Friday, October 9, 2009

ಅಕ್ಕನ ಅವಾಂತರ.....!






ಬಹಳ ವರ್ಷಗಳ ಹಿಂದಿನ ಮಾತು, ಆಗ ಅಕ್ಕನ ಮದುವೆ ನಿಶ್ಚಯವಾಗಿತ್ತು! ನಾವೆಲ್ಲ ಇದ್ದದ್ದು ಬೆಂಗಳೂರಿನಲ್ಲೇ ಆದರೂ, ಆಕೆಯ ಮದುವೆಯನ್ನು ಊರಿನಲ್ಲಿ ಮಾಡಬೇಕೆಂದು ಹಿರಿಯರು ನಿಶ್ಚಯಿಸಿದ್ದರು. ಏಕೆಂದರೆ ವಧು-ವರ ಇಬ್ಬರ ಮನೆಯವರಿಗೂ ಕಾಮನ್ ಊರು ಅದಾಗಿತ್ತು ಮತ್ತು ನಮ್ಮ ಹೆಚ್ಚಿನ ನೆಂಟರು, ಬಂಧು ಬಳಗ ಎಲ್ಲ ಆ ಊರಿನಲ್ಲೇ ಇರುವುದು.
ನಮಗೆ ಆ ಊರಲ್ಲಿ ಸ್ವಂತ ಮನೆ ಇರಲಿಲ್ಲ, ಆದರೆ ತಂದೆಗೆ ಬರಬೇಕಿದ್ದ ಜಾಗದ ಪಾಲು ಒಬ್ಬ ದೊಡ್ಡಪ್ಪನ ಮನೆಯೊಂದಿಗೆ ಬೆಸೆದುಕೊಂಡಿತ್ತು. ಬೇರೆ ಇನ್ನಿಬ್ಬರು ದೊಡ್ದಪ್ಪಂದಿರು ಅದೇ ಊರಿನಲ್ಲೇ ಇದ್ದರೂ, ನಾವು ಊರಿಗೆ ಹೋದಾಗಲೆಲ್ಲ ನಮ್ಮ ತಂದೆಯ ಪಾಲಿದ್ದ ದೊಡ್ಡಪ್ಪನ ಮನೆಯಲ್ಲಿಯೇ ತಂಗುತ್ತಿದ್ದೆವು! ಅದಕ್ಕೆ ಇನ್ನೊಂದು ಕಾರಣವೇನೆಂದರೆ, ಈ ದೊಡ್ಡಪ್ಪನ ಹೆಂಡತಿ ಅಂದರೆ ದೊಡ್ಡಮ್ಮ ನನ್ನ ತಾಯಿಯ ಅಕ್ಕನೂ ಆಗಿದ್ದರು ಆದ್ದರಿಂದ ಬೇರೆಯವರಿಗಿಂತಾ ನಮಗೆ ಇವರಲ್ಲಿಯೇ ಹೆಚ್ಚಿನ ಸಲುಗೆ ಇತ್ತು!



ಸರಿ, ಇನ್ನೇನು ಮದುವೆ ದಿನಗಳು ಹತ್ತಿರ ಬರುತ್ತಿದ್ದವು, ಮನೆಯ ಮಕ್ಕಳು, ನೆಂಟರು ಬಂಧು ಬಳಗ ಇವರೆಲ್ಲರಿಂದ ಮನೆ ಗಿಜಿಗುಡುತ್ತಿತ್ತು! ಇಷ್ಟೇ ಅಲ್ಲದೆ ಕೆಲಸವಿದ್ದಾಗ ಅಥವಾ ಸಂಜೆಯ ಬಿಡುವಿನ ವೇಳೆಯಲ್ಲಿ ಅಕ್ಕಪಕ್ಕದ ಮನೆಯ ಬಂಧುಗಳೂ ಬಂದು ಹೋಗುತ್ತಿದ್ದರು!! ಹೀಗಿರುವಾಗ ಅದೊಂದು ದಿನ ಸಂಜೆ, ಕಾಫಿ/ಟೀ ಸಮಯ. ಅಷ್ಟೊಂದು ಜನಕ್ಕೂ ನನ್ನ ದೊಡ್ಡ ಅಕ್ಕ ಮತ್ತು ಅತ್ತಿಗೆ ಸೇರಿ ಕಾಫಿ, ಟೀ ಯಾರ್ಯಾರಿಗೆ ಯಾವುದು ಬೇಕು ಎಂದು ಕೇಳಿ ಮಾಡಿ ಕೊಟ್ಟರು. ನಾನು ಎಲ್ಲರಿಗೂ ಸಪ್ಲೈ ಮಾಡಿದೆ, ಎಲ್ಲರೂ ಕುಡಿದು ಮುಗಿಸುವ ವೇಳೆಗಾಗಲೇ ಕತ್ತಲಾಗುತ್ತಾ ಬಂತು. ಸಂಜೆ ಎಂದಿನಂತೆ ಮನೆಯಲ್ಲಿ ವಿದ್ಯುತ್ ದೀಪ ಮತ್ತು ದೇವರ ಮುಂದೆ ಎಣ್ಣೆಯ ದೀಪ ಬೆಳಗಿಸಿ ಎಲ್ಲರೂ ಅವರವರ ಕೆಲಸಗಳಲ್ಲಿ ವ್ಯಸ್ತರಾಗಿದ್ದರು.



ಆ ಸಮಯದಲ್ಲಿ ಅದೇ ಓಣಿಯಲ್ಲಿ ವಾಸವಿರುವ ನಮ್ಮ ನೆಂಟರೊಬ್ಬರ ಮಗ ನಮ್ಮ ಮನೆಗೆ ಬಂದರು. ನಮ್ಮ ಊರಿನ ಜನರಲ್ಲೇ ಅವರು ಸ್ವಲ್ಪ ಶಿಫಾರಸ್ಸಿರುವ ವ್ಯಕ್ತಿ, ಯಾವುದೋ ಕೆಲಸ ಹೇಳಿದ್ದರಿಂದ ಆ ಕೆಲಸ ಆಯಿತೋ ಇಲ್ಲವೊ ಎಂದು ಕೇಳಿ ತಿಳಿಯಲು ಮನೆಗೆ ಬಂದಿದ್ದರು. ಅವರನ್ನು ಬರಮಾಡಿಕೊಂಡು ಕೂರಲು ಹೇಳಿ, ಅವರೂ ಕುಳಿತುಕೊಳ್ಳುತ್ತಿದ್ದಂತೆಯೇ, ಅದೇ ಸಮಯಕ್ಕೆ ಸರಿಯಾಗಿ ಕರೆಂಟ್ ಹೊರಟುಹೋಯಿತು! ಆ ಕಾಲದಲ್ಲಿ ಮಧ್ಯಮ ವರ್ಗದ ಮನೆಗಳಲ್ಲಿ, ಮೇಣದ ಬತ್ತಿ ಅಥವಾ ಚಿಮಣಿ ದೀಪ ಬಿಟ್ಟರೆ ಬೇರೆ ಯಾವುದೇ ಸಾಧನಗಳಿರಲಿಲ್ಲ. ಅವಸರದಲ್ಲಿ ಒಂದೇ ಒಂದು ಮೇಣದ ಬತ್ತಿ ಬಿಟ್ಟರೆ ಆ ಸಂಧರ್ಭದಲ್ಲಿ ಬೇರೆ ಏನೂ ಕೈಗೆ ಸಿಕ್ಕಿರಲಿಲ್ಲ , ಆ ಕ್ಷಣಕ್ಕೆ ಅದನ್ನೇ ಬೆಳಗಿಸಿ ಹಾಲಿನಲ್ಲಿ ತಂದು ಇಟ್ಟಿದ್ದರು! ಆ ಮಬ್ಬು ಬೆಳಕಿನಲ್ಲಿ ಒಬ್ಬರಿಗೊಬ್ಬರು ಅಸ್ಪಷ್ಟವಾಗಿ ಕಾಣುತ್ತಿದ್ದರು. ದೊಡ್ಡಮ್ಮ ಅವರೊಂದಿಗೆ ಮಾತಿಗಿಳಿದರು!


ಕಾಫಿ ಕುಡಿಯಪ್ಪಾ ರವಿ ಎಂದು ದೊಡ್ಡಮ್ಮ ಕೇಳಿದಾಗ ಅವರು, ಇಲ್ಲ ಬೇಡ ಈಗ ತಾನೇ ಆಯಿತು ಎಂದು ಹೇಳಿದರು. ಅದಕ್ಕೆ ದೊಡ್ಡಮ್ಮ ಮನೆಗೆ ಬಂದು ಏನು ತಗೊಳ್ಳದಿದ್ದರೆ ಹೇಗೆ, ನಮ್ಮೆಲ್ಲರದೂ ಸಹ ಈಗ ತಾನೇ ಆಯಿತು. ಕಾಫಿ ರೆಡಿಯಾಗೆ ಇದೆ, ಕುಡಿದೆ ಹೋಗಬೇಕು ಅಂತ ಬಲವಂತ ಮಾಡಿದರು. ಅಷ್ಟು ಬಲವಂತ ಮಾಡಿದ ಮೇಲೆ ಅವರು ಏನೂ ಹೇಳದೆ ಸುಮ್ಮನಾಗಿಬಿಟ್ಟರು. ನಂತರ ಅವರಿಗೆ ಯಾರಾದರೂ ಕಾಫಿ ತಂದುಕೊಡಿ, ಕೆಟಲ್ಲಿನಲ್ಲಿ ಕಾಫಿ ಸಿದ್ದವಾಗೆ ಇದೆ ಅದನ್ನೇ ಬಿಸಿ ಮಾಡಿ ಬೇಗ ತಗೊಂಡು ಬನ್ನಿ ಎಂದು ದೊಡ್ಡಮ್ಮ ಹೇಳಿದರು. ಮನೆಯಲ್ಲಿ ಅಷ್ಟೊಂದು ಜನ ಇದ್ದರೂ ಯಾರಾದರೂ ಹೋಗುತ್ತಾರೋ ಇಲ್ಲವೊ ಅಂತ ನನಗೆ ತರಲು ಹೇಳಿದರು. ನಾನು ಮಾಡುತ್ತಿದ್ದ ಕೆಲಸ ಬಿಟ್ಟು , ನಿಜ ಹೇಳಬೇಕೆಂದರೆ ಕತ್ತಲಲ್ಲಿ ಹೋಗಲು ಹೆದರಿಕೆಯಾಗಿ ಸ್ವಲ್ಪ ನಿಧಾನಿಸಿದೆ. ಅಡುಗೆ ಮನೆಗೆ ಹೋಗುವಷ್ಟರಲ್ಲಿ ನನ್ನ ಅಕ್ಕ ನನಗೆ ಮುಂಚೆ ಅಡುಗೆಮನೆ ಸೇರಿ ಕಾಫಿ ಎಲ್ಲಿದೆ ಎಂದು ಆ ಕತ್ತಲಲ್ಲಿ ಹುಡುಕುತ್ತಿದ್ದಳು. ಆಗ ಆಕೆಯ ಕೈಗೊಂದು ಬಿಸಿ ಕಾಫಿ ಇರುವ ಲೋಟ ಸಿಕ್ಕಿತು, ಬಿಸಿಯಾಗೇ ಇದೆ ಅಂತ ಅವಸರದಲ್ಲಿ ಅದನ್ನು ಹಾಗೆ ತೆಗೆದುಕೊಂಡು ಹೋಗಿ ಅವಳೇ ಸ್ವತಹ ಅವರಿಗೆ ನೀಡಿದಳು. ಅಷ್ಟರಲ್ಲಿ ಅವರ ಮಾತುಕಥೆ ಎಲ್ಲ ಮುಗಿದಿತ್ತು!! ಈಕೆ ಕೊಟ್ಟ ಕಾಫಿ ಕುಡಿದು ನಂತರ ನಾನಿನ್ನು ಹೊರಡುತ್ತೇನೆ ಎಂದು ಹೇಳಿ ಹೊರಟು ಹೋದರು!!!



ಮದುವೆ ಎಂದ ಮೇಲೆ ಸಾಕಷ್ಟು ಕೆಲಸಗಳಿರುತ್ತವಲ್ಲ, ಅದರೊಂದಿಗೆ ಚಿಕ್ಕಮಕ್ಕಳ ಆಟಪಾಠ, ಚೀರಾಟ ಮತ್ತು ದೊಡ್ಡವರ ಮಾತು ಕಥೆಗಳು ಇವುಗಳ ಮಧ್ಯೆ, ಕತ್ತಲಲ್ಲೂ ಕೆಲವರು ಅವರವರ ಕೆಲಸದಲ್ಲಿ ವ್ಯಸ್ತರಾಗಿದ್ದರು, ಇನ್ನು ಕೆಲವರು ಹರಟೆ ಹೊಡೆಯುತ್ತಿದ್ದರು ಮತ್ತೆ ಕೆಲವರು ಹಾಗೆ ವಿಶ್ರಮಿಸಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಕರೆಂಟ್ ಬಂದಿತು. ಚಿಕ್ಕ ಮಕ್ಕಳಿರುವವರು ನಿಮ್ಮ ಮಕ್ಕಳಿಗೆ ಊಟ ಮಾಡಿಸಿಬಿಡಿ ಎಂದು ದೊಡ್ಡವರು ಹೇಳುತ್ತಿದ್ದರು. ಸಾಮಾನ್ಯವಾಗಿ ಮಕ್ಕಳಿಗೆ ಬೇಗ ಊಟ ಮಾಡಿಸುವುದು ವಾಡಿಕೆ ಅಲ್ವಾ, ಅದಕ್ಕೆ!


ಆ ಊರಿನ ಜನರಿಗೆ ಒಂದು ವಿಚಿತ್ರವಾದ ಅಭ್ಯಾಸ! ಅದೇನೆಂದರೆ, ಅಲ್ಲಿನ ಜನ ಯಾರು ಕೇಳಿದರೂ, ಕೇಳದಿದ್ದರೂ ಅವರ ಮನೆಯಲ್ಲಿ ಬಿಸಿ ಅಡುಗೆ ಏನೇ ಮಾಡಿದ್ದರೂ ಅದು ಸಾಧಾರಣವಾದದ್ದಾದರೂ ಸರಿ ವಿಶೇಷವಾಗಿದ್ದರೂ ಸರಿ ಒಟ್ಟಿನಲ್ಲಿ, ಅದರಲ್ಲಿ ಸ್ವಲ್ಪ ಪಾಲನ್ನು ಅವರಿಗೆ ಬೇಕಾದವರ ಮನೆಗಳಿಗೆ ರವಾನಿಸುವ, ತಂದುಕೊಡುವ ಗೀಳು ಇದೆ. ಅಂದರೆ ಒಂದು ರೀತಿ ಹಂಚಿಕೊಂಡು ತಿನ್ನುವ ಅಭ್ಯಾಸ, ಸಹಬಾಳ್ವೆ ಅಂತ ಹೇಳಬಹುದು! ಅದರಲ್ಲೂ ಚಿಕ್ಕ ಮಕ್ಕಳು ಇರುವ ಮನೆ ಎಂದರೆ ಹೇಳುವುದೇ ಬೇಡ, ಮನೆಯಲ್ಲಿ ಮಾಡಿರುವುದಕ್ಕಿಂತಾ ಅವರಿವರು ತಂದು ಕೊಟ್ಟಂತಹ ತಿಂಡಿಗಳೇ ತುಂಬಿರುತ್ತವೆ. ಹಾಗಾಗಿ ನಮ್ಮ ಪಕ್ಕದ ಮನೆಯ ಇನ್ನೊಬ್ಬರು ದೊಡ್ಡಮ್ಮ ಇದ್ದರಲ್ಲ ಅವರು ರಾತ್ರಿಗೆಂದು ಮಾಡಿಕೊಂಡಿದ್ದ ರಸಂ ಅನ್ನು ಒಂದು ಗ್ಲಾಸಿನಲ್ಲಿ ಹಾಕಿ ತಂದುಕೊಟ್ಟಿದ್ದರು.


ಆಗ ಮನೆಯಲ್ಲಿ ಇದ್ದ ಪುಟಾಣಿಗಳು ಮೂರ್ನಾಕು ಮಂದಿ. ಆ ಮಕ್ಕಳಿಗೆಲ್ಲ ಯಾರಾದರು ಒಬ್ಬರೇ ತಿನಿಸೋಣ, ಆಟಾಡ್ತಾ ಒಬ್ಬರನ್ನೊಬ್ಬರು ನೋಡಿ ಬೇಗ ಬೇಗ ತಿಂತಾರೆ ಎಂದು ನಿರ್ಧರಿಸಿ ನನ್ನ ದೊಡ್ಡ ಅಕ್ಕಾನೆ ತಟ್ಟೆಯಲ್ಲಿ ಅನ್ನ ಬಡಿಸಿಕೊಂಡು, ಮಕ್ಕಳು ಏನೇನೋ ತಿಂದು ಹೊಟ್ಟೆ ಕೆಡಿಸಿಕೊಳ್ಳುತ್ತವೆ, ಅದಕ್ಕೆ ಅವರಿಗೆ ರಸಂನಲ್ಲೇ ಉಣಿಸೋಣ ಎಂದುಕೊಂಡು ರಸಕ್ಕಾಗಿ ಅಡುಗೆ ಮನೆಯೆಲ್ಲ ಹುಡುಕಾಡುತ್ತಾರೆ ಆದರೆ ರಸ ಮಾತ್ರ ಎಲ್ಲೂ ಸಿಗಲೇ ಇಲ್ಲ. ಆವಾಗ ಆಕೆ ನನ್ನನ್ನು ಕರೆದು ಚಿಕ್ಕಮ್ಮ (ಆಕೆಗೆ ಚಿಕ್ಕಮ್ಮ ಆದರೆ ನಮಗೆ ದೊಡ್ಡಮ್ಮ!) ರಸ ತಂದುಕೊಡುತ್ತೀನಿ ಅಂತ ಹೇಳಿದ್ದರು, ತಂದರೋ ಇಲ್ಲವೊ ಕೇಳು. ತಂದಿಲ್ಲದಿದ್ದರೆ ಅವರ ಮನೆಗೆ ಹೋಗಿ ತಗೊಂಡು ಬಾ ಅಂತ ಹೇಳಿದರು. ನನ್ನ ಆ ಇನ್ನೊಬ್ಬರು ದೊಡ್ಡಮ್ಮ ಅಲ್ಲೇ ಇದ್ದುದರಿಂದ ಅವರಲ್ಲಿ ಕೇಳಿದಾಗ, ಅವರು ಬರುವಾಗ ಜೊತೆಯಲ್ಲೇ ತಂದು ಕೊಟ್ಟೆನಲ್ಲಾ ಎಂದು ಹೇಳಿದರು. ನಾವು ಅಲ್ಲಿ ಹುಡುಕಿದರೂ ಸಿಗದೇ ಇದ್ದ ವಿಷಯ ಹೇಳಿದಾಗ ಆಶ್ಚರ್ಯದಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು.........!ಅವರು ರಸ ತಂದಿದ್ದನ್ನು ನೋಡಿದ್ದ ಒಂದಿಬ್ಬರು ತಂದಿದ್ದರೆಂದು ಸಾಕ್ಷಿ ಕೂಡ ಹೇಳಿದ್ದರು. ಮತ್ತೊಮ್ಮೆ ಅಡುಗೆ ಮನೆಗೆ ಬಂದು ಪರಿಶೀಲಿಸಿದಾಗ ಆ ಲೋಟ ಪಾತ್ರೆ ತೊಳೆಯುವ ಜಾಗದಲ್ಲಿ ಇತ್ತು! ಅದರಲ್ಲಿ ರಸ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ತಳದಲ್ಲಿ ಸ್ವಲ್ಪ ಗಟ್ಟಿ ಇರುವ ಅಂಶವು ಉಳಿದಿತ್ತು. ದೊಡ್ಡಕ್ಕ ಒಳಗಿನಿಂದ ಬರುತ್ತಾ, ಹೊರಗೆ ಇರುವವರಲ್ಲಿ ಹೇಳಿದರು ಅದೇನೆಂದರೆ, ರಸ ಇತ್ತು ಆದರೆ ಯಾರೋ ಚೆಲ್ಲಿ ಬಿಟ್ಟಿದ್ದಾರೆ ಇಲ್ಲಾಂದ್ರೆ ಯಾರಾದ್ರು ಕುಡ್ಕೊಂಡು ಬಿಟ್ಟಿರುತ್ತಾರೆ ಅಂತ!

ಆಗ ನಮ್ಮ ಮದುವಣ ಗಿತ್ತಿ ನಡೆದಿರಬಹುದಾದಂತ ವಿಷಯ ವನ್ನು ನೆನಪಿಸಿಕೊಂಡು ಬಿಡಿಸಿ ಹೇಳುತ್ತಾಳೆ, ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಬೆಸ್ತೋ ಬೇಸ್ತು! ಎಲ್ಲರಿಗೂ ಅರ್ಥವಾಗುತ್ತಿದ್ದಂತೆ ಮನೆಯ ಛಾವಣಿ ಕಿತ್ತುಹೋಗುವ ಮಟ್ಟಿಗೆ ನಾವೆಲ್ಲಾ ನಕ್ಕಿದ್ದೆವು!!!



ಏನೂ ಇನ್ನೂ ಗೊತ್ತಾಗಿಲ್ವಾ ಎಲ್ಲರೂ ಯಾಕೆ ನಕ್ಕಿದ್ದು ಅಂತ? ಅದೇ, ಕರೆಂಟ್ ಹೋದಾಗ ಗೆಸ್ಟ್ ಒಬ್ಬರು ಬಂದಿದ್ದರಲ್ಲ ಅವರಿಗೆ ಕತ್ತಲಲ್ಲಿ ನಮ್ಮ ಅಕ್ಕ ತಂದು ಕೊಟ್ಟಿದ್ದು ಏನು ಅಂತ ಅಂದುಕೊಂಡಿರಿ.............?!?! ಹ ಹ ಹ್ಹ ಹ್ಹ ಹ್ಹಾ ಹ್ಹಾ........, ಈಗಲೂ ನೆನಪಿಸಿಕೊಂಡರೆ ನನಗೆ ನಗು ತಡೆಯುವುದಕ್ಕೆ ಆಗುತ್ತಿಲ್ಲ. ಪಾಪ ಅವರು, ಕಾಫಿ ಅಂತ ಅಂದುಕೊಂಡು, ಕೊಟ್ಟಿದ್ದ ಬಿಸಿ ಬಿಸಿ ರಸಂ ಅನ್ನೇ, ಅಷ್ಟು ಜನರ ಮುಂದೆ ಏನೂ ಮಾತನಾಡದೇ ಕುಡಿದು ಎದ್ದು ಹೋಗಿದ್ದರು ಕತ್ತಲಲ್ಲೇ!




ವಾಸನೆಯಲ್ಲಿ ಗೊತ್ತಾಗಲಿಲ್ಲವೇ ಅಂತ ನೀವು ಕೇಳಬಹುದು, ಮೊದಲೇ ಮದುವೆಮನೆ ಎಷ್ಟೆಲ್ಲಾ ತರಹ ವಾಸನೆಗಳು ಸೇರಿಕೊಂಡಿರುತ್ತವೆ ಅದೂ ಅಲ್ಲದೆ ಮುಚ್ಚಿ ಇಟ್ಟಿದ್ದ ತಟ್ಟೆಯ ಸಮೇತ ತಂದು ಅವರ ಮುಂದೆಯೇ ತೆರೆದು ಕೊಟ್ಟಿದ್ದಳು! ಹೇಳಿಕೇಳಿ ಅವಳು ಮದುವೆ ಹುಡುಗಿ, ತನುವೆಲ್ಲೋ ಮನವೆಲ್ಲೂ ಒಟ್ಟಿನಲ್ಲಿ ಒಂದು ಅಚಾತುರ್ಯವಂತೂ ನಡೆದಿತ್ತು!!!







ಈಕೆಯ ಅವಾಂತರಗಳು ಇನ್ನಷ್ಟು ಇವೆ. ಮುಂದೆ ಯಾವಾಗಾದ್ರೂ ಇದೆ ರೀತಿ ಹೇಳ್ತೀನಿ, ಆಯ್ತಾ ಅಲ್ಲಿವರೆಗೂ ನಗ್ತಾನೆ ಇರಿ!!!!!