆ ಹರಿದಾಡಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿತು. ಅದನ್ನು ಸ್ವಲ್ಪ ಪಕ್ಕಕ್ಕೆ ಸರಿಯಾಗಿ ನಿಲ್ಲಿಸಿ, ವ್ಯಾನ್ ನವರಿಗೆ ಏನಾದರೂ ತೊಂದರೆ ಆಯ್ತಾ ಎಂದು ನೋಡಲು ಡ್ರೈವರ್ ಇಳಿದು ಹೋದ. ನಾವೆಲ್ಲರೂ ಸಹ ಸಧ್ಯ ನಮಗೆ ಯಾರಿಗೂ ಏನೂ ತೊಂದರೆ ಆಗಿಲ್ಲ ಪಾಪ ಅವರುಗಳಿಗೆನಾಯಿತು ಎಂದು ನೋಡಲು ತಕ್ಷಣ ಇಳಿದು ಹೋದೆವು! ಅಷ್ಟರಲ್ಲಾಗಲೇ ಅವರು ಇಳಿದು ಬಂದು ನಮ್ಮ ಬಸ್ ಡ್ರೈವರ್ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಮಾತಿನ ಚಕಮಕಿ, ವಾಗ್ವಾದ ಎಲ್ಲ ಮುಗಿಯುವಷ್ಟರಲ್ಲಿ ಪುಣ್ಯಕ್ಕೆ ಬೇರೆ ಯಾವ ಗಾಡಿಯು ಆ ಮಾರ್ಗವಾಗಿ ಬಂದಿರಲಿಲ್ಲ. ಮತ್ತೆ ತಿರುಗಿ ಬಸ್ ಹತ್ತಿರ ಬಂದಾಗ ಯಾರಿಗೂ ಮತ್ತೆ ಅದೇ ಬಸ್ನಲ್ಲಿ ಮುಂದುವರೆಯುವ ಧೈರ್ಯವಿರಲಿಲ್ಲ ಯಾಕೆಂದರೆ ಅಷ್ಟರಲ್ಲಿ ಪ್ರತಿಯೊಬ್ಬರಿಗೂ ತಿಳಿದಿತ್ತು ಬಸ್ ಗೆ ಗಾಢವಾದ ತೊಂದರೆ ಇದೆ ಎಂದು. ಆದರೆ ಮುಂದಿನ ಊರು ಸಿಗುವವರೆಗೂ ಏನೂ ಮಾಡುವಂತ ಪರಿಸ್ಥಿತಿ ಅಥವಾ ಆಯ್ಕೆ ಇರಲಿಲ್ಲ. ಆಗುತ್ತಿದ್ದ ಅಪಘಾತ ತಪ್ಪಿಸಿದ್ದಕ್ಕೆ ಕೆಲವರು ಪ್ರಶಂಸಿಸಿದರು. ಆ ಧೈರ್ಯದ ಮೇಲೆ ಡ್ರೈವರ್, ನಿಧಾನವಾಗೆ ಬಸ್ ಚಲಾಯಿಸುತ್ತೇನೆ ಎಂದು ಅಭಯ ನೀಡಿದ. ಅವನ ಮಾತಿಗೆ ಒಪ್ಪಿ ಎಲ್ಲರೂ ಮತ್ತೆ ಬಸ್ ಹತ್ತಿದೆವು, ಆದರೂ ಆತಂಕದಿಂದ ಇನ್ನೂ ಹೊರಬಂದಿರಲಿಲ್ಲ. ಇಷ್ಟೆಲ್ಲಾ ಆದರೂ ಇನ್ನೊಬ್ಬ ಡ್ರೈವರ್ ಗೆ (ತುಂಬಾ ದೂರದ ಪ್ರಯಾಣವಿದ್ದರೆ ಅಂತಹ ಕಡೆಗೆ ಖಡ್ಡಾಯವಾಗಿ ಇಬ್ಬರು ಡ್ರೈವರ್ ಹಾಗೂ ಒಬ್ಬ ಕಂಡಕ್ಟರ್ ಇರುತ್ತಾರೆ.) ಹಾಗೂ ಒಂದಿಬ್ಬರು ಹುಡುಗರಿಗೆ ಎಚ್ಚರವೇ ಇರಲಿಲ್ಲ!

ಹಾಗೆ ನಿಧಾನವಾಗಿ ಚಿತ್ರದುರ್ಗ ಬಂತು, ನಂತರ ಹಿರಿಯೂರು. ಅಲ್ಲಿ ತಿಂಡಿಗಾಗಿ ನಿಲ್ಲಿಸಿದ್ದರು ಆಗ ಸಮಯ ಬೆಳಗ್ಗೆ ೧೧-೦೦ ಗಂಟೆ ಆಗಿತ್ತು. ತಿಂಡಿ ತಿಂದು ಮತ್ತೆ ಬಸ್ ಹತ್ತಿದಾಗ ಡ್ರೈವರ್ ಬದಲಾದರು (ಅದೇ ಮಲಗಿದ್ದರಲ್ಲ ಅವರು. ಮತ್ತು ರಾತ್ರಿ ಒಮ್ಮೆ ಆ ರೀತಿ ಬಸ್ ಉರಳಾಡಿದಾಗ ಈ ಡ್ರೈವರ್ ರೆ ಚಲಾಯಿಸುತ್ತಿದ್ದರು.) ನಡೆದ ಘಟನೆ ಇವರಿಗೆ ವಿವರಿಸಿದ್ದರಿಂದ ಮತ್ತು ಸ್ವತಹ ಅವರಿಗೆ ಬಸ್ ತೊಂದರೆಯಲ್ಲಿರುವ ವಿಷಯ ಗೊತ್ತಿದ್ದರಿಂದ, ಎಷ್ಟು ನಾಜೂಕಾಗಿ ಬಸ್ ಚಲಾಯಿಸಿಕೊಂಡು ಬಂದರೆಂದರೆ, ನಾವೆಲ್ಲಾ ಆತಂಕದಿಂದ ಮುಕ್ತರಾಗಿ ಬೆಂಗಳೂರು ತಲುಪುವಷ್ಟರಲ್ಲಿ ಇನ್ನೊದು ಸಿನಿಮಾ 'ಮುಸ್ಸಂಜೆ ಮಾತು' ನೋಡಿದ್ದೆವು!
ನಮ್ಮನ್ನೆಲ್ಲಾ ಕ್ಷೇಮವಾಗಿ ಮನೆಗೆ ತಲುಪುವಂತೆ ಮಾಡಿದ ಆ ಡ್ರೈವರ್ ಗಳಿಬ್ಬರಿಗೂ ಮತ್ತು ಕಂಡಕ್ಟರ್ ಗೂ ಸಹ ತುಂಬು ಹೃದಯದ ಧನ್ಯವಾದಗಳು!

7 comments:

Ittigecement said...

ತುಂಬಾ ರಸವತ್ತಾಗಿ ಪ್ರವಾಸ ಕಥನ ವಿವರಿಸಿದ್ದೀರಿ....

ಪ್ರವಾಸಿ ಸ್ಥಳಗಳಿಗೆ ಹೋದಾಗ ಸುಲಿಗೆಗಳಾಗುವದು ಸಾಮಾನ್ಯ....

ಶಿರಡಿಯಲ್ಲಿ ಒಂದು ಬೇವಿನ ಮರ ಇತ್ತು..
ಅದು ಕಹಿಯಾಗಿರದೆ ಸಿಹಿಯಾಗಿತ್ತು...
೯೩ ರಲ್ಲಿ ನಾನು ಹೋಗಿದ್ದೆ ಆದರ ರುಚಿ ಕೂಡ ನೋಡಿದ್ದೆ...
ಈಗ ಅದು ಅಲ್ಲಿ ಇದೆಯಾ ?

ಅಪಘಾತದ ಅಪಾಯದಿಂದ ಪಾರಾದದ್ದು ಖುಷಿಯಾಯಿತು....

ಚಂದದ ಬರಹಕ್ಕೆ ಅಭಿನಂದನೆಗಳು...

ಶಿವಪ್ರಕಾಶ್ said...

ನಿಜವಾಗಿಯೂ ನಿಮ್ಮ ಬಸ್ಸು ಹಾಗು ನೀವು ಒಂದು ಗಂಡಾಂತರವನ್ನೇ ಎದುರಿಸಿ ಬಂದಿದ್ದಿರಿ.
ನಿಮ್ಮ ಪ್ರವಾಸ ಕಥನ ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

SSK said...

ಪ್ರಕಾಶ್ ಹೆಗ್ಡೆ ಅವರೇ,
ಹೌದು ನೀವು ಹೇಳಿದ್ದು ಅಕ್ಷರಃ ಸಹ ಸತ್ಯ! ಪ್ರವಾಸ ಸ್ಥಳಗಳಲ್ಲಿ ಎಷ್ಟು ಸುಲಿಗೆ ಮಾಡುತ್ತಾರೆಂದರೆ, ಅದೊಂದು ಹಗಲು ದರೋಡೆಯೇ ಎನ್ನಬಹುದು!!
ಬೇವಿನ ಮರವೇನೋ ಇದೆ ಆದರೆ ಬೇವಿನ ಎಲೆಗಳನ್ನು ರುಚಿ ನೋಡುವ ಅದೃಷ್ಟ/ಅವಕಾಶ ಸಿಗಲಿಲ್ಲ.
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
******************************************************************************************

ಶಿವಪ್ರಕಾಶ್ ಅವರೇ,
ಪ್ರವಾಸದ ಅನುಭವಗಳು ಮತ್ತು ಅಪಘಾತದ ಘಟನೆಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಅದಕ್ಕೆ ಬ್ಲಾಗಲ್ಲಿ ಬರೆದೆ.
ಗಂಡಾಂತರದಿಂದ ಪಾರಾದದ್ದು ಆ ದೇವರ ದಯೆ! ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ದೇವರ ದರ್ಶನ, ಅಜಂತ ಎಲ್ಲೋರ ನೋಡದೆ ಹೋಗಿದ್ದು, ಬಸ್ನಲ್ಲಿ ಫಿಲಂ ನೋಡಿದ ಮೇಲೆ ನಿಜ ಜೀವನದ ಫಿಲಂ ಪ್ರಾರಂಭವಾಗಿದ್ದು... ಒಳ್ಳೆ ರಸವತ್ತಾಗಿ ಬರೆದಿದ್ದೀರಿ. ನಾನೇನೋ ರಸವತ್ತಾಗಿ ಅಂತ ಬರೆದೆ, ಆದರೆ ಆತಂಕದ ಕ್ಷಣಗಳನ್ನು ಅನುಭವಿಸಿದವರಿಗೆ ಆಗಿರುವ ಗಾಭರಿ, ಭಯ ಊಹಿಸಬಲ್ಲೆ. ನಾನೂ ಸ್ನೇಹಿತರೊಡನೆ ಸುಮಾರು ೧೨ ವರ್ಷಗಳ ಹಿಂದೆ ಶಿರಡಿಗೆ ಹೋಗಿದ್ದೆ. ನಾನೂ ಅಜಂತ ಎಲ್ಲೋರ ನೋಡಲಾಗಲಿಲ್ಲ.

SSK said...

ಮಲ್ಲಿಕಾರ್ಜುನ ಅವರೇ,
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು! ಹೀಗೆ ಭೇಟಿ ನೀಡುತ್ತಾ ಇರಿ.

Prabhuraj Moogi said...

ಅಬ್ಬ ಆ ಡ್ರೈವರುಗಳಿಗೆ ತೊಂದ್ರೆ ಇದೆ ಅಂತ ತಿಳಿದ ಮೇಲೆ, ಅಲ್ಲೇ ನಿಲ್ಲಿಸಬೇಕಿತ್ತಲ್ಲ, ಈ ಬಸ್ಸುಗಳದು ಇಂಥದೇ ಕಥೆ... ಪರ್ಯಾಯ ಬಸ್ಸುಗಳಿಲ್ಲಾಂತ ಯಾವುದ್ಯಾವುದೊ ಬಸ್ಸು ಕಳಿಸಿಬಿಡುತ್ತಾರೆ... ಸಧ್ಯ ದೊಡ್ಡ ಅಪಘಾತವೇನೂ ಆಗಲಿಲ್ಲವಲ್ಲ. ಎಲ್ಲೊರಾ ಗುಹೆಗಳ ಬಗ್ಗೆ ಕೇಳಿದ್ದೀನಿ ನೋಡಲಾಗಿಲ್ಲ.

SSK said...

ಪ್ರಭು ಅವರೇ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಜ ದೊಡ್ಡ ಅಪಘಾತವೇನೂ ಆಗಲಿಲ್ಲ ಸಧ್ಯ!
ಆದರೆ ನಾನಿಲ್ಲಿ ಡ್ರೈವರ್ ನ ಮಹಾನ್ ಮನಸ್ಸಿನ ಬಗ್ಗೆ ಹೇಳಲಿಚ್ಛಿಸುತ್ತೇನೆ.
ಅದೇನೆಂದರೆ, ಅಪಘಾತದ ಸಮಯದಲ್ಲಿ ತಪ್ಪು ಯಾರದೇ ಇದ್ದರೂ, ಡ್ರೈವರ್ ಗಳು ಚೆನ್ನಾಗಿದ್ದಾರೆ ಪರಾರಿಯಗಿಬಿಡುತ್ತಾರೆ! ಆದರೆ ಈ ಡ್ರೈವರ್ ಇಳಿದು ಹೋಗಿ ಅವರಿಗೆ (ಮಾರುತಿ ವ್ಯಾನ್ ನವರಿಗೆ) ಏನಾದರೂ ತೊಂದರೆ ಆಯ್ತಾ ಎಂದು ವಿಚಾರಿಸಿಕೊಂಡಿದ್ದ!!