Tuesday, April 14, 2009

ಹೈಜಾಕ್........!

ನೆನಪಿನ ಬುತ್ತಿಯಿಂದ........!



ಕೆಲವು ವರ್ಷಗಳ ಹಿಂದೆ ವಿಮಾನವೊಂದು ಹೈಜಾಕ್ (ಅಪಹರಣ) ಆಗಿದ್ದುದು ನಿಮಗೆಲ್ಲ ನೆನಪಿರಬಹುದು. ನನಗೆ ಯಾವ ವರ್ಷ ಎಂದು ಸರಿಯಾಗಿ ನೆನಪಾಗುತ್ತಿಲ್ಲ. ಇರಲಿ ನಾನು ನಿಮಗೆ ತಿಳಿಸ ಹೊರಟಿರುವ ವಿಷಯವೇನೆಂದರೆ, ಆ ಘಟನೆ ನಡೆದಾದ ನಂತರದ ದಿನಗಳಲ್ಲಿ ಅಂದರೆ ಎಲ್ಲವೂ ತಿಳಿಯಾಗಿ, ಮತ್ತು ಜನರೂ ಸ್ವಲ್ಪ ಸ್ವಲ್ಪವಾಗಿ ಮರೆಯುತ್ತಿದ್ದಂತ ಸಂಧರ್ಭ. ಆ ಸಮಯದಲ್ಲಿ ನಾನು ಕೆಲಸ ಮಾಡುತ್ತಿದ್ದಲ್ಲಿ ಈ ರೀತಿಯ ಒಂದು ಪ್ರಸಂಗ ನಡೆದಿತ್ತು. ಅದನ್ನು ಈಗ ನಿಮ್ಮೊಂದಿಗೆ ನಾನು ಹಂಚಿಕೊಳ್ಳುತ್ತಿದ್ದೇನೆ!


ನಾನು ಆಗ ನೇತ್ರಾಲಯ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಅಲ್ಲಿನ ಸಹೋದ್ಯೋಗಿಗಳ ಪೈಕಿ ನನ್ನ ಗೆಳತಿ, ಸಹಪಾಟಿಯು ಆದ ಹೇಮಾ ಕೂಡ ಒಬ್ಬಳು! ಇವಳು ತೆಳ್ಳಗೆ, ಬೆಳ್ಳಗೆ ಸುಂದರವಾಗಿದ್ದರೂ ಕೋಪ ಮಾತ್ರ ಮೂಗಿನ ತುದಿಯಲ್ಲೇ ಇರುತ್ತಿತ್ತು. ಮಾಡುವ ಕೆಲಸದಲ್ಲೂ ಗಡಿಬಿಡಿ ಮತ್ತು ಅವಸರ ಇರುತ್ತಿತ್ತು. ಇಂತಹ ಇವಳಿಗೆ ಯಾರಾದರು ಜೋಕ್ ಮಾಡಿದರೆ ಹೇಗಿರುತ್ತೆ ಹೇಳಿ!? ಇವಳು ನಗುವ ಸಂಧರ್ಭ ಇದ್ದಾಗ ನಗದೇ ಏನು ಇರುತ್ತಿರಲಿಲ್ಲ ಆದರೆ ಕೆಲಸ ಮಾಡುವಾಗ ಅವಳು ಆಕಾಶವನ್ನೇ ತನ್ನ ತಲೆಯ ಮೇಲೆ ಹೊತ್ತು ಕೊಂಡಿರುವ ಹಾಗೆ ಆಡುತ್ತಿದ್ದಳು. ಅಲ್ಲಿ ನಾವು ಪ್ರತಿಯೊಬ್ಬರೂ, ಎಲ್ಲಾ ರೀತಿಯ ಕೆಲಸವನ್ನು ಮಾಡಬೇಕಾಗುತ್ತಿತ್ತು, ಇಂತಹ ಅವರಿಗೆ ಇಂತಹುದೇ ಕೆಲಸ ಎಂಬ ನಿಯಮವೇನೂ ಇರಲಿಲ್ಲ. ಆದ್ದರಿಂದ ಪರಸ್ಪರ ಸಹಾಯ ಮಾಡುವ ಅವಕಾಶಗಳು ಇರುತ್ತಿದ್ದವು. ಇವೆಲ್ಲದರ ಮಧ್ಯೆ ಕೆಲಸದ ಒತ್ತಡ ಇದ್ದಾಗ ಒಬ್ಬರಿಗೊಬ್ಬರು ರೇಗುವುದು , ಸಹಜವಾಗಿದ್ದಾಗ ರೇಗಿಸುವುದು, ಮುನಿಸು, ಕೋಪ, ನಗು, ಸಂತೋಷ ಮುಂತಾದುವು ಸಿಬ್ಬಂದಿ ವರ್ಗದಲ್ಲಿ ಸಹಜ ತಾನೆ!


ನಾವುಗಳು ಅಲ್ಲಿ ಬರುತ್ತಿದ್ದ ಎಲ್ಲ ಪೇಷಂಟ್ ಗಳಿಗೂ (ಹೊಸದಾಗಿ ಮತ್ತು ಪುನರಾವರ್ತಿಯಾಗಿ ಬರುವ ಎಲ್ಲಾರಿಗೂ ) ಮೊದಲು ಗಣಕೀಕೃತ ಯಂತ್ರದಿಂದ ಅವರ ಕಣ್ಣಿನ ಪರೀಕ್ಷೆ ಮಾಡಿ ಅದರ ವಿವರವಿರುವ ಸ್ಲಿಪ್ ಅನ್ನು ಪೇಷಂಟ್ ನ ಚೀಟಿಯಲ್ಲಿ (ಪ್ರೆಸ್ಕ್ರಿಪ್ಶನ್) ಪಿನ್ ಮಾಡಿ ಮುಂದಿನ ಚಿಕಿತ್ಸೆಗೆ ಕಳುಹಿಸಿಕೊಡಬೇಕು. ಹೀಗೆ ಇದರಲ್ಲಿ ಪರೀಕ್ಷಿಸುವ ಮುಂಚೆ ಅವರುಗಳಿಗೆ ವಿವರಿಸಬೇಕಾಗಿತ್ತು, ಅದೇನೆಂದರೆ ಆ ಮೆಶಿನ್ ಒಳಗೆ ಕಾಣುವ ಒಂದು ಚಿತ್ರದ ತುದಿಯನ್ನು ದೃಷ್ಟಿಸಿ ನೋಡುವಂತೆ ಮತ್ತು ರೀಡಿಂಗ್ ಮಾಡುವಾಗ ಅತ್ತಿತ್ತ ಅಲುಗಾಡದೆ ಮತ್ತು ಮಾತಾಡದೆ ಇರುವಂತೆ ಹೇಳುತ್ತಿದ್ದೆವು.


ಹೀಗಿದ್ದಾಗ ಒಮ್ಮೆ ಮೊದಲ ಸಲ ಬಂದಿದ್ದ ನಡು ವಯಸ್ಸಿನ ವ್ಯಕ್ತಿಯೊಬ್ಬರಿಗೆ ಹೇಮಾ ಆ ಮೆಶಿನ್ ನಲ್ಲಿ ರೀಡಿಂಗ್ ಚೆಕ್ ಮಾಡುತ್ತಿದ್ದಳು. ಅದೇ ಸಮಯಕ್ಕೆ ನಾನು ಆಪರೇಷನ್ ಮಾಡಿಸಿ ಕೊಳ್ಳ ಬೇಕಿದ್ದ ಪೇಷಂಟ್ ಒಬ್ಬರಿಗೆ ಆಪರೇಷನ್ ನ ನಿಯಮಗಳನ್ನು ಮತ್ತು ಸೂಚನೆಗಳನ್ನು ತಿಳಿಸಿದ ನಂತರ ಡಾಕ್ಟರ್ ಹೇಳಿಕೆಯ ಮೇಲೆ ಅವರಿಗೆ ಮತ್ತೆ ರೀಡಿಂಗ್ ಚೆಕ್ ಮಾಡಿಸಲು ಆ ಮೆಶಿನ್ ಬಳಿ ಬರಲು ಹೇಳಿ ನಾನು ಅಲ್ಲಿಗೆ ತಲುಪಿದೆ. ಅಲ್ಲಿ ಹೇಮಾ ಆ ಪೇಷಂಟ್ ಗೆ ಎಲ್ಲ ಸೂಚನೆಗಳನ್ನು ಎಂದಿನಂತೆ ಗಡಿಬಿಡಿಯಲ್ಲಿ ವಿವರಿಸಿ ಅವರಿಗೆ ಮುಖವನ್ನು ಮುಂದೆ ಆನಿಸಿ ಒಳಗಿರುವ ಚಿತ್ರವನ್ನು ನೋಡುವಂತೆ ಹೇಳುತ್ತಿದ್ದಳು . (ಓಹ್ ..ಸಾರೀ ನಿಮಗೆ ನಾನು ಅದರೊಳಗಿರುವ ಚಿತ್ರ ಯಾವುದೆಂದು ತಿಳಿಸಿಲ್ಲ ಅಲ್ಲವೇ ? ಅದೇ ಅದು ಏರೋಪ್ಲೇನ್ ಚಿತ್ರ . ಅದೊಂದೇ ಚಿತ್ರ ಅದರೊಳಗೆ ಇದ್ದದ್ದು.)


ಆ ವ್ಯಕ್ತಿ ಅವಳು ಹೇಳಿದಂತೆಯೇ ಮಾಡಿ, ತಕ್ಷಣ ಹಿಂದಕ್ಕೆ ಬಂದುಬಿಟ್ಟರು (ಕೆಲವು ಮಂದಿ ಹೊಸಬರು, ನಾವು ಹೇಳಿದ್ದುದು ಅರ್ಥವಾಗಿಲ್ಲದಿದ್ದರೆ ಹೀಗೆ ಮಾಡುತ್ತಿದ್ದರು. ಮತ್ತೆ ಅವರಿಗೆ ವಿವರಿಸಿ ರೀಡಿಂಗ್ ಚೆಕ್ ಮಾಡುತ್ತಿದ್ದೆವು.) ಆಗ ಅವಳಿಗೆ ತಕ್ಷಣ ಕೋಪ ಬಂದು ಮುಖ ಕೆಂಪಾಯಿತು! ಆದರೆ ನಮಗೆಲ್ಲ ಎಷ್ಟೇ ಕೋಪ ಬೇಸರ ಇದ್ದರು, ಪೇಷಂಟ್ಗಳನ್ನೂ ನಿಂದಿಸುವ ಹಾಗಿರಲಿಲ್ಲ. ಆದ್ದರಿಂದ ಹೇಮಾ ನಾನು ಅಲ್ಲೇ ಹತ್ತಿರ ಇದ್ದುದರಿಂದ ಸಹಾಯ ಯಾಚಿಸಿದಳು ಅದೂ ಕಣ್ಣಲ್ಲೇ, ನನಗೆ ಅರ್ಥವಾಗಿತ್ತು. ನಾನು ಆ ವ್ಯಕ್ತಿಯ ತಲೆ ಮೆಶಿನ್ ಗೆ ಆನಿಸಿ ರೀಡಿಂಗ್ ಆಗುವವರೆಗೂ ಅಲ್ಲಾಡದಂತೆ/ ಹಿಂದಕ್ಕೆ ಬರದಂತೆ ಅವರ ತಲೆಯನ್ನು ಒತ್ತಿ ಹಿಡಿದುಕೊಳ್ಳುವುದರಲ್ಲಿದ್ದೆ! ಅಷ್ಟರಲ್ಲಿ ಅವರು ಮಾತನಾಡುತ್ತಾ, ಎಲ್ಲಮ್ಮಾ ನನಗೆ ಯಾವ ಏರೋಪ್ಲೇನ್ ಕಾಣಿಸುತ್ತಿಲ್ಲ... ಎಂದು ಹೇಳುತ್ತಿರುವಾಗ ಹೇಮಾ ಅದಕ್ಕೆ ಉತ್ತರವಾಗಿ, ಸಾರ್ ಅಲ್ಲೇ ಸರಿಯಾಗಿ ನೋಡಿ ಮತ್ತೊಮ್ಮೆ....... ಎಂದು ಹೇಳಿ ಮುಗಿಸುವಷ್ಟರಲ್ಲಿ ಆ ವ್ಯಕ್ತಿ ಮತ್ತೆ ಹೇಳಿದರು, ಬಹುಷಃ ಹೈಜಾಕ್ ಆಗಿರಬಹುದು!!!!!! ಅನ್ನುತ್ತಾ ತುಂಟ ನಗೆ ನಕ್ಕರು. ನಮ್ಮಿಬ್ಬರಿಗೆ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಒಂದೆರಡು ಸೆಕೆಂಡ್ ಆಗಿತ್ತು. ಆಗ ಒಂದರೆಕ್ಷಣ ಅವಳ ಬೇಸ್ತು ಬಿದ್ದ ಮುಖವನ್ನು ನೋಡಬೇಕಾಗಿತ್ತು! ಮತ್ತು ಅರ್ಥವಾದಾಗ ನಾವಿಬ್ಬರೂ ನಕ್ಕಿದ್ದೆ ನಕ್ಕಿದ್ದು !!!ಮತ್ತೆ ನಾವಿಬ್ಬರೂ ನಗುವ ಮುಂಚೆ ಗಲಿಬಿಲಿ ಗೊಂಡಿದ್ದನ್ನು ಗಮನಿಸಿದ ಆ ವ್ಯಕ್ತಿ ಹೀಗೆ ಹೇಳಿದರು, ನೀವೆಲ್ಲಾ ಕೆಲಸದಲ್ಲಿ ವ್ಯಸ್ಥವಾಗಿರುತ್ತೀರಿ, ಅದಕ್ಕೆ ನಿಮ್ಮನ್ನು ನಗಿಸೋಣ ಎಂದು ಹಾಗೆ ಜೋಕ್ ಮಾಡಿದೆ ಅಷ್ಟೇ, ತಪ್ಪಾಗಿ ತಿಳಿಯಬೇಡಿ ಎಂದರು. ಅದಕ್ಕೆ ನಾವು ಪರವಾಗಿಲ್ಲ ಸಾರ್ ಎಂದು ಒಟ್ಟಿಗೆ ನುಡಿದಿದ್ದೆವು. ಅಷ್ಟೇ ಅಲ್ಲ ಈ ಪ್ರಸಂಗವನ್ನು ಬೇರೆ ಕೊಲಿಗ್ ಗಳಿಗೂ ಹೇಳಿ ಮತ್ತಷ್ಟು ನಕ್ಕಿದ್ದೆವು.......!!!

ನಿಜವಾದ ವಿಮಾನ ಅಪಹರಣ ಆದ ಸುದ್ದಿ ಕೇಳಿದಾಗ ವ್ಯಥೆಯಾಗಿದ್ದುದು ಎಷ್ಟು ನಿಜವೋ, ಚಿತ್ರದಲ್ಲಿರುವ ಏರೋಪ್ಲೇನ್ ಅನ್ನು ಹೈಜಾಕ್ ಮಾಡಿಸಿದ ಆ ವ್ಯಕ್ತಿಯ ಹಾಸ್ಯ ಪ್ರಜ್ಞೆಗೆ ನಮಗೆ ನಗು ಬಂದದ್ದು ಅಷ್ಟೇ ಸಹಜ!


ಇದೆ ರೀತಿ ಇನ್ನಷ್ಟು ಪ್ರಸಂಗಗಳನ್ನು ಮುಂದೆ ಮುಂದೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ಆದರೆ ಒಂದು ಮಾತು, ಇವನ್ನೆಲ್ಲ ಓದುವ ನಿಮಗೆ ನಗು ಬರದಿದ್ದರೆ ನಾನು ಜವಾಬ್ಧಾರಳಲ್ಲ!!






6 comments:

Ittigecement said...

ಎಸೆಸ್ಕೆ...

ಸರಳವಾದ ಭಾಷೆಯಲ್ಲಿ..
ತೆಳುವಾಗಿ ಹಾಸ್ಯದೊಂದಿಗೆ ಹೇಳಿದ್ದೀರಿ...
ಮುಂದುವರೆಯಲಿ..
ಇನ್ನಷ್ಟು ಬರೆಯಿರಿ...

SSK said...

ಪ್ರಕಾಶ್ ಹೆಗ್ಡೆ ಅವರೇ, ನೀವು ನನ್ನ ಬ್ಲಾಗ್ ಗೆ ಭೇಟಿ ನೀಡುತ್ತಿರುವುದು ನನಗೆ ತುಂಬಾ ಸಂತೋಷವನ್ನು ತಂದಿದೆ. ಮತ್ತು ಇದೆ ರೀತಿ ನಿಮ್ಮೆಲ್ಲರ ಪ್ರೋತ್ಸಾಹ ನನಗೆ ದೊರೆಯುತ್ತಿರಲಿ, ಧನ್ಯವಾದಗಳು!

Prabhuraj Moogi said...

ಕಣ್ನಲ್ಲೆ ವಿಮಾನ ಹೈಜಾಕ್ ಮಾಡಿದ್ದಾರಲ್ರೀ ಅವರು... ಪ್ರಸಂಗ ಹೇಳಿಕೊಂಡು ಹೋದ ರೀತಿ ಬಹಳ ಚೆನ್ನಾಗಿತ್ತು. ಕಣ್ಣ ಮುಂದೇನೇ ನಗುತ್ತಿರಲು ಹಲವಾರು ಕಾರಣಗಳಿದ್ರೂ ಕಾಣದೇ ಕುರುಡರಂತಾಗಿ ಟೆನ್ಷನ್ ಅಂತ ಕೊರುಗುತ್ತಿರ್ತೀವಿ, ಅಂಥ ಸಂತೋಷಗಳನ್ನು ಕಾಣಲು ನಮಗೆ ಒಳ್ಳೇಯ ಕನ್ನಡಕವನ್ನೇ ತೊಡಿಸುತ್ತಿದ್ದೀರೀ ಹೀಗೆ ಮುಂದುವರೆಸಿ...

SSK said...

ಪ್ರಭು ಅವರೇ, ಈ ತರಹದ ನೆನಪಿನ, ನಗಿಸುವ ಪ್ರಸಂಗಗಳು ಇನ್ನು ಸಾಕಷ್ಟು ಇವೆ. ಅದನ್ನೆಲ್ಲಾ ಮುಂದೆ ಮುಂದೆ ನನ್ನ "ನೆನಪಿನ ಬುತ್ತಿಯಿಂದ....!" ಪುಟಗಳಲ್ಲಿ ಬರೆಯುತ್ತೇನೆ. ನಿರೀಕ್ಷಿಸುತ್ತಿರಿ!
ಭೇಟಿ ನೀಡಿದ್ದಕ್ಕೆ, ಮತ್ತು ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಶಿವಪ್ರಕಾಶ್ said...

SSK ಅವರೇ.
"ಬಹುಷಃ ಹೈಜಾಕ್ ಆಗಿರಬಹುದು" ಹ್ಹಾ ಹ್ಹಾ ಹ್ಹಾ...
ತುಂಬಾ ಚನ್ನಾಗಿದೆ...ನನಗಂತೂ ನಗು ಬಂತು... :D
ಹೀಗೆ ಬರಿತ ಇರಿ...

SSK said...

ಶಿವಪ್ರಕಾಶ್ ಅವರೇ, ಭೇಟಿ ನೀಡಿದ್ದಕ್ಕೆ ಧನ್ಯವಾದಗಳು, ಹೀಗೆ ಪ್ರೋತ್ಸಾಹಿಸುತ್ತಿರಿ.!