Saturday, March 28, 2009

ಕಥೆ: ಸಹನಾಮಯಿ.... ಭಾಗ 2

ಈ ಕಥೆಯಲ್ಲಿ ಬರುವ ವ್ಯಕ್ತಿ, ವಿಷಯಗಳು ಕೇವಲ ಕಾಲ್ಪನಿಕ. ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳಿಯ ಮಾತ್ರ.

ಆ ದಿನ ಶನಿವಾರ ಸುಶೀಲಮ್ಮ ನವರು ನೆಂಟರೊಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದುದರಿಂದ ಅಲ್ಲಿಗೆ ಹೋಗುವ ಕಾರ್ಯಕ್ರಮವಿತ್ತು. ಬೆಳಗ್ಗೆ ಗಂಡನಿಗೆ ಮತ್ತು ಸ್ವಪ್ನಳಿಗೆ ತಿಂಡಿ ಕೊಟ್ಟು, ತಾವೂ ತಿಂಡಿ ತಿನ್ನುತ್ತಾ ಹೇಳಿದರು, ಇನ್ನು ನಾನು ಬರುವುದು ಸಂಜೆಯಾಗುತ್ತದೆ..... ಎಂದು ಹೇಳಿ ಮುಗಿಸುವಷ್ಟರಲ್ಲಿ ಪತಿರಾಯರು ಮಧ್ಯದಲ್ಲಿ ಮಾತನಾಡಿ, ಈಗ ನೀನಿಲ್ಲಿದ್ದು ಮಾಡುವುದಾದರೂ ಏನು, ಒಂದೆರಡು ದಿನ ಅಲ್ಲೇ ಇದ್ದು ಬಾ ಅವಸರವೇನಿಲ್ಲ ಎಂದು ಛೇಡಿಸಿದರು. ಅದಕ್ಕೆ ಇವರು ಹುಸಿ ಮುನಿಸು ತೋರುತ್ತಾ ಹಾಗೆ ಒಂದು ಬಿಂಕದ ನೋಟವನ್ನು ಪತಿಯೆಡೆಗೆ ನಾಟಿದರು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ವಪ್ನಳಿಗೆ ನಗು ತಡೆಯಲಾಗಲಿಲ್ಲ, ನಂತರ ಇವರಿಬ್ಬರು ಸಹ ಅವಳೊಂದಿಗೆ ಸೇರಿ ನಗುತ್ತಿದ್ದರು.

ಇಡ್ಲಿಗೆ ಮಾಡಿದ್ದ ಸಾಂಬಾರ್ ಅನ್ನು ಒಂದು ಬಟ್ಟಲಲ್ಲಿ ಹಾಕಿ ಸ್ವಪ್ನಳಿಗೆ ಕೊಡುತ್ತಾ, ಮಧ್ಯಾನ್ಹ ಊಟಕ್ಕೆ ಸಾಂಬಾರ್ ತಗೋಮ್ಮ ಅಂತ ಹೇಳಿದರು. ಆಗ ಸ್ವಪ್ನ, ಬೇಡ ಆಂಟಿ ಈವತ್ತು ಶನಿವಾರ ರಜಾ ಅಲ್ವ ಅದಕ್ಕೆ ನಾನೇ ಅಡುಗೆ ಮಾಡಿಕೊಳ್ಳುತ್ತೇನೆ ನಿಮಗೆ ಯಾಕೆ ತೊಂದರೆ ಅದು ಅಲ್ಲದೆ ಈಗಲೇ ಹೊಟ್ಟೆ ಬಿರಿಯುವಷ್ಟು ತಿಂಡಿ ತಿಂದಿದ್ದೇನೆ, ಮಧ್ಯಾನ್ನಕ್ಕೆ ಊಟನೇ ಬೇಡವೇನೋ ಎಂದು ಹೇಳಿದಳು. ಅದಕ್ಕೆ ಸುಶೀಲಮ್ಮನವರು, ನೋಡು ನೀನು ಹೀಗೆಲ್ಲಾ ಹೇಳಿದರೆ ನಾನು ನಿನ್ನ ಮಾತನಾಡಿಸುವುದಿಲ್ಲ ಆಮೇಲೆ ನಿನ್ನಿಷ್ಟ, ಅಷ್ಟೆ ಅಲ್ಲ ನಾನು ಇಷ್ಟೊಂದು ತಿಂದಿದ್ದೀನಿ ಅಂತ ಆಚೆ ಯಾರ ಹತ್ರನೂ ಹೇಳೋಕ್ಕೆ ಹೋಗಬೇಡ ಆಮೇಲೆ ಯಾರಾದ್ರೂ ಕಣ್ಣು ಹಾಕಿಬಿಟ್ಟಾರು ನಮ್ಮ ಮಗು ಮೇಲೆ ಅಂತ ತಮಾಷೆ ಮಾಡಿದರು. ಮತ್ತೆ ಎಲ್ಲರು ಮನಸಾರೆ ನಕ್ಕು ಇನ್ನಷ್ಟು ಹಗುರಾದರು.
ನಂತರ ಸ್ವಪ್ನ ಸಾರೀ ಆಂಟಿ ಅಂತ ಕಣ್ಣು ಮಿಟುಕಿಸುತ್ತ, ಬಟ್ಟಲು ತೆಗೆದುಕೊಂಡು ಥ್ಯಾಂಕ್ಸ್ ಆಂಟಿ ಹೋಗಿ ಬರುತ್ತೇನೆ, ಅಂಕಲ್ ನಿಮಗೂ ಟಾಟಾ ಅಂತ ತುಂಟ ನಗೆ ಬೀರಿ ಹೊರನಡೆದಳು. ಸ್ವಲ್ಪ ಹೊತ್ತಿನಲ್ಲಿಯೇ ಇವರಿಬ್ಬರು ಮನೆ ಬೀಗ ಹಾಕಿ ಹೊರಟರು.

ಮಧ್ಯಾನ್ನದ ವರೆಗೂ ಮಾಡಬೇಕಿದ್ದ ಕಂಪನಿ ಮತ್ತು ಮನೆ ಕೆಲಸ ಮಾಡಿ, ನಂತರ ಊಟ ಮುಗಿಸಿ ಸ್ವಪ್ನ ಮೊಬೈಲ್ ಗೆ ಕರೆನ್ಸಿ ಹಾಕಿಸುವ ಎಂದು ತಯಾರಾಗಿ ಬೀಗ ಹಾಕಿ ಹೊರಟಳು. ಶಾಪ್ ಹತ್ತಿರದಲ್ಲೆ ಇದ್ದುದರಿಂದ ನಡೆದೇ ಹೋಗಿ ಬರೋಣ ಎಂದು ಗಾಡಿ ತೆಗೆದುಕೊಳ್ಳಲಿಲ್ಲ.
ಅಲ್ಲಿ ಅವಳು ಹಣ ಭರ್ತಿ ಮಾಡಿಸಿ, ಹೊರಗೆ ಬಂದು ಮೆಟ್ಟಿಲಿಳಿಯುವಾಗ ಅಕಸ್ಮಾತ್ತಾಗಿ ಅವಳ ಚಪ್ಪಲಿಯ ಪಟ್ಟಿ ಕಿತ್ತು ಹೋಗಿ ಕಾಲು ಹುಳುಕಿದಂತಾಗಿ ಬಿಳುವುದರಲ್ಲಿದ್ದಳು. ಅದೇ ಸಮಯಕ್ಕೆ ಬೈಕ್ ಕೀ ತಿರುಗಿಸುತ್ತಾ ಶಿಳ್ಳೆ ಹಾಕಿಕೊಂಡು ಅದೇ ಶಾಪ್ ಗೆ ಬರುತ್ತಿದ್ದ ಹುಡುಗ ಇವಳು ಬಿಳುವುದರಲ್ಲಿರುವುದನ್ನು ಗಮನಿಸಿ ತಕ್ಷಣ ಅವಳನ್ನು ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿದ. ಜಾಸ್ತಿ ಮೆಟ್ಟಿಲುಗಳು ಇರಲ್ಲಿಲ್ಲ, ಅಂಗಡಿಯ ಮುಂಬಾಗಿಲ ದೊಡ್ಡ ಗಾಜಿನ ಬಾಗಿಲಿನ ಅಷ್ಟೂ ಅಗಲಕ್ಕು ಏಳೆಂಟು ಮೆಟ್ಟಿಲುಗಳಿದ್ದವು ಅಷ್ಟೆ, ಆದರೆ ಆ ಕಡೆ, ಈ ಕಡೆ ಹಿಡಿದು ಕೊಳ್ಳಲು ಯಾವುದೇ ಕಂಬಿಗಳು ಇರಲಿಲ್ಲಾ. ಆದ್ದರಿಂದ ಅವಳಿಗೆ ಬೀಳುವ ಸಮಯದಲ್ಲಿ ಹಿಡಿದುಕೊಳ್ಳಲು ಆಸರೆಗೆ ಏನು ಸಿಗಲಿಲ್ಲ.

ಅವನು ಅವಳನ್ನು ಹಿಡಿದುಕೊಂಡಿದ್ದರಿಂದ, ಅವಳು ಪೂರ್ತಿ ಕೆಳಗೆ ಬೀಳುವುದು ತಪ್ಪಿತು. ಕಾಲು ಸ್ವಲ್ಪ ಹುಳುಕಿದ್ದರಿಂದ ಮತ್ತು ಚಪ್ಪಲಿಯೂ ಕಿತ್ತು ಹೋಗಿದ್ದರಿಂದ ಸ್ವಪ್ನ ಸ್ವತಹ ನಡೆಯಲಾಗದೆ ಉಳಿದ ಮೆಟ್ಟಿಲನ್ನು ಅವನ ಆಸರೆಯಿಂದಲೇ ಇಳಿದು, ಪಕ್ಕದಲ್ಲಿದ್ದ ಒಂದು ಕಟ್ಟೆಯ ಹತ್ತಿರ ಬಂದು ಕೂರುತ್ತಾ ಅವನಿಗೆ ಥ್ಯಾಂಕ್ಸ್ ಹೇಳುತ್ತಾ ಸುತ್ತಲೂ ಒಮ್ಮೆ ನೋಡಿದಳು. ಮಧ್ಯಾನ್ಹದ ಆ ವೇಳೆಯಲ್ಲಿ ಅಲ್ಲಿ ಅಷ್ಟಾಗಿ ಯಾರು ಜನರಿಲ್ಲದ ಕಾರಣ ಅವಳಿಗೆ ಸ್ವಲ್ಪ ನಿರಾಳವೆನಿಸಿತು. ಇಲ್ಲದಿದ್ದರೆ ಎಲ್ಲರು ಬಂದು ಮುತ್ತಿಕೊಂಡು ಏನಾಯಿತು ಎಂದು ಮುಗಿಬಿಳುವುದು ಅವಳಿಗೆ ಇಷ್ಟವಿರಲಿಲ್ಲ. ಈ ಮಧ್ಯೆ ಅವನು, ಕುಡಿಯಲು ನೀರೆನಾದರು ಬೇಕಾ, ಬನ್ನಿ ಡಾಕ್ಟರ್ ಬಳಿ ಹೋಗೋಣ ಎಂದು ಸೌಜನ್ಯದಿಂದ ವಿಚಾರಿಸಿಕೊಳ್ಳುತ್ತಿದ್ದ. ಅದಕ್ಕೆ ಅವಳು ಇಷ್ಟಕ್ಕೆಲ್ಲಾ ಡಾಕ್ಟರ್ ಹತ್ತಿರ
ಯಾಕೆ, ಸ್ವಲ್ಪ ಹೊತ್ತಿನ ನಂತರ ಸರಿ ಹೋಗುತ್ತೆ ಬಿಡಿ ಎಂದು ಹೇಳಿದಳು. ಅಷ್ಟರಲ್ಲಿ ಅವನು ಸುತ್ತಾ ಕಣ್ಣಾಡಿಸಿ, ಆಟೋ ಕರೆಯುವುದಾಗಿ ಹೇಳಿದನು. ಬೇಡ, ಬೇಡ ನಮ್ಮ ಮನೆ ಇಲ್ಲೇ ಹತ್ತಿರದಲ್ಲೆ ಇದೆ. ಡಾಕ್ಟರ್ ಹತ್ತಿರ ಹೋಗೋದೆಲ್ಲ ಬೇಡ. ನನ್ನಿಂದ ನಿಮಗೆ ತೊಂದರೆಯಾಯಿತು ಕ್ಷಮಿಸಿ, ನಿಮ್ಮ ಉಪಕಾರಕ್ಕೆ ಮತ್ತೊಮ್ಮೆ ನನ್ನ ಧನ್ಯವಾದಗಳು ಮಿಸ್ಟರ್. ನೀವಿಲ್ಲದಿದ್ದರೆ ನಾನಾಗ ಖಂಡಿತ ಡಾಕ್ಟರ್ ಹತ್ತಿರ ಹೋಗಲೆಬೇಕಾಗುತ್ತಿತ್ತು ಎಂದು ಹೇಳುತ್ತಿರುವಾಗ......
ನೋಡಿ ನಾನು ಸಾಗರ್ ಅಂತ. ನಾನೀಗ ನಿಮಗೆ ಬೇರೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ನೀವೇ ತಿಳಿಸಿ. ನಿಮ್ಮ ಮನೆಯವರಿಗೆ ವಿಷಯ ತಿಳಿಸಲೇ ಇಲ್ಲದಿದ್ದರೆ ನಾನೇ ನಿಮ್ಮನ್ನು ಮನೆಗೆ ತಲುಪಿಸಲೇ ಅಂತ ಅವನು ವಿನಮ್ರನಾಗಿ ಕೇಳುತ್ತಿದ್ದ.

ಹಾಗೆ ಅವನು ಮಾತನಾಡುತ್ತಿದ್ದಾಗ ಸ್ವಪ್ನ ಮೊದಲ ಬಾರಿಗೆ ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಾ, ಯೋಚಿಸುತ್ತಿದ್ದಳು.
ಇಷ್ಟೆಲ್ಲಾ ಉಪಕಾರ ಮಾಡಿದ ಇವರಿಗೆ ಮನೆಯಲ್ಲಿ ಯಾರು ಇಲ್ಲದ ವಿಷಯ ಹೇಳುವುದ, ಬೇಡವ....
ಅಷ್ಟರಲ್ಲಿ ಅವನು ಆಶ್ಚರ್ಯದಿಂದ ಯಾಕೆ ಏನಾಯಿತು, ನಾನೇನಾದರು ತಪ್ಪು ಹೇಳಿದೆನಾ, ಹಾಗೇನಾದರು ಅನ್ನಿಸಿದರೆ ಕ್ಷಮಿಸಿ.
ನಿಮ್ಮನ್ನು ಈ ಸ್ಥಿತಿಯಲ್ಲಿ ಹೀಗೆ........ಎಂದು ಹೇಳುತ್ತಿರುವಾಗ ಅವಳು ನಡುವೆ ಮಾತನಾಡಿ, ಛೆ ಛೆ ಹಾಗೆಲ್ಲ ಏನು ಇಲ್ಲ ಈ ಸಮಯದಲ್ಲಿ ನಮ್ಮ ಮನೆಯಲ್ಲಿ ಯಾರು ಇರುವುದಿಲ್ಲ, ಅದು ಅಲ್ಲದೆ ಹತ್ತಿರವಾದ್ದರಿಂದ ನಾನು ಗಾಡಿ ತರದೇ ನಡೆದುಕೊಂಡೇ ಬಂದೆ, ಆದ್ದರಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಿಧಾನವಾಗಿ ಮನೆಗೆ ಹೋಗುತ್ತೇನೆ. ಸಾಗರ್ ನೀವು ನಿಮ್ಮ ಕೆಲಸದಲ್ಲಿ ಮುಂದುವರೆಯಿರಿ ನನ್ನಿಂದ...... ನೋಡಿ ಮೇಡಂ ನೀವು ಇನ್ನೇನು ಹೇಳಬೇಡಿ, ಬನ್ನಿ ನಿಮ್ಮನ್ನು ಮನೆ ತಲುಪಿಸುತ್ತೇನೆ ಎಂದು ಎಬ್ಬಿಸಲು ಮುಂದಾದ. ಸ್ವಪ್ನ ಕೂಡ ಬೇರೇನೂ ಹೇಳದೆ ಅವನ ಸಹಾಯದಿಂದ ಮೇಲೆ ಎದ್ದು, ಅವನ ಬೈಕ್ ನಲ್ಲಿ ಮನೆ ತಲುಪಿದಳು. ಗೇಟ್ ಬಳಿ ಬೈಕ್ ನಿಲ್ಲಿಸಿ ಗೇಟ್ ತೆರೆಯಲು ಹೊರಟ. ಆಗ ಸ್ವಪ್ನ ನಮ್ಮ ಮನೆ ಮಹಡಿ ಮೇಲೆ ಸಾಗರ್ ಅವರೇ ಎಂದು ಹೇಳಿದಳು.

ಮುಂದುವರಿಯುವುದು......

Friday, March 13, 2009

ಸೂತ್ರಗಳು........

ನಾನು ಪ್ರತಿ ದಿನ ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ಹೋಗುವುದು ವಾಡಿಕೆ. ಈ ದಿನ ಸ್ವಲ್ಪ ಬೇಗ ಹೋಗಿದ್ದೆ, ಆದರೆ ಗರ್ಭ ಗುಡಿಯ ಬಾಗಿಲು ಇನ್ನೂ ತೆರೆದಿರಲಿಲ್ಲಾ. ನಾನು ದೇವಸ್ಥಾನ ಸುತ್ತ ಸುತ್ತು ಹಾಕಿ ಬಂದು, ಒಂದು ಪಕ್ಕದಲ್ಲಿ ಕುಳಿತಿದ್ದೆ.
ಆಗ ಅಲ್ಲಿ ಯಾರೋ ತಂದು ಹಾಕಿದ್ದ "ಜೀವನದ ನೀತಿ ಸೂತ್ರಗಳು " ಎನ್ನುವ ಅರ್ಥವತ್ತಾದ ಬರಹ ಓದಿದೆ.
ಅದನ್ನು ಓದಿದ ನಂತರ ನಾನು, ಈ ಸೂತ್ರಗಳನ್ನು ಯಾಕೆ ಎಲ್ಲರೊಂದಿಗೆ ಹಂಚಿಕೊಳ್ಳಬಾರದು, ಇದನ್ನು ನನ್ನ ಬ್ಲಾಗ್ನಲ್ಲಿ ಹಾಕೋಣವೆಂದು ನಿಶ್ಚಯಿಸಿದೆ. ಈ ಉಪಯುಕ್ತವಾದ ಸೂತ್ರಗಳನ್ನು ಇಲ್ಲಿ ಬರೆದಿದ್ದೇನೆ ಓದಿ.!

"ಜೀವನದ ನೀತಿ ಸೂತ್ರಗಳು "
  • ಗುಣವಿಲ್ಲದಿದ್ದರೆ ರೂಪ ವ್ಯರ್ಥ
  • ನಮ್ರತೆ ಇಲ್ಲದಿದ್ದರೆ ವಿದ್ಯೆ ವ್ಯರ್ಥ
  • ಉಪಯೋಗಿಸದಿದ್ದರೆ ಧನ (ಹಣ) ವ್ಯರ್ಥ
  • ಹಸಿವೆಯಿಲ್ಲದಿದ್ದರೆ ಭೋಜನ ವ್ಯರ್ಥ
  • ಪ್ರಜ್ಞೆಯಿಲ್ಲದಿದ್ದರೆ ಪ್ರತಿಭೆ ವ್ಯರ್ಥ
  • ಗುರಿಯಿಲ್ಲದಿದ್ದರೆ ಸಾಧನೆ ವ್ಯರ್ಥ
  • ಪರಮಾತ್ಮನ ಅರಿಯದಿದ್ದರೆ ಜೀವನವೇ ವ್ಯರ್ಥ

ಕ್ರೋಧ ಬುದ್ದಿಯನ್ನು ತಿನ್ನುತ್ತದೆ .

ಅಹಂಕಾರ ಜ್ಞಾನವನ್ನು ತಿನ್ನುತ್ತದೆ .

ಮೋಹ ಮರ್ಯಾದೆಯನ್ನು ತಿನ್ನುತ್ತದೆ.

ಲಂಚ ಗೌರವವನ್ನು ತಿನ್ನುತ್ತದೆ .

ಪ್ರಾಯಶ್ಚಿತ್ತ ಪಾಪವನ್ನು ತಿನ್ನುತ್ತದೆ.

ಚಿಂತೆ ಆಯುಷ್ಯವನ್ನು ತಿನ್ನುತ್ತದೆ .

ಈ ನೀತಿ ಮಾತುಗಳು ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ?

ಈ ಸೂತ್ರಗಳನ್ನು ಯಾರು ಯಾರು ಎಷ್ಟೆಷ್ಟು, ಅವರವರ ಜೀವನದಲ್ಲಿ ಅಳವಡಿಸಿಕೊಂದಿರುತ್ತಾರೋ ಗೊತ್ತಿಲ್ಲಾ! ಅದೆಲ್ಲ ಅವರವರಿಗೆ ಬಿಟ್ಟಿದ್ದು .

ನಾನು ಇಲ್ಲಿ ಬರೆದದ್ದು ನಿಮಗೆಲ್ಲ ಇಷ್ಟವಾದರೆ ಮೆಚ್ಚಿ, ಇಲ್ಲವಾದರೆ ಹಾಗೆ ಸುಮ್ಮನೆ ಓದಿ ಬಿಟ್ಟುಬಿಡಿ!

ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.


Saturday, March 7, 2009

SORRY......

Dear friends/bloggers,
As i was not well, i couldn't continue my story in the followed weeks. I will continue the story as early as possible. And also i want to write so many articles in my blog, to share my feelings, experiences etc,. But for some reason i cannot able to write every week. I will try to be regular in future days. Till then please excuse and oblige with me.

Thank you
with regards
Yours, SSK