ಈ ಸಲ ಬರದ ಲೇಖನ ಯಾಕೋ ಸರಿಯಿಲ್ಲ ಎನ್ನುವ ಅಸಮಾಧಾನ. ನಡೆದಿದ್ದ ಒಂದೆರಡು ತಮಾಷೆ/ಹುಚ್ಚು ಪ್ರಸಂಗವನ್ನು ಬರೆದಿರುವೆ! ನಿಮ್ಮ ಅಭಿಪ್ರಾಯ ಏನಿದ್ದರೂ ಸರಿ ತಿಳಿಸಿ!!
ಬೇಸಿಗೆ ರಜೆಯಾದ್ದರಿಂದ ಮನೆಯಲ್ಲಿ ಒಂದೇ ಸಮನೆ, ನೆಂಟರುಗಳ ಆಗಮನ. ಕಳೆದ ವಾರ ಲೇಖನ ಬರೆಯಲು ಸಮಯವೇ ಕೂಡಿಬಂದಿರಲಿಲ್ಲ. ಎಷ್ಟೊಂದು ಕೆಲಸ, ಆಗಾಗ ಓಡಾಟ, ಮಾತುಗಳಂತೂ ಮುಗಿಯುವುದೇ ಇಲ್ಲ! ಹಳೆಯ ನೆನಪುಗಳು, ಹೊಸ ವಿಚಾರಗಳು, ಆಗು-ಹೋಗುಗಳ ಬಗ್ಗೆ, ಒಂದಾ, ಎರಡ.......ರಾತ್ರಿಯ ಊಟ, ಕೆಲಸ ಎಲ್ಲಾ ಮುಗಿಸಿ, ಮಾತಿಗಿಳಿದರೆ ಮುಗಿಯಿತು! ಸಮಯ ಸರಿಯುವುದೇ ತಿಳಿಯುವುದಿಲ್ಲ. ನಮ್ಮ ದಿನನಿತ್ಯದ ವೇಳೆಯ ಪಟ್ಟಿಯಲ್ಲಿ ಅಸ್ಥವ್ಯಸ್ಥ! ಆದರೂ ಇವೆಲ್ಲ ಒಂದು ರೀತಿಯ ಮಜಾ!
ಸಾಮಾನ್ಯವಾಗಿ ನಾವು ಅಕ್ಕ ತಂಗಿಯರು ಪ್ರತಿವರ್ಷ ತವರಿನಲ್ಲೇ ಸೇರುತ್ತಿದ್ದೆವು. ಆದರೆ ಈ ಸಲ ಸ್ವಲ್ಪ ಬದಲಾವಣೆ, ನನ್ನ ಒಡಹುಟ್ಟಿದ ಅಕ್ಕನನ್ನು ಬಿಟ್ಟು ಎಲ್ಲರೂ ಈ ಬಾರಿ ನಮ್ಮ ಮನೆಗೆ ಭೇಟಿ ನೀಡಿದ್ದರು! ಊರಿನಲ್ಲಾದರೆ ನೆಂಟರು, ಸಂಭಂದಿಕರು ಎಲ್ಲ ಹತ್ತಿರದಲ್ಲೆ, ಅಕ್ಕಪಕ್ಕದ ಮನೆ, ಅಕ್ಕಪಕ್ಕದ ರಸ್ತೆಗಳಲ್ಲೇ ಇರುವುದರಿಂದ ಅಲ್ಲಿಗೆ ಹೋದರೆ ಸಾಕು, ತುಂಬಾ ದಿನಗಳಿಗೆ ಹೋದರೆ ಅಂತು ಮುಗಿಯಿತು, ತಿಂದು ತಿಂದು ಒಂದೆರಡು ಸುತ್ತು ದಪ್ಪ ಆಗುವುದು ಖಂಡಿತ! ಹೋಗಿದ್ದ ದಿನದಿಂದ ಹಿಂದಿರುಗಿ ಬರುವ ದಿನದವರೆಗೂ ನೋಡಿದ ಪ್ರತಿಯೊಬ್ಬರಿಗೂ, ಯಾವಾಗ ಬಂದಿರಿ ಎನ್ನುವ ಪ್ರಶ್ನೆಗೆ ಉತ್ತರಿಸುವುದೇ ಆಗುತ್ತದೆ. ಹೊರಗೆ ಎಲ್ಲಾದರು ಸುತ್ತಾಡಲು ಹೋದರಂತೂ, ಅಲ್ಲಲ್ಲಿ ಮಂಟಪೋತ್ಸವಗಳು! (ಅಂದರೆ ನೋಡಿದ ಪ್ರತಿಯೊಬ್ಬರನ್ನು ನಿಂತು ಮಾತನಾಡಿಸಿ ಮುಂದೆ ಹೋಗುವುದು.) {ಅಂದರೆ ದೇವರ ಮೆರವಣಿಗೆಯಲ್ಲಿ, ದೇವರನ್ನು ಅಲ್ಲಲ್ಲಿ ನಿಲ್ಲಿಸಿ ಪೂಜೆ ಮಾಡಿಸುವವರಿದ್ದರೆ ಮಾಡಿಸಿ, ಮೆರವಣಿಗೆಯನ್ನು ಮುಂದಕ್ಕೆ ಕಳಿಸುತ್ತಾರೆ. ಇದಕ್ಕೆ ಮಂಟಪೋತ್ಸವ ಎಂದು ಕರೆಯುತ್ತಾರೆ!!}
ಕೆಲವೊಮ್ಮೆ ತುಂಬಾ ಬೇಕಾದವರ ಮನೆಗಳಿಗೆ ಹೋಗಲೇ ಬೇಕಾಗುತ್ತದೆ. ಅವರುಗಳ ಉಪಚಾರ, ಅಪರೂಪಕ್ಕೆ ಬರುವಿರೆಂದು ತಿನ್ನಲು ಕೊಡುವುದು, ಆಗ ನೋಡಬೇಕು ನಮ್ಮ ಫಜೀತಿ ಅವರು ಪ್ರೀತಿಯಿಂದ ಕೊಡುವುದು ಬೇಡ ಎನ್ನಲು ಆಗುವುದಿಲ್ಲ (ಬೇಡ ಎಂದರು ಬಲವಂತ ಮಾಡುತ್ತಾರೆ) ತಿನ್ನಲು ಹೊಟ್ಟೆಯಲ್ಲಿ ಜಾಗ ಖಾಲಿ ಇರುವುದಿಲ್ಲ! ಹೀಗೆ ಇನ್ನು ಹಲವು ಅಕ್ಕರೆಯ ಸಂಕಷ್ಟಗಳು!!
------------------------------------------------------------------------------------------------
ನಮ್ಮ ಮನೆಗೆ ಕಳೆದ ವಾರ ಬಂದಿದ್ದ ನೆಂಟರ ಪೈಕಿ ನನ್ನ ಅಕ್ಕನ (ದೊಡ್ಡಮ್ಮನ ಮಗಳು), ಎಂಟು ವರ್ಷದ ಮಗ ಗುಡ್ ನೈಟ್ ಹೇಳಿದ ಪರಿಗೆ ನಾವೆಲ್ಲಾ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದ ಪ್ರಸಂಗವನ್ನು ಬರೆದಿದ್ದೇನೆ ಓದಿ!
ನಡೆದ್ದಿಷ್ಟೇ, ಅದೊಂದು ರಾತ್ರಿ ನಾವೆಲ್ಲಾ ಇನ್ನು ಮಾತಾಡುತ್ತಿದ್ದೆವು. ಅವನಿಗೆ ಕಣ್ಣು ಬಿಡಿಸಲಾರದಷ್ಟು ನಿದ್ದೆ ಬಂದಿದ್ದರೂ, ಮಲಗದೇ ನಾವು ಏನು ಮಾತಾಡುತ್ತಿವೋ ಎನ್ನುವ ಕುತೂಹಲದಿಂದ ಕಣ್ಣುಗಳು ಮುಚ್ಚಿಕೊಂಡು ಹೋಗುತ್ತಿದ್ದರೂ ಮತ್ತೆ ಮತ್ತೆ ಎಚ್ಚರ ಮಾಡಿಕೊಳ್ಳುತ್ತಿದ್ದ. ಇದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ಅವನು ತುಂಬಾ ಚೇಷ್ಟೆ ಮಾಡುತ್ತಿದ್ದಾಗ, ಮಲಗು ಎಂದು ಎಷ್ಟು ಹೇಳಿದರೂ ಕೇಳದೆ ಆಟ ಆಡುತ್ತಿದ್ದ ಅವನ್ನು ಕುರಿತು ಅವನ ತಾಯಿ, ಹೀಗೆಲ್ಲ ತುಂಟಾಟ ಆಡಿ ಗೋಳು ಹುಯ್ದುಕೊಳ್ಳುವುದರ ಬದಲು ನೀವೆಲ್ಲ ಓದುವ ಹುಡುಗರು ಜೀವನದಲ್ಲಿ ಏನು ಸಾಧಿಸಬೇಕೆನ್ನುವ ಧ್ಯೇಯ ಹೊಂದಿ ಗುರಿ ಸಾಧಿಸಬೇಕು ಎಂದು ಹೇಳುತ್ತಿರಲು ನಾನು ಆಗ ಅವನನ್ನು ನಿನಗೆ ಏನಾಗಬೇಕು ಎನ್ನುವ ಆಸೆ ಇದೆ ಎಂದು ಕೇಳಿದ್ದಕ್ಕೆ ಅವನು ಉತ್ತರಿಸುವ ಮುಂಚೆ ನನ್ನ ತಾಯಿ ಅವನು ಪೋಲಿಸ್ ಆದ್ರೆ ಚೆನ್ನಾಗಿರುತ್ತೆ, ನನ್ನ ಮೊಮ್ಮಗನ್ನ ಐ ಪಿ ಎಸ್ ಓದಿಸಮ್ಮ ಎಂದು ಹೇಳಿದರು.
ಅದಕ್ಕೆ ಅವನ ತಾಯಿ, ಅಯ್ಯೋ ಈ ಹುಡುಗರು ಪೋಲಿಸ್ ಆಗುವುದಿರಲಿ, ಪೋಲಿಗಳಾಗದೆ ಚೆನ್ನಾಗಿ ಓದಿ ಒಳ್ಳೆಯವರಾದರೆ ಅಷ್ಟೇ ಸಾಕು ಎಂದು ಹೇಳಿದರು!! ಆಗ ಅದಕ್ಕೆ ಉತ್ತರವಾಗಿ ಅವನು ಸರಿ ಅಜ್ಜಿ ನಾನು ಪೋಲಿಸ್ ಆಗುತ್ತೀನಿ ಆಗ ದೊಡ್ಡ ಸ್ವಿಮ್ಮಿಂಗ್ ಪೂಲ್ ಇರುವ, ದೊಡ್ಡ ಮನೆ ಕಟ್ಟಿಸಿ ನಿನ್ನನ್ನು ಕರೀತೀನಿ ಎಂದು ಹೇಳಿದ್ದ! ಈ ಮಾತಿಗೆ ಅವನ (ನನ್ನ ದೊಡ್ಡಮ್ಮ)ಅಜ್ಜಿ ಹುಸಿ ಮುನಿಸು ತೋರಿಸಿ, ಯಾಕೋ ನಿನ್ನ ಚಿಕ್ಕ ಅಜ್ಜಿ ಮಾತ್ರಾನ? ನಮ್ಮನ್ನೆಲ್ಲ ಯಾರನ್ನೂ ಕರೆಯೋದಿಲ್ವೋ ಎಂದು ಕೇಳಿದರು.
ಅದಕ್ಕವನು ಸರಿ ಎಲ್ಲರನ್ನು ಕರೆಯುತ್ತೇನೆ ಸರಿನಾ....ಅ..ಆ..ಆ..ಆಹ್ ಎಂದು ಆಕಳಿಸಿದನು! ಸರಿ ನೀನಿನ್ನೂ ಮಲುಕ್ಕೊಪ್ಪ ಅಂತ ನಾವೆಲ್ಲಾ ಹೇಳಿದ್ದಕ್ಕೆ ಅವನು ಹೂ...ಹ್ಞೂ, ನ್ಹೋ.... ನೀವೆಲ್ಲ ಮಲಗೊವಾಗಲೇ ನಾನು ಮಲಗೋದು ಎಂದು ಹೇಳಿ ಸ್ವಲ್ಪ ಹೊತ್ತು ಎಚ್ಚರವಾಗಿರಲು ಶತಪ್ರಯತ್ನ ಮಾಡಿದ! ಆಗ ನಾವು ಎಚ್ಚರವಾಗಿರುವವರು, ಎಲ್ಲರ ಕಡೆಯೂ ಒಮ್ಮೆ ಕಣ್ಣು ಹಾಯಿಸಿ, ಯಾರು ಮಲಗಿದ್ದಾರೆ, ಮತ್ತು ಯಾರೆಲ್ಲ ಎಚ್ಚರವಾಗಿದ್ದಾರೆ ಎಂದು ಗಮನಿಸಿದೆವು. ನನ್ನ ದೊಡ್ಡಮ್ಮನಿಗೂ ಕೂಡ ನಿದ್ದೆ ಬರುವುದರಲ್ಲಿತ್ತು! ಆಗ ನಾನು, ನೋಡೋ ನಿನ್ನ ಅಜ್ಜಿಗೂ ನಿದ್ದೆ ಬಂದುಬಿಡ್ತು, ನೀನೂ ಬೇಗ ಮಲಗಿಕೋ ನಾವೂ ಸಹ ಇನ್ನೇನು ಮಲಗುತ್ತೇವೆ ಅಂತ ಹೇಳಿದ ಮೇಲೆ, ಆಯಿತು ಅಂತ ಮಲಗಲು ನಿರ್ಧರಿಸಿ, ಎಲ್ಲರಿಗೂ ಗುಡ್ ನೈಟ್ ಅಂತ ಹೇಳಿದ. ಅವನಿಗೆ ಸ್ವಲ್ಪ ಮೂಗು ಕಟ್ಟಿದ್ದರಿಂದ ಅವನು ಗುಡ್ ನೈಟ್ ಎಂದು ಹೇಳಿದ್ದು ಗುಂಡೇಟು ಅಂತ ನಮಗೆಲ್ಲ ಕೇಳಿಸಿದ್ದು!! ಆಗ ಅರ್ಧಂಬರ್ಧ ಎಚ್ಚರವಾಗಿದ್ದ ದೊಡ್ಡಮ್ಮ ಅವನು ಹೇಳಿದ್ದು ಸರಿಯಾಗಿ ಅರ್ಥಮಾಡಿಕೊಳ್ಳದೆ ನಿದ್ದೆಗಣ್ಣಲ್ಲೇ ಯಾರಿಗೋ ಗುಂಡೇಟು, ಈಗಲೇ ಪೋಲಿಸ್ ಆಗಿಬಿಟ್ಯಾ? ಎಂದು ಕೇಳಿದರು. ಮಿಕ್ಕವರಲ್ಲಿ ಅರ್ಥ ಮಾಡಿಕೊಂಡ ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದೆವು!!!
14 comments:
ಊರಿಗೆ ಹೋದಾಗ ರಜಾ ದಿನಗಳ ಸಜಾ ನನಗೂ ಆಗಿದೆ, ಎಲ್ಲ ನೆಂಟರೂ ಮನೆಗೆ ಹೋದರೆ ತಿನ್ನು ತಿನ್ನು ಅಂತ ಅನ್ನುವರೇ... ಈ ಮಂಟಪೋತ್ಸವ ಬಹಳ ಚೆನ್ನಾಗಿದೆ, ಬಹಳ ಒಳ್ಳೇ ಹೆಸರೇ ಇಟ್ಟಿದ್ದೀರಿ ಅಲ್ಲಲ್ಲಿ ನಿಲ್ಲುತ್ತ ಊರಿನ ರಥ ಎಳೆದಂತೇ ಇರುತ್ತದೆ ಮನೆಯಿಂದ ಹೊರಗೆ ನಡೆದರೆ. ನಿಮ್ಮೆಲ್ಲರದೂ ಗುಂಡಿಗೆ ಗಟ್ಟಿಯಾಗಿದ್ದಕ್ಕೆ ಸರಿ ಹೋಯ್ತು ಮತ್ತೆ ಯಾರಾದ್ರೂ ಹೆದರು ಪುಕ್ಕಲರಿದ್ದು ಗುಂಡೇಟು ಅಂತ ಓಟಕ್ಕಿತ್ತಿರೋರು...
ಪ್ರಭು ಅವರೇ, ಯಾಕೋ ಈ ಸಲ ಈ ಲೇಖನ ಪ್ರಕಟಿಸಲು ಹಿಂಜರಿದಿದ್ದೆ! ಹಾಕಲೋ, ಬೇಡವೋ ಎಂದು ಚಿಂತಿಸುತ್ತಾ, ಅಂತೂ ಕೊನೆಗೆ ಪ್ರಕಟಿಸಿದೆ!! ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!!!
ha ha ha
ಶಿವಪ್ರಕಾಶ್ ಅವರೇ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು! ಹೀಗೆ ಬರುತಾ ಇರಿ....!
ಲೇಖನ ಓದುತ್ತಿದ್ದಾಗ, ನಮ್ಮ ತಾಯಿ ಕೂಡ "ಮಂಟಪೋತ್ಸವ" ಪದ ಬಳಸುತ್ತಿದ್ದುದು ನೆನಪಾಯ್ತು. ನನ್ನ ಹೆಂಡತಿ, ಈಗಲೂ ತವರಿಗೆ ಹೋದಾಗ ಅವಳ ಅಕ್ಕ ತಂಗಿಯರು ಮಾತಾಡುತ್ತಲೇ ರಾತ್ರಿಯೆಲ್ಲ ಜಾಗರಣೆ ಮಾಡುತ್ತಾರೆ. ಎಷ್ಟು ಮಾತಾಡಿದರೂ ಕಥೆ ಮುಗಿಯುವುದಿಲ್ಲ, ಮಾತಿನ ಭಂಡಾರ ಬರಿದಾಗುವುದಿಲ್ಲ! ಮಧ್ಯದಲ್ಲಿ ಕಾಫ಼ೀ ಸಮಾರಾಧನೆ ಕೂಡ ಸಾಂಗವಾಗಿ ನಡೆಯುತ್ತಿರುತ್ತದೆ! (ನನ್ನ ಜ್ನಾಪಕ ಬಂದಾಗ) ನಿದ್ದೆ ಮಾಡುತ್ತಿದ್ದ ನನ್ನನ್ನು ಎಬ್ಬಿಸಿ, ನನಗೂ ಕಾಫ಼ೀ ಕೊಟ್ಟಿದ್ದೂ ಇದೆ!
ಧನ್ಯವಾದಗಳು.
ಗಿರೀಶ್ ಅವರೇ, ನಿದ್ದೆಯಲ್ಲಿ ಕಾಫಿ ಕುಡಿಯುವ ನಿಮ್ಮ ಅವಸ್ಥೆ ಓದಿ ನಗು ಬಂತು! ಹೀಗೆ ಭೇಟಿ ನೀಡುತ್ತಿರಿ, ಧನ್ಯವಾದಗಳು.
ರಜಾದಿನಗಳಲ್ಲಿ ಊರಿಗೆ ಹೋದರೆ...
ತಿಂದು, ತಿಂದು ನನ್ನ ತೂಕ ಜಾಸ್ತಿಯಾಗಿಬಿಡುತ್ತದೆ...
ಮಗುವಿನ "ಗುಂಡೇಟು" ಚೆನ್ನಾಗಿತ್ತು...
ನಿಧಾನವಾಗಿ ಬರವಣಿಗೆಯಲ್ಲಿ ಹಿಡಿತ ಸಾಧಿಸುತ್ತಿರುವಿರಿ...
ಅಭಿನಂದನೆಗಳು....
ಪ್ರಕಾಶ್ ಹೆಗ್ಡೆ ಅವರೇ, ನಾನು ನಾಲ್ಕು ದಿನ ಊರಿನಲ್ಲಿರಲಿಲ್ಲ, ಆದ್ದರಿಂದ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳನ್ನು ತಿಳಿಸುವುದು ತಡವಾಯಿತು! ಇದಕ್ಕಾಗಿ ವಿಷಾದಿಸುತ್ತೇನೆ. ನಿಮ್ಮ ಅಭಿಪ್ರಾಯಕ್ಕೆ ಮತ್ತು ಭೇಟಿಗೆ ನನ್ನ ಧನ್ಯವಾದಗಳು! ಹೀಗೆ ಬರುತ್ತಾ ಇರಿ.....!
ನಿಮ್ಮ ಬರಹ ಚೆನ್ನಾಗಿದೆ!! ನಾವುಗಳು ಊರಿಗೊದಾಗ ಬಹಳಷ್ಟು ಅನುಭವವಾಗಿವೆ, ಕಳೆದಬಾರಿ ಹೋದಾಗ ಒಂದೇ ದಿನ ೫ ಮನೆಯಲ್ಲಿ ವಡೆ ಬೋಂಡವೆಂದು ನಮಗೆ ತುಂಬಿ ಮತ್ತೆಂದು ವಡೆ ಬೋಂಡವೆಂದರೆ ಭಯವಾಗುವ ಹಾಗೇ ಮಾಡಿಬಿಟ್ಟಿದ್ದರು...ಹಾ ಹಾ..
ನಿಮ್ಮ ಅಕ್ಕನ ಮಗನು ಪೋಲೀಸ್ ಆಗುವ ಮುಂಚೆ ಗುಂಡೇಟು ಕೊಟ್ಟಿದ್ದಾನೇ ನೀವೆಲ್ಲ ಹುಷಾರು!!! ಹಾ ಹಾ ಹಾ ಮಕ್ಕಳ ಮಾತೇ ಚೆನ್ನ....
ನಿಮ್ಮ ಲೇಖನ ನೋಡಿ ನಾನು ಊರಿಗೆ ಹೋರಡುವ ತಯಾರಿಯಲ್ಲಿದ್ದೇನೆ ಏನೇನು ಹರಟೆ ನೆಡೆಸಬೇಕೆಂದು ಯೋಚಿಸುವಂತೆ ಮಾಡಿದೆ ಹಾ ಹಾ... ನಮ್ಮ ಅಕ್ಕ,ಅತ್ತಿಗೆ ಎಲ್ಲರೊ ಮಾತಿಗೆ ಕುಳಿತರೆ ದಿನ ಕಳೆಯುವುದೇ ಗೊತ್ತಗೊಲ್ಲ...ಹಾ ಹಾ
ವಂದನೆಗಳು
ಮನಸು ಅವರೇ, ನನ್ನ ಬ್ಲಾಗಿಗೆ ಸ್ವಾಗತ! ನೀವು ಬಂದದ್ದು ನನಗೆ ಬಹಳ ಸಂತೋಷವಾಗಿದೆ! ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ಊರಿಗೆ ಹೋಗಿ ಬಂದ ನಂತರ ನಿಮ್ಮ ಹರಟೆ ಪ್ರಸಂಗ, ಅನುಭವ ಮುಂತಾದುವುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತೀರೆಂದು ಆಶಿಸುತ್ತೇನೆ!! ಹೀಗೆ ಭೇಟಿ ನೀಡುತ್ತಿರಿ, ಮತ್ತೊಮ್ಮೆ ಧನ್ಯವಾದಗಳು.
ಎಸ್ ಎಸ್ ಕೆ ಅವರೇ
ನಿಮ್ಮ ಬ್ಲಾಗ್ಗೆ ಮೊದಲ ಭೇಟಿ
ರಜಾ ಮಜಾದ ಅನುಭವ ಚೆನ್ನಾಗಿದೆ
ಇನ್ನೂ ಬರೆಯಿರಿ ಸೊಗಸಾಗಿ, ಮುದ್ದಾಗಿ
ರೂಪ ಅವರೇ ನನ್ನ ಬ್ಲಾಗಿಗೆ ಸುಸ್ವಾಗತ! ರಜಾ ಮಜಾ ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!! ನಿಮ್ಮ ಅನಿಸಿಕೆಯನ್ನು ಮನಸಾರೆ ಸ್ವೀಕರಿಸುತ್ತೇನೆ, ಇನ್ನೂ ಚೆಂದದ ಲೇಖನಗಳನ್ನು ಬರೆಯಲು ಪ್ರಯತ್ನಿಸುತ್ತೇನೆ. ಹೀಗೆ ಭೇಟಿ ನೀಡುತ್ತಿರಿ.
'ರಜಾ ಮಜಾ' ಮಜವಾಗಿದೆ.
ಅಗ್ನಿ ಅವರೇ,
ನನ್ನ ಬ್ಲಾಗಿಗೆ ಸ್ವಾಗತ! ರಜಾ ಮಜಾ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಭೇಟಿ ನಿರಂತರವಾಗಿರಲಿ!!
Post a Comment