ಮುಂದುವರಿದ ಭಾಗ.......
ವಸುಧಾ ಹೊರಟುಹೋದ ಮೇಲೆ ಸ್ವಲ್ಪ ಹೊತ್ತಿನ ನಂತರ ಆದಿತ್ಯ ಆಕಾಶ್ ಗೆ ಫೋನ್ ಮಾಡಿ ವಸುಧಾ ತನ್ನ ಮನೆಗೆ ಬಂದಿದ್ದಳೆಂದು ತಿಳಿಸಿದ. ಮತ್ತೆ ಮುಂದಿನ ವಿಷಯ ಹೇಳುವಷ್ಟರಲ್ಲಿ ಆಕಾಶ್ ಕೇಳಿದ, ಆದಿ ವಸು ನಿನಗೇ ಏನಾದರೂ ಹೇಳಿದ್ಲಾ? ಸಾರೀ ಆದಿ ನಾನು ನಿನಗೊಂದು ವಿಷಯ ತಿಳಿಸಿರಲಿಲ್ಲ, ನಾನಿವತ್ತು...... ಅಂತ ಹೇಳಲು ಶುರು ಮಾಡಿದಾಗ ಆದಿ ಮಧ್ಯದಲ್ಲಿ ಮಾತನಾಡಿ, ಆಕಾಶ್ ನನಗೆ ವಿಷಯ ಎಲ್ಲಾ ಗೊತ್ತಾಯಿತು! ಅದೇ ವಿಷಯವಾಗಿ ಮಾತನಾಡಲು ನಾನು ನಿನಗೆ ಫೋನ್ ಮಾಡಿದ್ದು, ನಾನು ನಿನಗೆ ಒಂದು ವಿಷಯ ಹೇಳದೆ ಮುಚ್ಚಿಟ್ಟಿದ್ದೆ! ಅದೇನೆಂದರೆ ನಾನು ಸಹ ವಸುಧಾಳನ್ನು ಇಷ್ಟಪಡುತ್ತಿದ್ದೆ. ಅದೇ ವಿಷಯ ಅವಳಿಗೆ ತಿಳಿಸಲು ಅವಳನ್ನು ಇಂದು ನಾನು ಮನೆಗೆ ಕರೆದುಕೊಂಡು ಬಂದಿದ್ದೆ! ಎನ್ನುವ ಸುದ್ದಿ ಕೇಳುತ್ತಿದ್ದಂತೆ ಅತ್ತ ಆಕಾಶ್ ಹೌಹಾರಿದ್ದ, ಆಶ್ಚರ್ಯದಿಂದ ಬೆಚ್ಚಿದ. ಒಂದು ಕ್ಷಣ ಏನೂ ಪ್ರತಿಕ್ರಿಯಿಸದೇ ಸುಮ್ಮನಿದ್ದ, ನಂತರ ತನ್ನನು ತಾನು ಸಂಭಾಳಿಸಿಕೊಂಡು ಮುಂದೆ ಏನಾಯಿತು ಎಂದು ಕೇಳಿದಾಗ ಆದಿ ಅವರ ಮನೆಯಲ್ಲಿ ನಡೆದ ಪ್ರಸಂಗವನ್ನೆಲ್ಲಾ ವಿವರವಾಗಿ ಅವನಿಗೆ ಹೇಳಿದ.
ಇತ್ತ ವಸುಧಾ ಯೋಚಿಸಿ ಯೋಚಿಸಿ ತಲೆ ಕೆಡಿಸಿಕೊಂಡಿದ್ದಳು. ಮನೆಯಲ್ಲಿ ಈ ವಿಷಯವನ್ನು ತಿಳಿಸಿದಾಗ, ಎಷ್ಟೆಲ್ಲಾ ಚರ್ಚೆ, ವಾದ ವಿವಾದಗಳು ನಡೆದ ಮೇಲೆ ಅವರೂ ಸಹ ಇದರ ಬಗೆಗಿನ ನಿರ್ಧಾರವನ್ನು ಅವಳ ಮೇಲೆ ಬಿಟ್ಟರು! ನಂತರ ಅವಳು ತನ್ನ ಪರಮಾಪ್ತ ಗೆಳತಿ ಬಿಂದುಳನ್ನು ಭೇಟಿಯಾಗಿ, ಎಲ್ಲಾ ವಿಷಯವನ್ನು ತಿಳಿಸಿದಳು. ಅವಳು ಸಹ ಇವಳೊಂದಿಗೆ ಗಹನವಾಗಿ ಚರ್ಚಿಸಿ, ತನ್ನಿಂದೇನಾದರೂ ಸಹಾಯ ಬೇಕಿದ್ದರೆ ಖಂಡಿತವಾಗಿಯೂ ಮಾಡುವುದಾಗಿ ತಿಳಿಸಿ ಅವಳನ್ನು ಬೀಳ್ಕೊಟ್ಟಳು. ಆಫೀಸಿನಲ್ಲಿ ವಿಷಯ ಗೊತ್ತಾದ ಹೊಸತರಲ್ಲಿ ಎಲ್ಲರೂ ಇವಳನ್ನು, ಸ್ನೇಹಾನಾ? ಪ್ರೀತಿನಾ? ಎಂದು ಚುಡಾಯಿಸುತ್ತಿದ್ದರು. ನಂತರದಲ್ಲಿ ವಿಷಯ ಗಂಬೀರವಾದ್ದರಿಂದ ಯಾರೂ ಜಾಸ್ತಿ ಅವಳನ್ನು ಕೆಣಕದೆ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು.
ಮೊದಮೊದಲು ಆಕಾಶ್ ಮನೆಯವರು ಅವನಿಗೆ, ನೀನೇ ಮೊದಲು ಪ್ರಪೋಸ್ ಮಾಡಿದ್ದರಿಂದ ನಿನ್ನನ್ನೇ ಅವಳು ಒಪ್ಪಿಕೊಳ್ಳಬೇಕು. ಅದಕ್ಕೆ ನೀನೇ ಅವಳನ್ನು ಬಿಡದೆ ಒಪ್ಪಿಸಬೇಕು ಎಂದು ತುಂಬಾ ಒತ್ತಡ ಹೇರುತ್ತಿದ್ದರು. ಆದರೆ ನಂತರದಲ್ಲಿ ಅವರೂ ಸಹ ಅವಳ ಇಷ್ಟಕ್ಕೆ ವಿರುದ್ಧವಾಗಿ ಏನೂ ಮಾಡಲು ಆಗುವುದಿಲ್ಲ ಎಂದು ತಿಳಿದು ಸುಮ್ಮನಾದರು. ಈಗ ಎಲ್ಲರ ಕೇಂದ್ರ ಬಿಂದು ವಸುಧಾಳೆ ಆಗಿದ್ದಳು. ಎಲ್ಲರಿಗೂ ಕುತೂಹಲವೋ ಕುತೂಹಲ!!!!!
ವಸುಧಾ ಈ ಎಲ್ಲದರ ನಡುವೆ ಒಮ್ಮೆ ಅವರಿಬ್ಬರನ್ನೂ ಒಂದು ಏಕಾಂತ ಸ್ಥಳದಲ್ಲಿ ಭೇಟಿಯಾಗಿ, ಅವರಿಗೆ ಸ್ನೇಹ, ಸ್ನೇಹವಾಗೆ ಇರಲಿ ಇದಕ್ಕೆ ಯಾವುದೇ ಸಂಭಂಧಗಳ ಪಟ್ಟಿ ಹಚ್ಚುವುದು ಬೇಡ ಎಂದು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಳು. ಆಗ ಅವಳ ಗೆಳತಿ ಬಿಂದುಳನ್ನು ತನ್ನ ಪರವಾಗಿ ಮಾತನಾಡುವಂತೆ ಕೋರಿ ಅವಳ ಸಹಾಯ ಪಡೆದಿದ್ದಳು. ಅದಕ್ಕೆ ಉತ್ತರವಾಗಿ ಅವರುಗಳು, ನಮ್ಮದು ಗಾಡವಾದ ಸ್ನೇಹ ಎಂದು ನಮ್ಮ ಮನಸ್ಸುಗಳಿಗೂ ಗೊತ್ತಿತ್ತು. ಆದರೆ ಈ ಮನಸ್ಸು ಬದಲಾಗುವುದು ಕೆಲವೊಮ್ಮೆ ನಮ್ಮ ಹಿಡಿತದಲ್ಲಿರುವುದಿಲ್ಲ. ಇಷ್ಟಕ್ಕೂ ಇದು ನೆನ್ನೆ, ಮೊನ್ನೆ ನಿನ್ನನ್ನು ನೋಡಿ ಆಕರ್ಷಿತರಾಗಿ ಹುಟ್ಟಿ ಬಂದ ಹುಸಿ ಪ್ರೀತಿಯಲ್ಲ. ಒಂದು ವೇಳೆ ಇದು ಆಕರ್ಷಣೆಯೇ ಆಗಿದ್ದರೂ ಅದು ಆಂತರಿಕ ಆಕರ್ಷಣೆಯೇ ವಿನಃ ಬಾಹ್ಯವಾದುದಲ್ಲಾ! ಎಂದು ಹೇಳಿ ಅವಳನ್ನು ಒಪ್ಪಿಸುವ ಸಾಹಸ ಮಾಡುತ್ತಿದ್ದರು. ಸರಿ ಇಷ್ಟೆಲ್ಲಾ ವಾದ, ಚರ್ಚೆ ನಡೆದ ನಂತರ ವಸು ಯೋಚಿಸಲು ಎರಡು ದಿನ ಸಮಯ ಬೇಕೆಂದು ನಂತರ ತನ್ನ ಅನಿಸಿಕೆ ಹೇಳುವುದಾಗಿ ತಿಳಿಸಿ ಗೆಳತಿಯೊಡನೆ ಅಲ್ಲಿಂದ ಹೊರಟಳು.
ಹೇಳಿದಂತೆ ಸರಿಯಾಗಿ ಎರಡು ದಿನಗಳ ನಂತರ ಅವಳು ಅವರಿಬ್ಬರಿಗೂ ಒಂದು ಆಶ್ಚರ್ಯಕರವಾದ ಸುದ್ದಿ ತಿಳಿಸಿದಳು! ಅದೇನೆಂದರೆ ಮುಂದಿನ ವಾರಾಂತ್ಯದ ರಜೆಗೆ ನಾವು ನಾಲ್ವರೂ (ಆಕಾಶ್, ವಸುಧಾ, ಆದಿತ್ಯ ಮತ್ತು ಬಿಂದು.) ಗೋವಾಗೆ ಹೋಗೋಣ ಅಲ್ಲಿ ನನ್ನ ಮನಸ್ಸಿನ ವಿಚಾರ ನಿಮಗೆ ತಿಳಿಸುತ್ತೇನೆ ಎಂದು ಹೇಳಿದಳು. ಈ ವಿಷಯ ಹೆಚ್ಚು ಹೊತ್ತು ಗುಟ್ಟಾಗಿ ಉಳಿಯಲಿಲ್ಲ! ಆಫೀಸಿನಲ್ಲಿ ಕಾಳ್ಗಿಚ್ಚಿನಂತೆ ಎಲ್ಲರಿಗೂ ಈ ಸುದ್ದಿ ಕ್ಷಣದಲ್ಲಿ ಹರಡಿಬಿಟ್ಟಿತು!! ಮತ್ತೆ ಈ ವಿಷಯ ಕೂಡ ಬಾಸ್ ವರೆಗೂ ತಲುಪುವುದಕ್ಕೆ ತಡವಾಗಲಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಬಾಸ್ ವಸುಧಾಳನ್ನು ತನ್ನ ಚೇಂಬರ್ ಗೆ ಬರುವಂತೆ ಹೇಳಿಕಳುಹಿಸಿದ್ದರು. ಎಕ್ಸ್ಕ್ಯೂಸ್ ಮಿ ಸರ್......... ಬರಲು ಹೇಳಿದ್ದಿರಂತೆ ಎಂದು ತಲೆ ಬಗ್ಗಿಸಿ ನಿಂತಳು. ಹೌದು ವಸುಧಾ ಬನ್ನಿ ಕುಳಿತುಕೊಳ್ಳಿ ಎಂದು ಬಾಸ್ ಹೇಳಿದಾಗ, ಪರವಾಗಿಲ್ಲ ಸರ್ ಏನು ವಿಷಯಾಂತ ಹೇಳಿ ಸರ್ ಎಂದು ಕೇಳಿದಳು. ವಸುಧಾ ನಾನು ನಿಮ್ಮ ಖಾಸಗಿ ವಿಷಯವನ್ನು ವಿಚಾರಿಸುತ್ತಿದ್ದೆನೆಂದು ತಪ್ಪಾಗಿ ಭಾವಿಸಬೇಡಿ. ನಾನು ಅನಿವಾರ್ಯವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕಿದೆ. ಅದೂ ನಿಮಗಿಷ್ಟವಿದ್ದರೆ ಹೇಳಿ, ಇಲ್ಲದಿದ್ದರೆ ನನ್ನಿಂದ ನಿಮಗೆ ಯಾವ ರೀತಿಯ ಒತ್ತಡ ಹಾಗು ಬಲವಂತ ಇರುವುದಿಲ್ಲ, ಹೇಳಲು ಇಷ್ಟವಿಲ್ಲದಿದ್ದರೆ ನಿಮ್ಮ ಪಾಡಿಗೆ ನೀವು ಈ ಚೇಂಬರ್ನಿಂದ ಆಚೆ ಹೋಗಬಹುದು! ಎಂದು ಹೇಳಿದಾಗ ಅವಳು ಸಾರ್ ನನಗೆ ಉತ್ತರ ಕೊಡಲು ಸಾಧ್ಯವಾದರೆ ಖಂಡಿತ ಹೇಳುತ್ತೇನೆ ಎಂದು ಹೇಳಿದಳು. ಆಫೀಸಿನಲ್ಲಿ, ನಡೆಯುತ್ತಿರುವ ಚರ್ಚೆ ಮತ್ತು ನನ್ನ ಕಿವಿಗೆ ತಲುಪಿದ ವಿಷಯ ನಿಜವೇ? ಏನು ನಡಿತಾ ಇದೆ ಇಲ್ಲಿ? ಎಂದು ಬಾಸ್ ಕೇಳಿದಾಗ ವಸುಧಾ ಸೂಕ್ಷ್ಮವಾಗಿ ಎಲ್ಲಾ ವಿಷಯವನ್ನು ನೇರವಾಗಿ ತಿಳಿಸಿದಳು. ಓಹ್ ಇದಂತೂ ಬಹಳ ಕ್ಲಿಷ್ಟಕರವಾದ ಸಮಸ್ಯೆ! ಹೇಗೆ ಇತ್ಯರ್ಥ ಮಾಡುವಿರೋ ತಿಳಿಯದಾಗಿದೆ, ನನ್ನಿಂದ ಏನಾದರೂ ಸಹಾಯ ಬಯಸುವುದಿದ್ದರೆ ತಿಳಿಸಿ ಎಂದು ಹೇಳಿದ್ದಕ್ಕೆ ಅವಳು ಸರಿ ಎನ್ನುವಂತೆ ತಲೆಯಾಡಿಸಿದ್ದಳು.
ಎರಡು ದಿನ ಕಳೆದ ಮೇಲೆ ವಸುಧಾ ಒಂದು ರೀತಿ ಸಂತೋಷವಾಗಿರುವಂತೆ ಕಾಣುತ್ತಿದ್ದಳು. ಆ ದಿನ ಆಫೀಸಿನಲ್ಲಿ ಅವಳೇ ಸ್ವತಹ ಬಾಸ್ ನ ಚೇಂಬರ್ ಗೆ ಮಾತನಾಡಲೆಂದು ಹೋದಳು. ಒಳಗೆ ಹೋಗುತ್ತಿದ್ದಂತೆ ಗುಡ್ ಮಾರ್ನಿಂಗ್ ಸರ್ ಎಂದಳು. ಬಾಸ್ ಯಾರೊಂದಿಗೋ ಫೋನಲ್ಲಿ ಮಾತನಾಡುತ್ತಿದ್ದರಿಂದ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಎರಡು ನಿಮಿಷಗಳ ಬಳಿಕ ಮಾತು ಮುಗಿಸಿ, ಇವಳ ಕಡೆಗೆ ನೋಡುತ್ತಾ ಹಲೋ ವಸುಧಾ ಐ ಆಮ್ ಸಾರೀ......, ಹೇಳಿ ಏನಾಗಬೇಕಿತ್ತು? ಪರವಾಗಿಲ್ಲ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು ಅದಕ್ಕೆ ಬಂದೆ. ಹೌದಾ, ಸರಿ ಹೇಳಿ ನಿಮ್ಮ ಆಯ್ಕೆಯಲ್ಲಿ ಏನಾದರೂ ಇತ್ಯರ್ಥ ಮಾಡಿಕೊಂಡಿದ್ದೀರ? ಯಾರು ಆ ಭಾಗ್ಯಶಾಲಿ ಎಂದು ಯಾವಾಗ ತಿಳಿಯುವುದು, ನಮಗೆಲ್ಲಾ ನಿಮ್ಮ ಮದುವೆಯ ಊಟ ಹಾಕಿಸುವುದು ಯಾವಾಗ? ಎಂದು ಪ್ರಶ್ನೆಗಳ ಮಳೆ ಸುರಿಸಿದರು! ಅದಕ್ಕೆ ಸಂಭಂದಿಸಿದ ವಿಷಯವಾಗೆ ಮಾತನಾಡಲು ಬಂದೆ! ಯಾರೆಂಬುದು ಈಗಲೇ ಹೇಳಲಾಗುವುದಿಲ್ಲ ಎಂದು ತಿಳಿಸುತ್ತ ಅವರ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಿದ್ದಳು. ಹೀಗೆ ಸ್ವಲ್ಪ ಹೊತ್ತು ಅವರ ನಡುವೆ ಮಾತು ಸಾಗಿತ್ತು. ಅವಳ ಕೋರಿಕೆಯನ್ನು ಬಾಸ್ ಒಪ್ಪಿಕೊಂಡಮೇಲೆ ಒಂದು ನಿಟ್ಟುಸಿರು ಬಿಟ್ಟಳು. ನಂತರ ಅವರಿಗೆ ಥ್ಯಾಂಕ್ಸ್ ಹೇಳಿ ಹೊರಡುವುದರಲ್ಲಿದ್ದಳು. ವಸುಧಾಳೊಂದಿಗೆ ಮಾತನಾಡುತ್ತಿರುವಾಗ, ಅವಳು ಸಂತೋಷವಾಗಿರುವುದನ್ನು ಗಮನಿಸಿದ ಬಾಸ್ ಗೆ ಸ್ವಲ್ಪ ಚುಡಾಯಿಸುವ ಮನಸ್ಸಾಯಿತು! ಆಗ ಅವರು, ವಸುಧಾ ಅವರಿಬ್ಬರಲ್ಲಿ ಯಾರನ್ನು ಒಪ್ಪಿಕೊಳ್ಳುವುದು ಎಂದು ನಿಮಗೆ ನಿರ್ಧರಿಸಲು ಕಷ್ಟವಾದರೆ, ನನ್ನ ಮಾತು ಕೇಳಿ..... (ಎನ್ನುತ್ತಿರುವಾಗ, ಏನು ಎನ್ನುವಂತೆ ಬಾಸ್ ನ ಮುಖವನ್ನೇ ನೋಡುತ್ತಿದ್ದಳು) ನೀವು ಅವರಿಬ್ಬರನ್ನು ಬಿಟ್ಟುಬಿಡಿ! ನನ್ನನ್ನು ಮದುವೆಯಾಗುವುದಾದರೆ ಹೇಳಿ ನಾನಂತೂ ರೆಡಿ!! ಎಂದು ಹೇಳಿದಾಗ ಬಾಸ್ ನ ತಮಾಷೆಯನ್ನು ಅರಿತ ಅವಳು ಹೀಗೆಂದಳು, ಸಾರ್..... ಆಯಿತು ಬಿಡಿ ನಾನು ಸಿದ್ದವಾಗಿದ್ದೇನೆ! ಈ ವಿಷಯವಾಗಿ ನಿಮ್ಮ ಮನೆಗೆ ಬಂದು ನಿಮ್ಮ ಶ್ರೀಮತಿಯವರ ಒಪ್ಪಿಗೆಯೂ ಕೇಳುತ್ತೇನೆ ಸರಿನಾ! ಓಹ್ ಮನೆವರೆಗೂ ಯಾಕೆ ಇರಿ ಈಗಲೇ ಫೋನ್ ಮಾಡಿ ವಿಷಯ ತಿಳಿಸುತ್ತೇನೆ ಎನ್ನುತ್ತಾ ರಿಸಿವೆರ್ ಮೇಲೆ ಕೈ ಇಟ್ಟಳು ಒಳಗೊಳಗೇ ನಗುತ್ತಾ! ಆಗ ಅವಳ ಬಾಸ್ ಬೆಚ್ಚಿದಂತೆ ಮಾಡಿ, ಓಹ್ ಗಾಡ್! ಹಾಗೆಲ್ಲಾದರೂ ಮಾಡಿಬಿಟ್ಟಿರಾ ಮತ್ತೆ, ನಾವು ನಿಮ್ಮ ಮದುವೆಯ ಊಟ ಮಾಡೋ ಬದಲು ನೀವೆಲ್ಲಾ ನನ್ನ ತಿಥಿ ಊಟ ಮಾಡಬೇಕಾಗುತ್ತೆ ಅಷ್ಟೇ ಎಂದು ಹೇಳಿದಾಗ ಅವಳು ಜೋರಾಗಿ ನಕ್ಕುಬಿಟ್ಟಳು, ಇವರೂ ಸಹ ಅವಳೊಟ್ಟಿಗೆ ನಗುತ್ತಿದ್ದರು! ಅವರಿಬ್ಬರ ಈ ನಗು ಹೊರಗಿನವರಿಗೂ ಕೇಳಿಸುವಂತಿತ್ತು! ಬಹಳ ಚತುರೆ ನೀವು ಎಂದು ಬಾಸ್ ಹೇಳಿದಾಗ ಸಾರೀ ಸರ್ ಕ್ಷಮಿಸಿ ತಮಾಷೆಗಾಗಿ ......ಎನ್ನುವಾಗ, ಅವರು ಪರವಾಗಿಲ್ಲ ವಸುಧಾ ನನಗೆ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತು ಆದರೂ ನಿಮ್ಮನ್ನು ನಗಿಸೋಣವೆಂದು ಸ್ವಲ್ಪ ನಾಟಕ ಆಡಿದೆ ಅಷ್ಟೇ! ಇದರಿಂದ ನಿಮಗೇನಾದರೂ ಬೇಸರವಾಗಿದ್ದರೆ........ ಎನ್ನುತ್ತಿರುವಾಗ, ಅಯ್ಯೋ ಸರ್ ಹಾಗೇನಿಲ್ಲ ಪ್ಲೀಸ್ ಎಂದು ಮತ್ತೆ ನಕ್ಕಿದರು. ಸರಿ ಸಾರ್ ನಾನಿನ್ನು ಹೊರಡುತ್ತೀನಿ ಮತ್ತೊಮ್ಮೆ ನಿಮಗೆ ಧನ್ಯವಾಧಗಳು ಎಂದವಳು ಹೇಳಿದಾಗ, ಬಾಸ್ ಅವಳಿಗೆ, ಓಕೆ ವಸುಧಾ ನಿಮ್ಮ ಪ್ರಯಾಣಕ್ಕೆ ಮತ್ತು ನಿಮ್ಮ ಆಯ್ಕೆಗೆ ನನ್ನ ಶುಭಕಾಮನೆಗಳು! ಯಾವುದೇ ಅನರ್ಥಕ್ಕೆ, ಅನಾಹುತಕ್ಕೆ ಎಡೆ ಮಾಡಿಕೊಡದೆ ಕ್ಷೇಮವಾಗಿ ಹೋಗಿಬನ್ನಿ. ನಿಮ್ಮ ನಿರ್ಣಯ ತಿಳಿಯಲು ನಾವೆಲ್ಲಾ ಕಾಯುತ್ತಿರುತ್ತೇವೆ!! ಹಾಗೆ ಆಕಾಶ್ ಮತ್ತು ಆದಿತ್ಯ ಅವರಿಗೂ ಹೊರಡುವ ಮುಂಚೆ ನನ್ನನ್ನು ಭೇಟಿಯಾಗಲು ತಿಳಿಸಿ ಎಂದು ಅವಳನ್ನು ಕಳಿಸಿಕೊಟ್ಟರು. ನಂತರದಲ್ಲಿ ಆಕಾಶ್ ಮತ್ತು ಆದಿತ್ಯ ಸಹ ಅವರನ್ನು ಭೇಟಿಯಾದರು.
ವಸುಧಾಳ ಯೋಜನೆಯಂತೆ ವಾರಾಂತ್ಯದ ರಜೆಗೆ, ಅವರು ನಾಲ್ಕೂ ಜನ ಗೋವಾಕ್ಕೆ ಬಂದರು. ಬೆಳಗಿನ ತಿಂಡಿ ಮುಗಿಸಿ ಎಲ್ಲರೂ ಬೀಚ್ ಬಳಿ ಹೋದರು. ಅವರು ಬೀಚ್ ಹತ್ತಿರದ ಹೋಟೆಲ್ನಲ್ಲಿಯೇ ತಂಗಿದ್ದರು ಆದ್ದರಿಂದ ಕಾಲ್ನಡಿಗೆಯಲ್ಲೇ ನಿಧಾನವಾಗಿ ಮಾತನಾಡುತ್ತಾ ನಡೆದು ಬಂದು ಒಂದು ಸ್ಥಳದಲ್ಲಿ ನಿಂತು ಸುತ್ತಲೂ ನೋಡಿದರು! ನೋಡಿದಷ್ಟು ಉದ್ದಗಲಕ್ಕೂ ಜನ ಜಂಗುಳಿ ಇತ್ತು. ವಸುಧಾ ಸ್ವಲ್ಪ ಪ್ರಶಾಂತವಾದ ಜಾಗ ಹುಡುಕಿ ಅಲ್ಲಿ ಹೋಗೋಣ ಎಂದದ್ದಕ್ಕೆ, ಎಲ್ಲರೂ ಒಪ್ಪಿ ಇನ್ನಷ್ಟು ದೂರ ನಡೆದು ಒಂದು ಜಾಗ ತಲುಪಿದರು. ಅಲ್ಲಿ ದೂರದಲ್ಲಿ ಮರಗಳೆಲ್ಲಾ ಇದ್ದವು! ಅಲ್ಲಿ ಎಲ್ಲರೂ ಒಮ್ಮೆ ಒಬ್ಬರ ಮುಖ ಒಬ್ಬರು ನೋಡಿಕೊಂಡು ಮೌನವಾಗಿದ್ದರು. ನಂತರ ನಾಲ್ಕೂ ಜನ ನಾಲ್ಕು ದಿಕ್ಕಿಗೆ ಮುಖ ಮಾಡಿ ಯೋಚನೆಯಲ್ಲಿ ಮುಳುಗಿದ್ದರು! ಸ್ವಲ್ಪ ಹೊತ್ತಿನ ನಂತರ ವಸುಧಾಳೆ ಮೌನ ಮುರಿದು ಮಾತಾಡಿದಳು. ಅದೇನೆಂದರೆ, ಆಕಾಶ್, ಆದಿ ನಾವು ಮೂರು ಜನ ಒಳ್ಳೆಯ ಸ್ನೇಹಿತರಾಗಿದ್ದರೂ ನನ್ನನ್ನು ನೀವಿಬ್ಬರೂ ಇಷ್ಟ ಪಡುತ್ತಿರುವ ವಿಷಯದಲ್ಲಿ ನಿಮ್ಮ ನಿಮ್ಮ ಅಭಿಪ್ರಾಯ/ ಭಿನ್ನಾಭಿಪ್ರಾಯ ಏನೇ ಇದ್ದರೂ ನೀವುಗಳು ದೂರಾಗದೆ, ಗೆಳೆತನಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿದ್ದೀರ!!! ನಿಮ್ಮ ಈ ಗುಣವೇ ನನ್ನನ್ನು ನಿಮ್ಮ ಬಗ್ಗೆ ಯೋಚಿಸುವಂತೆ ಮಾಡಿದ್ದು. ಈಗಲೂ ಕಾಲ ಮಿಂಚಿಲ್ಲ ನೀವಿಬ್ಬರೂ ನಿಮ್ಮ ಮನಸ್ಸು ಬದಲಾಯಿಸಿಕೊಳ್ಳಿ ಅಥವಾ ಮತ್ತೊಮ್ಮೆ ಚೆನ್ನಾಗಿ ಆಲೋಚಿಸಿ, ಅವಲೋಕಿಸಿ ಒಂದು ತೀರ್ಮಾನಕ್ಕೆ ಬನ್ನಿ, ನಾನು ನಿಮ್ಮಿಬ್ಬರಲ್ಲಿ ಯಾರಿಗೆ ಜೀವನ ಸಂಗಾತಿಯಾಗಿ ಬರಬೇಕು ಎಂದು. ಮತ್ತು ನಾನು ಸಹ ಒಂದು ನಿರ್ಧಾರಕ್ಕೆ ಬಂದಿರುತ್ತೇನೆ. ನೀವುಗಳು ಯಾರೇ ತ್ಯಾಗ ಮಾಡಿದರೂ, ಕೊನೆಗೆ ನನ್ನ ನಿರ್ಣಯವೇ ಅಂತಿಮವಾದದ್ದು, ಇದರಲ್ಲಿ ಯಾರಿಗಾದರೂ ಬೇಸರವಾದರೆ ಅಥವಾ ಮನಸಿಗೆ ಕಷ್ಟವಾದರೆ ನಾನಂತೂ ಹೊಣೆ ಅಲ್ಲಾ! ಆದ್ದರಿಂದ ಈಗಲೇ ಇನ್ನಷ್ಟು ಸಮಯ ತೆಗೆದುಕೊಂಡು, ಒಬ್ಬರಿಗೊಬ್ಬರು ಮಾತಾಡಿಕೊಂಡು ಯಾವುದಕ್ಕೂ ತಯಾರಾಗಿಬನ್ನಿ ಎಂದು ಹೇಳಿದಳು.
ಅವಳು ಹಾಗೆ ಹೇಳಿದ ಮೇಲೆ ಅವರಿಬ್ಬರೂ, ನಾವು ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬರುತ್ತೇವೆ, ಅಲ್ಲಿವರೆಗೂ ನೀವು ಇಲ್ಲೇ ಇರಿ ಎಂದು ಹೇಳಿ ಆಕಾಶ್ ಮತ್ತು ಆದಿತ್ಯ ಹೊರಟುಹೋದರು. ಅವರು ಹೋದ ಕೆಲ ಸಮಯದ ನಂತರ ವಸುಧಾಳ ಕಣ್ಣುಗಳು ಅವರಿಬ್ಬರಿಗಾಗಿ ಹುಡುಕಾಡಿದವು! ಅವಳ ನೋಟದ ಪರಿಧಿಯಲ್ಲಿ ಅವರುಗಳು ಕಾಣದಿದ್ದುದರಿಂದ ಅವಳಿಗೆ ಒಂದು ಕ್ಷಣ ಆತಂಕವಾಯಿತು!! ವಸುಧಾಳ ಆತಂಕವನ್ನು ಗಮನಿಸಿದ ಬಿಂದು, ಸೂಕ್ಷ್ಮವಾಗಿ ಮೊದಲೇ ಅವಳಿಂದ ಅವಳ ನಿರ್ಧಾರವನ್ನು ತಿಳಿದುಕೊಂಡಿದ್ದರಿಂದ ಅವಳನ್ನು ಕುರಿತು, ವಸುಧಾ ನೀನು ಇನ್ನೊಮ್ಮೆ ಸರಿಯಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದೆಂದು ನನ್ನ ಅನಿಸಿಕೆ! ಎನ್ನುವ ಗೆಳತಿಯ ಮಾತಿಗೆ ವಸುಧಾ, ಬಿಂದು ನನ್ನ ಆಲೋಚನೆಗಳನ್ನೆಲ್ಲಾ ನಿನ್ನ ಮುಂದೆ ಬಿಚ್ಚಿ ಇಟ್ಟಿದ್ದೇನೆ, ಇದಕ್ಕೆ ನೀನೂ ಕೂಡ ಸಮ್ಮತಿಸಿದ್ದೆ! ಈಗ ಯಾಕೆ ಮತ್ತೆ ನನ್ನ ಮನಸ್ಸನ್ನು ತಟ್ಟುತ್ತಿದ್ದೀಯಾ? ಇನ್ನು ನನ್ನ ನಿರ್ಣಯ ಬದಲಿಸುವ ಪ್ರಶ್ನೆಯೇ ಇಲ್ಲ, ನೋಡೋಣ ಅವರಿಬ್ಬರೂ ಬಂದು ಏನು ಹೇಳುವರೋ ಎಂದು ಗೆಳತಿಯನ್ನು ಸಮಾಧಾನಿಸುತ್ತಿದ್ದಳು.
ಸರಿ ವಸು ನೀನು ಎಷ್ಟೆಲ್ಲ ವಿಚಾರ ಮಾಡಿ, ಇಷ್ಟು ಒಳ್ಳೆಯ ನಿರ್ಣಯ ತೆಗೆದುಕೊಂಡಿದ್ದೀಯಾ! ನಿನ್ನ ಸಂತೋಷವೇ ನನ್ನ ಸಂತೋಷ! ಇನ್ನು ಇದರ ವಿಷಯವಾಗಿ ನಾನು ನಿನಗೆ ಹೆಚ್ಚಿಗೆ ತಲೆಕೆಡಿಸುವುದಿಲ್ಲ. ಅವರಿಬ್ಬರೂ ಇನ್ನೂ ಬಂದಿಲ್ಲ, ಅವರು ಬರುವುದರೊಳಗೆ ನಾನು ಐಸ್ ಕ್ರೀಂ ಅಥವಾ ಕೂಲ್ ಡ್ರಿಂಕ್ಸ್ ಕೊಂಡುತರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟಳು.ಬಿಂದು ಆ ಕಡೆ ಹೋದ ನಂತರ ಇತ್ತ ವಸುಧಾ, ಸಮುದ್ರ ಕಾಣುವಷ್ಟು ದೂರದಲ್ಲಿ ದೃಷ್ಟಿ ನೆಟ್ಟು ನೋಡುತ್ತಾ ತನ್ನ ಗೆಳತಿ ಹೇಳಿದ ವಿಷಯದ ಬಗ್ಗೆ ಮತ್ತೊಮ್ಮೆ ಯೋಚಿಸುತ್ತಾ ನಿಂತಿದ್ದಳು. ತಾನು ತೆಗೆದುಕೊಂಡಿರುವ ನಿರ್ಧಾರ ಸರಿಯಾದುದೆಂದು ಅದನ್ನು ಯಾವುದೇ ಕಾರಣಕ್ಕೂ ಬದಲಿಸುವ ಅವಶ್ಯಕತೆ ಇಲ್ಲವೆಂದು ಅವಳ ಒಳ ಮನಸ್ಸು ಅವಳಿಗೆ ಸಾರಿ, ಸಾರಿ ಹೇಳುತ್ತಿತ್ತು. ಅವಳು ತನ್ನ ಮನಸ್ಸಿನ ನಿರ್ಧಾರದ ಚಿತ್ರಣವನ್ನು ಊಹಿಸಿಕೊಳ್ಳುತ್ತಿರುವಾಗ, ಸಮುದ್ರದ ಅಲೆಗಳು ಅವಳ ಪಾದಗಳ ಮೇಲೆ ಹಾಯ್ದು, ಮುತ್ತಿಟ್ಟು ಹಿಂದಿರುಗುವಾಗ ಅವಳನ್ನು ತಮ್ಮೊಂದಿಗೆ ಸೆಳೆದುಕೊಂಡು ಹೋಗುವ ಅನುಭವಕ್ಕೆ ಅವಳು ಪುಳಕಿತಳಾಗಿದ್ದಳು!!!
ಕೆಲ ನಿಮಿಷಗಳ ನಂತರ ಅವರಿಬ್ಬರೂ ಒಬ್ಬರ ಹೆಗಲ ಮೇಲೆ ಒಬ್ಬರು ಕೈ ಹಾಕಿಕೊಂಡು, ಕುಣಿಯುತ್ತಾ, ಜಿಗಿಯುತ್ತಾ, ಕೇಕೆ ಹಾಕುತ್ತಾ ಅವಳಿರುವಲ್ಲಿಗೆ ಬಂದರು. ಅವಳ ಮುಂದೆ ನಿಂತ ಅವರಿಬ್ಬರೂ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುತ್ತಾ ಕಣ್ಣಿನಲ್ಲೇ ಸನ್ನೆ ಮಾಡಿಕೊಳ್ಳುತ್ತಿದ್ದರು. ವಸುಧಾ ಆಶ್ಚರ್ಯವಾಗಿ ಅವರಿಬ್ಬರ ಮುಖವನ್ನೇ ನೋಡುತ್ತಿದ್ದಳು ಪ್ರಶ್ನಾರ್ಥಕವಾಗಿ! ಆಗ ಅವರು ಒಟ್ಟಿಗೆ ಮಾತನಾಡುತ್ತಾ ವಸು ನಾವು ಏನೇ ತೀರ್ಮಾನ ತೆಗೆದುಕೊಂಡಿದ್ದರೂ, ಅದನ್ನು ನೀನು ತುಂಬು ಹೃದಯದಿಂದ ಸ್ವಾಗತಿಸುತೀಯ? ಎಂದು ಕೇಳಿದರು. ಅವಳು ಒಳಗೊಳಗೇ ಮುಸಿಮುಸಿ ನಗುತ್ತಾ ಅದೇನಿದ್ದರೂ ನನಗೆ ಒಪ್ಪಿಗೆಯೇ ಎಂದು ತಿಳಿಸಿದಳು. ಆಗ ಅವರಿಬ್ಬರೂ ಅವಳ ಅಕ್ಕಪಕ್ಕದಲ್ಲಿ ಬಂದು ನಿಂತು ಒಟ್ಟಿಗೆ ಇಬ್ಬರೂ ಅವಳ ಸೊಂಟದ ಮೇಲೆ ಕೈ ಹಾಕಿ, ಮೇಲೆತ್ತಿ ಅವಳನ್ನು ಸುತ್ತಿಸುತ್ತಿದ್ದರು. ಆಗ ವಸುಧಾ ಕೂಡ ನಿಧಾನವಾಗಿ ಅವರಿಬ್ಬರ ಭುಜಗಳ ಮೇಲೆ ಕೈ ಹಾಕಿ ಕಿಲಕಿಲ ನಗುತ್ತಾ ಆಕಾಶ್..... ಆದಿ ಐ ಲವ್ ಯು ಬೋಥ್ ಎಂದು ಕೂಗುತ್ತಿದ್ದಳು!!!!! ಈ ದೃಶ್ಯವನ್ನು ಸ್ವಲ್ಪ ದೂರದಲ್ಲಿ ಬರುತ್ತಿದ್ದ ಬಿಂದು ನೋಡಿ ಅವಳೂ ಸಹ ಚಪ್ಪಾಳೆ ಹೊಡೆಯುತ್ತಾ, ಸಂತೋಷದಿಂದ ವಸುಧಾ ಯು ಆರ್ ಲಕ್ಕಿ ಎಂದು ಚೀರುತ್ತಾ ಓಡೋಡಿ ಬಂದಳು!!!!!
ಇನ್ನೂ ಸ್ವಲ್ಪ ಸಾರಾಂಶ ಇದೆ ಅದನ್ನು ಮೂರನೇ/ಕೊನೆ ಭಾಗದಲ್ಲಿ ಪ್ರಕಟಿಸುತ್ತೇನೆ. ಸಹಕರಿಸಿ!!
5 comments:
ಅಯ್ಯೋ ಮತ್ತೆ ಕಾಯುವಂತೆ ಮಾಡಿಬಿಟ್ಟಿರಲ್ಲ... :(
ಬೇಗ ಮುಂದಿನ ಭಾಗವನ್ನು ಪ್ರಕಟಿಸಿಬಿಡಿ.
ಒಳ್ಳೆಯ ಲೇಖನ.
ಧನ್ಯವಾದಗಳು.
ಶಿವಪ್ರಕಾಶ್ ಅವರೇ,
ಖಂಡಿತ ಸಾಧ್ಯವಾದಷ್ಟು ಬೇಗ ಮುಂದಿನ ಭಾಗವನ್ನು ಪ್ರಕಟಿಸುತ್ತೇನೆ. ನಿರಾಸೆ ಬೇಡ!
ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವಾದ ಹೀಗೆ ಇರಲಿ!!
ಕಥೆ ತುಂಬಾ ಚೆನ್ನಾಗಿದೆ.. ಕಾಯುವಿಕೆ ಚೆಂದವೆನಿಸಿದೆ... ಮುಂದುವರಿಯಲಿ ನಿಮ್ಮ ಕಥನಾವಳಿ... ನಾವು ಕಾಯುತ್ತೇವೆ.
ವಂದನೆಗಳು
ಒಳ್ಳೆ ಕುತೂಹಲ ಇದೆ ಕಥೆಯ ಅಂತ್ಯ ದ ಬಗ್ಗೆ ಆದಷ್ಟು ಬೇಗ ಪ್ರಕಟಿಸಿ
ಮತ್ತೆ ಕಾಯೋ ಹಾಗೆ ಮಾಡಿದಿರಾ... ಅಲ್ಲಾ ವಸುಧಾ ಇಬ್ಬರನ್ನೂ ಪ್ರೀತಿಸಿದರೆ ಯಾರನ್ನ ಮದುವೆ ಆಗೋದು??? ಸ್ಟೋರೀಲಿ ಟ್ವಿಸ್ಟ್ ಬೇಕಂದ್ರೆ ನನ್ನ ಫೋನು ನಂಬರು ವಸುಧಾಗೆ ಕೊಡಿ ಆಗ ತ್ರಿಕೊನ ಪ್ರೇಮ ಕಥೆ ಆಗುತ್ತೆ (ಸುಮ್ನೆ ತಮಾಷೆಗೆ)... ಆದರೂ ಮುಂದೇನಾಗುತ್ತೆ ಅಂತ ತುಂಬಾ ಕುತೂಹಲ ಇದೆ ಬೇಗ ಬರಲಿ ಮುಂದಿನ ಭಾಗ...
Post a Comment