ಕಳೆದ ಬೇಸಿಗೆ
ರಜೆಯಲ್ಲಿ, ನನ್ನ ಒಬ್ಬ ಅಕ್ಕನನ್ನು ಬಿಟ್ಟು ಬೇರೆಯವರೆಲ್ಲಾ ನಮ್ಮ ಮನೆಯಲ್ಲಿ ಸೇರಿದ್ದರು ಎಂದು ರಜಾ ಮಜಾ ಲೇಖನದಲ್ಲಿ ನಿಮಗೆಲ್ಲಾ ತಿಳಿಸಿದ್ದೆ ಅಲ್ಲವೇ?!
ಅದಕ್ಕೇನೀಗ ಅಂತೀರಾ, ಬೈಕೋಬೇಡಿ ಪ್ಲೀಸ್.....! ಸರಿ ಸರಿ ಮುಂದಕ್ಕೆ ಓದಿ ಆಯಿತಾ.
ನಮ್ಮಮ್ಮ ರಜದಲ್ಲಿ ಇಲ್ಲಿಗೆ ಬರೋಕೆ ಮುಂಚೆ, ಬಂದಿದ್ದಾಗ, ಬಂದು ಹೋದಮೇಲೆ ಫೋನ್ ನಲ್ಲಿ......, ಹೀಗೆ ಒಂದೇ ಸಮ ನನ್ನ, ಅವರ ಮನೆಗೆ (ತವರಿಗೆ) ಬರುವಂತೆ ಪೀಡಿಸುತ್ತಿದ್ದರು!
ಇದೇನಿದು ಅಮ್ಮಂದಿರು ಕರೆದರೆ ಸಾಕು ತವರಿಗೆ ಹೋಗಲು ತುದಿಗಾಲಲ್ಲಿ ನಿಂತು, ಅವಕಾಶಕ್ಕಾಗಿ ಕಾಯೋ ಹೆಣ್ಣುಮಕ್ಕಳು ಇರುತ್ತಾರೆ! ಆದರೆ ನನ್ನನ್ನು ನೋಡಿದರೆ, ಅಮ್ಮ ಕಾಡಿಸುತ್ತಾರೆ, ಪೀಡಿಸುತ್ತಾರೆ ಅಂತೆಲ್ಲಾ ಬರೆದಿದ್ದೀನಿ ಅಂತ ಅಂದುಕೊಳ್ಳುತ್ತಿದ್ದೀರಾ? ಏನ್ಮಾಡೋದು ಹೇಳಿ, ನನ್ನ ಕಥೆನೇ ಒಂದು ಥರ ವಿಚಿತ್ರ!! ಇರಲಿ ಬಿಡಿ ಅದನ್ನ ಮುಂದೆ ಯಾವಾಗದರೊಮ್ಮೆ ನಿಮ್ಮ ಹತ್ರ ಹೇಳಿಕೊಬೇಕು ಅನಿಸಿದರೆ ಹೇಳ್ತೀನಿ..... ಓಕೆ!ಹಾಗಂತ ನಾನೇನು ತವರಿಗೆ ಹೋಗದೆ ಏನು ಇರ್ತಿರ್ಲಿಲ್ಲ, ನಮ್ಮ ಮಧ್ಯೆ ಏನೇ ಇದ್ದರೂ ನಾನಂತೂ ಸಹಜವಾಗೇ ಹೋಗಬೇಕಾದಾಗ ಹೋಗಿಬರುತ್ತಿದ್ದೆ.
ಆದರೆ ಈ ಸಲ ಸುತರಾಂ ನನಗೆ ಹೋಗಲು ಇಷ್ಟವಿರಲಿಲ್ಲ, ಅದಕ್ಕೆ ಬಲವಾದ ಕಾರಣವೂ ಇತ್ತು. ಎಷ್ಟು ಬರೋಲ್ಲ ಅಂತ ಹೇಳಿದರೂ ಸುಮ್ಮನೆ ಇರ್ತಾಇರಲಿಲ್ಲ ಅದಕ್ಕೆ ಒಂದು ಉಪಾಯ ಮಾಡಿ ಒಂದು ಕಾರಣ ಹೇಳ್ತಾ ಇದ್ದೆ ಅದೇನೆಂದರೆ, ಅಕ್ಕ ಬರಲಿ ಆಗ ನೋಡೋಣ ಅಂತ! ನನ್ನಕ್ಕನನ್ನು ಈ ಸಲ ತವರಿಗೆ ಕಳಿಸೋಲ್ಲ ಎನ್ನುವ ಧೃಡವಾದ ನಂಬಿಕೆ ಇತ್ತು ಅದಕ್ಕೆ ಕಾರಣ ಕಳೆದ ವರ್ಷ ಬೇಸಿಗೆ ರಜೆಯಲ್ಲಿ, ಆಕೆಯ ಚಿಕ್ಕ ಮಗನ ನಾಮಕರಣದ ಸಮಯದಲ್ಲಿ ಆಕೆಯ ಅತ್ತೆ ಮನೆಯವರು ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಪ್ಪ, ಅಮ್ಮನೊಂದಿಗೆ ಗಲಾಟೆ/ಜಗಳ ಮಾಡಿಕೊಂಡಿದ್ದರು! ಈ ಗಲಾಟೆಯಾದ ನಂತರದಲ್ಲಿ ಆಗಾಗ ಆಕೆಯನ್ನು ಆ ಊರಿಗೆ ಅವರು ಕರೆದುಕೊಂಡು ಬಂದಿದ್ದರೂ, ಅವಳನ್ನು ತವರಿಗೆ ಕಳುಹಿಸಿರಲಿಲ್ಲ ಆದ್ದರಿಂದ. ಅದೂಅಲ್ಲದೆ ಒಂದು ವರ್ಷ ಕಳೆಯುವುದರೊಳಗಾಗಿ, ಅವರುಗಳ ಕೋಪವೂ ಸ್ವಲ್ಪ ಕರಗಿ ಮೂರನೆಯವರ ಮುಖಾಂತರ, ಉಗಾದಿ ಹಬ್ಬಕ್ಕೆ ಅವರು ಬಂದು ಕರೆದರೆ ಕಳುಹಿಸುತ್ತೇವೆ ಎಂದು ಹೇಳಿದ್ದರು.
ಅವರ ಮಾತಿನ ಪ್ರಕಾರವೇ, ಅಪ್ಪ ಹೋಗಿ ಹಬ್ಬಕ್ಕೆ ಮತ್ತು ರಜಕ್ಕೆ ಕರೆದುಬಂದಿದ್ದರೂ ಅವರು ಮಾತು ಉಳಿಸಿಕೊಳ್ಳಲಿಲ್ಲ, ಹಾಗಾಗಿ ಹಬ್ಬಕ್ಕೆ ಆಕೆಯನ್ನು ಕಳುಹಿಸಿರಲಿಲ್ಲ. ಸರಿ ಈಗ ಪರೀಕ್ಷೆಯ ಸಮಯ ದೊಡ್ಡ ಮಗನಿಗೆ ಶಾಲೆ ತಪ್ಪಿಸಿ ಬರಲಾಗುವುದಿಲ್ಲ ರಜದಲ್ಲಿಯಾದರು ಬರುತ್ತಾಳೆನೋ ನೋಡೋಣ ಅಂತ ಸಮಾಧಾನ ಪಟ್ಟುಕೊಂಡಿದ್ದರು. ಹಬ್ಬ, ಪರೀಕ್ಷೆ, ಫಲಿತಾಂಶ ಸಮಯ ಎಲ್ಲಾ ಮುಗಿಯಿತು, ಊ.... ಹ್ಞೂ....! ಅವಳು ಬರಲೇ ಇಲ್ಲ. ಇದರಿಂದ ನಮಗೆಲ್ಲಾ ಬೇಸರವಾಗಿದ್ದರೂ ನನಗಂತೂ ಒಂದು ಬಲವಾದ ಕಾರಣ ಸಿಕ್ಕಿತ್ತಲ್ಲ, ಅದೇ ಖುಷಿ!! ಆದರೆ ನನ್ನ ದೊಡ್ಡಕ್ಕ (ದೊಡ್ಡಮ್ಮನ ಮಗಳು) ರಜೆಯ ಪ್ರಾರಂಭದಲ್ಲೇ ಅವರು ತಮ್ಮ ತವರಿಗೆ ಒಂದು ಭೇಟಿ ನೀಡಿಯಾಗಿತ್ತು, ನಮ್ಮ ಮನೆಗೆ ಬರುವುದಕ್ಕೆ ಮುಂಚೆನೆ! ಇದನ್ನೂ ಸೇರಿಸಿ ಅಮ್ಮನಿಗೆ, ನೋಡು ಲಕ್ಷ್ಮಿ ಅಕ್ಕ ಬಂದಾಗ ಪುಷ್ಪಕ್ಕನೂ ಮತ್ತೆ ಊರಿಗೆ ಬರುತ್ತೀನಿ ಅಂತ ಒಪ್ಪಿಕೊಳ್ಳಲಿ ಆಗ ನಾನು ಬರುವುದರ ಬಗ್ಗೆ ಯೋಚನೆ ಮಾಡುತ್ತೇನೆ ಅಲ್ಲಿವರೆಗೂ ಈ ವಿಷಯವಾಗಿ ನನ್ನ ಮಾತಾಡಿಸಬೇಡ ಆಯಿತಾ....., ಅಂತ ಹೇಳಿ ತಪ್ಪಿಸಿಕೊಂಡಿದ್ದೆ! ಈ ಮಾತಿಗೆ ನನ್ನ ದೊಡ್ಡ ಅಕ್ಕಾನೂ, ಹೌದು ಅವಳು (ಲಕ್ಷ್ಮಿ) ಅಕಸ್ಮಾತ್ ಬಂದರೆ ನೋಡೋಣ ಇಲ್ಲಾಂದರೆ ಸಧ್ಯಕ್ಕೆ ನಾನಂತೂ ಮತ್ತೆ ಊರಿಗೆ ಹೋಗೋಲ್ಲ ಅಂತ ಹೇಳಿ ಅಷ್ಟಕ್ಕೆ ಸುಮ್ಮನಿರದೆ, ನನ್ನ ಕುರಿತು, ಅವಳು ಬರಲಿಲ್ಲ ನೀನೂ ಹೋಗಿಲ್ಲಾ ಅಂದರೆ ನಿಮ್ಮಮ್ಮನಿಗೆ ಬೇಜಾರಾಗೊಲ್ವ ಒಂದೆರಡು ದಿನದ ಮಟ್ಟಿಗೆ ಹೋಗಿಬಾ ಎಂದು ಎತ್ತಿ ಕಟ್ಟಿದರು. ನಮ್ಮಮ್ಮನಿಗೆ ಅಷ್ಟೇ ಸಾಕಾಯಿತು, ಚೂಡಮ್ಮ....ಗೀಡಮ್ಮ (ನೋಡಮ್ಮ) ಎಂದೆಲ್ಲಾ ಶುರು ಮಾಡಿಕೊಂಡರು. ನಾನಾಗ, ನೋಡಿ ಬರಲ್ಲ ಅಂದಮೇಲೆ ಮುಗಿಯಿತು, ಎಷ್ಟು ಸಲ ಹೇಳೋದು ಅದೂ ಅಲ್ಲದೆ ನೀವೇ ಎಲ್ಲಾ ಬಂದು ನೋಡಿದ್ದೀರಲ್ಲ ಇನ್ನು ನಾನ್ಯಾಕೆ, ಸುಮ್ಮಸುಮ್ಮನೆ ಊರಿಗೆ ಬೇರೆ ಬರಬೇಕು? ಇನ್ನು ಇದರ ಬಗ್ಗೆ ಜಾಸ್ತಿ ಮಾತಾಡಿದರೆ ಅಷ್ಟೇ......ಅಂತ ಸ್ವಲ್ಪ ಕೋಪವಾಗೆ ಹೇಳಿದೆ. ಇಷ್ಟಾದ ಮೇಲೆ, ನನ್ನ ಜಗಮೊಂಡಿ....., ಹಠಮಾರಿ ಅಂತ ಒಂದೆರಡು ಬಿರುದು ಕೊಟ್ಟು ಅಮ್ಮ ತಮ್ಮ ಅಹಂ ಅನ್ನು ಸಮಾಧಾನ ಪಡಿಸಿಕೊಂಡರು!!!
ಸ್ವಲ್ಪ ದಿನಗಳ ನಂತರ ನನ್ನ ತಮ್ಮ ಫೋನ್ ಮಾಡಿ, ಅಕ್ಕ ಬಂದಿದಾಳೆ ನೀನು ಬೇಗ ಬಾ, ಯಾವಾಗ ಬರ್ತೀಯ ಎಂದು ಕೇಳಿದ. ಅದಕ್ಕೆ ನಾನು, ಹೋಗೋ ಸುಮ್ಮನೆ, ನಾನೇನು ನನ್ನ ಕಿವೀಲಿ ಕಾಲೀ ಫ್ಲವರ್ ಇಟ್ಟುಕೊಂಡಿಲ್ಲ. ಯಾರನ್ನು ಫೂಲ್ ಮಾಡ್ತೀಯಾ, ಬೇರೆ ಯಾರನ್ನಾದರೂ ನೋಡಿಕೋ ನನ್ನ ಬಿಟ್ಬಿಡು, ಬಾಯ್ ಅಂತ ಹೇಳುತ್ತಿದ್ದ ಹಾಗೆ, ನಿಜವಾಗಲೂ, ಪ್ರಾಮಿಸ್ ಬೇಕಾದರೆ ನೀನೆ ಮಾತಾಡು ಅಂತ ಹೇಳಿ ಅಕ್ಕನಿಗೆ ಫೋನ್ ಕೊಟ್ಟೆಬಿಟ್ಟ (ಪಾಪ ಚೆನ್ನಾಗೇ ಆಟ ಆಡ್ಸಿದ್ದೀನಿ ಅವನ್ನ). ಅಕ್ಕನೊಂದಿಗೆ ಮಾತಾಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡು, ಆಕೆ ಬಂದಿರೋದನ್ನ ಪ್ರಸ್ತುತ ಪಡಿಸಿಕೊಂಡ ನಂತರ ಆಕೆ ನನಗೆ ಗೋಗರೆಯಲು ಶುರು ಮಾಡಿದಳು. ಪ್ಲೀಸ್ ಬಾರೆ ನನಗೋಸ್ಕರ ಬಾರೆ, ನಿಮ್ಮನ್ನೆಲ್ಲಾ ನೋಡಬೇಕು ಅನ್ನಿಸುತ್ತಿದೆ, ಪುಷ್ಪಕ್ಕನೂ ಬರುತ್ತಾಳೆ, ಬಾರೆ ಎಂದೆಲ್ಲಾ ವಿಧವಿಧವಾಗಿ ಪುಸಲಾಯಿಸುತ್ತಿದ್ದಳು! ಅದಕ್ಕೆ ನಾನು ಆಹಾ ಅಮ್ಮಣ್ಣಿ ನೀನು ಬಂದು ಬಿಟ್ಟಿದ್ದೀಯ ಅಂತ ನಾವೆಲ್ಲಾ ನಿನ್ನ ನೋಡೋಕೆ ಬಂದು ಬಿಡಬೇಕಾ? ಏನು ಮಹಾರಾಣಿ ನೀನು, ಹೋಗೆ ಬರೋಲ್ಲ ಅಂತಂದೆ (ಅವಳ ಮಗನ ನಾಮಕರಣದಲ್ಲಿ ನಮ್ಮನ್ನೆಲ್ಲಾ ಅವಳು ಸರಿಯಾಗಿ ಮಾತನಾಡಿಸಿರಲಿಲ್ಲ, ಆ ಬೇಸರ ಬೇರೆ ಇತ್ತು ಅದಕ್ಕೆ.) ಮತ್ತೆ ನೀನೆ ನಮ್ಮ ಮನೆಗೆ ಬಾ, ನಾನು ಬರೋಲ್ಲ ಅಂತ ಹೇಳಿದೆ. ಅದಕ್ಕವಳು, ಪ್ಲೀಸ್ ಕಣೆ ಇಲ್ಲಿಗೆ ಕಳುಹಿಸುವುದಕ್ಕೆ ಅವರು ಏನೆಲ್ಲಾ ಕಂಡೀಷನ್ ಹಾಕಿದ್ದಾರೆ ಗೊತ್ತಾ.... ಅರ್ಥ ಮಾಡಿಕೊ, ಬೇರೆ ಎಲ್ಲೂ ಹೋಗೋ ಹಾಗೆ ಇಲ್ಲ ನಿನಗೆ ಗೊತ್ತಿಲ್ಲದೆ ಇರೋದು ಏನಿದೆ ಹೇಳು ಎಂದಳು. ಸರಿ ಸರಿ ಪುಷ್ಪಕ್ಕನ್ನ ಕೇಳ್ತೀನಿ ಆಕೆ ಒಪ್ಪಿಕೊಂಡರೆ ಸರಿ ಇಲ್ಲಾಂದರೆ ನೀನೆ ಒಪ್ಪಿಸಬೇಕು ಇಷ್ಟು ಹೇಳಿ ಲೈನ್ ಕಟ್ ಮಾಡಿದೆ.
ದೊಡ್ದಕ್ಕನೊಂದಿಗೆ ಮಾತಾಡಿಕೊಂಡು ನಾವಿಬ್ಬರೂ ಕೂಡಿ ಕಳೆದು ಲೆಕ್ಕಾಚಾರ ಮಾಡಿ ನಂತರ ಇಬ್ಬರೂ ಹೋಗಲು ನಿಶ್ಚಯಿಸಿಕೊಂಡೆವು! ಮೇ ನಲ್ಲಿ ಅರ್ಧ ತಿಂಗಳು ಕಳೆದೆ ಹೋಗಿತ್ತು, ಆಗ ಬಂದಿದ್ದಳು ನಮ್ಮ ಮಹರಾಯಿತಿ.
ಅಂದುಕೊಂಡಂತೆ ನಾವಿಬ್ಬರೂ ಸೋಮವಾರ ಊರಿಗೆ ತಲುಪಿದೆವು. ಆಕೆಗೆ ಅವರೂರಿಂದ ಬಂದು ತಲುಪಲು ೫ ಗಂಟೆ ಕಾಲ ಬೇಕು ಅದೂ ನೇರ ಬಸ್ ಸಿಕ್ಕಿದರೆ ಇಲ್ಲಾಂದರೆ ಇನ್ನೂ ಲೇಟ್ ಆಗಿಬಿಡುತ್ತೆ. ನಾನು ಬೇಗ ತಲುಪಿದ್ದೆ. ಆಕೆ ಬರುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ಸೀದಾ ನಮ್ಮ ಮನೆಗೆ ಬಾ ಅಂತ ಹೇಳಿದ್ದರೂನೂ ಅವರಮ್ಮ ಎಲ್ಲಿ ಕೋಪ ಮಾಡಿಕೊಂಡು ಬಿಡುತ್ತಾರೋ ಅಂತ ಆಕೆ ಅವರ ಮನೆಗೆ ಒಂದು ಭೇಟಿ ನೀಡಿ ಆಮೇಲೆ ಬಂದರು.
ಮುಂದುವರೆಯುವುದು.......!
ಕೈಗೆ ಪೆಟ್ಟಾಗಿದ್ದ ಕಾರಣ ಈ ಲೇಖನವನ್ನು ಒಮ್ಮೆಲೇ ಮುಗಿಸಲಾಗಿರಲಿಲ್ಲ. ಇದರ ಮುಂದುವರಿದ ಭಾಗ ಆದಷ್ಟು ಬೇಗ ಬರೆಯುತ್ತೇನೆ.