ಆಷಾಡ ಕಳೆದು ಶ್ರಾವಣ ಮಾಸ ಬಂದಿತು! ಇನ್ನೇನು ಮದುವೆ ಕಾಲ, ಸಂಭ್ರಮ ಮತ್ತು ಸಡಗರ, ಜೊತೆಗೆ ಸಾಲಾಗಿ ಹಬ್ಬಗಳು ಬೇರೆ ಬರುತ್ತವೆ. ಯಾರ ಮದುವೆ ಇರಬಹುದಪ್ಪಾ, ಆಹ್ವಾನ ಪತ್ರಿಕೆ ಕಳಿಸುತ್ತಿದ್ದಾರೆ ಅಂದುಕೊಂಡಿರಾ? ಖಂಡಿತ ಮದುವೆ ನನ್ನದಂತೂ ಅಲ್ಲ!!! ಇನ್ಯಾರದು ಅಂತ ತಿಳಿದು ಕೊಳ್ಳುವ ತವಕಾನಾ? ಯಾಕಷ್ಟು ಅವಸರ ನಿಧಾನವಾಗಿ, ನೆಮ್ಮದಿಯಾಗಿ ಲಗ್ನಪತ್ರಿಕೆ ಓದಿ ಮತ್ತು ನೀವೆಲ್ಲರೂ ಈ ಸಂತೋಷ ಸಮಾರಂಭದಲ್ಲಿ ಭಾಗಿಯಾಗಿ.
ಅಂದ ಹಾಗೆ ಸುಮ್ಮನೆ ವಧು ವರರ ಹೆಸರು ಮತ್ತು ಮದುವೆ ಸ್ಥಳ ಮಾತ್ರ ಓದಿ ಸುಮ್ಮನಾಗಬೇಡಿ! ಒಂದು ಅಕ್ಷರವೂ ಬಿಡದೆ ಪೂರ್ತಿ ಓದಿಬಿಡಿ ಆಗ ನಿಮಗೆ ಅನಿಸಿದ್ದು ನನಗೆ ತಿಳಿಸಿ .
ಯಾವುದೇ ಸಮಾರಂಭವಿರಲಿ ಅಲ್ಲಿ ಸಿಹಿ ತಿನಿಸು ಇಲ್ಲದಿದ್ದರೆ ಹೇಗೆ? ಅದು ಅಪೂರ್ಣ ಆಗುವುದಿಲ್ಲವೇ?
ಹೌದು, ಯಾವುದೇ ಆಚರಣೆ ಇರಲಿ ಅಲ್ಲಿ ಸಿಹಿ ತಿಂಡಿ ಇರಲೇ ಬೇಕು. ಆದರೆ ಈ ಸಿಹಿಗಳೇ ಮದುವೆ ಸಂಭ್ರಮ ನಡೆಸಿಕೊಂಡರೆ ಹೇಗಿರುತ್ತೆ......?!
ಮುಂದೆ ಓದಿ......
ಶುಭ ವಿವಾಹ
ಶ್ರೀ ಕೊಬ್ಬರಿ ಮಿಠಾಯಿ ಸ್ವಾಮಿ ಪ್ರಸನ್ನ!!!
ಸಕ್ಕರೆ ಜಿಲ್ಲೆಯ, ಗೋಡಂಬಿ ತಾಲೂಕು, ದ್ರಾಕ್ಷಿ ಹೋಬಳಿ, ಕಡ್ಲೆ ಹಿಟ್ಟು ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಬೂಂದಿ ರಾವ್
ಮತ್ತು
ಮೈದಾ ಹಿಟ್ಟು ಜಿಲ್ಲೆಯ, ಬಾದಾಮಿ ತಾಲೂಕು, ಕ್ಷೀರ ಹೋಬಳಿ, ರವೆ ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಚಿರೋಟಿ ರಾವ್
ಸ್ವಸ್ತಿಶ್ರೀ ಕೇಸರಿ ಬಾತ್ ನಾಮ ಸಂವತ್ಸರ ದಿನಾಂಕ 46 / 83 / 2896 ರಂದು
ಮಧ್ಯರಾತ್ರಿ 33 ಘಂಟೆ 30 ನಿಮಿಷದಲ್ಲಿ "ಕ್ಯಾರೆಟ್ ಹಲ್ವ ಲಗ್ನದಲ್ಲಿ ನಡೆಯುವ "
ಚಿ ಸೌ ಜಿಲೇಬಿ ದೇವಿ
(ಶ್ರೀಮತಿ ಶ್ರೀ ಬೂಂದಿ ರಾವ್ ಅವರ ಜ್ಯೇಷ್ಠ ಪುತ್ರಿ)
ಮತ್ತು
ಚಿ ರಾ ಜಾಮೂನ್ ರಾವ್
(ಶ್ರೀಮತಿ ಶ್ರೀ ಚಿರೋಟಿ ರಾವ್ ಅವರ ಜ್ಯೇಷ್ಠ ಪುತ್ರ)
ಇವರ ವಿವಾಹ ಮಹೋತ್ಸವವನ್ನು, ಮೈಸೂರ್ ಪಾಕ ನಗರದಲ್ಲಿ ಇರುವ ಲಾಡು ಬಡಾವಣೆಯ ಧೂದ್ ಪೇಢ ಛತ್ರದಲ್ಲಿ ನಡೆಯುವಂತೆ, ಬಾಧೂಷರವರು ಮತ್ತು ಚಂಪಾಕಲಿಯವರು ಜೊತೆಗೆ ಇನ್ನೂ ಅನೇಕ ಸಿಹಿಗಳು ನಿಶ್ಚಯಿಸಿರುವುದರಿಂದ, ತಾವುಗಳು ತಮ್ಮ ಪರಿವಾರ ಸಮೇತ ಮದುವೇ ಛತ್ರಕ್ಕೆ ಬಂದು ಊಟಮಾಡಿ ಕೈ ತೊಳೆದುಕೊಂಡು, ವಧು ವರರನ್ನು ಆಶೀರ್ವದಿಸಬೇಕೆಂದು ಕೋರುವವರು, ಶ್ರೀ ಬೂಂದಿ ರಾವ್ ಮತ್ತು ಶ್ರೀ ಚಿರೋಟಿ ರಾವ್
ತಮ್ಮ ಸುಖ ಆಗಮನವನ್ನು ಬಯಸುವವರು:
ಬರ್ಫಿ, ಹಾಲುಖೋವ ಮತ್ತು ಮುಂತಾದ ಸಿಹಿ ಮಿತ್ರರು.......!!!!!
ಮುಖ್ಯ ಸೂಚನೆ:ತಮ್ಮ ಉಡುಗೊರೆಗಳನ್ನು ಪಾಯಸ ಮತ್ತು ಒಬ್ಬಟ್ಟು ಇವರುಗಳ ಕೈಗೆ ಕೊಡಬೇಕಾಗಿ, ತುಪ್ಪದ ವಿನಂತಿ!
ವಿವರಗಳಿಗೆ ಇಲ್ಲಿ ಸಂಪರ್ಕಿಸಿ :
ರಸಗುಲ್ಲ ಪ್ರಿಂಟರ್ಸ್, ಜಹಾಂಗೀರ್ ಪುರ!