Wednesday, May 27, 2009

ಧನ್ಯವಾದಗಳು......!

ನನ್ನ ಬ್ಲಾಗ್ ಸ್ನೇಹಿತರಿಗೆ ಒಂದು ಮನವಿ, ತಾಂತ್ರಿಕ ತೊಂದರೆಯಿಂದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಉತ್ತರ ಬರೆಯಲಾಗಲಿಲ್ಲ, ಇದಕ್ಕಾಗಿ ವಿಷಾದಿಸುತ್ತೇನೆ. ಆದ್ದರಿಂದ ಈ ವಿಧಾನದಲ್ಲಿ ಹೀಗೆ ಬರೆದಿದ್ದೇನೆ, ಅನ್ಯತಾ ಭಾವಿಸಬೇಡಿ! ತೊಂದರೆ ನಿವಾರಣೆಯಾದ ಮೇಲೆ ಉತ್ತರಿಸೋಣ ಎಂದರೆ, ನಾನು ನಾಲ್ಕು ದಿನ ಊರಿನಲ್ಲಿರುವುದಿಲ್ಲ. ಶಿರಡಿ ಗೆ ಹೊರಟಿರುವೆ! ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಹೀಗೆ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ, ಧನ್ಯವಾದಗಳು!!

ನಾಗೇಶ್ ಆಚಾರ್ ಅವರಿಗೆ,

ಸ್ವಾಗತ! ನೀವು ನನ್ನ ಬ್ಲಾಗಿಗೆ ಭೇಟಿ ನೀಡಿ ಕಥೆ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು! ಹೀಗೆ ಭೇಟಿ ನೀಡುತ್ತಿರಿ.

ಮನಸು ಅವರೇ,

ನಿಮ್ಮ ತಾಳ್ಮೆಗೆ ಧನ್ಯವಾದಗಳು! ಆದಷ್ಟು ಬೇಗ ಮುಂದಿನ ಭಾಗ ಪ್ರಕಟಿಸುತ್ತೇನೆ. ಹೀಗೆ ಭೇಟಿ ನೀಡುತ್ತಿರಿ.

ಪ್ರಭು ಅವರೇ,

ಹೀಗೆ ಮತ್ತೆ ಕಾಯಿಸುತ್ತಿರುವುದಕ್ಕೆ ಕ್ಷಮೆಯಿರಲಿ! ಬಹು ಬೇಗ ಮುಂದಿನ ಭಾಗ ಪ್ರಕಟಿಸುತ್ತೇನೆ. ( ಹಾಗೆ ವಸುಧಾಳಿಗೆ ನಿಮ್ಮನ್ನು ಭೇಟಿಯಾಗುವಂತೆ ತಿಳಿಸುತ್ತೇನೆ ಹ್ಹ ಹ್ಹಾ.......)

Saturday, May 9, 2009

ರಜಾ....ಮಜಾ.....!

ಈ ಸಲ ಬರದ ಲೇಖನ ಯಾಕೋ ಸರಿಯಿಲ್ಲ ಎನ್ನುವ ಅಸಮಾಧಾನ. ನಡೆದಿದ್ದ ಒಂದೆರಡು ತಮಾಷೆ/ಹುಚ್ಚು ಪ್ರಸಂಗವನ್ನು ಬರೆದಿರುವೆ! ನಿಮ್ಮ ಅಭಿಪ್ರಾಯ ಏನಿದ್ದರೂ ಸರಿ ತಿಳಿಸಿ!!

ಬೇಸಿಗೆ ರಜೆಯಾದ್ದರಿಂದ ಮನೆಯಲ್ಲಿ ಒಂದೇ ಸಮನೆ, ನೆಂಟರುಗಳ ಆಗಮನ. ಕಳೆದ ವಾರ ಲೇಖನ ಬರೆಯಲು ಸಮಯವೇ ಕೂಡಿಬಂದಿರಲಿಲ್ಲ. ಎಷ್ಟೊಂದು ಕೆಲಸ, ಆಗಾಗ ಓಡಾಟ, ಮಾತುಗಳಂತೂ ಮುಗಿಯುವುದೇ ಇಲ್ಲ! ಹಳೆಯ ನೆನಪುಗಳು, ಹೊಸ ವಿಚಾರಗಳು, ಆಗು-ಹೋಗುಗಳ ಬಗ್ಗೆ, ಒಂದಾ, ಎರಡ.......ರಾತ್ರಿಯ ಊಟ, ಕೆಲಸ ಎಲ್ಲಾ ಮುಗಿಸಿ, ಮಾತಿಗಿಳಿದರೆ ಮುಗಿಯಿತು! ಸಮಯ ಸರಿಯುವುದೇ ತಿಳಿಯುವುದಿಲ್ಲ. ನಮ್ಮ ದಿನನಿತ್ಯದ ವೇಳೆಯ ಪಟ್ಟಿಯಲ್ಲಿ ಅಸ್ಥವ್ಯಸ್ಥ! ಆದರೂ ಇವೆಲ್ಲ ಒಂದು ರೀತಿಯ ಮಜಾ!

ಸಾಮಾನ್ಯವಾಗಿ ನಾವು ಅಕ್ಕ ತಂಗಿಯರು ಪ್ರತಿವರ್ಷ ತವರಿನಲ್ಲೇ ಸೇರುತ್ತಿದ್ದೆವು. ಆದರೆ ಈ ಸಲ ಸ್ವಲ್ಪ ಬದಲಾವಣೆ, ನನ್ನ ಒಡಹುಟ್ಟಿದ ಅಕ್ಕನನ್ನು ಬಿಟ್ಟು ಎಲ್ಲರೂ ಈ ಬಾರಿ ನಮ್ಮ ಮನೆಗೆ ಭೇಟಿ ನೀಡಿದ್ದರು! ಊರಿನಲ್ಲಾದರೆ ನೆಂಟರು, ಸಂಭಂದಿಕರು ಎಲ್ಲ ಹತ್ತಿರದಲ್ಲೆ, ಅಕ್ಕಪಕ್ಕದ ಮನೆ, ಅಕ್ಕಪಕ್ಕದ ರಸ್ತೆಗಳಲ್ಲೇ ಇರುವುದರಿಂದ ಅಲ್ಲಿಗೆ ಹೋದರೆ ಸಾಕು, ತುಂಬಾ ದಿನಗಳಿಗೆ ಹೋದರೆ ಅಂತು ಮುಗಿಯಿತು, ತಿಂದು ತಿಂದು ಒಂದೆರಡು ಸುತ್ತು ದಪ್ಪ ಆಗುವುದು ಖಂಡಿತ! ಹೋಗಿದ್ದ ದಿನದಿಂದ ಹಿಂದಿರುಗಿ ಬರುವ ದಿನದವರೆಗೂ ನೋಡಿದ ಪ್ರತಿಯೊಬ್ಬರಿಗೂ, ಯಾವಾಗ ಬಂದಿರಿ ಎನ್ನುವ ಪ್ರಶ್ನೆಗೆ ಉತ್ತರಿಸುವುದೇ ಆಗುತ್ತದೆ. ಹೊರಗೆ ಎಲ್ಲಾದರು ಸುತ್ತಾಡಲು ಹೋದರಂತೂ, ಅಲ್ಲಲ್ಲಿ ಮಂಟಪೋತ್ಸವಗಳು! (ಅಂದರೆ ನೋಡಿದ ಪ್ರತಿಯೊಬ್ಬರನ್ನು ನಿಂತು ಮಾತನಾಡಿಸಿ ಮುಂದೆ ಹೋಗುವುದು.) {ಅಂದರೆ ದೇವರ ಮೆರವಣಿಗೆಯಲ್ಲಿ, ದೇವರನ್ನು ಅಲ್ಲಲ್ಲಿ ನಿಲ್ಲಿಸಿ ಪೂಜೆ ಮಾಡಿಸುವವರಿದ್ದರೆ ಮಾಡಿಸಿ, ಮೆರವಣಿಗೆಯನ್ನು ಮುಂದಕ್ಕೆ ಕಳಿಸುತ್ತಾರೆ. ಇದಕ್ಕೆ ಮಂಟಪೋತ್ಸವ ಎಂದು ಕರೆಯುತ್ತಾರೆ!!}

ಕೆಲವೊಮ್ಮೆ ತುಂಬಾ ಬೇಕಾದವರ ಮನೆಗಳಿಗೆ ಹೋಗಲೇ ಬೇಕಾಗುತ್ತದೆ. ಅವರುಗಳ ಉಪಚಾರ, ಅಪರೂಪಕ್ಕೆ ಬರುವಿರೆಂದು ತಿನ್ನಲು ಕೊಡುವುದು, ಆಗ ನೋಡಬೇಕು ನಮ್ಮ ಫಜೀತಿ ಅವರು ಪ್ರೀತಿಯಿಂದ ಕೊಡುವುದು ಬೇಡ ಎನ್ನಲು ಆಗುವುದಿಲ್ಲ (ಬೇಡ ಎಂದರು ಬಲವಂತ ಮಾಡುತ್ತಾರೆ) ತಿನ್ನಲು ಹೊಟ್ಟೆಯಲ್ಲಿ ಜಾಗ ಖಾಲಿ ಇರುವುದಿಲ್ಲ! ಹೀಗೆ ಇನ್ನು ಹಲವು ಅಕ್ಕರೆಯ ಸಂಕಷ್ಟಗಳು!!

------------------------------------------------------------------------------------------------


ನಮ್ಮ ಮನೆಗೆ ಕಳೆದ ವಾರ ಬಂದಿದ್ದ ನೆಂಟರ ಪೈಕಿ ನನ್ನ ಅಕ್ಕನ (ದೊಡ್ಡಮ್ಮನ ಮಗಳು), ಎಂಟು ವರ್ಷದ ಮಗ ಗುಡ್ ನೈಟ್ ಹೇಳಿದ ಪರಿಗೆ ನಾವೆಲ್ಲಾ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದ ಪ್ರಸಂಗವನ್ನು ಬರೆದಿದ್ದೇನೆ ಓದಿ!
ನಡೆದ್ದಿಷ್ಟೇ, ಅದೊಂದು ರಾತ್ರಿ ನಾವೆಲ್ಲಾ ಇನ್ನು ಮಾತಾಡುತ್ತಿದ್ದೆವು. ಅವನಿಗೆ ಕಣ್ಣು ಬಿಡಿಸಲಾರದಷ್ಟು ನಿದ್ದೆ ಬಂದಿದ್ದರೂ, ಮಲಗದೇ ನಾವು ಏನು ಮಾತಾಡುತ್ತಿವೋ ಎನ್ನುವ ಕುತೂಹಲದಿಂದ ಕಣ್ಣುಗಳು ಮುಚ್ಚಿಕೊಂಡು ಹೋಗುತ್ತಿದ್ದರೂ ಮತ್ತೆ ಮತ್ತೆ ಎಚ್ಚರ ಮಾಡಿಕೊಳ್ಳುತ್ತಿದ್ದ. ಇದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ಅವನು ತುಂಬಾ ಚೇಷ್ಟೆ ಮಾಡುತ್ತಿದ್ದಾಗ, ಮಲಗು ಎಂದು ಎಷ್ಟು ಹೇಳಿದರೂ ಕೇಳದೆ ಆಟ ಆಡುತ್ತಿದ್ದ ಅವನ್ನು ಕುರಿತು ಅವನ ತಾಯಿ, ಹೀಗೆಲ್ಲ ತುಂಟಾಟ ಆಡಿ ಗೋಳು ಹುಯ್ದುಕೊಳ್ಳುವುದರ ಬದಲು ನೀವೆಲ್ಲ ಓದುವ ಹುಡುಗರು ಜೀವನದಲ್ಲಿ ಏನು ಸಾಧಿಸಬೇಕೆನ್ನುವ ಧ್ಯೇಯ ಹೊಂದಿ ಗುರಿ ಸಾಧಿಸಬೇಕು ಎಂದು ಹೇಳುತ್ತಿರಲು ನಾನು ಆಗ ಅವನನ್ನು ನಿನಗೆ ಏನಾಗಬೇಕು ಎನ್ನುವ ಆಸೆ ಇದೆ ಎಂದು ಕೇಳಿದ್ದಕ್ಕೆ ಅವನು ಉತ್ತರಿಸುವ ಮುಂಚೆ ನನ್ನ ತಾಯಿ ಅವನು ಪೋಲಿಸ್ ಆದ್ರೆ ಚೆನ್ನಾಗಿರುತ್ತೆ, ನನ್ನ ಮೊಮ್ಮಗನ್ನ ಐ ಪಿ ಎಸ್ ಓದಿಸಮ್ಮ ಎಂದು ಹೇಳಿದರು.


ಅದಕ್ಕೆ ಅವನ ತಾಯಿ, ಅಯ್ಯೋ ಈ ಹುಡುಗರು ಪೋಲಿಸ್ ಆಗುವುದಿರಲಿ, ಪೋಲಿಗಳಾಗದೆ ಚೆನ್ನಾಗಿ ಓದಿ ಒಳ್ಳೆಯವರಾದರೆ ಅಷ್ಟೇ ಸಾಕು ಎಂದು ಹೇಳಿದರು!! ಆಗ ಅದಕ್ಕೆ ಉತ್ತರವಾಗಿ ಅವನು ಸರಿ ಅಜ್ಜಿ ನಾನು ಪೋಲಿಸ್ ಆಗುತ್ತೀನಿ ಆಗ ದೊಡ್ಡ ಸ್ವಿಮ್ಮಿಂಗ್ ಪೂಲ್ ಇರುವ, ದೊಡ್ಡ ಮನೆ ಕಟ್ಟಿಸಿ ನಿನ್ನನ್ನು ಕರೀತೀನಿ ಎಂದು ಹೇಳಿದ್ದ! ಈ ಮಾತಿಗೆ ಅವನ (ನನ್ನ ದೊಡ್ಡಮ್ಮ)ಅಜ್ಜಿ ಹುಸಿ ಮುನಿಸು ತೋರಿಸಿ, ಯಾಕೋ ನಿನ್ನ ಚಿಕ್ಕ ಅಜ್ಜಿ ಮಾತ್ರಾನ? ನಮ್ಮನ್ನೆಲ್ಲ ಯಾರನ್ನೂ ಕರೆಯೋದಿಲ್ವೋ ಎಂದು ಕೇಳಿದರು.

ಅದಕ್ಕವನು ಸರಿ ಎಲ್ಲರನ್ನು ಕರೆಯುತ್ತೇನೆ ಸರಿನಾ....ಅ..ಆ..ಆ..ಆಹ್ ಎಂದು ಆಕಳಿಸಿದನು! ಸರಿ ನೀನಿನ್ನೂ ಮಲುಕ್ಕೊಪ್ಪ ಅಂತ ನಾವೆಲ್ಲಾ ಹೇಳಿದ್ದಕ್ಕೆ ಅವನು ಹೂ...ಹ್ಞೂ, ನ್ಹೋ.... ನೀವೆಲ್ಲ ಮಲಗೊವಾಗಲೇ ನಾನು ಮಲಗೋದು ಎಂದು ಹೇಳಿ ಸ್ವಲ್ಪ ಹೊತ್ತು ಎಚ್ಚರವಾಗಿರಲು ಶತಪ್ರಯತ್ನ ಮಾಡಿದ! ಆಗ ನಾವು ಎಚ್ಚರವಾಗಿರುವವರು, ಎಲ್ಲರ ಕಡೆಯೂ ಒಮ್ಮೆ ಕಣ್ಣು ಹಾಯಿಸಿ, ಯಾರು ಮಲಗಿದ್ದಾರೆ, ಮತ್ತು ಯಾರೆಲ್ಲ ಎಚ್ಚರವಾಗಿದ್ದಾರೆ ಎಂದು ಗಮನಿಸಿದೆವು. ನನ್ನ ದೊಡ್ಡಮ್ಮನಿಗೂ ಕೂಡ ನಿದ್ದೆ ಬರುವುದರಲ್ಲಿತ್ತು! ಆಗ ನಾನು, ನೋಡೋ ನಿನ್ನ ಅಜ್ಜಿಗೂ ನಿದ್ದೆ ಬಂದುಬಿಡ್ತು, ನೀನೂ ಬೇಗ ಮಲಗಿಕೋ ನಾವೂ ಸಹ ಇನ್ನೇನು ಮಲಗುತ್ತೇವೆ ಅಂತ ಹೇಳಿದ ಮೇಲೆ, ಆಯಿತು ಅಂತ ಮಲಗಲು ನಿರ್ಧರಿಸಿ, ಎಲ್ಲರಿಗೂ ಗುಡ್ ನೈಟ್ ಅಂತ ಹೇಳಿದ. ಅವನಿಗೆ ಸ್ವಲ್ಪ ಮೂಗು ಕಟ್ಟಿದ್ದರಿಂದ ಅವನು ಗುಡ್ ನೈಟ್ ಎಂದು ಹೇಳಿದ್ದು ಗುಂಡೇಟು ಅಂತ ನಮಗೆಲ್ಲ ಕೇಳಿಸಿದ್ದು!! ಆಗ ಅರ್ಧಂಬರ್ಧ ಎಚ್ಚರವಾಗಿದ್ದ ದೊಡ್ಡಮ್ಮ ಅವನು ಹೇಳಿದ್ದು ಸರಿಯಾಗಿ ಅರ್ಥಮಾಡಿಕೊಳ್ಳದೆ ನಿದ್ದೆಗಣ್ಣಲ್ಲೇ ಯಾರಿಗೋ ಗುಂಡೇಟು, ಈಗಲೇ ಪೋಲಿಸ್ ಆಗಿಬಿಟ್ಯಾ? ಎಂದು ಕೇಳಿದರು. ಮಿಕ್ಕವರಲ್ಲಿ ಅರ್ಥ ಮಾಡಿಕೊಂಡ ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದೆವು!!!

Monday, May 4, 2009

ಹೀಗೊಂದು ವಿಚಿತ್ರ ಪ್ರೇಮ ಕಥೆ.....ಭಾಗ - ೨

ಮುಂದುವರಿದ ಭಾಗ.......ವಸುಧಾ ಹೊರಟುಹೋದ ಮೇಲೆ ಸ್ವಲ್ಪ ಹೊತ್ತಿನ ನಂತರ ಆದಿತ್ಯ ಆಕಾಶ್ ಗೆ ಫೋನ್ ಮಾಡಿ ವಸುಧಾ ತನ್ನ ಮನೆಗೆ ಬಂದಿದ್ದಳೆಂದು ತಿಳಿಸಿದ. ಮತ್ತೆ ಮುಂದಿನ ವಿಷಯ ಹೇಳುವಷ್ಟರಲ್ಲಿ ಆಕಾಶ್ ಕೇಳಿದ, ಆದಿ ವಸು ನಿನಗೇ ಏನಾದರೂ ಹೇಳಿದ್ಲಾ? ಸಾರೀ ಆದಿ ನಾನು ನಿನಗೊಂದು ವಿಷಯ ತಿಳಿಸಿರಲಿಲ್ಲ, ನಾನಿವತ್ತು...... ಅಂತ ಹೇಳಲು ಶುರು ಮಾಡಿದಾಗ ಆದಿ ಮಧ್ಯದಲ್ಲಿ ಮಾತನಾಡಿ, ಆಕಾಶ್ ನನಗೆ ವಿಷಯ ಎಲ್ಲಾ ಗೊತ್ತಾಯಿತು! ಅದೇ ವಿಷಯವಾಗಿ ಮಾತನಾಡಲು ನಾನು ನಿನಗೆ ಫೋನ್ ಮಾಡಿದ್ದು, ನಾನು ನಿನಗೆ ಒಂದು ವಿಷಯ ಹೇಳದೆ ಮುಚ್ಚಿಟ್ಟಿದ್ದೆ! ಅದೇನೆಂದರೆ ನಾನು ಸಹ ವಸುಧಾಳನ್ನು ಇಷ್ಟಪಡುತ್ತಿದ್ದೆ. ಅದೇ ವಿಷಯ ಅವಳಿಗೆ ತಿಳಿಸಲು ಅವಳನ್ನು ಇಂದು ನಾನು ಮನೆಗೆ ಕರೆದುಕೊಂಡು ಬಂದಿದ್ದೆ! ಎನ್ನುವ ಸುದ್ದಿ ಕೇಳುತ್ತಿದ್ದಂತೆ ಅತ್ತ ಆಕಾಶ್ ಹೌಹಾರಿದ್ದ, ಆಶ್ಚರ್ಯದಿಂದ ಬೆಚ್ಚಿದ. ಒಂದು ಕ್ಷಣ ಏನೂ ಪ್ರತಿಕ್ರಿಯಿಸದೇ ಸುಮ್ಮನಿದ್ದ, ನಂತರ ತನ್ನನು ತಾನು ಸಂಭಾಳಿಸಿಕೊಂಡು ಮುಂದೆ ಏನಾಯಿತು ಎಂದು ಕೇಳಿದಾಗ ಆದಿ ಅವರ ಮನೆಯಲ್ಲಿ ನಡೆದ ಪ್ರಸಂಗವನ್ನೆಲ್ಲಾ ವಿವರವಾಗಿ ಅವನಿಗೆ ಹೇಳಿದ.

ಇತ್ತ ವಸುಧಾ ಯೋಚಿಸಿ ಯೋಚಿಸಿ ತಲೆ ಕೆಡಿಸಿಕೊಂಡಿದ್ದಳು. ಮನೆಯಲ್ಲಿ ಈ ವಿಷಯವನ್ನು ತಿಳಿಸಿದಾಗ, ಎಷ್ಟೆಲ್ಲಾ ಚರ್ಚೆ, ವಾದ ವಿವಾದಗಳು ನಡೆದ ಮೇಲೆ ಅವರೂ ಸಹ ಇದರ ಬಗೆಗಿನ ನಿರ್ಧಾರವನ್ನು ಅವಳ ಮೇಲೆ ಬಿಟ್ಟರು! ನಂತರ ಅವಳು ತನ್ನ ಪರಮಾಪ್ತ ಗೆಳತಿ ಬಿಂದುಳನ್ನು ಭೇಟಿಯಾಗಿ, ಎಲ್ಲಾ ವಿಷಯವನ್ನು ತಿಳಿಸಿದಳು. ಅವಳು ಸಹ ಇವಳೊಂದಿಗೆ ಗಹನವಾಗಿ ಚರ್ಚಿಸಿ, ತನ್ನಿಂದೇನಾದರೂ ಸಹಾಯ ಬೇಕಿದ್ದರೆ ಖಂಡಿತವಾಗಿಯೂ ಮಾಡುವುದಾಗಿ ತಿಳಿಸಿ ಅವಳನ್ನು ಬೀಳ್ಕೊಟ್ಟಳು. ಆಫೀಸಿನಲ್ಲಿ ವಿಷಯ ಗೊತ್ತಾದ ಹೊಸತರಲ್ಲಿ ಎಲ್ಲರೂ ಇವಳನ್ನು, ಸ್ನೇಹಾನಾ? ಪ್ರೀತಿನಾ? ಎಂದು ಚುಡಾಯಿಸುತ್ತಿದ್ದರು. ನಂತರದಲ್ಲಿ ವಿಷಯ ಗಂಬೀರವಾದ್ದರಿಂದ ಯಾರೂ ಜಾಸ್ತಿ ಅವಳನ್ನು ಕೆಣಕದೆ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು.
ಮೊದಮೊದಲು ಆಕಾಶ್ ಮನೆಯವರು ಅವನಿಗೆ, ನೀನೇ ಮೊದಲು ಪ್ರಪೋಸ್ ಮಾಡಿದ್ದರಿಂದ ನಿನ್ನನ್ನೇ ಅವಳು ಒಪ್ಪಿಕೊಳ್ಳಬೇಕು. ಅದಕ್ಕೆ ನೀನೇ ಅವಳನ್ನು ಬಿಡದೆ ಒಪ್ಪಿಸಬೇಕು ಎಂದು ತುಂಬಾ ಒತ್ತಡ ಹೇರುತ್ತಿದ್ದರು. ಆದರೆ ನಂತರದಲ್ಲಿ ಅವರೂ ಸಹ ಅವಳ ಇಷ್ಟಕ್ಕೆ ವಿರುದ್ಧವಾಗಿ ಏನೂ ಮಾಡಲು ಆಗುವುದಿಲ್ಲ ಎಂದು ತಿಳಿದು ಸುಮ್ಮನಾದರು. ಈಗ ಎಲ್ಲರ ಕೇಂದ್ರ ಬಿಂದು ವಸುಧಾಳೆ ಆಗಿದ್ದಳು. ಎಲ್ಲರಿಗೂ ಕುತೂಹಲವೋ ಕುತೂಹಲ!!!!!


ವಸುಧಾ ಈ ಎಲ್ಲದರ ನಡುವೆ ಒಮ್ಮೆ ಅವರಿಬ್ಬರನ್ನೂ ಒಂದು ಏಕಾಂತ ಸ್ಥಳದಲ್ಲಿ ಭೇಟಿಯಾಗಿ, ಅವರಿಗೆ ಸ್ನೇಹ, ಸ್ನೇಹವಾಗೆ ಇರಲಿ ಇದಕ್ಕೆ ಯಾವುದೇ ಸಂಭಂಧಗಳ ಪಟ್ಟಿ ಹಚ್ಚುವುದು ಬೇಡ ಎಂದು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಳು. ಆಗ ಅವಳ ಗೆಳತಿ ಬಿಂದುಳನ್ನು ತನ್ನ ಪರವಾಗಿ ಮಾತನಾಡುವಂತೆ ಕೋರಿ ಅವಳ ಸಹಾಯ ಪಡೆದಿದ್ದಳು. ಅದಕ್ಕೆ ಉತ್ತರವಾಗಿ ಅವರುಗಳು, ನಮ್ಮದು ಗಾಡವಾದ ಸ್ನೇಹ ಎಂದು ನಮ್ಮ ಮನಸ್ಸುಗಳಿಗೂ ಗೊತ್ತಿತ್ತು. ಆದರೆ ಈ ಮನಸ್ಸು ಬದಲಾಗುವುದು ಕೆಲವೊಮ್ಮೆ ನಮ್ಮ ಹಿಡಿತದಲ್ಲಿರುವುದಿಲ್ಲ. ಇಷ್ಟಕ್ಕೂ ಇದು ನೆನ್ನೆ, ಮೊನ್ನೆ ನಿನ್ನನ್ನು ನೋಡಿ ಆಕರ್ಷಿತರಾಗಿ ಹುಟ್ಟಿ ಬಂದ ಹುಸಿ ಪ್ರೀತಿಯಲ್ಲ. ಒಂದು ವೇಳೆ ಇದು ಆಕರ್ಷಣೆಯೇ ಆಗಿದ್ದರೂ ಅದು ಆಂತರಿಕ ಆಕರ್ಷಣೆಯೇ ವಿನಃ ಬಾಹ್ಯವಾದುದಲ್ಲಾ! ಎಂದು ಹೇಳಿ ಅವಳನ್ನು ಒಪ್ಪಿಸುವ ಸಾಹಸ ಮಾಡುತ್ತಿದ್ದರು. ಸರಿ ಇಷ್ಟೆಲ್ಲಾ ವಾದ, ಚರ್ಚೆ ನಡೆದ ನಂತರ ವಸು ಯೋಚಿಸಲು ಎರಡು ದಿನ ಸಮಯ ಬೇಕೆಂದು ನಂತರ ತನ್ನ ಅನಿಸಿಕೆ ಹೇಳುವುದಾಗಿ ತಿಳಿಸಿ ಗೆಳತಿಯೊಡನೆ ಅಲ್ಲಿಂದ ಹೊರಟಳು.ಹೇಳಿದಂತೆ ಸರಿಯಾಗಿ ಎರಡು ದಿನಗಳ ನಂತರ ಅವಳು ಅವರಿಬ್ಬರಿಗೂ ಒಂದು ಆಶ್ಚರ್ಯಕರವಾದ ಸುದ್ದಿ ತಿಳಿಸಿದಳು! ಅದೇನೆಂದರೆ ಮುಂದಿನ ವಾರಾಂತ್ಯದ ರಜೆಗೆ ನಾವು ನಾಲ್ವರೂ (ಆಕಾಶ್, ವಸುಧಾ, ಆದಿತ್ಯ ಮತ್ತು ಬಿಂದು.) ಗೋವಾಗೆ ಹೋಗೋಣ ಅಲ್ಲಿ ನನ್ನ ಮನಸ್ಸಿನ ವಿಚಾರ ನಿಮಗೆ ತಿಳಿಸುತ್ತೇನೆ ಎಂದು ಹೇಳಿದಳು. ಈ ವಿಷಯ ಹೆಚ್ಚು ಹೊತ್ತು ಗುಟ್ಟಾಗಿ ಉಳಿಯಲಿಲ್ಲ! ಆಫೀಸಿನಲ್ಲಿ ಕಾಳ್ಗಿಚ್ಚಿನಂತೆ ಎಲ್ಲರಿಗೂ ಈ ಸುದ್ದಿ ಕ್ಷಣದಲ್ಲಿ ಹರಡಿಬಿಟ್ಟಿತು!! ಮತ್ತೆ ಈ ವಿಷಯ ಕೂಡ ಬಾಸ್ ವರೆಗೂ ತಲುಪುವುದಕ್ಕೆ ತಡವಾಗಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಬಾಸ್ ವಸುಧಾಳನ್ನು ತನ್ನ ಚೇಂಬರ್ ಗೆ ಬರುವಂತೆ ಹೇಳಿಕಳುಹಿಸಿದ್ದರು. ಎಕ್ಸ್ಕ್ಯೂಸ್ ಮಿ ಸರ್......... ಬರಲು ಹೇಳಿದ್ದಿರಂತೆ ಎಂದು ತಲೆ ಬಗ್ಗಿಸಿ ನಿಂತಳು. ಹೌದು ವಸುಧಾ ಬನ್ನಿ ಕುಳಿತುಕೊಳ್ಳಿ ಎಂದು ಬಾಸ್ ಹೇಳಿದಾಗ, ಪರವಾಗಿಲ್ಲ ಸರ್ ಏನು ವಿಷಯಾಂತ ಹೇಳಿ ಸರ್ ಎಂದು ಕೇಳಿದಳು. ವಸುಧಾ ನಾನು ನಿಮ್ಮ ಖಾಸಗಿ ವಿಷಯವನ್ನು ವಿಚಾರಿಸುತ್ತಿದ್ದೆನೆಂದು ತಪ್ಪಾಗಿ ಭಾವಿಸಬೇಡಿ. ನಾನು ಅನಿವಾರ್ಯವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕಿದೆ. ಅದೂ ನಿಮಗಿಷ್ಟವಿದ್ದರೆ ಹೇಳಿ, ಇಲ್ಲದಿದ್ದರೆ ನನ್ನಿಂದ ನಿಮಗೆ ಯಾವ ರೀತಿಯ ಒತ್ತಡ ಹಾಗು ಬಲವಂತ ಇರುವುದಿಲ್ಲ, ಹೇಳಲು ಇಷ್ಟವಿಲ್ಲದಿದ್ದರೆ ನಿಮ್ಮ ಪಾಡಿಗೆ ನೀವು ಈ ಚೇಂಬರ್ನಿಂದ ಆಚೆ ಹೋಗಬಹುದು! ಎಂದು ಹೇಳಿದಾಗ ಅವಳು ಸಾರ್ ನನಗೆ ಉತ್ತರ ಕೊಡಲು ಸಾಧ್ಯವಾದರೆ ಖಂಡಿತ ಹೇಳುತ್ತೇನೆ ಎಂದು ಹೇಳಿದಳು. ಆಫೀಸಿನಲ್ಲಿ, ನಡೆಯುತ್ತಿರುವ ಚರ್ಚೆ ಮತ್ತು ನನ್ನ ಕಿವಿಗೆ ತಲುಪಿದ ವಿಷಯ ನಿಜವೇ? ಏನು ನಡಿತಾ ಇದೆ ಇಲ್ಲಿ? ಎಂದು ಬಾಸ್ ಕೇಳಿದಾಗ ವಸುಧಾ ಸೂಕ್ಷ್ಮವಾಗಿ ಎಲ್ಲಾ ವಿಷಯವನ್ನು ನೇರವಾಗಿ ತಿಳಿಸಿದಳು. ಓಹ್ ಇದಂತೂ ಬಹಳ ಕ್ಲಿಷ್ಟಕರವಾದ ಸಮಸ್ಯೆ! ಹೇಗೆ ಇತ್ಯರ್ಥ ಮಾಡುವಿರೋ ತಿಳಿಯದಾಗಿದೆ, ನನ್ನಿಂದ ಏನಾದರೂ ಸಹಾಯ ಬಯಸುವುದಿದ್ದರೆ ತಿಳಿಸಿ ಎಂದು ಹೇಳಿದ್ದಕ್ಕೆ ಅವಳು ಸರಿ ಎನ್ನುವಂತೆ ತಲೆಯಾಡಿಸಿದ್ದಳು.ಎರಡು ದಿನ ಕಳೆದ ಮೇಲೆ ವಸುಧಾ ಒಂದು ರೀತಿ ಸಂತೋಷವಾಗಿರುವಂತೆ ಕಾಣುತ್ತಿದ್ದಳು. ಆ ದಿನ ಆಫೀಸಿನಲ್ಲಿ ಅವಳೇ ಸ್ವತಹ ಬಾಸ್ ನ ಚೇಂಬರ್ ಗೆ ಮಾತನಾಡಲೆಂದು ಹೋದಳು. ಒಳಗೆ ಹೋಗುತ್ತಿದ್ದಂತೆ ಗುಡ್ ಮಾರ್ನಿಂಗ್ ಸರ್ ಎಂದಳು. ಬಾಸ್ ಯಾರೊಂದಿಗೋ ಫೋನಲ್ಲಿ ಮಾತನಾಡುತ್ತಿದ್ದರಿಂದ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಎರಡು ನಿಮಿಷಗಳ ಬಳಿಕ ಮಾತು ಮುಗಿಸಿ, ಇವಳ ಕಡೆಗೆ ನೋಡುತ್ತಾ ಹಲೋ ವಸುಧಾ ಐ ಆಮ್ ಸಾರೀ......, ಹೇಳಿ ಏನಾಗಬೇಕಿತ್ತು? ಪರವಾಗಿಲ್ಲ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು ಅದಕ್ಕೆ ಬಂದೆ. ಹೌದಾ, ಸರಿ ಹೇಳಿ ನಿಮ್ಮ ಆಯ್ಕೆಯಲ್ಲಿ ಏನಾದರೂ ಇತ್ಯರ್ಥ ಮಾಡಿಕೊಂಡಿದ್ದೀರ? ಯಾರು ಆ ಭಾಗ್ಯಶಾಲಿ ಎಂದು ಯಾವಾಗ ತಿಳಿಯುವುದು, ನಮಗೆಲ್ಲಾ ನಿಮ್ಮ ಮದುವೆಯ ಊಟ ಹಾಕಿಸುವುದು ಯಾವಾಗ? ಎಂದು ಪ್ರಶ್ನೆಗಳ ಮಳೆ ಸುರಿಸಿದರು! ಅದಕ್ಕೆ ಸಂಭಂದಿಸಿದ ವಿಷಯವಾಗೆ ಮಾತನಾಡಲು ಬಂದೆ! ಯಾರೆಂಬುದು ಈಗಲೇ ಹೇಳಲಾಗುವುದಿಲ್ಲ ಎಂದು ತಿಳಿಸುತ್ತ ಅವರ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಿದ್ದಳು. ಹೀಗೆ ಸ್ವಲ್ಪ ಹೊತ್ತು ಅವರ ನಡುವೆ ಮಾತು ಸಾಗಿತ್ತು. ಅವಳ ಕೋರಿಕೆಯನ್ನು ಬಾಸ್ ಒಪ್ಪಿಕೊಂಡಮೇಲೆ ಒಂದು ನಿಟ್ಟುಸಿರು ಬಿಟ್ಟಳು. ನಂತರ ಅವರಿಗೆ ಥ್ಯಾಂಕ್ಸ್ ಹೇಳಿ ಹೊರಡುವುದರಲ್ಲಿದ್ದಳು. ವಸುಧಾಳೊಂದಿಗೆ ಮಾತನಾಡುತ್ತಿರುವಾಗ, ಅವಳು ಸಂತೋಷವಾಗಿರುವುದನ್ನು ಗಮನಿಸಿದ ಬಾಸ್ ಗೆ ಸ್ವಲ್ಪ ಚುಡಾಯಿಸುವ ಮನಸ್ಸಾಯಿತು! ಆಗ ಅವರು, ವಸುಧಾ ಅವರಿಬ್ಬರಲ್ಲಿ ಯಾರನ್ನು ಒಪ್ಪಿಕೊಳ್ಳುವುದು ಎಂದು ನಿಮಗೆ ನಿರ್ಧರಿಸಲು ಕಷ್ಟವಾದರೆ, ನನ್ನ ಮಾತು ಕೇಳಿ..... (ಎನ್ನುತ್ತಿರುವಾಗ, ಏನು ಎನ್ನುವಂತೆ ಬಾಸ್ ನ ಮುಖವನ್ನೇ ನೋಡುತ್ತಿದ್ದಳು) ನೀವು ಅವರಿಬ್ಬರನ್ನು ಬಿಟ್ಟುಬಿಡಿ! ನನ್ನನ್ನು ಮದುವೆಯಾಗುವುದಾದರೆ ಹೇಳಿ ನಾನಂತೂ ರೆಡಿ!! ಎಂದು ಹೇಳಿದಾಗ ಬಾಸ್ ನ ತಮಾಷೆಯನ್ನು ಅರಿತ ಅವಳು ಹೀಗೆಂದಳು, ಸಾರ್..... ಆಯಿತು ಬಿಡಿ ನಾನು ಸಿದ್ದವಾಗಿದ್ದೇನೆ! ಈ ವಿಷಯವಾಗಿ ನಿಮ್ಮ ಮನೆಗೆ ಬಂದು ನಿಮ್ಮ ಶ್ರೀಮತಿಯವರ ಒಪ್ಪಿಗೆಯೂ ಕೇಳುತ್ತೇನೆ ಸರಿನಾ! ಓಹ್ ಮನೆವರೆಗೂ ಯಾಕೆ ಇರಿ ಈಗಲೇ ಫೋನ್ ಮಾಡಿ ವಿಷಯ ತಿಳಿಸುತ್ತೇನೆ ಎನ್ನುತ್ತಾ ರಿಸಿವೆರ್ ಮೇಲೆ ಕೈ ಇಟ್ಟಳು ಒಳಗೊಳಗೇ ನಗುತ್ತಾ! ಆಗ ಅವಳ ಬಾಸ್ ಬೆಚ್ಚಿದಂತೆ ಮಾಡಿ, ಓಹ್ ಗಾಡ್! ಹಾಗೆಲ್ಲಾದರೂ ಮಾಡಿಬಿಟ್ಟಿರಾ ಮತ್ತೆ, ನಾವು ನಿಮ್ಮ ಮದುವೆಯ ಊಟ ಮಾಡೋ ಬದಲು ನೀವೆಲ್ಲಾ ನನ್ನ ತಿಥಿ ಊಟ ಮಾಡಬೇಕಾಗುತ್ತೆ ಅಷ್ಟೇ ಎಂದು ಹೇಳಿದಾಗ ಅವಳು ಜೋರಾಗಿ ನಕ್ಕುಬಿಟ್ಟಳು, ಇವರೂ ಸಹ ಅವಳೊಟ್ಟಿಗೆ ನಗುತ್ತಿದ್ದರು! ಅವರಿಬ್ಬರ ಈ ನಗು ಹೊರಗಿನವರಿಗೂ ಕೇಳಿಸುವಂತಿತ್ತು! ಬಹಳ ಚತುರೆ ನೀವು ಎಂದು ಬಾಸ್ ಹೇಳಿದಾಗ ಸಾರೀ ಸರ್ ಕ್ಷಮಿಸಿ ತಮಾಷೆಗಾಗಿ ......ಎನ್ನುವಾಗ, ಅವರು ಪರವಾಗಿಲ್ಲ ವಸುಧಾ ನನಗೆ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತು ಆದರೂ ನಿಮ್ಮನ್ನು ನಗಿಸೋಣವೆಂದು ಸ್ವಲ್ಪ ನಾಟಕ ಆಡಿದೆ ಅಷ್ಟೇ! ಇದರಿಂದ ನಿಮಗೇನಾದರೂ ಬೇಸರವಾಗಿದ್ದರೆ........ ಎನ್ನುತ್ತಿರುವಾಗ, ಅಯ್ಯೋ ಸರ್ ಹಾಗೇನಿಲ್ಲ ಪ್ಲೀಸ್ ಎಂದು ಮತ್ತೆ ನಕ್ಕಿದರು. ಸರಿ ಸಾರ್ ನಾನಿನ್ನು ಹೊರಡುತ್ತೀನಿ ಮತ್ತೊಮ್ಮೆ ನಿಮಗೆ ಧನ್ಯವಾಧಗಳು ಎಂದವಳು ಹೇಳಿದಾಗ, ಬಾಸ್ ಅವಳಿಗೆ, ಓಕೆ ವಸುಧಾ ನಿಮ್ಮ ಪ್ರಯಾಣಕ್ಕೆ ಮತ್ತು ನಿಮ್ಮ ಆಯ್ಕೆಗೆ ನನ್ನ ಶುಭಕಾಮನೆಗಳು! ಯಾವುದೇ ಅನರ್ಥಕ್ಕೆ, ಅನಾಹುತಕ್ಕೆ ಎಡೆ ಮಾಡಿಕೊಡದೆ ಕ್ಷೇಮವಾಗಿ ಹೋಗಿಬನ್ನಿ. ನಿಮ್ಮ ನಿರ್ಣಯ ತಿಳಿಯಲು ನಾವೆಲ್ಲಾ ಕಾಯುತ್ತಿರುತ್ತೇವೆ!! ಹಾಗೆ ಆಕಾಶ್ ಮತ್ತು ಆದಿತ್ಯ ಅವರಿಗೂ ಹೊರಡುವ ಮುಂಚೆ ನನ್ನನ್ನು ಭೇಟಿಯಾಗಲು ತಿಳಿಸಿ ಎಂದು ಅವಳನ್ನು ಕಳಿಸಿಕೊಟ್ಟರು. ನಂತರದಲ್ಲಿ ಆಕಾಶ್ ಮತ್ತು ಆದಿತ್ಯ ಸಹ ಅವರನ್ನು ಭೇಟಿಯಾದರು.ವಸುಧಾಳ ಯೋಜನೆಯಂತೆ ವಾರಾಂತ್ಯದ ರಜೆಗೆ, ಅವರು ನಾಲ್ಕೂ ಜನ ಗೋವಾಕ್ಕೆ ಬಂದರು. ಬೆಳಗಿನ ತಿಂಡಿ ಮುಗಿಸಿ ಎಲ್ಲರೂ ಬೀಚ್ ಬಳಿ ಹೋದರು. ಅವರು ಬೀಚ್ ಹತ್ತಿರದ ಹೋಟೆಲ್ನಲ್ಲಿಯೇ ತಂಗಿದ್ದರು ಆದ್ದರಿಂದ ಕಾಲ್ನಡಿಗೆಯಲ್ಲೇ ನಿಧಾನವಾಗಿ ಮಾತನಾಡುತ್ತಾ ನಡೆದು ಬಂದು ಒಂದು ಸ್ಥಳದಲ್ಲಿ ನಿಂತು ಸುತ್ತಲೂ ನೋಡಿದರು! ನೋಡಿದಷ್ಟು ಉದ್ದಗಲಕ್ಕೂ ಜನ ಜಂಗುಳಿ ಇತ್ತು. ವಸುಧಾ ಸ್ವಲ್ಪ ಪ್ರಶಾಂತವಾದ ಜಾಗ ಹುಡುಕಿ ಅಲ್ಲಿ ಹೋಗೋಣ ಎಂದದ್ದಕ್ಕೆ, ಎಲ್ಲರೂ ಒಪ್ಪಿ ಇನ್ನಷ್ಟು ದೂರ ನಡೆದು ಒಂದು ಜಾಗ ತಲುಪಿದರು. ಅಲ್ಲಿ ದೂರದಲ್ಲಿ ಮರಗಳೆಲ್ಲಾ ಇದ್ದವು! ಅಲ್ಲಿ ಎಲ್ಲರೂ ಒಮ್ಮೆ ಒಬ್ಬರ ಮುಖ ಒಬ್ಬರು ನೋಡಿಕೊಂಡು ಮೌನವಾಗಿದ್ದರು. ನಂತರ ನಾಲ್ಕೂ ಜನ ನಾಲ್ಕು ದಿಕ್ಕಿಗೆ ಮುಖ ಮಾಡಿ ಯೋಚನೆಯಲ್ಲಿ ಮುಳುಗಿದ್ದರು! ಸ್ವಲ್ಪ ಹೊತ್ತಿನ ನಂತರ ವಸುಧಾಳೆ ಮೌನ ಮುರಿದು ಮಾತಾಡಿದಳು. ಅದೇನೆಂದರೆ, ಆಕಾಶ್, ಆದಿ ನಾವು ಮೂರು ಜನ ಒಳ್ಳೆಯ ಸ್ನೇಹಿತರಾಗಿದ್ದರೂ ನನ್ನನ್ನು ನೀವಿಬ್ಬರೂ ಇಷ್ಟ ಪಡುತ್ತಿರುವ ವಿಷಯದಲ್ಲಿ ನಿಮ್ಮ ನಿಮ್ಮ ಅಭಿಪ್ರಾಯ/ ಭಿನ್ನಾಭಿಪ್ರಾಯ ಏನೇ ಇದ್ದರೂ ನೀವುಗಳು ದೂರಾಗದೆ, ಗೆಳೆತನಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿದ್ದೀರ!!! ನಿಮ್ಮ ಈ ಗುಣವೇ ನನ್ನನ್ನು ನಿಮ್ಮ ಬಗ್ಗೆ ಯೋಚಿಸುವಂತೆ ಮಾಡಿದ್ದು. ಈಗಲೂ ಕಾಲ ಮಿಂಚಿಲ್ಲ ನೀವಿಬ್ಬರೂ ನಿಮ್ಮ ಮನಸ್ಸು ಬದಲಾಯಿಸಿಕೊಳ್ಳಿ ಅಥವಾ ಮತ್ತೊಮ್ಮೆ ಚೆನ್ನಾಗಿ ಆಲೋಚಿಸಿ, ಅವಲೋಕಿಸಿ ಒಂದು ತೀರ್ಮಾನಕ್ಕೆ ಬನ್ನಿ, ನಾನು ನಿಮ್ಮಿಬ್ಬರಲ್ಲಿ ಯಾರಿಗೆ ಜೀವನ ಸಂಗಾತಿಯಾಗಿ ಬರಬೇಕು ಎಂದು. ಮತ್ತು ನಾನು ಸಹ ಒಂದು ನಿರ್ಧಾರಕ್ಕೆ ಬಂದಿರುತ್ತೇನೆ. ನೀವುಗಳು ಯಾರೇ ತ್ಯಾಗ ಮಾಡಿದರೂ, ಕೊನೆಗೆ ನನ್ನ ನಿರ್ಣಯವೇ ಅಂತಿಮವಾದದ್ದು, ಇದರಲ್ಲಿ ಯಾರಿಗಾದರೂ ಬೇಸರವಾದರೆ ಅಥವಾ ಮನಸಿಗೆ ಕಷ್ಟವಾದರೆ ನಾನಂತೂ ಹೊಣೆ ಅಲ್ಲಾ! ಆದ್ದರಿಂದ ಈಗಲೇ ಇನ್ನಷ್ಟು ಸಮಯ ತೆಗೆದುಕೊಂಡು, ಒಬ್ಬರಿಗೊಬ್ಬರು ಮಾತಾಡಿಕೊಂಡು ಯಾವುದಕ್ಕೂ ತಯಾರಾಗಿಬನ್ನಿ ಎಂದು ಹೇಳಿದಳು.ಅವಳು ಹಾಗೆ ಹೇಳಿದ ಮೇಲೆ ಅವರಿಬ್ಬರೂ, ನಾವು ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬರುತ್ತೇವೆ, ಅಲ್ಲಿವರೆಗೂ ನೀವು ಇಲ್ಲೇ ಇರಿ ಎಂದು ಹೇಳಿ ಆಕಾಶ್ ಮತ್ತು ಆದಿತ್ಯ ಹೊರಟುಹೋದರು. ಅವರು ಹೋದ ಕೆಲ ಸಮಯದ ನಂತರ ವಸುಧಾಳ ಕಣ್ಣುಗಳು ಅವರಿಬ್ಬರಿಗಾಗಿ ಹುಡುಕಾಡಿದವು! ಅವಳ ನೋಟದ ಪರಿಧಿಯಲ್ಲಿ ಅವರುಗಳು ಕಾಣದಿದ್ದುದರಿಂದ ಅವಳಿಗೆ ಒಂದು ಕ್ಷಣ ಆತಂಕವಾಯಿತು!! ವಸುಧಾಳ ಆತಂಕವನ್ನು ಗಮನಿಸಿದ ಬಿಂದು, ಸೂಕ್ಷ್ಮವಾಗಿ ಮೊದಲೇ ಅವಳಿಂದ ಅವಳ ನಿರ್ಧಾರವನ್ನು ತಿಳಿದುಕೊಂಡಿದ್ದರಿಂದ ಅವಳನ್ನು ಕುರಿತು, ವಸುಧಾ ನೀನು ಇನ್ನೊಮ್ಮೆ ಸರಿಯಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದೆಂದು ನನ್ನ ಅನಿಸಿಕೆ! ಎನ್ನುವ ಗೆಳತಿಯ ಮಾತಿಗೆ ವಸುಧಾ, ಬಿಂದು ನನ್ನ ಆಲೋಚನೆಗಳನ್ನೆಲ್ಲಾ ನಿನ್ನ ಮುಂದೆ ಬಿಚ್ಚಿ ಇಟ್ಟಿದ್ದೇನೆ, ಇದಕ್ಕೆ ನೀನೂ ಕೂಡ ಸಮ್ಮತಿಸಿದ್ದೆ! ಈಗ ಯಾಕೆ ಮತ್ತೆ ನನ್ನ ಮನಸ್ಸನ್ನು ತಟ್ಟುತ್ತಿದ್ದೀಯಾ? ಇನ್ನು ನನ್ನ ನಿರ್ಣಯ ಬದಲಿಸುವ ಪ್ರಶ್ನೆಯೇ ಇಲ್ಲ, ನೋಡೋಣ ಅವರಿಬ್ಬರೂ ಬಂದು ಏನು ಹೇಳುವರೋ ಎಂದು ಗೆಳತಿಯನ್ನು ಸಮಾಧಾನಿಸುತ್ತಿದ್ದಳು.
ಸರಿ ವಸು ನೀನು ಎಷ್ಟೆಲ್ಲ ವಿಚಾರ ಮಾಡಿ, ಇಷ್ಟು ಒಳ್ಳೆಯ ನಿರ್ಣಯ ತೆಗೆದುಕೊಂಡಿದ್ದೀಯಾ! ನಿನ್ನ ಸಂತೋಷವೇ ನನ್ನ ಸಂತೋಷ! ಇನ್ನು ಇದರ ವಿಷಯವಾಗಿ ನಾನು ನಿನಗೆ ಹೆಚ್ಚಿಗೆ ತಲೆಕೆಡಿಸುವುದಿಲ್ಲ. ಅವರಿಬ್ಬರೂ ಇನ್ನೂ ಬಂದಿಲ್ಲ, ಅವರು ಬರುವುದರೊಳಗೆ ನಾನು ಐಸ್ ಕ್ರೀಂ ಅಥವಾ ಕೂಲ್ ಡ್ರಿಂಕ್ಸ್ ಕೊಂಡುತರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟಳು.ಬಿಂದು ಆ ಕಡೆ ಹೋದ ನಂತರ ಇತ್ತ ವಸುಧಾ, ಸಮುದ್ರ ಕಾಣುವಷ್ಟು ದೂರದಲ್ಲಿ ದೃಷ್ಟಿ ನೆಟ್ಟು ನೋಡುತ್ತಾ ತನ್ನ ಗೆಳತಿ ಹೇಳಿದ ವಿಷಯದ ಬಗ್ಗೆ ಮತ್ತೊಮ್ಮೆ ಯೋಚಿಸುತ್ತಾ ನಿಂತಿದ್ದಳು. ತಾನು ತೆಗೆದುಕೊಂಡಿರುವ ನಿರ್ಧಾರ ಸರಿಯಾದುದೆಂದು ಅದನ್ನು ಯಾವುದೇ ಕಾರಣಕ್ಕೂ ಬದಲಿಸುವ ಅವಶ್ಯಕತೆ ಇಲ್ಲವೆಂದು ಅವಳ ಒಳ ಮನಸ್ಸು ಅವಳಿಗೆ ಸಾರಿ, ಸಾರಿ ಹೇಳುತ್ತಿತ್ತು. ಅವಳು ತನ್ನ ಮನಸ್ಸಿನ ನಿರ್ಧಾರದ ಚಿತ್ರಣವನ್ನು ಊಹಿಸಿಕೊಳ್ಳುತ್ತಿರುವಾಗ, ಸಮುದ್ರದ ಅಲೆಗಳು ಅವಳ ಪಾದಗಳ ಮೇಲೆ ಹಾಯ್ದು, ಮುತ್ತಿಟ್ಟು ಹಿಂದಿರುಗುವಾಗ ಅವಳನ್ನು ತಮ್ಮೊಂದಿಗೆ ಸೆಳೆದುಕೊಂಡು ಹೋಗುವ ಅನುಭವಕ್ಕೆ ಅವಳು ಪುಳಕಿತಳಾಗಿದ್ದಳು!!!ಕೆಲ ನಿಮಿಷಗಳ ನಂತರ ಅವರಿಬ್ಬರೂ ಒಬ್ಬರ ಹೆಗಲ ಮೇಲೆ ಒಬ್ಬರು ಕೈ ಹಾಕಿಕೊಂಡು, ಕುಣಿಯುತ್ತಾ, ಜಿಗಿಯುತ್ತಾ, ಕೇಕೆ ಹಾಕುತ್ತಾ ಅವಳಿರುವಲ್ಲಿಗೆ ಬಂದರು. ಅವಳ ಮುಂದೆ ನಿಂತ ಅವರಿಬ್ಬರೂ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುತ್ತಾ ಕಣ್ಣಿನಲ್ಲೇ ಸನ್ನೆ ಮಾಡಿಕೊಳ್ಳುತ್ತಿದ್ದರು. ವಸುಧಾ ಆಶ್ಚರ್ಯವಾಗಿ ಅವರಿಬ್ಬರ ಮುಖವನ್ನೇ ನೋಡುತ್ತಿದ್ದಳು ಪ್ರಶ್ನಾರ್ಥಕವಾಗಿ! ಆಗ ಅವರು ಒಟ್ಟಿಗೆ ಮಾತನಾಡುತ್ತಾ ವಸು ನಾವು ಏನೇ ತೀರ್ಮಾನ ತೆಗೆದುಕೊಂಡಿದ್ದರೂ, ಅದನ್ನು ನೀನು ತುಂಬು ಹೃದಯದಿಂದ ಸ್ವಾಗತಿಸುತೀಯ? ಎಂದು ಕೇಳಿದರು. ಅವಳು ಒಳಗೊಳಗೇ ಮುಸಿಮುಸಿ ನಗುತ್ತಾ ಅದೇನಿದ್ದರೂ ನನಗೆ ಒಪ್ಪಿಗೆಯೇ ಎಂದು ತಿಳಿಸಿದಳು. ಆಗ ಅವರಿಬ್ಬರೂ ಅವಳ ಅಕ್ಕಪಕ್ಕದಲ್ಲಿ ಬಂದು ನಿಂತು ಒಟ್ಟಿಗೆ ಇಬ್ಬರೂ ಅವಳ ಸೊಂಟದ ಮೇಲೆ ಕೈ ಹಾಕಿ, ಮೇಲೆತ್ತಿ ಅವಳನ್ನು ಸುತ್ತಿಸುತ್ತಿದ್ದರು. ಆಗ ವಸುಧಾ ಕೂಡ ನಿಧಾನವಾಗಿ ಅವರಿಬ್ಬರ ಭುಜಗಳ ಮೇಲೆ ಕೈ ಹಾಕಿ ಕಿಲಕಿಲ ನಗುತ್ತಾ ಆಕಾಶ್..... ಆದಿ ಐ ಲವ್ ಯು ಬೋಥ್ ಎಂದು ಕೂಗುತ್ತಿದ್ದಳು!!!!! ಈ ದೃಶ್ಯವನ್ನು ಸ್ವಲ್ಪ ದೂರದಲ್ಲಿ ಬರುತ್ತಿದ್ದ ಬಿಂದು ನೋಡಿ ಅವಳೂ ಸಹ ಚಪ್ಪಾಳೆ ಹೊಡೆಯುತ್ತಾ, ಸಂತೋಷದಿಂದ ವಸುಧಾ ಯು ಆರ್ ಲಕ್ಕಿ ಎಂದು ಚೀರುತ್ತಾ ಓಡೋಡಿ ಬಂದಳು!!!!!

ಇನ್ನೂ ಸ್ವಲ್ಪ ಸಾರಾಂಶ ಇದೆ ಅದನ್ನು ಮೂರನೇ/ಕೊನೆ ಭಾಗದಲ್ಲಿ ಪ್ರಕಟಿಸುತ್ತೇನೆ. ಸಹಕರಿಸಿ!!

Friday, May 1, 2009

ಹೀಗೊಂದು ವಿಚಿತ್ರ ಪ್ರೇಮ ಕಥೆ....!

ಸ್ನೇಹಿತರೆ, ಈ ಕಥೆ ನನ್ನ ತುಂಟ ಮನಸ್ಸಿನ ಒಂದು ತುಂಟ ಕಲ್ಪನೆ! ಇದರಲ್ಲಿ ಯಾವುದಾದರು ವಸ್ತು, ವ್ಯಕ್ತಿ ಅಥವಾ ವಿಷಯ ಹೋಲಿಕೆಯಾದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ!!


ಆಕಾಶ್, ವಸುಧಾ(ಹುಡುಗಿ) ಮತ್ತು ಆದಿತ್ಯ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು! ಇವರ ಮೂವರ ಗೆಳೆತನ ಎಷ್ಟು ಗಾಢವಾದುದೆಂದರೆ, ಆಫೀಸಿನ ಇತರರಿಗೂ ಇವರನ್ನು ಕಂಡರೆ ಹೊಟ್ಟೆಕಿಚ್ಚು/ಅಸೂಯೆ ಉಂಟಾಗುತ್ತಿತ್ತು! ಹೀಗಿರುವಾಗ, ನಿಧಾನವಾಗಿ ಇವರ ಗೆಳೆತನ ಇಷ್ಟ/ಪ್ರೀತಿಗೆ ತಿರುಗುತ್ತಿತ್ತು. ಈ ವಿಷಯ ಆಫೀಸಿನವರಿಗೆಲ್ಲಾ ತಿಳಿಯುತ್ತಾ ಹೋದಂತೆ, ಎಲ್ಲರಿಗೂ ಕುತೂಹಲ ಹುಟ್ಟಿತು. ಆಕಾಶ್ ಮತ್ತು ಆದಿತ್ಯ ಇಬ್ಬರೂ ವಸುಧಳನ್ನು ಇಷ್ಟಪಡುತ್ತಿದ್ದಾರಂತೆ, ಆದರೆ ವಸುಧಾ ಇವರಿಬ್ಬರಲ್ಲಿ ಯಾರನ್ನು ಪ್ರೀತಿಸುತ್ತಾಳೆ ಎನ್ನುವುದೇ ಚರ್ಚೆಯ ವಿಷಯವಾಗಿಹೋಯಿತು! ನಿಧಾನವಾಗಿ ಈ ಸುದ್ದಿ ಬಾಸ್ ಗೂ ಸಹ ತಲುಪಿತು.
ಸ್ನೇಹ, ಇಷ್ಟಕ್ಕೆ ತಿರುಗಲು ಕೆಲವೊಮ್ಮೆ ಕಾರಣ ಇರುವುದಿಲ್ಲ, ಇಲ್ಲಿ ನಡೆದದ್ದು ಅದೇ! ಆದರೆ ಒಂದು ವಿಧವಾಗಿ ವಸುಧಾಳ ಆಕರ್ಷಕ ರೂಪ, ವ್ಯಕ್ತಿತ್ವ ಮತ್ತು ಗುಣ ಇದಕ್ಕೆ ಕಾರಣ. ಯಾರಿಗಾದರೂ, ಜೀವನ ಸಂಗಾತಿ ಎಂದರೆ ವಸುಧಾ ಅಂತಹವಳು ಸಿಗಬೇಕು ಎನಿಸಿದರೆ ಆಶ್ಚರ್ಯವಿರಲಿಲ್ಲ. ಈ ಅದೃಷ್ಟ ಯಾರಿಗುಂಟು, ಯಾರಿಗಿಲ್ಲ, ಆದರೆ ಇವರಿಬ್ಬರಲ್ಲಿ ವಸು ಯಾರಿಗೆ ಒಲಿಯುತ್ತಾಳೆ ಕಾದುನೋಡಬೇಕು ಎಂದೆಲ್ಲಾ ಇತರರು ಮಾತನಾಡಿಕೊಳ್ಳುತ್ತಿದ್ದರು.ಕೆಲವು ದಿನಗಳವರೆಗೂ ಆಕಾಶ್ ಮತ್ತು ಆದಿತ್ಯ ಒಳಗೊಳಗೇ ವಸುಧಳನ್ನು ಇಷ್ಟ ಪಡುತ್ತಿದ್ದರೂ ಅವಳಿಗೆ ವಿಷಯ ತಿಳಿಸಿರಲಿಲ್ಲ. ಅವರಿಬ್ಬರೂ ಸಹ ಒಬ್ಬರಿಗೊಬ್ಬರು ಈ ವಿಷಯದ ಬಗ್ಗೆ ಎಂದೂ ಚರ್ಚಿಸಿರಲಿಲ್ಲ. ಅವಳ ಮನೆಯಲ್ಲಿ ಮದುವೆಯ ಪ್ರಸ್ತಾಪ ಶುರುವಾಗುವುದರಲ್ಲಿತ್ತು, ಅದನ್ನು ತಿಳಿದ ಅವರಿಬ್ಬರೂ ಪ್ರತ್ಯೇಕವಾಗಿ ಅವಳಿಗೆ ಅವರವರ ಪ್ರಸ್ತಾಪ ತಿಳಿಸುವ ಯೋಜನೆಯಲ್ಲಿದ್ದರು! ಒಂದೇ ಸಮಯದಲ್ಲಿ ಅಲ್ಲದಿದ್ದರೂ, ಒಂದೇ ದಿನದ ಬೇರೆ ಬೇರೆ ಸಮಯ, ಸಂಧರ್ಭದಲ್ಲಿ ಅವರಿಬ್ಬರೂ ಅವಳಿಗೆ ಅವರವರ ಮನಸ್ಸಿನ ಇಷ್ಟ ತಿಳಿಸಿದ್ದರು. ಹೇಗೆಂದರೆ, ಒಂದು ದಿನ ಆದಿತ್ಯ ಯಾವುದೋ ಕೆಲಸದ ನಿಮಿತ್ತ ಆಫೀಸಿಗೆ ಬೆಳಗಿನ/ಮೊದಲ ಅರ್ಧ ದಿನ ರಜ ಹಾಕಿದ್ದ. ಅದೇ ದಿನ ಆಕಾಶ್ ಮಧ್ಯನ್ನ ಊಟದ ಸಮಯಕ್ಕೆ ಮುಂಚೆ ಅವಳನ್ನು ಭೇಟಿಯಾಗಿ, ತಾನು ಒಬ್ಬಳನ್ನು ಇಷ್ಟ ಪಡುತ್ತಿರುವುದಾಗಿಯು, ಮಧ್ಯನ್ನ ಊಟಕ್ಕೆ ತನ್ನ ಜೊತೆಗೆ ಬಂದರೆ ಅವಳು ಯಾರೆಂದು ತಿಳಿಸುವುದಾಗಿಯೂ, ಅವಳಿಗೆ ಹೇಳಿ ಮತ್ತೆ ಕೆಲಸ ಮಾಡಲು ಹೊರಟುಹೋದ.
ಇತ್ತ ಇವಳು, ಆಕಾಶ್ ಪ್ರೀತಿಸುತ್ತಿದ್ದಾನ? ಇದರ ಬಗ್ಗೆ ಒಂಚೂರು ಸುಳಿವು ಕೊಡದೆ ಈಗ ಇದ್ದಕ್ಕಿದ್ದ ಹಾಗೆ.........., ಯಾರಿರಬಹುದು ಆ ಚೆಲುವೆ, ಅದೃಷ್ಟವಂತೆ ಎಂದು ಯೋಚಿಸುತ್ತಾ, ಸರಿ ನೋಡೋಣ ಊಟಕ್ಕೆ ಹೋದಾಗ ಎಂದುಕೊಂಡು ಗಡಿಯಾರ ನೋಡಿದಳು 12.30 ಆಗಿತ್ತು. ಕೆಲಸ ಮಾಡುತ್ತಿದ್ದರೂ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು.


ಮಧ್ಯಾನ್ನ 1.15 ಕ್ಕೆ ಸರಿಯಾಗಿ ಅಂದುಕೊಂಡಂತೆ ಇಬ್ಬರೂ ಹೊರಟರು. ಹೊರಗೆ ಬಂದು ಆಕಾಶ್ ಬೈಕ್ ಸ್ಟಾರ್ಟ್ ಮಾಡುವುದರಲ್ಲಿದ್ದ, ಅಷ್ಟರಲ್ಲಿ ವಸು ಕೇಳಿದಳು, ಆಕಾಶ್ ನೀನು ಈ ಮುಂಚೆಯೇ ಅವಳಿಗೆ ಪ್ರೀತಿಸುತ್ತಿರುವ ವಿಷಯ ತಿಳಿಸಿದ್ದೀಯ ಅಥವಾ ತಿಳಿಸಬೇಕೋ ಎಂದು. ಅದಕ್ಕವನು ಇಲ್ಲ ಇಲ್ಲ ಈವತ್ತೇ ನಾನವಳಿಗೆ ನನ್ನ ಮನಸ್ಸಿನ ಭಾವನೆ ತಿಳಿಸುವ ಸುದಿನ! ಅದನ್ನು ಅವಳು ಹೇಗೆ ಸ್ವೀಕರಿಸುತ್ತಾಳೋ ಗೊತ್ತಿಲ್ಲಾ, ಒಂದು ರೀತಿ ಆತಂಕ ಆಗುತ್ತಿದೆ ಎಂದು ಹೇಳಿದ. ಆಗ ಅವಳು ಕೆಂಪು ಗುಲಾಬಿಯ ಬೊಕ್ಕೆ ಖರೀದಿಸು, ಮತ್ತು ಹೇಳುವಾಗ ಅದನ್ನು ಜೊತೆಯಲ್ಲಿ ಕೊಡು ಎಂದು ಹೇಳಿ ಅಲ್ಲೇ ಹತ್ತಿರದಲ್ಲಿದ್ದ ಬೊಕ್ಕೆ ಅಂಗಡಿಯ ಕಡೆಗೆ ಸ್ವತಹ ಹೊರಟಳು. ಅವಳು ಹೋದ ಕಡೆಯೇ ಗಮನಿಸುತ್ತಾ ಅವನು, ಅಯ್ಯೋ ಅವಳಿಗೆ ಅವಳೇ ಬೊಕ್ಕೆ ಖರೀದಿಸುತ್ತಿದ್ದಾಳಲ್ಲ, ಎಂತಾ ವಿಪರ್ಯಾಸ! ಏನು ಆಗುತ್ತೋ ಏನೋ ನೋಡೋಣ, ಏನು ಎಡವಟ್ಟು ಆಗದಿದ್ದರೆ ಸರಿ ಎಂದು ತನ್ನ ಮನಸ್ಸಿನೊಂದಿಗೆ ಮಾತಾಡಿಕೊಳ್ಳುತ್ತಾ ಅಂಗಡಿಯ ಕಡೆ ಹೊರಟ. ಹೂಗುಚ್ಛ ತಾನೇ ಕೈಯಲ್ಲಿ ಹಿಡಿದು ಅಂಗಡಿಯಿಂದ ಹೊರ ಬಂದಳು. ಆಕಾಶ್ ಅವಳ ಜೊತೆಯೇ ಬಂದು ಬೈಕ್ ಸ್ಟಾರ್ಟ್ ಮಾಡಿ ಅವಳನ್ನು ಕರೆದುಕೊಂಡು ಹೋದ.

ಪ್ರಸಿದ್ದ ಹೋಟೆಲ್ ಒಂದರ ಒಳ ಹೊಕ್ಕು, ಊಟದ ಟೇಬಲ್ ಕಡೆ ನಡೆಯುತ್ತಿರಲು, ಆಕಾಶ್ 2 ಖುರ್ಚಿ ಇರುವ ಟೇಬಲ್ ಬಳಿ ಹೋಗುತ್ತಿರುವಾಗ ಅವನನ್ನು ಕುರಿತು ವಸುಧಾ ಹೀಗೆಂದಳು, ಯಾಕೆ ಆಕಾಶ್ ನಿನ್ನಾಕೆ ಇನ್ನು ಬಂದಿಲ್ವಾ? ಎರಡೇ ಖುರ್ಚಿ ಇರುವ ಟೇಬಲ್ ಬಳಿ ಕೂರುತ್ತಿದ್ದೀಯಾ, ಆಕೆಯನ್ನು ನಿನ್ನ ಪಕ್ಕದಲ್ಲೇ ಕೂರಿಸಿಕೊಳ್ಳುತ್ತೀಯ, ಈಗ್ಲಿಂದಾನೆ ಎಲ್ಲಾ ಶೆರಿಂಗಾ....... ಎಂದು ಛೇಡಿಸಿದಳು. ಆಗ ಆಕಾಶ್, ಇಲ್ಲ ವಸು ಅದು ಅದು..... ಮತ್ತೆ ಅದು ಎಂದು ತಡವರಿಸುತ್ತಿದ್ದ. ಏನದು ಅಂತ ಸರಿಯಾಗಿ ಹೇಳು ಆಕಾಶ್, ತುಂಬಾ ಸತಾಯಿಸಬೇಡ ನನ್ನ, ನೀನು ಅಂತ ಹೇಳುತ್ತಿರುವಾಗ ಅವನಿಗೆ ಆಶ್ಚರ್ಯ. ಓಹ್.... ಇವಳಿಗೆ ಗೊತ್ತಾಗಿದೆಯ ನಾನು ಇವಳನ್ನೇ ಪ್ರಪೋಸ್ ಮಾಡೋದಕ್ಕೆ ಹೊರಟಿರುವುದು ಅಂತ ಅವಳ ಮುಖವನ್ನೇ ಒಂದು ಕ್ಷಣ ದಿಟ್ಟಿಸಿದ. ಆದರೆ ಅವಳ ಮುಖದಲ್ಲಿ ಕುತೂಹಲದ ಹೊರತು ಬೇರೆ ಯಾವ ಭಾವನೆಯು ಕಾಣಲಿಲ್ಲ! ಇಷ್ಟರಲ್ಲಿ ಅವರಿಬ್ಬರೂ ಖುರ್ಚಿಯಲ್ಲಿ ಕುಳಿತಿದ್ದರು. ಇದೆ ಸರಿಯಾದ ಸಮಯ ಎಂದು ತಿಳಿದು ಆಕಾಶ್ ಗಟ್ಟಿಯಾಗಿ ಕಣ್ಣು ಮುಚ್ಚಿ, ಒಂದೇ ಉಸಿರಿನಲ್ಲಿ ಈ ರೀತಿ ಹೇಳಿಬಿಟ್ಟ! ವಸು ನನ್ನ ಮುಂದೆ ಯಾರು ಕೈಯಲ್ಲಿ ಹೂಗುಚ್ಛ ಹಿಡಿದು ಕುಳಿತಿರುವರೋ, ಆಕೆಯೇ ನಾನು ಇಷ್ಟಪಡುವಾಕೆ, ಅವಳೂ ಇಷ್ಟ ಪಟ್ಟರೆ ಅವಳೇ ನನ್ನಾಕೆ!!
ಅವಳು ಸುತ್ತಲೂ ಕಣ್ಣು ಹಾಯಿಸಿ ನೋಡಿದಳು, ಆ ರೀತಿ ಯಾರೂ ಅಲ್ಲಿರಲಿಲ್ಲ! ಅಷ್ಟರಲ್ಲಿ ಅವಳಿಗೆ ಅದು ತಾನೇ ಎಂದು ಮನವರಿಕೆಯಾದಾಗ, ಆಶ್ಚರ್ಯ ಪಡುವ ಸರದಿ ಅವಳದಾಗಿತ್ತು!!! ಆ ಕ್ಷಣದಲ್ಲಿ ಅವಳಿಗೆ ಏನು ಹೇಳಬೇಕೆಂದು ತೋಚದೆ, ಅವನ ಮುಖವನ್ನೇ ಗಮನಿಸುತ್ತಿದ್ದಳು. ಮುಚ್ಚಿದ್ದ ಕಣ್ಣನ್ನು ನಿಧಾನವಾಗಿ ತೆಗೆಯುತ್ತಾ, ದೀನತೆಯಿಂದ, ಅವಳು ನಿರ್ಲಿಪ್ತವಾಗಿರುವುದನ್ನು ನೋಡಿದನು. ಮತ್ತೆ ವಸು ಏನಾದರೂ ಹೇಳಲು ಬಾಯಿ ತೆರೆಯುವಷ್ಟರಲ್ಲಿ, ಬೇರರ್ ಅಲ್ಲಿಗೆ ಬಂದದ್ದರಿಂದ ಅವಳು ಸಂಧರ್ಭವನ್ನು ಸಂಭಾಳಿಸುತ್ತಾ, ಈಗ ಸಧ್ಯಕ್ಕೆ ಊಟ ಮಾಡೋಣ ಆಕಾಶ್, ಮಿಕ್ಕಿದ್ದು ಆಮೇಲೆ ಮಾತಾಡೋಣ ಎಂದು ಹೇಳಿ ಸುಮ್ಮನಾದಳು. ಆಗ ಅವನೂ ಸಹ ಅದಕ್ಕೆ ಸಮ್ಮತಿಸಿ, ಬೇರರ್ ಗೆ ಊಟ ತರುವಂತೆ ಹೇಳಿ ಕಳುಹಿಸಿದರು. ಊಟ ತರುವ ವರೆಗೂ ಕಾಯಬೇಕಿದ್ದರಿಂದ, ಅವರಿಬ್ಬರೂ ಉತ್ತರ ಧ್ರುವ, ಧಕ್ಷಿನ ಧ್ರುವದಂತೆ ಎದುರುಬದುರು ಕುಳಿತಿದ್ದರೂ ಅವರಿಬ್ಬರ ಮುಖಗಳು ಮಾತ್ರ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಗೆ ತಿರುಗಿದ್ದವು. ಇಬ್ಬರೂ ಯೋಚನೆಯಲ್ಲಿ ಮುಳುಗಿದ್ದರು. ಆಕಾಶ್ ಯೋಚಿಸುತ್ತಿದ್ದ, ವಸು ಗೆ ಇಷ್ಟ ಇದೆಯೋ ಇಲ್ವೋ ಗೊತ್ತಿಲ್ಲ, ಆದರೆ ಯಾವುದೇ ಕಾರಣಕ್ಕೂ ಅವಳು ಕೂಗಾಡಿ ರಂಪ ಮಾಡಲಿಲ್ಲ, ಸಧ್ಯ! ಇದೆ ಗುಣಕ್ಕೆ ಅವಳು ನನಗೆ ತುಂಬಾ ಮೆಚ್ಚುಗೆಯಾಗುವುದು, ಅಂತ.

ಇತ್ತ ವಸು ಇಷ್ಟು ದಿನ ಸ್ನೇಹಿತನಾಗಿದ್ದ ಆಕಾಶ್ ಗೆ ಈಗ ಇದ್ದಕಿದ್ದ ಹಾಗೆ ಈ ಭಾವನೆ ಯಾಕೆ ಬಂತು, ಇದನ್ನು ನಾನು ಸ್ವೀಕರಿಸುವುದೋ, ಬೇಡವೋ ಎಂದು ಯೋಚಿಸುತ್ತಿದ್ದಳು. ಅಷ್ಟರಲ್ಲಿ ಊಟ ಬಂದಿತ್ತು, ಇಬ್ಬರೂ ಏನೂ ಮಾತನಾಡದೆ ಯಾಂತ್ರಿಕವಾಗಿ ಊಟ ಮುಗಿಸಿ ಹೊರಗೆ ಬಂದರು. ಬೇರೆ ಸಮಯದಲ್ಲಾಗಿದ್ದರೆ ಯಾರು, ಯಾರನ್ನೇ ಊಟಕ್ಕೆ ಕರೆದುಕೊಂಡು ಬಂದಿದ್ದರೂ, ಬಿಲ್ ಕೊಡುವಾಗ ನಾನು ನೀನು ಎಂದು ಕಿತ್ತಾಡುತ್ತಿದ್ದರು. ಆದರೆ ಈ ಬಾರಿ ವಸುಧಾ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹೊರಗೆ ಬಂದಿದ್ದಳು!

ಆಫೀಸಿಗೆ ತಿರುಗಿ ಬರುವಷ್ಟರಲ್ಲಿ 2 ಗಂಟೆಯಾಗಿತ್ತು, ಹೂಗುಚ್ಚವನ್ನು ವಸು ಆಫೀಸಿನ ಮುಂಭಾಗದಲ್ಲಿದ್ದ ಗಣೇಶನ ವಿಗ್ರಹದ ಬಳಿ ಇರಿಸಿ ಒಳಗೆ ಹೊರಟಿರುವಾಗ ಅವಳನ್ನು ತಡೆದು ಆಕಾಶ್ ಕೇಳಿದ, ವಸು ನಿನ್ನ ಅಭಿಪ್ರಾಯ ಏನೇ ಇದ್ದರೂ ದಯವಿಟ್ಟು ತಿಳಿಸು ಆದರೆ ಹೀಗೆ ಮೌನವಾಗಿ ಇರಬೇಡ. ಅದಕ್ಕೆ ಉತ್ತರವಾಗಿ ಅವಳು ಏನು ಹೇಳದೆ ಮೌನವಾಗೇ ಒಳ ನಡೆದಿದ್ದಳು. ಅವನೂ ಸಹ ಸಹಜವಾಗಿರಲು ಪ್ರಯತ್ನಿಸುತ್ತಾ ತನ್ನ ಕ್ಯಾಬಿನ್ ಒಳಗೆ ಸೇರಿಕೊಂಡ. ಅಷ್ಟರಲ್ಲಿ ಆದಿತ್ಯ ಸಹ ಆಫೀಸಿಗೆ ಬಂದಿದ್ದ, ಅವನು ತುಂಬಾ ಖುಷಿಯಾಗಿದ್ದ! ಸಹೋದ್ಯೋಗಿಯೊಬ್ಬರಿಂದ ಇವರಿಬ್ಬರೂ ಹೋಟೇಲ್ಗೆ ಊಟಕ್ಕೆ ಹೋಗಿದ್ದುದು ತಿಳಿದು, ಅದು ಅವರ ಮಧ್ಯ ಮಾಮೂಲು ಆಗಿದ್ದುದರಿಂದ, ಬೇರೆ ವಿಷಯ ಅವನಿಗೆ ಇನ್ನೂ ತಿಳಿದಿಲ್ಲವಾದ್ದರಿಂದ ಆದಿ ಹೆಚ್ಚಿಗೆ ತಲೆ ಬಿಸಿ ಮಾಡಿಕೊಳ್ಳಲಿಲ್ಲ. ಬದಲಿಗೆ ಆದಿ ಈ ರೀತಿ ಯೋಚಿಸುತ್ತಾ, ವಸು ನೀನು ನನಗೊಲಿದರೆ ನಾನು ನಿನ್ನನ್ನು ಈ ರೀತಿ ಮಿಸ್ ಮಾಡಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ನನ್ನ ಮನಸ್ಸಿನ ಆಸೆಯನ್ನು ಈ ದಿನವೇ ನಾನು ನಿನ್ನ ಮುಂದೆ ಬಿಚ್ಚಿಡುತ್ತೇನೆ, ಈವತ್ತು ನಿನಗೊಂದು ಆಶ್ಚರ್ಯ ಕಾದಿದೆ ನೋಡು! ಎಂದು ಮನದಲ್ಲೇ ಲೆಕ್ಕಾಚಾರ ಮಾಡುತ್ತಾ ಹಾಡೊಂದನ್ನು ಗುನುಗುನಿಸುತ್ತಿದ್ದ. ಮತ್ತು ಅವಳನ್ನು ಸಂಜೆ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಮೂಡುವ ಆಶ್ಚರ್ಯದ ವಾತಾವರಣ ಊಹಿಸಿ ಒಳಗೊಳಗೇ ಸಂಭ್ರಮಿಸುತ್ತಾ ಕೆಲಸ ಮಾಡುತ್ತಿದ್ದ. ವಸುಧಾ ಆದಿಯನ್ನು ಈ ದಿನ ಇನ್ನು ಮಾತನಾಡಿಸಿರಲಿಲ್ಲವಾದ್ದರಿಂದ, ಅವನಿಗೆ ಮಧ್ಯಾನ್ನ ನಡೆದ ವಿಷಯ ತಿಳಿಸಿ, ಅವನ ಪ್ರತಿಕ್ರಿಯೆ ಏನೆಂದು ತಿಳಿದುಕೊಳ್ಳೋಣ ಎಂದು ಆದಿತ್ಯನ ಕ್ಯಾಬಿನ್ನಿಗೆ ಬಂದಳು. ಹಲೋ ಆದಿ..... ಎಂದು ವಸುಧಾ ಏನಾದರೂ ಕೇಳುವಷ್ಟರಲ್ಲಿ, ಆದಿತ್ಯ ಅವಳು ಬಂದದ್ದನ್ನು ಗಮನಿಸಿ ಮಾತನಾಡಲು ಶುರು ಮಾಡಿದನು. ಹಾಯ್ ವಸು ನಿನ್ನನ್ನೇ ನೆನಪಿಸಿಕೊಳ್ಳುತ್ತಿದ್ದೆ! ನಿಂಗೊತ್ತಾ ನಾನಿವತ್ತು ಬೆಳಿಗ್ಗೆ ಒಂದು ಸಮಾರಂಭಕ್ಕೆ ಹೋಗಿದ್ದೆ, ಅಲ್ಲಿ ನನ್ನ, ಅಮ್ಮನ ಹತ್ರ ಯಾರೋ ಪ್ರಪೋಸ್ ಮಾಡಿದ್ದಾರಂತೆ. ಅವರನ್ನು ಅಮ್ಮ ಸಂಜೆ ಮನೆಗೆ ಕರೆದಿದ್ದಾರೆ, ನೀನೂ ನನ್ನ ಜೊತೆ ನಮ್ಮನೆಗೆ ಬರ್ತಾ ಇದ್ದೀಯ ಅಷ್ಟೇ..... , ಮತ್ತೇನೂ ಸಬೂಬು ಹೇಳಬೇಡ. ಏನೇ ಹೇಳುವುದಿದ್ದರೂ ಸಂಜೆ ಮನೆಗೆ ಬಂದಾಗ ಹೇಳುವಿಯಂತೆ ಎಂದು ಅವಳಿಗೆ ಮಾತಾಡಲು ಅವಕಾಶ ನೀಡದೆ ಒಂದೇ ಸಮನೆ ಹೇಳಿದ, (ಅಸಲು ವಿಷಯ ಮುಚ್ಚಿಟ್ಟು)! ಸರಿ ವಸುಧಾ ಸಹ ಅವನ ಸಂತೋಷವನ್ನು ನೋಡಿ ಏನೂ ಹೇಳಲಾಗದೆ ಎದ್ದು ನಿಂತಳು. ಅಷ್ಟರಲ್ಲಿ ಸರಿಯಾಗಿ ಬಾಸ್ ಸಹ ಅವಳಿಗೆ ಬರುವಂತೆ ಹೇಳಿ ಕಳುಹಿಸಿದ್ದರಿಂದ, ತಕ್ಷಣ ಹೊರಗೆ ಬಂದಳು.

ಸಂಜೆ ಆರೂವರೆ ಹೊತ್ತಿಗೆ ಆದಿತ್ಯ ವಸುಧಾಳನ್ನು ಮನೆಗೆ ಕರೆದುಕೊಂಡು ಹೋದ. ಅವಳು ಅವನ ಮನೆಗೆ ಈ ಮುಂಚೆ ಎಷ್ಟೋ ಸಲ ಬಂದಿದ್ದರಿಂದ ಸೀದಾ ಆದಿಯ ತಾಯಿಯನ್ನು ಹುಡುಕುತ್ತಾ ಒಳಗೆ ಹೋದಳು. ಅಲ್ಲಿ ಒಬ್ಬರಿಗೊಬ್ಬರು ಕ್ಷೇಮ ಸಮಾಚಾರ ವಿಚಾರಿಸಿ, ಸ್ವಲ್ಪ ಹೊತ್ತಿನ ನಂತರ ಹಾಲ್ ನಲ್ಲಿ ಬಂದು ಕುಳಿತರು. ಇಲ್ಲಿ ಆದಿಗೆ ಒಂದು ಕಡೆ ಸಂಭ್ರಮ, ಒಂದು ಕಡೆ ತಳಮಳ. ಅವನೂ ಒಂದು ಫೋಟೋವನ್ನು ಜೇಬಿನಲ್ಲಿರಿಸಿಕೊಂಡು ರೂಂನಿಂದ ಹೊರಗೆ ಬಂದ. ಆಂಟಿ ಮನೆಗೆ ಬರುವವರು ಹೆಣ್ಣಿನ ಕಡೆಯವರ ಅಥವಾ ಮಧ್ಯವರ್ತಿಗಳ? ಎಷ್ಟು ಹೊತ್ತಿಗೆ ಬರುತ್ತಾರೆ, ಹುಡುಗಿಯನ್ನು ಕರೆತರುತ್ತಾರ ಅಥವಾ ನಾವೆಲ್ಲಾ ಅವರ ಮನೆಗೆ ಹೋಗಬೇಕಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದ ವಸುಧಾಳನ್ನು, ಆದಿತ್ಯ ಅವನ ತಾಯಿ ಮತ್ತು ತಂದೆ ಒಮ್ಮೆ ಅವಳನ್ನೇ ನೋಡಿ ನಂತರ ಅವರುಗಳು ಒಬ್ಬರಿಗೊಬ್ಬರು ಮುಖ ನೋಡಿಕೊಂಡರು! ಇದನ್ನು ಗಮನಿಸಿದ ವಸುಧಾ ಅವರುಗಳ ಮುಖವನ್ನೇ ಆಶ್ಚರ್ಯ ಚಕಿತಳಾಗಿ ನೋಡುತ್ತಿದ್ದಳು! ಆಗ ಆದಿತ್ಯ ತನ್ನ ಜೇಬಿನಲ್ಲಿದ್ದ ಫೋಟೋ ತೆಗೆದು ಅವಳ ಮುಂದೆ ಹಿಡಿಯುತ್ತಾ, ವಸು ಇವಳೇ ನನ್ನ ಮನ ಮೆಚ್ಚಿದ ಹುಡುಗಿ! ಇವಳ ಒಪ್ಪಿಗೆಯೂ ಸಿಕ್ಕರೆ ನಾ ಆಗುವೆನು ಸಂಸಾರಿ, ಇಲ್ಲವಾದರೆ ಉಳಿಯುವೆನು ನಾನು ಬ್ರಹ್ಮಚಾರಿಯಾಗಿ ಎಂದು ಪ್ರಾಸಬದ್ಧವಾಗಿ ಹೇಳುತ್ತಿರುವಂತೆ ಅವಳು ಫೋಟೋವನ್ನು ಗಮನಿಸಿದಳು. ನೋಡಿದರೆ ಏನಾಶ್ಚರ್ಯ!! ಅದು ಅವಳ ಭಾವಚಿತ್ರವೇ ಆಗಿತ್ತು!!! ಕೆಲವು ನಿಮಿಷಗಳ ಮೌನ ಆವರಿಸಿತ್ತು ಅಲ್ಲಿ. ಇವಳ ಅಭಿಪ್ರಾಯ ಏನಿರಬಹುದು ಎನ್ನುವ ತವಕ ಅವರುಗಳಿಗಾದರೆ ಇವಳಿಗೆ ಒಂದು ವಿದವಾದ ವಿಚಿತ್ರ ಸ್ಥಿತಿ! ನಂತರ ಅವಳೇ ಮೌನ ಮುರಿದು ಮಾತನಾಡಿದಳು ಏನಿದೆಲ್ಲಾ ಆದಿ? ಅಲ್ಲಾ ಏನಾಗಿದೆ ನಿಮ್ಮಿಬ್ಬರಿಗೂ? ಅಲ್ಲಿ ನೋಡಿದರೆ ಆಕಾಶ್ ಇಂದು ಮಧ್ಯಾನ್ನ ನನಗೆ ಪ್ರಪೋಸ್ ಮಾಡಿದ್ದ, ಈಗ ನೋಡಿದರೆ ನೀನು! ನೀವಿಬ್ಬರೂ ಯಾವಾಗ ಹೀಗೆ ಬದಲಾದಿರಿ? ನಮ್ಮ ಗೆಳೆತನಕ್ಕೆ ಅರ್ಥವೇನು? ಎಂದೆಲ್ಲ ಕೇಳುತ್ತಿದ್ದಾಗ ಶಾಕ್ ಆಗುವ ಸರದಿ ಅವರುಗಳದಾಗಿತ್ತು!


ಏನೂ, ಆಕಾಶ್ ನಿನಗೆ ಪ್ರಪೋಸ್ ಮಾಡಿದನೆ? ಮತ್ತೆ ನೀನಿದನ್ನು ಮುಂಚೆಯೇ ಯಾಕೆ ನನಗೆ ಹೇಳಲಿಲ್ಲ ವಸು. ಮತ್ತೆ ನಾವು ಸಹ ಈ ವಿಚಾರದ ಬಗ್ಗೆ, ನಿನ್ನ ಮೇಲಿನ ನಮ್ಮ ಭಾವನೆಗಳ ಬಗ್ಗೆ ಒಬ್ಬರಿಗೊಬ್ಬರು ಹೇಳಿಕೊಂಡಿರಲಿಲ್ಲ! ಈಗ ಇದೆಂತಹ ಪರೀಕ್ಷೆ, ಎಂತಹ ಸಂಧರ್ಭ ಬಂತು ನಮ್ಮಗಳಿಗೆ?! ಎಂದು ಚಿಂತಿತನಾದ. ಇವರಿಬ್ಬರ ಮಾತುಗಳನ್ನು ಕೇಳಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಆದಿಯ ತಂದೆ, ತಾಯಿ ವಸುಧಾಳಿಗೆ ಈ ರೀತಿ ಹೇಳಿದರು. ನೋಡಮ್ಮ ವಸು ನೀವು ಮೂರು ಜನ ತುಂಬಾ ಒಳ್ಳೆಯ ಸ್ನೇಹಿತರೆಂದು ನಮಗೆಲ್ಲ ಗೊತ್ತಿರುವ ವಿಷಯವೇ ಆದರೆ ಈಗ ನಿನಗೆ ಬಂದಿರುವಂತಹ ಪರಿಸ್ಥಿತಿ ತುಂಬಾ ಸೂಕ್ಷ್ಮ ಮತ್ತು ಗಂಬೀರವಾದುದು. ನೀನು ನಮ್ಮ ಮನೆಗೆ ಸೊಸೆಯಾಗಿ ಬರಲು ಒಪ್ಪುತ್ತೀಯೆಂದು ನಂಬಿ ನಾವೆಲ್ಲಾ ತುಂಬಾ ಸಂತೋಷವಾಗಿದ್ದೆವು, ಇದೆ ವಿಷಯಕ್ಕೆ ಆದಿ ಬೆಳಗ್ಗಿನಿಂದ ತಯಾರಿ ಮಾಡಿಕೊಂಡಿದ್ದ! ಆದರೆ ವಿಷಯ ಹೀಗಿರುವಾಗ ನಾವು ಯಾರೂ ನಿನ್ನ ಮೇಲೆ ಒತ್ತಡ ಹೇರುವುದು ಸರಿಯಲ್ಲ. ನೀನು ಆಕಾಶನನ್ನು ಬಿಟ್ಟು ನನ್ನ ಮಗನನ್ನೇ ಒಪ್ಪಿಕೊ ಎಂದು ಹೇಳಲು ನಮಗೆ ಯಾವ ಅಧಿಕಾರವೂ ಇಲ್ಲ, ಅಲ್ಲದೆ ಆಕಾಶ್ ಮೇಲೆ ನಮಗೆ ಯಾವುದೇ ದ್ವೇಷ ಇಲ್ಲ. ಅವನೂ ಸಹ ನಮ್ಮ ಮಗನಿದ್ದ ಹಾಗೆ!! ಎಂದು ಹೇಳುತ್ತಿರಲು ಎಲ್ಲರೂ ಒಂದು ರೀತಿಯ ಭಾವಾನಾತ್ಮಕ ಸೆರೆಯಲ್ಲಿ ಬಂಧಿಯಾದರು!!! ಮಾತು ಮುಂದುವರೆಸುತ್ತಾ ಅವರು ಮತ್ತೆ ಹೇಳಿದರು, ವಸುಧಾ ನೀನು ವಿಚಾರವಂತಳು, ಬುದ್ದಿವಂತಳು. ನೀನು ಜೀವನದಲ್ಲಿ ಯಾರಾದರೊಬ್ಬರನ್ನು ಮದುವೆಯಾಗಲೇಬೇಕು, ಆ ಯಾರೋ ಒಬ್ಬರು, ಇವರಿಬ್ಬರಲ್ಲಿಯೇ ಒಬ್ಬರಾದರೆ ನಮಗೆ ತುಂಬಾ ಸಂತೋಷ! ಯಾಕೆಂದರೆ ನಿನ್ನಂತಹ ಅಪರೂಪದ, ಅಮೂಲ್ಯವಾದಂತಹ ಹುಡುಗಿ ಸಿಗಬೇಕಾದರೆ ಅದು ನಮ್ಮ ಅದೃಷ್ಟವೇ ಸರಿ! ಇದು ಹೊಗಳಿಕೆಯಷ್ಟೇ ಅಲ್ಲ ವಾಸ್ತವ ಕೂಡ. ಮುಂದಿನ ನಿರ್ಧಾರ ನಿನಗೇ ಬಿಟ್ಟಿದ್ದು ಎಂದು ಹೇಳಿ ತಮ್ಮ ಮಗನ ಕಡೆ ನೋಡಿದರು. ಅವನು ಏನೂ ಹೇಳಲು ತೋಚದೆ ಗಂಬೀರವಾದ ಆಲೋಚನೆಯಲ್ಲಿ ಮುಳುಗಿಹೋಗಿದ್ದ. ಆಗ ವಸುಧಾ ಹೇಳಿದಳು, ಈ ವಿಷಯವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ನನಗೆ ಸಮಯ ಬೇಕು, ಮತ್ತು ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ನಿಮ್ಮೆಲ್ಲರ ಸಹಕಾರ ನನಗಿದೆ ಎಂದು ನಂಬುತ್ತೇನೆ ಎಂದು ಹೇಳುತ್ತಾ ಮೂವರನ್ನು ಒಮ್ಮೆ ನೋಡಿದಳು. ನಂತರ ಸರಿ ನಾನಿನ್ನು ಹೋಗಿಬರುತ್ತೇನೆ ಎಂದು ಹೇಳಿ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟಳು.