Tuesday, September 22, 2009

ಗೆಳತಿಗಾಗಿ......!

ಸ್ನೇಹಿತರೇ, ನನ್ನ ಅಗಲಿದ ಗೆಳತಿಯ ನೆನಪಿನಲ್ಲಿ, ಮತ್ತು ಮೊದಲ ಪ್ರಯತ್ನವಾಗಿ ಈ ಒಂದು ಪುಟ್ಟ ಕವಿತೆಯನ್ನು (ಅಂತ ನಾನು ಹೇಳ್ತಾ ಇದ್ದೀನಿ ಆದರೆ ಇದು ಕವಿತೆನಾ ಅಥವಾ ಆಲ್ವಾ ಅಂತ ನೀವು ತಿಳಿದವರು ಹೇಳಿ) ಬರೆಯುತ್ತಿದ್ದೇನೆ.......!ನೀನೆಲ್ಲಿರುವೆ ನನ್ನ ಗೆಳತಿಯೇ?
ಕೂತಲ್ಲಿ ನಿಂತಲ್ಲಿ ಕನಸಲ್ಲಿ ನನಸಲ್ಲಿ
ಎಲ್ಲೆಲ್ಲೂ ನಿನ್ನ ನೆನಪೇ ನನ್ನ ಕಾಡುತಿಹುದಲ್ಲ
ಕಾಣದಂತೆ ನೀ ಏಕೆ ಹೀಗೆ ಮರೆಯಾದೆ ಸಖಿಯೇ!

ನನಗೆ ನೀನಿದ್ದೆ, ನಿನಗೆ ನಾನಿದ್ದೆ
ನಮ್ಮ ಕಷ್ಟ ಸುಖಗಳ ಹಂಚಿಕೊಳುವಲ್ಲಿ
ನಿನ್ನೆಲ್ಲಾ ಇಷ್ಟಾನಿಷ್ಟಗಳನ್ನು ಹೇಳಿದ್ದೆ ನನ್ನಲ್ಲಿ
ನಿನ್ನ ಮಾತು ಮೌನಗಳಿಗೆ ನಾ ಕಿವಿಯಾಗಿದ್ದೆ

ಮದುವೆಯಾಗಿ ವರ್ಷಗಳೈದು ಕಳೆದರೂ
ತುಂಬಿಲ್ಲ ಎನ್ನ ಮಡಿಲು ಎಂದು ಕೊರಗಿದ್ದೆ ನೀನು
ಅದೆಷ್ಟು ಸಾಂತ್ವನದ ನುಡಿಗಳನು ಹೇಳಿದ್ದೆ ನಾನು
ಅದಕಾಗಿ ಪೂಜೆ, ಪ್ರಾರ್ಥನೆಗಳನ್ನು ಮಾಡಿದ್ದೆವು ನಾವು

ಅದಾವ ಭಗವಂತನ ಕರುಣೆಯೋ ಕಾಣೆ
ಮೊರೆ ಆಲಿಸಿದ ದೇವರು ನಿನ್ನಾಸೆಯ ಪೂರೈಸಿದ್ದ
ಗರ್ಭ ಧರಿಸಿದೆ, ತಾಯಿಯಾದೆ
ಮುದ್ದಾದ ಮಗುವೊಂದಕ್ಕೆ ಜನ್ಮ ನೀಡಿದೆ!

ನೋಡ ನೋಡುತ್ತಾ, ಕಾಲ ಕಳೆದಂತೆ
ಕ್ಷಣ ಕೂಡ ಮಗನನ್ನು ಅಗಲಿರದಂತೆ
ಜೀವಕ್ಕೆ ಉಸಿರಂತೆ, ನಯನಕ್ಕೆ ನೋಟದಂತೆ
ಅವನ ಆಟ ಊಟ ಪಾಟಗಳಲಿ ನೀ ಮುಳುಗಿ ಹೋದೆ

ಆದರೇ..... ನಿನ್ನದೇ ಮುದ್ದು ಕಂದಮ್ಮನಿಗೆ
ವರ್ಷಗಳು ಐದು ಕಳೆಯುವಾ ವೇಳೆಗೆ
ತಿರುಗಿ ಬಾರದ ಲೋಕಕ್ಕೆ ನೀ ಹೊರಟುಹೋದೆ
ಯಾರಿಗೂ ಕಾಣದಂತೆ ಕಣ್ಮರೆಯಾದೆ ನಿನಗಿದು ನ್ಯಾಯವೇ?

ಲೋಕ ಜ್ಞಾನ ಅರಿಯದ ಮಗುವನ್ನು
ಅನಾಥನನ್ನಾಗಿ ಮಾಡಿದೆ ನೀನು
ಇದಕೆ ಏಕೆ ಕೊರಗಿದ್ದೆ ಅಂದು ನೀನು
ಮಗುವಾಗಲಿಲ್ಲವಲ್ಲ ಎಂದು

ನನ್ನೆಲ್ಲ ಪ್ರಶ್ನೆಗಳಿಗೆ ನಿನ್ನ ಮಗನ ಭವಿಷ್ಯಕ್ಕೆ
ನೀನೆಲ್ಲಿದ್ದರೂ ಬಂದು ಉತ್ತರ ತಿಳಿಸು
ಇಲ್ಲದಿದ್ದರೆ...... ನಾವಿಬ್ಬರೂ ನಿನ್ನನ್ನು,
ಕ್ಷಮಿಸಲಾರೆವು ಎಂದೆಂದಿಗೂ.........!!!


ನಿನ್ನದೇ ನೆನಪಲ್ಲಿ ದುಃಖಿಯಾಗಿರುವ ನಿನ್ನ ಗೆಳತಿ........!!!!!

Saturday, September 5, 2009

ಅಪಾತ್ರ ದಾನ.....

ಅದೊಂದು ದಿನ ಬೆಳಗ್ಗೆ, ಮನೆಯ ಅಕ್ಕ ಪಕ್ಕದ ಕೆಲವು ಜನರು ಹೋಯ್, ಹೋಯ್ ಎಂದು ಕೂಗುತ್ತಾ ಕೋಲಿನಿಂದ ಗೇಟಿನ ಮೇಲೆ ಕಾಂಪೌಂಡ್ ಮೇಲೆಲ್ಲಾ ಹೊಡೆಯುತ್ತಿದ್ದರು. ಏನದು ಸದ್ದು ಎಂದು ನಾನು ಹೊರಗೆ ಹೋಗಿ ನೋಡಿದರೆ, ಕೋತಿಗಳ ಹಿಂಡೊಂದು (ಗುಂಪು) ಬಂದಿದ್ದವು! ನಾನು ಹೋಗಿ ನೋಡುವಷ್ಟರಲ್ಲಿ, ಹಾಲಿಗೆಂದು ಗೇಟಿಗೆ ಸಿಗಿಸಿ ಇಟ್ಟಿದ್ದ ಬ್ಯಾಗ್ ಅನ್ನು ಕಿತ್ತಾಡಿ ಅದರಲ್ಲಿದ್ದ ಹಾಲಿನ ಪ್ಯಾಕೆಟ್ ಅನ್ನೂ ಸಹ ಕಿತ್ತು ಕೆಳಗೆಲ್ಲಾ ಚೆಲ್ಲಾಡಿ ಮಿಕ್ಕ ಹಾಲನ್ನು ಕುಡಿಯುತ್ತಾ ಕಾಂಪೌಂಡ್ ಮೇಲೆ ಧಡಿ ಕೋತಿಯೊಂದು ಕೂತಿತ್ತು. ನಾನು ಹೊರಗೆ ಬಂದದ್ದು ನೋಡಿ ಎದುರು ಮನೆ ಅಜ್ಜಿ ಒಬ್ಬರು, ಮಹಡಿಯ ಮೇಲಿಂದ, ಅಯ್ಯೋ ಅನ್ಯಾಯಮ ಪಾಲೆಲ್ಲ ಪೋಚ್ಚಿ, ಎಪ್ಪಡಿ ಪನ್ನಿಟ್ಇರುಕ್ಕುದು ಪಾರುಮ್ಮ (ಅನ್ಯಾಯವಾಗಿ ಹಾಲೆಲ್ಲ ಹೋಯಿತು, ಹೇಗೆ ಮಾಡಿದೆ ನೋಡಮ್ಮ) ಎಂದು ಹೇಳಿದರು.

ನಿಜ ಆ ಕೋತಿಯು ಗೇಟಿನ ಒಳ ಭಾಗ, ಹೊರಭಾಗ ಮತ್ತು ರಂಗೋಲಿ ಬಿಡುವ ಜಾಗದಲ್ಲೆಲ್ಲ ಹಾಲನ್ನು ಚೆಲ್ಲಾಡಿತ್ತು. ಅದನ್ನೆಲ್ಲಾ ನೋಡಿದ ನನಗೆ ಯಾಕೋ ಕೋಪ ಬರಲಿಲ್ಲ. ನಾನು ಮನಸ್ಸಿನಲ್ಲೇ, ಹೋಗಲಿ ಬಿಡು ನಮಗೆ ಒಂದು ದಿನ ಹಾಲಿಲ್ಲದಿದ್ದರೆ ಏನಂತೆ, ಒಂದು ಮೂಕ ಪ್ರಾಣಿ ತನ್ನ ಹೊಟ್ಟೆ ತುಂಬಿಸಿ ಕೊಂಡಿತಲ್ಲಾ ಅಂದುಕೊಂಡು ಒಳಗೆ ಬಂದು ಒಂದು ಬಾಳೆಹಣ್ಣನ್ನು ಸಹ ಅದಕ್ಕೆ ತಂದು ಕೊಟ್ಟೆ. ನನಗೆ ಅದರ ಕೈಗೆ ಕೊಡಲು ಭಯ ಎಲ್ಲಿ ಪರಚಿ ಬಿಡುತ್ತೋ ಎಂದು. ಅದಕ್ಕೆ ಬಾಗಿಲ ಹತ್ತಿರ ನಿಂತುಕೊಂಡು ಮೆತ್ತಗೆ ಎಸೆದೆ. ಅದು ಹಣ್ಣನ್ನು ಕ್ಯಾಚ್ ಹಿಡಿದು, ಕತ್ತು ಮುಂದೆ ಮಾಡಿ ನನ್ನನ್ನೇ ನೋಡುತ್ತಾ ಗುರ್ರ್ ಎಂದು ಗುಟುರು ಹಾಕಿತು. ಆಗ ನಾನು ನನ್ನಲ್ಲೇ ಅಂದುಕೊಂಡೆ, ಹಣ್ಣು ತೋರಿಸಿ ಅದಕ್ಕೆ ಕೊಡದೆ ಇದ್ದಿದ್ದರೆ ಅದು ಗುರಾಯಿಸುವುದು ಸರಿ, ಹಣ್ಣು ಕೊಟ್ಟ ಮೇಲೂ ಯಾಕೆ ಗುರ್ರ್ ಎನ್ನುತ್ತಿದೆ ಅಂತ! ಆದರೆ ಅದು ಮಾಡಿದ ರೀತಿ ನೋಡಿ, ನನಗೆ ಪ್ರಾಣಿಗಳ ಭಾಷೆ ತಿಳಿಯದಿದ್ದರೂ, ಅದು ಧನ್ಯವಾದ ಹೇಳಿತು ಎಂದು ಗೊತ್ತಾಯಿತು. ಓಕೆ ಅಂತ ಹೇಳಿ ಅದಕ್ಕೊಂದು ಸ್ಮೈಲ್ ಕೊಟ್ಟು, ಬಾಗಿಲು ಮುಚ್ಚಿ ಒಳಗೆ ಬಂದೆ.

ಕೆಲಸದಿಂದ ಹಿಂದಿರುಗಿ ಬಂದ ನನ್ನವರಿಗೆ ಎಲ್ಲವನ್ನೂ ಹೇಳಿ, ಏನೋ, ಒಂದು ದಿನ ಹೀಗೆ ಮಾಡಿತು ಆದರೆ ಹಾಲಿಡುವುದಕ್ಕೆ ಬೇರೆ ವ್ಯವಸ್ಥೆ ಮಾಡದಿದ್ದರೆ ನಮಗೆ ಹಾಲೇ ಸಿಗುವುದಿಲ್ಲ ಎಂದು ಹೇಳಿದೆ. ಅದಕ್ಕವರು ಆಯಿತು ಬಿಡು, ಸ್ವಲ್ಪ ದಿನ ಬ್ಯಾಗ್, ಬುಟ್ಟಿ ಯಾವುದೂ ಇಡುವುದು ಬೇಡ, ಪೋಸ್ಟ್ ಡಬ್ಬದ ಒಳಗೆ ಹಾಲು ಇಡುವಂತೆ ಹಾಲಿನವನಿಗೆ ಹೇಳುತ್ತೇನೆ ಎಂದರು.

ಇದೆಲ್ಲ ಕೋತಿ ಕಥೆ ನಡೆದದ್ದು ಕಳೆದ ತಿಂಗಳು. ಇತ್ತೀಚಿಗೆ ಏನಾಯಿತು ಗೊತ್ತಾ.....?ಕೆಲವು ದಿನಗಳ ಮಟ್ಟಿಗೆ ನಾವು ಯಾವುದೋ ವ್ರತ ಕೈಗೊಂಡಿದ್ದರಿಂದ, ವ್ರತ ಮುಗಿಯುವ ವರೆಗೂ ಆವತ್ತಿನ ಅಡುಗೆ ಆ ದಿನವೇ ಮುಗಿಸಬೇಕು, ಅಕಸ್ಮಾತ್ ಮಿಕ್ಕಿದರೂ ತಂಗಳು ತಿನ್ನಬಾರದು ಎಂದು ಹಿರಿಯರು ಹೇಳಿದ್ದರು. ಅದರಂತೆಯೇ ನಾನು ಸಾಧ್ಯವಾದಷ್ಟೂ ಅಳತೆಯಾಗಿಯೇ ಅಡುಗೆ ಮಾಡುತ್ತಿದ್ದೆ. ಏಕೆಂದರೆ ದುಬಾರಿಯ ಈ ಕಾಲದಲ್ಲಿ ಪದಾರ್ಥಗಳನ್ನು ವೇಸ್ಟ್ ಮಾಡುವ ಹಾಗಿಲ್ಲವಲ್ಲ.

ಆದರೆ ಆ ದಿನ (sept 02) ನನ್ನ ಗೆಳತಿಯ ಸಾವಿನ ಸುದ್ದಿ ತಿಳಿದ ನನಗೆ, ಆ ದುಃಖದಲ್ಲಿ ಊಟ ಸೇರಿರರಿಲ್ಲ. ಮಾರನೆ ದಿನ ಅದನ್ನು ನಾವು ಉಪಯೋಗಿಸುವ ಹಾಗು ಇರಲಿಲ್ಲ ಮತ್ತು ಅದನ್ನು ಹಾಗೆ ಕಸದಲ್ಲಿ ಚಲ್ಲುವ ಮನಸ್ಸು ಬರಲಿಲ್ಲ. ಹಾಗಾಗಿ ನಾನು ಹೊರಗೆ ಗುಡಿಸಿ ರಂಗೋಲಿ ಹಾಕುತ್ತಿದ್ದಾಗ, ಮುಂದಿನ ರಸ್ತೆಯಲ್ಲಿ ಫುಟ್ಪಾತ್ ಮೇಲೆ ಪ್ಲಾಸ್ಟಿಕ್ ಸಾಮಾನುಗಳನ್ನು ಮಾರುವ ಒಬ್ಬಾಕೆ, (ಅವಳು ನಮ್ಮ ಅಕ್ಕಪಕ್ಕದ ಮನೆಗಳಲ್ಲೂ ಕೆಲಸ ಮಾಡಲು ಬರುತ್ತಾಳೆ, ಅಲ್ಲದೆ ನಾನು ತರಕಾರಿ, ಮತ್ತು ದಿನಸಿ ಸಾಮಾನುಗಳನ್ನು ತರಲು ಆಗಾಗ ಅಂಗಡಿಗೆ ಹೋದಾಗ ನನ್ನನ್ನು ಕಂಡಾಗ ಸ್ಮೈಲ್ ಕೊಡುತ್ತಿದ್ದಳು, ಒಮ್ಮೊಮ್ಮೆ ಮಾತಾಡಿಸುತ್ತಲೂ ಇದ್ದಳು. ಅವಳಿಗೆ ಮೂರು ಜನ ಮಕ್ಕಳು.) ಅವಳನ್ನು ಕಂಡಾಗ, ಪೊಂಗಲ್ ಇದೆ ಕೊಡಲಾ, ತಗೋತೀಯಾ....? ಎಂದು ಕೇಳಿದೆ. ಅದಕ್ಕವಳು ತಂಗಳ ಅಕ್ಕ ಎಂದು ಕೇಳಿದಳು. ಹ್ಞೂ.... ಹೌದು ಚೆನ್ನಾಗೇ ಇದೆ, ರಾತ್ರಿನೂ ಬಿಸಿ ಮಾಡಿದ್ದೀನಿ ಬೇಕಿದ್ದರೆ ಈಗಲೂ ಬಿಸಿ ಮಾಡಿ ಕೊಡುತ್ತೀನಿ ಎಂದು ಹೇಳಿದೆ. ಆಗ ಅವಳೊಂದಿಗೆ ಬಂದಿದ್ದ ಒಬ್ಬ ಮಗನಿಗೆ, ಆಂಟಿ ಅನ್ನ ಕೊಡ್ತಾರಂತೆ ಇಸ್ಕೊಂಡು ಬಾರೋ ಅಂತ ಹೇಳಿ ಅವನನ್ನು ಬಿಟ್ಟು ಹೋದಳು. ಹೇಳಿದ ಪ್ರಕಾರ ನಾನು ಬಿಸಿ ಮಾಡಿ ಕೆಲವು ನಿಮಿಷಗಳಲ್ಲಿಯೇ ಆ ಹುಡುಗನ ಕೈಗೆ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪೊಂಗಲ್ ಅನ್ನು ತುಂಬಿಸಿ ಕೊಟ್ಟೆ.

ಅದಾದ ನಂತರ ಆ ದಿನವೆಲ್ಲ ನಾನು ಹೊರಗೆಲ್ಲೂ ಹೋಗಲೇ ಇಲ್ಲ. ಆ ದಿನ ಮಾಡಿದ್ದ ಬಿಸಿಬೇಳೆ ಬಾತ್ ಕೂಡ ಸ್ವಲ್ಪ ಮಿಕ್ಕಿ ಹೋಯಿತು. (ಏನು ಮಾಡುವುದು ಅಡುಗೆ ಎಂದರೆ ಹಾಗೆ ಅಲ್ಲವೇ ಎಷ್ಟು ಅಳತೆಯಾಗಿ ಮಾಡಲು ಪ್ರಯತ್ನಿಸಿದರೂ ಸ್ವಲ್ಪವಾದರೂ ಹೆಚ್ಚು ಅಥವಾ ಕಡಿಮೆ ಆಗೇ ಆಗುತ್ತದೆ.) ಅದನ್ನೂ ಅದೇ ರೀತಿ ಆ ಮಕ್ಕಳಿಗೆ ಕೊಡೋಣ ಎಂದುಕೊಂಡೆ, ಆದರೆ ಆದಿನ ಅವಳಾಗಲಿ, ಮಕ್ಕಳಾಗಲಿ ಕಾಣಿಸಲಿಲ್ಲ. ಸರಿ ಅಲ್ಲೇ ಮುಂದಿನ ರಸ್ತೆಯಲ್ಲೇ ಇರುತ್ತಾಳಲ್ಲ, ಅಂಗಡಿಗೆ ಹೋದಾಗ ನಾನೇ ತೆಗೆದುಕೊಂಡು ಹೋಗಿ ಕೊಡೋಣ ಎಂದುಕೊಂಡು ಸುಮ್ಮನಾದೆ. ಹಾಗೆ ಸ್ವಲ್ಪ ಹೊತ್ತಿನ ನಂತರ ಅಂಗಡಿಗೂ ಹೋದೆ ಆದರೆ ಅನ್ನವನ್ನು ತೆಗೆದುಕೊಂಡು ಹೋಗಲು ಮರೆತೇ.

ಅರೆರೆ.... ತರಕಾರಿ ಕೊಂಡು ವಾಪಸ್ ಮನೆಗೆ ಬರುವಾಗ ನಾನಲ್ಲಿ ಕಂಡ ದೃಷ್ಯವೇನು?ಅಲ್ಲಿ ಖಾಲಿ ಇದ್ದ ಜಾಗದ ಫೆನ್ಸಿಂಗ್ ಹತ್ತಿರ, ನಾನು ನೆನ್ನೆ ಕೊಟ್ಟಿದ್ದ ಆ ಪೊಂಗಲ್ ಡಬ್ಬಿ ಅಲ್ಲಿ ಬಿದ್ದಿತ್ತು ಅಷ್ಟೇ ಅಲ್ಲ ಅದರಲ್ಲಿದ್ದ ಪೊಂಗಲ್ ಎಲ್ಲವೂ ಅಲ್ಲಿನ ಮಣ್ಣಲ್ಲಿ ಬೆರೆತು ಹೋಗಿತ್ತು! ಅದನ್ನು ಕಂಡು ಬೇಸರದಿಂದ ಮನೆಗೆ ಬಂದು, ಒಂದು ಕ್ಷಣ ಯೋಚಿಸಿದೆ. ನಾವು ಸುಮ್ಮನೆ ತಪ್ಪು ತಿಳಿದುಕೊಳ್ಳ ಬಾರದು. ಆ ಡಬ್ಬಿ ಅಕಸ್ಮಾತ್ ಅವನ ಕೈಯಿಂದ ಜಾರಿ ಬಿದ್ದಿರಬಹುದೇ ಎಂದು. ಆದರೆ ಆ ರೀತಿ ಆಗಿರಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿಂದ ಐದಾರು ಹೆಜ್ಜೆ ಮುಂದೆ ಹೋದರೆ ಅಲ್ಲಿ ಮರದ ಪಕ್ಕದಲ್ಲಿ ಕಸ ಹಾಕುವ ಜಾಗವಿದೆ ಅಲ್ಲೇ ಬಿದ್ದಿತ್ತಲ್ಲಾ ಆ ಡಬ್ಬಿ.

ಅವಳು ತನಗೆ ಬೇಡ ಎಂದು ಹೇಳಿದ್ದರೂ, ಅದೇ ರಸ್ತೆಯಲ್ಲಿ ಕಟ್ಟಡದ ಕೆಲಸ ಮಾಡುವವರ ಮಕ್ಕಳಿದ್ದರು ಅವರಿಗಾದರೂ ಕೊಡುತ್ತಿದ್ದೇನಲ್ಲಾ, ಅಕ್ಕಿ, ಬೇಳೆ ಬೆಲೆಗಳು ದುಬಾರಿಯಾಗಿರುವ ಈ ಕಾಲದಲ್ಲಿ ಹೀಗೆ ಮಾಡಿದಳಲ್ಲ ಎಂದು ಬೇಜಾರಾಯಿತು. ಆಗಲೇ ನನಗೆ ಹಿಂದಿನ ಕೋತಿಯ ಪ್ರಸಂಗ ನೆನಪಾಯಿತು ಮತ್ತು ಅಣ್ಣಾವ್ರ ಹಾಡೊಂದು ನೆನಪಿಗೆ ಬಂದಿತು......ಪ್ರಾಣಿಗಳೇ ಗುಣದಲಿ ಮೇಲು........., ಮಾನವನದಕಿಂತ ಕೀಳು......!


ಅಂದಿನಿಂದಾ ಇಂದಿನವರೆಗೂ ಅವಳಾಗಲಿ ಅವಳ ಮಕ್ಕಳಾಗಲಿ ನನಗೆ ಕಣ್ಣಿಗೆ ಕಾಣಿಸಲೇ ಇಲ್ಲ.....!!

Friday, September 4, 2009

ಪುನರಾಗಮನ

ಹಲೋ ಸ್ನೇಹಿತರೇ, ಬಹಳ ದಿನಗಳ ನಂತರ ನನ್ನ ಬ್ಲಾಗಿಗೆ ಮತ್ತು ನಮ್ಮ ಬ್ಲಾಗ್ ಲೋಕಕ್ಕೆ ಹಿಂದಿರುಗಿದ್ದೇನೆ!!! ಇಷ್ಟು ದಿನ ಎಲ್ಲಿ ಕಳೆದು ಹೋಗಿದ್ದೆ ಎಂದು ಕೇಳುತ್ತಿರುವಿರಾ? ಹೀಗೆ ಹಲವಾರು ವಿಧಗಳಲ್ಲಿ ವ್ಯಸ್ತವಾಗಿ ಹೋಗಿದ್ದೆ ಅದಕ್ಕೆ ಇಷ್ಟು ದಿನ ಯಾವುದೇ ಲೇಖನಗಳನ್ನು ಬರೆಯಲಾಗಿರಲಿಲ್ಲ. ಅದಕ್ಕಾಗಿ ವಿಷಾದವಿದೆ. ನಿಮ್ಮೆಲ್ಲರನ್ನು ಮತ್ತು ನಿಮ್ಮ ಲೇಖನಗಳನ್ನು ಮಿಸ್ ಮಾಡಿಕೊಂಡೆ, ಆದರೆ ಸಮಯ ಸಿಕ್ಕಾಗ ಪ್ರತಿಯೊಂದು ಲೇಖನವನ್ನು ತಪ್ಪದೆ ಓದುತ್ತೇನೆ! (ನೀವು ಯಾರೂ ನನ್ನ ಮರೆತಿಲ್ಲ ತಾನೆ?)

ಸ್ನೇಹಿತರೇ, ನಾವು ಎಲ್ಲಿದ್ದರೂ, ಹೇಗಿದ್ದರೂ ಜೀವನ ತನ್ನ ಪಾಡಿಗೆ ತಾನು ಮುನ್ನಡೆಯುತ್ತಿರುತ್ತದೆ! ಈ ಸತ್ಯ ಎಲ್ಲರಿಗೂ ತಿಳಿದಿರುವಂತಹುದು. ಈ ಜೀವನ ಜಂಜಾಟದಲ್ಲಿ, ಪ್ರತಿಯೊಬ್ಬ ಮನುಷ್ಯನೂ ಎಲ್ಲಾ ತರಹದ ಅನುಭೂತಿಯನ್ನು ಅನುಭವಿಸಬೇಕಾಗುತ್ತದೆ. ನೋವು, ನಲಿವು, ಸುಖ, ದುಃಖ, ಸೋಲು, ಗೆಲುವು, ಸಂತೋಷ, ವ್ಯಥೆ.... ಹೀಗೆ ಇನ್ನೂ ಮುಂತಾದುವು. ಇವೆಲ್ಲಾ ಎಲ್ಲರ ಬದುಕಿನಲ್ಲೂ ಆಗಾಗ ಬಂದು ಹೋಗುವಂತಾ, ಅನುಭವಗಳು.


ಇಷ್ಟು ದಿನಗಳ ನನ್ನ ಗೈರು ಹಾಜರಿಯಲ್ಲಿ ನಾನು ಇವೆಲ್ಲವನ್ನೂ ಅನುಭವಿಸಿದ್ದೇನೆ. ಅಂದರೆ ಇವೆಲ್ಲ ನಮ್ಮ ಜೀವನದ ಒಂದು ಭಾಗ ನಿಜ, ಆದರೆ ಇವೆಲ್ಲವನ್ನೂ, ಒಟ್ಟೊಟ್ಟಿಗೆ ಅಥವಾ ಒಂದರ ನಂತರ ಮತ್ತೊಂದು ಎನ್ನುವಂತೆ ಬೆಂಬಿಡದ ಭೂತವನ್ನು ಸಂಭಾಳಿಸಿದಂತೆ ಈ ಎಲ್ಲಾ ಸಂಧರ್ಭಗಳನ್ನೂ ಒಂದು ಸೀಸನ್ ಎಂಬಂತೆ ಒಮ್ಮೆಲೇ ಎಲ್ಲ ತರಹದ ಅನುಭೂತಿಯನ್ನು ಪಡೆದುಕೊಂಡೆ.

ಸಮಾರಂಭ, ಪ್ರವಾಸ, ಕೆಲಸ, ಓಡಾಟ, ಆತ್ಮೀಯರೊಂದಿಗಿನ ಒಡನಾಟ, ಇವೆಲ್ಲವುಗಳ ಜೊತೆ ಜೊತೆಯಲ್ಲೇ, ಇತ್ತೀಚಿಗೆ ನನ್ನ ಆತ್ಮೀಯ ಗೆಳತಿಯೊಬ್ಬಳ ಅಗಲಿಕೆಯ ನೋವು, ದುಃಖ ಇವೆ ಮುಂತಾದುವು. ಈ ಎಲ್ಲ ನೆನಪುಗಳನ್ನು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಜೊತೆಗೆ ಕೆಲವು ಅಪೂರ್ಣ ಲೇಖನಗಳನ್ನು ಪೂರ್ತಿಗೊಳಿಸಬೇಕಿದೆ.